
ಪಿರಿಯಾಪಟ್ಟಣ (ಡಿ.22): ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಸಚಿವನಾದ ನನ್ನ ಮೇಲೆ ಜನರು ಅನೇಕ ನಿರೀಕ್ಷೆ ಇಟ್ಟಿದ್ದಾರೆ. ಹಾಗಾಗಿ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಜವಾಬ್ದಾರಿ ನನ್ನ ಮೇಲಿದೆ, ಇದಕ್ಕೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಅಭಿವೃದ್ಧಿಯೇ ನನ್ನ ಮೂಲ ಮಂತ್ರ, ಇದಕ್ಕೆ ಎಲ್ಲ ಅಧಿಕಾರಿಗಳು ಮೈ ಚಳಿಯನ್ನು ಬಿಟ್ಟು ಕೆಲಸ ಮಾಡಬೇಕು, ನಾನು ಯಾವ ಅಧಿಕಾರಿಯನ್ನು ಜಾತಿ, ಧರ್ಮ ನೋಡಿ ನೇಮಕ ಮಾಡಿಕೊಂಡಿಲ್ಲ,
ಅದರ ಅಗತ್ಯವೂ ನನಗಿಲ್ಲ, ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸುವ ಅಧಿಕಾರಿಗಳಿಗೆ ಕ್ರೆಡಿಟ್ ಕೊಡ್ತೀನಿ, ಮೈಮರೆಯುವ ಅಧಿಕಾರಿಗಳಿಗೆ ಗೇಟ್ ಪಾಸ್ ಕೊಡ್ತೀನಿ, ಹಾಗಾಗಿ ಯಾರೂ ಕೂಡ ಸಬಾಬು ಹೇಳದೆ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದರು. ಜನರ ಆರೋಗ್ಯ ರಕ್ಷಣೆಗಾಗಿ ಪಟ್ಟಣದಲ್ಲಿ 100 ಹಾಸಿಗೆಯ ಆಸ್ಪತ್ರೆ ಮಂಜೂರು ಮಾಡಿದ್ದೇನೆ, ಹೆರಿಗೆ ಆಸ್ಪತ್ರೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಹಿಂದಿನ ಶಾಸಕರ ನಿರುತ್ಸಾಹದಿಂದ ಈ ಅವಕಾಶ ಕೈ ತಪ್ಪಿದೆ ಇದು ಬೇಸರದ ಸಂಗತಿ. ಈಗಿನ ವೈದ್ಯರು ಹೆರಿಗೆಗೆ ಬರುವವರಿಗೆ ಯಾವುದೇ ರೀತಿಯ ಸಬೂಬು ಹೇಳದೆ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿದರೆ ಮತ್ತೊಮ್ಮೆ ಹೆರಿಗೆ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
Congress Guarantee: ತಿಂಗಳಿಗೆ ₹3000 ನೀಡುವ ಯುವನಿಧಿ ಯೋಜನೆಗೆ ಡಿ.26ರಿಂದ ನೋಂದಣಿ: ಸಚಿವ ಶರಣ ಪಾಟೀಲ್
ಪಿರಿಯಾಪಟ್ಟಣ ಬರ ಪೀಡಿತ ಪ್ರದೇಶ ಎಂದು ಘೋಷಿಸಿರುವ ಹಿನ್ನೆಲೆ ಪರಿಹಾರ ವಿತರಿಸುವ ಸಂದರ್ಭದಲ್ಲಿ ಯಾವುದೇ ರೈತರಿಗೆ ಲೋಪವಾಗದಂತೆ ವಿತರಿಸಬೇಕು, ತಾಲೂಕಿನಲ್ಲಿ ಮಾಜಿ ಶಾಸಕ ಕೆ. ಮಹದೇವ್ ಬಾರ್ ಅಂಡ್ ರೆಸ್ಟೋರೆಂಟ್‌ನಿಂದ ನೇರವಾಗಿ ಗ್ರಾಮಾಂತರ ಪ್ರದೇಶಕ್ಕೆ ಅಕ್ರಮ ಮದ್ಯ ಸರಬರಾಜು ಆಗುತ್ತಿದೆ, ಇದರ ಬಗ್ಗೆ ಕ್ರಮ ಕೈಗೊಳ್ಳದ್ದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಬಕಾರಿ ನಿರೀಕ್ಷಕ ಧರ್ಮರಾಜ್ ಅವರಿಗೆ ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ. ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಬರ ಪರಿಹಾರ ಪಡೆಯಲು 70 ಸಾವಿರ ರೈತರು ನೊಂದಣಿ ಮಾಡಿಸಿಕೊಂಡಿದ್ದು, ಅನೇಕ ರೈತರು ಪೌತಿ ಖಾತೆ ಸಮಸ್ಯೆಯಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ, ಹಿಂಗಾರು ಕುಂಟಿತವಾಗಿರುವ ಹಿನ್ನೆಲೆ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ, ಆದರೂ ಮುಸುಕಿನ ಜೋಳ, ರಾಗಿ, ಅವರೆ, ಅಲಸಂದೆ ಸೇರಿದಂತೆ ಅನೇಕ ದ್ವಿದಳ ಧಾನ್ಯಗಳನ್ನು ಬೆಳೆಯಲಾಗಿದೆ ಎಂದರು. ತಾಪಂ ಇಓ ಸುನಿಲ್ ಕುಮಾರ್ ಮಾತನಾಡಿ, ಪ್ರತಿ ಗ್ರಾಮದಲ್ಲೂ ಪಿಡಿಒಗಳು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು. ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆಗೆ ಹೆಚ್ಚು ಗಮನ ನೀಡಬೇಕು ಎಂದರು.
ಅತಿರೇಕದ ವರ್ತನೆ ಬಿಡಿ ಅಭಿವೃದ್ಧಿ ಕೆಲಸ ಮಾಡಿ: ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ
ರೇಷ್ಮೆ, ಶಿಕ್ಷಣ, ಅಬಕಾರಿ, ಅರಣ್ಯ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಕುಂಞಿ ಅಹಮದ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಹಾಗೂ ನೊಡಲ್ ಅಧಿಕಾರಿ ನಾಗರಾಜ್, ಹಾರಂಗಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರಿಂಗ್ ರಘುಪತಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ವೆಂಕಟೇಶ್, ದಿನೇಶ್, ಪ್ರಸನ್ನ, ಸೋಮಯ್ಯ, ಕೃಷ್ಣಮೂರ್ತಿ, ಮಾದೇಶ್, ಶ್ರೀಧರ್, ಚಂದ್ರಶೇಖರ್, ಬಸವರಾಜು, ಮಲ್ಲಿಕಾರ್ಜುನ, ಕಿರಣ್ ಕುಮಾರ್, ಮಮತಾ, ದರ್ಶನ್ ರಾಮಚಂದ್ರ, ಗುರುಬಸವ ಲಿಂಗಸ್ವಾಮಿ, ಮುನಿಯಪ್ಪ, ಅನಿಲ್ ಕುಮಾರ್, ಹಿತೇಶ್, ಪುಷ್ಪಲತಾ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.