ಖರ್ಗೆರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ?: ಕೇಂದ್ರ ಸಚಿವ ನಾರಾಯಣಸ್ವಾಮಿ

By Kannadaprabha News  |  First Published Dec 22, 2023, 11:50 AM IST

ರಾಜ್ಯದಲ್ಲಿ ಅವಕಾಶ ಇದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಇನ್ನು ಪ್ರಧಾನಿ ಮಾಡುತ್ತಾರಾ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ. 


ಚಾಮರಾಜನಗರ (ಡಿ.22): ರಾಜ್ಯದಲ್ಲಿ ಅವಕಾಶ ಇದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ ಇನ್ನು ಪಿಎಂ ಮಾಡುತ್ತಾರಾ ಎಂದು ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ವ್ಯಂಗ್ಯವಾಡಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಮಾದಿಗ ಮುನ್ನಡೆ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಾದಿಗ ಮುನ್ನಡೆ ಆತ್ಮಗೌರವ ಜಿಲ್ಲಾಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಅವಕಾಶ ಇದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ‌ ಮಾಡಲಿಲ್ಲ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲ್ಲಿದೆ ಎಂದು ಗ್ಯಾರಂಟಿ ಇಲ್ಲಾ, ಯಾವ ಸಂದರ್ಭದಲ್ಲಿ ಅವರನ್ನು ಪಿಎಂ ಕ್ಯಾಂಡಿಡೇಟ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸಿಗರೇ ಹೇಳಲಿ ಎಂದರು.

2024 ರಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ, ಭಾರತವನ್ನು ವಿಶ್ವದಲ್ಲೇ ನಂ.1 ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಡ್ವಾನಿ ಹಾಗೂ ಜೋಶಿ ಅವರನ್ನು ಮಂದಿರ ಉದ್ಘಾಟನೆಗೆ ಆಹ್ವಾನಿಸಲು ನಮ್ಮವರೇ ಹೋಗಿದ್ದರು, ವಯಸ್ಸಿನ ಕಾರಣಣದಿಂದ ಬರಲಾಗುವುದಿಲ್ಲ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ, ಅವರನ್ನು ಮಂದಿರ ಉದ್ಘಾಟನೆಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಾಗರಿಕರನ್ನು ಯಾರೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ, ಯಾವ ರೀತಿ ಉಪ ರಾಷ್ಟ್ರಪತಿಯನ್ನು ಮಿಮಿಕ್ರಿ ಮಾಡಿದರು ಎಂದು ಜನರು ನೋಡಿದ್ದಾರೆ, ಅದನ್ನು ಯಾವ ರೀತಿ ರಾಹುಲ್ ಗಾಂಧಿ ರೆಕಾರ್ಡ್ ಮಾಡಿದ್ದಾರೆಂತಲೂ ಜನರು ನೋಡಿದ್ದಾರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರನ್ನು ಯಾವ ರೀತಿ ಸಂಭೋದಿಸಬೇಕು ಎಂಬ ಪರಿಜ್ಞಾನ ಕಾಂಗ್ರೆಸ್ ಗೆ ಇರಬೇಕಿತ್ತು ಎಂದು ಕಿಡಿಕಾರಿದರು.

Tap to resize

Latest Videos

undefined

ಸೋಲುವ ಸಂದರ್ಭದಲ್ಲೇ ಕಾಂಗ್ರೆಸ್‌ಗೆ ದಲಿತರ ನೆನಪು: ಕೆ.ಎಸ್‌.ಈಶ್ವರಪ್ಪ

ಇಂದಲ್ಲ, ನಾಳೆ ಮೀಸಲು ವರ್ಗಿಕರಣ: ಚಾಮರಾಜನಗರ: ದಕ್ಷಿಣ ಭಾರತದ ಮಾದಿಗರ ಒಳ‌ ಮೀಸಲಾತಿ ಪರವಾಗಿ ಕೇಂದ್ರ ಸರ್ಕಾರ ಇದೆ. ನಾನು ಕೂಡ ಸಮಾಜಕ್ಕೆ ನ್ಯಾಯ ಕೊಡಿಸಲು ಜೀತದಾಳಾಗಿ ದುಡಿಯಲು ಸಿದ್ಧವಿದ್ದೇನೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಖಾತೆ ರಾಜ್ಯಸಚಿವ ಎ.ನಾರಾಯಣಸ್ವಾಮಿ ಅವರು ಹೇಳಿದರು. ಜ.17 ರಂದು ಸುಪ್ರೀಂ ಕೋರ್ಟ್ ನಲ್ಲಿ ಒಳ ಮೀಸಲಾತಿ ಸಂಬಂಧ ವಿಚಾರಣೆ ನಡೆಯಲಿದೆ, ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಯಾಗುವುದು ಶೇ.100ಕ್ಕೆ 100 ರಷ್ಟು ಖಚಿತವಾಗಿದ್ದು, ಫೆಬ್ರವರಿಯಲ್ಲಿ ಮಾದಿಗರ ಪರವಾಗಿ ಆದೇಶ ಹೊರಬೀಳುವ ವಿಶ್ವಾಸವಿದೆ ಎಂದರು.

ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಮಾಡುವ ವಿಚಾರ 38 ವರ್ಷದ ಹಿಂದೆಯೇ ಆಂಧ್ರ ಪ್ರದೇಶದಲ್ಲಿ ಆರಂಭವಾಯಿತು. ಈ ವಿಚಾರವನ್ನು ಗಂಭೀರವಾಗಿ ತೆಗೆದು ಕೊಂಡು, ಚರ್ಚೆ ಮಾಡುವ ಮೂಲಕ ಮೀಸಲಾತಿ ಜಾರಿಮಾಡಿತು. 5 ವರ್ಷಗಳ ನಂತರ ಕರ್ನಾಟಕದಲ್ಲಿ 2004 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ರಚನೆ ಮಾಡಿದರು.

ಯಾವ ಪಕ್ಷದವರು ಆಯೋಗದ ಅಧ್ಯಕ್ಷರನ್ನು ಮಾತನಾಡಿಸಲಿಲ್ಲ. 11 ವರ್ಷ ಒಳಮೀಸಲಾತಿ ಕುರಿತ ಚರ್ಚೆಯೂ ಸದನದಲ್ಲಿ ನಡೆಯಲಿಲ್ಲ. ತಮಿಳುನಾಡು ಸರಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ರಾಜೇಂದ್ರ ಆಯೋಗದ ವರದಿಯಲ್ಲಿ 1241 ಮಂದಿ ಪೈಕಿ ಮಾದಿಗ ಸಮುದಾಯದ ಕೇವಲ 124 ಮಂದಿ ಉದ್ಯೋಗದಲ್ಲಿದ್ದಾರೆ ಎಂಬ ವಿಚಾರ ಓದಿದಾಗ ನನ್ನ ಕಣ್ಣಲ್ಲಿ ನೀರು ತರಿಸುವಂತೆ ಮಾಡಿತು ಎಂದರು. ಮಾದಿಗ ಸಮುದಾಯದವರು ಮನೆಯಿಂದ ಹೊರಬಾರದು, ಅವರು ಶಕ್ತಿ ಪ್ರದರ್ಶನ ಮಾಡಬಾರದು ಎಂಬ ದುರುದ್ದೇಶವಿದ್ದು, ಇದು ಒಳಮೀಸಲಾತಿ ಜಾರಿಗೆ ತೊಡಕಾಗಿ ಪರಿಣಮಿಸಿದೆ. ಸಮುದಾಯದವರು ಬೀದಿಗೆ ಬಂದು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರೆ ಸರಕಾರಗಳು ಎಚ್ಚೆತ್ತುಕೊಳ್ಳುತ್ತಿದ್ದವು ಎಂದರು.

ವಿಧಾನ ಪರಿಷತ್ ಮಾಜಿಸದಸ್ಯ ಸಿ.ರಮೇಶ್ ಮಾತನಾಡಿ, ಸಮುದಾಯದವರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು, ಚುನಾವಣೆ ಸಂದರ್ಭದಲ್ಲಿ ಸಮಾಜದ ಅಭಿವೃದ್ದಿಗೆ ಚಿಂತನೆ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ನನ್ನ ಮೊದಲ ರಾಜಕೀಯ ಪಕ್ಷವೇ ಮಾದಿಗ ಜನಾಂಗದ ಪಕ್ಷ. ಇಂದಲ್ಲ, ನಾಳೆ ಸಮುದಾಯದವರಿಗೆ ಮೀಸಲಾತಿ ವರ್ಗಿಕರಣ ಆಗೇ ಆಗುತ್ತದೆ ಎಂಬ ಭರವಸೆ ಇದೆ ಎಂದರು. ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಜಿಲ್ಲಾ ಮಾದಿಗ ಮೀಸಲು ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ್ ಪ್ರಾಸ್ತಾವಿಕ ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಮೈತ್ರಿಧರ್ಮ ಪಾಲಕರು: ಸಚಿವ ಚಲುವರಾಯಸ್ವಾಮಿ

ರಾಜ್ಯ ಮುಖಂಡ ದೀಪಕ್‌ ದೊಡ್ಡಯ್ಯ ಅವರು ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಮಾಡುವಂತೆ ಹೋರಾಟ ನಡೆಸಿರುವ ನಾನಾ ದೃಶ್ಯಗಳನ್ನು ಪಿಪಿಟಿ ಪ್ರದರ್ಶಿಸಿದರು. ಮಾದಿಗ ಮುನ್ನಡೆ ಆತ್ಮ ಗೌರವ ರಾಜ್ಯ ಉಸ್ತುವಾರಿ ಅರಕಲವಾಡಿ ನಾಗೇಂದ್ರ, ನಗರಸಭೆ ಸದಸ್ಯ ಮಹದೇವಯ್ಯ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಹನೂರು ವೆಂಕಟೇಶ್, ಆಲೂರುಲಿಂಗರಾಜು, ಕಿರಣ್, ಮನು, ಜಗದೀಶ್, ಹಸಗೂಲಿ ಸಿದ್ದಯ್ಯ ಸೇರಿದಂತೆ ಸಮುದಾಯದವರು, ಸಂಘಸಂಸ್ಥೆಗಳ ಮುಖಂಡರು ಹಾಜರಿದ್ದರು.

click me!