ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗದ ಮರಾಠಿ ಭಾಷಿಕ ಮತದಾರರ ಬೇಟೆಗೆ ತಂತ್ರ ರೂಪಿಸಿರುವ ಆಡಳಿತಾರೂಢ ಬಿಜೆಪಿ ಗಡಿನಾಡು ಬೆಳಗಾವಿ ನಗರದ ಸ್ಥಳೀಯ ಸಂಸ್ಥೆಗಳ ಪ್ರಮುಖ ಹುದ್ದೆಗಳೆಲ್ಲವೂ ಮರಾಠಿ ಭಾಷಿಕರ ಪಾಲಾಗಿವೆ.
ಶ್ರೀಶೈಲ ಮಠದ
ಬೆಳಗಾವಿ (ಫೆ.7) : ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗದ ಮರಾಠಿ ಭಾಷಿಕ ಮತದಾರರ ಬೇಟೆಗೆ ತಂತ್ರ ರೂಪಿಸಿರುವ ಆಡಳಿತಾರೂಢ ಬಿಜೆಪಿ ಗಡಿನಾಡು ಬೆಳಗಾವಿ ನಗರದ ಸ್ಥಳೀಯ ಸಂಸ್ಥೆಗಳ ಪ್ರಮುಖ ಹುದ್ದೆಗಳೆಲ್ಲವೂ ಮರಾಠಿ ಭಾಷಿಕರ ಪಾಲಾಗಿವೆ.
ಬಿಜೆಪಿಯ ಈ ರಾಜಕೀಯ ನಡೆ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ಮರಾಠಿ ಭಾಷಿಕರ ಪಾಲಾಗಿದ್ದು, ಇದರ ನಡುವೆಯೇ ಇದೀಗ ಬೆಳಗಾವಿ ಮೇಯರ್, ಉಪಮೇಯರ್ ಎರಡೂ ಸ್ಥಾನ ಮರಾಠಿಭಾಷಿಕರ ಪಾಲಾಗಿವೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ , ಬೆಳಗಾವಿ ಗ್ರಾಮೀಣ ಹಾಗೂ ಯಮಕನಮರಡಿ ಕ್ಷೇತ್ರಗಳಲ್ಲಿ ಮರಾಠಿ ಭಾಷಿಕರ ಮತಗಳೇ ನಿರ್ಣಾಯಕ. ಹಾಗಾಗಿ,ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಮರಾಠಿ ಭಾಷಿಕರಿಗೆ ಬಿಜೆಪಿ ಮಣೆಹಾಕುತ್ತಿದೆ.
ಬೆಳಗಾವಿ ಪಾಲಿಕೆಯಲ್ಲಿ MES ಯುಗಾಂತ್ಯ: ಮರಾಠಿಗರಿಗೆ ಮಣೆ ಹಾಕಿದ್ದಕ್ಕೆ ಬಿಜೆಪಿ ವಿರುದ್ಧ ಕರವೇ ಗರಂ
ರಾಜಕೀಯ ರಣತಂತ್ರ:
ಬೆಳಗಾವಿ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪಷ್ಟಬಹುಮತಗಳೊಂದಿಗೆ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಪಾಲಿಕೆ ಒಟ್ಟು 58 ಸದಸ್ಯರ ಬಲಾಬಲ ಹೊಂದಿದೆ. ಈ ಪೈಕಿ 35 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 35 ಬಿಜೆಪಿ ಸದಸ್ಯರಲ್ಲಿ ಒಟ್ಟು 15 ಮಹಿಳಾ ಸದಸ್ಯರಿದ್ದಾರೆ. ಈ ಪೈಕಿ 9 ಸದಸ್ಯರು ಕನ್ನಡ ಮಹಿಳಾ ಸದಸ್ಯರಿದ್ದರೆ, 6 ಸದಸ್ಯರಷ್ಟೇ ಮರಾಠಿ ಭಾಷಿಕರಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯಮಹಿಳೆಗೆ ಮೀಸಲಾಗಿದ್ದರಿಂದ ಅನಾಯಾಸವಾಗಿ ಕನ್ನಡ ಭಾಷಿಕರಿಗೆ ಸುಲಭವಾಗಿ ದೊರೆಯುವ ಸಾಧ್ಯತೆಗಳಿದ್ದವು. ಇಷ್ಟುವರ್ಷಗಳ ಕಾಲ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಮರಾಠಿ ಭಾಷಿಕ ಸದಸ್ಯರೇ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯುತ್ತ ಬಂದಿದ್ದರು. ಗಡಿ, ಭಾಷಾ, ಗುಂಪುಗಾರಿಕೆ ಆಧಾರದ ಮೇಲೆಯೇ ಇಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತ ಬಂದಿದ್ದವು. ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದ ಮೇಲೆ ಇವೆಲ್ಲ ರಾಜಕೀಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲೇ ಮರಾಠಿ ಭಾಷಿಕರಿಗೆ ಮೇಯರ್,ಉಪಮೇಯರ್ ಪಟ್ಟನೀಡುವ ಮೂಲಕ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ರಾಜಕೀಯ ತಂತ್ರ ಹೆಣೆದಿದೆ.
ಕೊನೆವರೆಗೂ ಗುಟ್ಟು ಬಿಡದ ಬಿಜೆಪಿ:
ಪಾಲಿಕೆಯಲ್ಲಿ ಸ್ಪಷ್ಟಬಹುಮತ ಹೊಂದಿರುವ ಬಿಜೆಪಿ ಸುಲಭವಾಗಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆಯನ್ನು ಮೊದಲೇ ಘೋಷಣೆ ಮಾಡಬಹುದಾಗಿತ್ತು. ಆದರೆ, ಬಿಜೆಪಿ ನಾಯಕರು ಮಾತ್ರ ಚುನಾವಣಾ ಪ್ರಕ್ರಿಯೆ ಕೊನೆ ಕ್ಷಣದವರೆಗೂ ಮೇಯರ್,ಉಪಮೇಯರ್ ಅಭ್ಯರ್ಥಿ ಆಯ್ಕೆಯನ್ನು ಗುಟ್ಟಾಗಿಯೇ ಇಟ್ಟರು. ಯಾವಾಗ ಮೇಯರ್, ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಯಿತೋ ಆಗಲೇ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿತು. ಮರಾಠಿ ಭಾಷಿಕರಾದ ಶೋಭಾ ಸೋಮನಾಚೆ ಮೇಯರ್ ಆಗಿ, ರೇಷ್ಮಾ ಪಾಟೀಲ ಉಪಮೇಯರ್ ಆಗಿ ಆಯ್ಕೆಯಾಗುವ ಮೂಲಕ ಮೇಯರ್, ಉಪಮೇಯರ್ ಎರಡೂ ಸ್ಥಾನ ಮರಾಠಿಗರ ಪಾಲಾಗಿವೆ.
ಬಿಜೆಪಿ ತೆಕ್ಕೆಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ: ಐತಿಹಾಸಿಕ ದಾಖಲೆ
ಕನ್ನಡಿಗರ ಆಕ್ರೋಶ:
ಬೆಳಗಾವಿ ಸ್ಥಳೀಯ ಸಂಸ್ಥೆಗಳಲ್ಲಿ ಮರಾಠಿ ಭಾಷಿಕರಿಗೆ ಸಿಂಹಪಾಗಿದ್ದು, ಹಿಂದೂತ್ವದ ಅಜೆಂಡಾ ಹೊಂದಿರುವ ಬಿಜೆಪಿ ಮರಾಠಿ ಪ್ರೀತಿ ಹೆಚ್ಚಿದಂತೆ ಕಾಣುತ್ತದೆ. ಈಗಾಗಲೇ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕನ್ನಡ ಭಾಷಿಕರಾದ ಘೂಳಪ್ಪ ಹೊಸಮನಿ ಅವರನ್ನು ಕೆಳಗಿಳಿಸಿ, ಮರಾಠ ಸಮುದಾಯದ ಸಂಜಯ ಬೆಳಗಾಂವಕರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷರನ್ನಾಗಿ ಮರಾಠ ಸಮುದಾಯದರೇ ಆದ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರನ್ನು ನೇಮಕ ಮಾಡಲಾಯಿತು. ಹೀಗೆ ಸಾಲು ಸಾಲಾಗಿ ಸ್ಥಳೀಯ ಸಂಸ್ಥೆಗಳಲ್ಲೆಲ್ಲವೂ ಮರಾಠಿಗರ ಪಾಲಾಗುತ್ತಲೇ ಇವೆ. ಇದರ ನಡುವೆ ಈಗ ಬೆಳಗಾವಿ ಪಾಲಿಕೆಯೂ ಮರಾಠಿಗರ ಪಾಲಾಗಿದೆ. ಇದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.