ಶಿಕ್ಷಣ-ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅನನ್ಯ: ಡಿ.ಕೆ.ಶಿವಕುಮಾರ್

By Kannadaprabha NewsFirst Published Oct 9, 2023, 11:44 AM IST
Highlights

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾದದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. 

ಕನಕಪುರ (ಅ.09): ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾದದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ತಾಲೂಕಿನ ಹಾರೋಬೆಲೆ ಗ್ರಾಮದ ಪವಿತ್ರ ಜಪಮಾಲೆ ರಾಣಿ ದೇವಾಲಯ (ಹೋಲಿ ರೋಜರಿ ಚರ್ಚ್) ಬೆಳ್ಳಿ ಮಹೋತ್ಸವ, ಸರ್ಕಲ್ ಮಾತೆಯ ವಜ್ರ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ನವೀಕೃತ ಸರ್ಕಲ್ ಮೇರಿ ಮಾತೆ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. 

ಕ್ರೈಸ್ತ ಸಮುದಾಯದ ಬಾಂಧವರು ಯಾವ ಪ್ರತಿಫಲಾಕ್ಷೆ ಬಯಸದೆ ಜನರಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಕ್ಷರ ಜ್ಞಾನ ಹಾಗೂ ಆಸ್ಪತ್ರೆಗಳನ್ನು ತೆರೆದು ಆರೋಗ್ಯ ಕಾಪಾಡುವ ಕೆಲಸ ಮಾಡಿದರು ಎಂದು ಬಣ್ಣಿಸಿದರು. ಹಾರೋಬೆಲೆ ಗ್ರಾಮಸ್ಥರು ನನ್ನನ್ನು ಸಾಕಿ ಬೆಳೆಸಿದ್ದೀರಿ. ಸೊಸೈಟಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ ದಿನದಿಂದ ಜಿಲ್ಲಾ ಪಂಚಾಯತ್, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ಕಳೆದ 40 ವರ್ಷಗಳಿಂದ ನನ್ನ ಬೆನ್ನಿಗೆ ನಿಂತು ನಾನು ರಾಜಕಾರಣದಲ್ಲಿ ಉನ್ನತ ಸ್ಥಾನ ಅಲಂಕರಿಸುವಂತೆ ಸಹಕಾರ ನೀಡಿದ್ದೀರಿ ಎಂದು ಸ್ಮರಿಸಿದರು. 

ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ಹೋಗಿದ್ದು ಕನಕಪುರದ ಬಂಡೆಯಿಂದ: ಎಚ್‌ಡಿಕೆ

ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ನಾವ್ಯಾರು ಇಂತಹದೇ ಜಾತಿ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಧರ್ಮ ಯಾವುದಾದರು ತತ್ವ ಒಂದೇ, ನಾಮ ನೂರಾದರು ದೈವನೊಬ್ಬನೆ, ಪೂಜೆ ಯಾವುದಾದರು ಭಕ್ತಿ ಒಂದೇ, ಕರ್ಮ ನೂರಾದರು ನಿಷ್ಠೆ ಒಂದೆ, ದೈವನೊಬ್ಬನೆ ನಾಮ ಹಲವಾರಾಗಿದೆ. ನಾವೆಲ್ಲರೂ ಜಾತ್ಯತೀತ ಮತ್ತು ಮಾನವೀಯ ನೆಲೆಗೆಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ದೇವರು ವರ ಮತ್ತು ಶಾಪ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಅದೇ ರೀತಿ ಹಾರೋಬೆಲೆ ಗ್ರಾಮವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೋಯ್ದು ಇತಿಹಾಸದ ಪುಟದಲ್ಲಿ ಸೇರುವಂತೆ ಮಾಡುತ್ತೇನೆ ಎಂದರು. 

ಮೋದಿ ಮತ್ತೊಮ್ಮೆ ಪ್ರಧಾನಿ: ಮಂಗಳೂರಲ್ಲಿ ‘ಮೋದಿ ಬ್ರಿಗೇಡ್‌’ ಸಂಘಟನೆ ಅಸ್ತಿತ್ವಕ್ಕೆ

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಆಗಿನ ಆರೋಗ್ಯ ಸಚಿವರು ಈ ಭಾಗಕ್ಕೆ ಆಗಮಿಸಿ ಗ್ರಾಮೀಣ ಭಾಗದ ಜನರ ಆರೋಗ್ಯ ವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಲ್ಲಿ ಧಾರ್ಮಿಕ ಕೇಂದ್ರವನ್ನು ಆರಂಭಿಸಿದರು. ಅಂದಿನಿಂದ ಇಲ್ಲಿವರೆಗೂ ಜನರ ಸೇವೆಯನ್ನು ಯಾವುದೇ ಪ್ರತಿ ಫಲವನ್ನು ನಿರೀಕ್ಷಿಸದೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಜನರಿಗೆ ಶಿಕ್ಷಣ ಹಾಗೂ ಆರೋಗ್ಯ ವನ್ನು ಉಚಿತವಾಗಿ ನೀಡುವುದರ ಜೊತೆಗೆ ಶಾಂತಿ ಸಹ ಬಾಳ್ವೆಯಿಂದ ಇಲ್ಲಿನ ಜನರು ಜೀವನವನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಿವಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಡಿ ಕೆ ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಹೋಲಿ ರೋಜರಿ ಚರ್ಚ್ ನ ಧಾರ್ಮಿಕ ಗುರು ವಂ. ಸ್ವಾಮಿ ಪ್ಯಾಟ್ರಿಕ್ ಎಡ್ವರ್ಡ್ ಪಿಂಟೋ ಮತ್ತಿತರರು ಹಾಜರಿದ್ದರು.

click me!