ಉಗ್ರ ಪರ ಹೇಳಿಕೆ: ಯುವ ಸಮೂಹವನ್ನು ದೂರ ಮಾಡಿಕೊಳ್ಳುತ್ತಾ ಕಾಂಗ್ರೆಸ್?

By Suvarna NewsFirst Published Dec 18, 2022, 12:16 PM IST
Highlights

ಸದಾ ಓಲೈಕೆ ರಾಜಕಾರಣದಲ್ಲಿಯೇ ತನ್ನ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್, ಅದರಿಂದಾನೇ ಪದೆ ಪದೇ ಪೆಟ್ಟು ತಿನ್ನುತ್ತಿದೆ ಎನ್ನುವುದು ಓಪನ್ ಸೀಕ್ರೆಟ್. ಆದರೂ ಪಾಠ ಕಲಿಯದ ಈ ರಾಷ್ಟ್ರೀಯ ಪಕ್ಷ ಮತ್ತದೇ ತನ್ನ ಚಾಡಿಯನ್ನು ಮುಂದುವರಿಸಿರುವುದು ಮಾತ್ರ ದುರಂತ. 

- ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣನ್ಯೂಸ್

ಕಾಂಗ್ರೆಸ್‌ನ ನಾಯಕರು ಆಗಾಗ ಭಯೋತ್ಪಾದಕ ಸಂಘಟನೆ ಜೊತೆ ಆರ್‌ಎಸ್‌ಎಸ್ ಹೋಲಿಸಿ, ಹೇಳಿಕೆ ನೀಡುತ್ತಾರೆ. ದುರಂತ ಅಂದರೆ ಬಂದೂಕು ಹಿಡಿದು ಧರ್ಮದ ಅಮಲಿನಲ್ಲಿ‌ ಅಮಾಯಕರನ್ನು ಕೊಲ್ಲುವ, ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ, ದೇಶದ ಒಳಗೆ ಇದ್ದು ದೇಶ ವಿರೋಧಿ ಚಟುವಟಿಕೆ ನಡೆಸುವ ಭಯೋತ್ಪಾದಕರ‌ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತೋರಿದೆ/ತೋರುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ ಎನ್ನುತ್ತಾರೆ. ಆದರೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವುದೇ ನಮ್ಮ ಗುರಿ ಎಂದು ಗೋಡೆ ಬರಹ ಬರೆಯುವ, ಭಾರತ್ ತೇರೆ ತುಕ್ಡೆ ಹೋಂಗೆ ಎಂದು ಘೋಷಣೆ ಕೂಗುವವರ ವಿರುದ್ಧ ಕಾಂಗ್ರೆಸ್‌ನದ್ದು ದಿವ್ಯ ಮೌನ..ಈ ದೇಶದ ಪ್ರಧಾನಿ ಆಗುವ ಕನಸು ಹೊತ್ತು ಭಾರತವನ್ನು ಜೋಡಿಸುತ್ತೇನೆ ಎಂದು ದೇಶದಾದ್ಯಂತ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ದೆಹಲಿಯ JNU ಕ್ಯಾಂಪಸ್‌ನಲ್ಲಿ ಭಾರತ ವಿರೋಧಿ ಘೋಷಣೆ ಮೊಳಗಿಸುವವರ ಪರ ನಿದ್ದೆಗಣ್ಣಿನಿಂದ ಹಾಗೆ ಎದ್ದು ಬಂದು ನಿಲ್ಲುತ್ತಾರೆ. ಬ್ರಿಟಿಷ್ ವಿರುದ್ಧ ನಮ್ಮಿಂದ ದೇಶಕ್ಕೆ ಸ್ವಾತಂತ್ರ್ಯ ಬಂತೆಂದು ಎದೆ ತಟ್ಟಿ ಹೇಳುವ ಇಂದಿನ ಕಾಂಗ್ರೆಸ್‌ಗೆ ಭಯೋತ್ಪಾದನೆ ಬ್ರಿಟಿಷ್ ಆಡಳಿತಕ್ಕಿಂತ ಕ್ರೌರ್ಯದ್ದು ಎಂದು ಯಾಕೆ ಅನಿಸುತ್ತಿಲ್ಲವೊ ಗೊತ್ತಿಲ್ಲ! (ಬ್ರಿಟಿಷ್ ವಿರುದ್ಧ ಹೋರಾಡಿದ್ದ ಅಂದಿನ ಕಾಂಗ್ರೆಸ್‌ಗೂ ಇಂದಿನ ಕಾಂಗ್ರೆಸ್‌ಗೆ ಅಜಗಜಾಂತರ ವ್ಯತ್ಯಾಸ ಇದೆ). 

ಈ ರೀತಿಯ ಸಂದೇಹ ಯಾಕೆ ಕಾಂಗ್ರೆಸ್ ಮೇಲೆ ಹುಟ್ಟಿತು ಎಂದರೆ ಭಯೋತ್ಪಾದಕರ ವಿಚಾರದಲ್ಲಿ ಕಾಂಗ್ರೆಸ್ ಆಗಾಗ ಬೆತ್ತಲಾಗುತ್ತಲೆ ಇದೆ. ಈಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಕಾಂಗ್ರೆಸ್‌ನ ಹಳೆಯ ನಿಲುವಿನಲ್ಲಿ ಬದಲಾವಣೆ ಆಗಿಲ್ಲ ಎನ್ನೋದನ್ನ ‌ಮತ್ತೆ ಮತ್ತೆ ಖಚಿತ ಪಡಿಸುವಂತಿದೆ.‌

ಬಾಯಿ ತಪ್ಪಿ ಡಿಕೆಶಿ ಹಾಗೆ ಹೇಳಿದರೆ?
ಡಿಕೆ ಶಿವಕುಮಾರ್ ಮೊನ್ನೆ ಭಯೋತ್ಪಾದಕ ಶಾರಿಖ್ ಬಗ್ಗೆ ಹೇಳಿದ ಮಾತು ಬಾಯ್ ತಪ್ಪಿನಿಂದ ಬಂದ ಮಾತಾಗಿರಬಹುದು ಎಂದು‌ ಆರಂಭದಲ್ಲಿ ಅನಿಸಿದ್ದು ಸುಳ್ಳಲ್ಲ. ಯಾವುದನ್ನೋ ಹೋಲಿಸಲು ಹೋಗಿ ಎಡವಿದರು ಎಂದು ಅನಿಸಿತ್ತು. ಆದರೆ ಮಾಧ್ಯಮದಲ್ಲಿ ಇರಬಹುದು, ಸೋಶಿಯಲ್ ಮೀಡಿಯಾ ಇರಬಹದು, ದೇಶದಾದ್ಯಂತ ವಿರೋಧ ವ್ಯಕ್ತವಾದ ಮೇಲೂ ಡಿಕೆ ಶಿವಕುಮಾರ್ ಮೀಡಿಯಾ ಮುಂದೆ ಬಂದು ನಿಂತು ನಾನು ಯಾಕ್ರಿ ಕ್ಷಮೆ ಕೇಳಬೇಕು, ಎನ್ನುವ ಹುಂಬತನ ಪ್ರದರ್ಶನ ಮಾಡಿದ್ರು. ಅದು ಅಷ್ಟಕ್ಕೇ ನಿಲ್ಲಲಿಲ್ಲ. ಡಿಕೆ ಶಿವಕುಮಾರ್ ಹೇಳಿಕಯನ್ನು ಸಮರ್ಥನೆ ಮಾಡಿಕೊಳ್ಳುವ ಬದಲು ಮೊನ್ನೆ ಮೊನ್ನೆ ಕಾಂಗ್ರೆಸ್ ಸೇರಿರುವ ಮಧು ಬಂಗಾರಪ್ಪ ಕುಕ್ಕರ್ ಬಾಂಬ್ ಸ್ಫೋಟವನ್ನು  ಬಿಜೆಪಿಯವರೇ ಮಾಡಿಸಿರಬಹದು ಎಂದು ಅಪ್ರಬುದ್ಧತೆ ಮೆರೆದರು. ಇನ್ನು ಟಿವಿ ಡಿಬೆಟ್‌ಗಳಲ್ಲೂ ಪಕ್ಷದ ವಕ್ತಾರರು ಕೂಡ ಡಿಕೆ ಶಿವಕುಮಾರ್ ಹೇಳಿಕೆಗೆ ಸಮರ್ಥನೆ ಮೇಲೆ ಸಮರ್ಥನೆ ನೀಡಿದರು.

ಒಳ ಮೀಸಲಾತಿ: ಬೊಮ್ಮಾಯಿ ಸರ್ಕಾರಕ್ಕೆ ಸಿಗುತ್ತಾ ಬೂಸ್ಟರ್ ಡೋಸ್?

ತುಷ್ಟೀಕರಣ ಕಾಂಗ್ರೆಸ್‌ಗೆ ಹೊಸತಲ್ಲ
ಡಿಕೆ ಶಿವಕುಮಾರ್ ತಾವು ನೀಡಿದ ಹೇಳಿಕೆಗೆ ಮರುದಿನ ಕೂಡ ಬಹಳ ಪ್ರಬಲವಾಗಿ ಸಮರ್ಥನೆ ನೀಡಿದ್ದನ್ನು ಕಂಡಾಗ  ಡಿಕೆಶಿ ಈ ಹೇಳಿಕೆಯನ್ನು ಬಹಳ ಯೋಚಿಸಿಯೇ ನೀಡಿದ್ದಾರೆಂದು ಯಾರಿಗಾದರೂ ಅನಿಸುತ್ತಿತ್ತು. ರಾಜ್ಯದಲ್ಲಿ ಈಗ ಜೆಡಿಎಸ್‌ಗೆ ಮುಸ್ಲಿಂ ಸಮುದಾಯದ ಸಿಎಂ ಇಬ್ರಾಹಿಂ ಅಧ್ಯಕ್ಷ. ಹೇಗಾದರೂ ಕಾಂಗ್ರೆಸ್ ಜೊತೆ  ಇರುವ ಹಿಂದುಗಳ ಮತ ಬಂದೆ ಬರುತ್ತದೆ. ಆದರೆ ರಾಜ್ಯದಲ್ಲಿ ಸರಿ ಸುಮಾರು 15 ರಿಂದ 20 ವಿಧಾನಸಭೆ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ‌ ಪಾತ್ರ ವಹಿಸಬಲ್ಲದು. ‌ಅದು ಕರಾವಳಿಯ ಒಂದೆರಡು ಜಿಲ್ಲೆ, ಮಲೆನಾಡು, ಬೆಂಗಳೂರು ನಗರದ ಒಂದೆರಡು ಕ್ಷೇತ್ರ, ಬೀದರ್, ಕಲಬುರಗಿ ಸೇರಿ‌ 15-20 ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಓಟುಗಳಿವೆ. ಆ ಓಟುಗಳು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಹೋಗಬಾರದು ಎನ್ನುವ ಲೆಕ್ಕಾಚಾರದ ಜೊತೆಗೆ ಮುಸ್ಲಿಂ ಸಮುದಾಯ ರಾಜ್ಯದ ಯಾವೆಲ್ಲಾ ಕ್ಷೇತ್ರದಲ್ಲಿ ಇದೆಯೊ ಅದೆಲ್ಲವೂ ಸಂಪೂರ್ಣವಾಗಿ ಕಾಂಗ್ರೆಸ್ ಬುಟ್ಟಿಗೆ ಬೀಳಬೇಕು ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ಗೆ ನಿಶ್ಚಿತವಾಗಿ ಇದೆ. ಓಟಿನ‌‌ ಲೆಕ್ಕಾಚಾರ ಏನೋ ಇದೆ. ಆದರೆ ಆ ಸಮುದಾಯದ ಮತಗಳನ್ನು ಕ್ರೂಡಿಕರಿಸುವ ಜೊತೆಗೆ ಆಡಳಿತದಲ್ಲಿ ಇರುವ ಬಿಜೆಪಿ ಮೇಲೆ ಇನ್ನಷ್ಟು ಅನುಮಾನ ಹೆಚ್ಚಿಸುವ ಪ್ರಯತ್ನದ ಭಾಗವಾಗಿಯೇ ಡಿಕೆ ಶಿವಕುಮಾರ್ ಕುಕ್ಕರ್ ಬಾಂಬ್ ಸ್ಪೋಟವೇನು ಪುಲ್ವಾಮಾ ತರದ ದಾಳಿಯೆ ಎಂದು ಕೇಳುವ ಮೂಲಕ‌ ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡಿದಂತೆ ಕಾಣುತ್ತದೆ. ಡಿಕೆ ಶಿವಕುಮಾರ್ ಎತ್ತಿದ ಪ್ರಶ್ನೆ ಎಷ್ಟು ಬಾಲಿಶವಾಗಿತ್ತು ಎಂದರೆ, ಕುಕ್ಕರ್ ಬಾಂಬ್ ಸ್ಪೋಟ ಮಾಡಿದ ಶಾರಿಖ್ ಒಬ್ಬ ಭಯೋತ್ಪಾದಕ ಎನ್ನೋದನ್ನ ರಾಜ್ಯದ ಡಿಜಿಪಿ ಹೇಳಿದರೆ ತನಿಖೆ ಆಗುವ ಪೂರ್ವದಲ್ಲೇ ಹಾಗೆ ಹೇಳೊಕೆ ಅವರು ಯಾರು ಎಂದು ರಾಜ್ಯದ ಡಿಜಿಪಿಯನ್ನೇ ಪ್ರಶ್ನೆ ಮಾಡುವ ಹಂತಕ್ಕೆ ಇಳಿಯುತ್ತಾರೆ ಎನ್ನುವುದೇ ದುರಂತ. 

ಭಯೋತ್ಪಾದಕರ ಮೇಲೆ ಕಾಂಗ್ರೆಸ್ ಮೃದು ಇತಿಹಾಸ:
ಡಿಕೆ ಶಿವಕುಮಾರ್ ಇರಬಹುದು, ಇನ್ಯಾರೊ ಕಾಂಗ್ರೆಸ್'ನ xyz ಲೀಡರ್  ಆಗಿರಬಹುದು. ಭಯೋತ್ಪಾದಕರ ಮೇಲೆ ಸಹಾನುಭೂತಿ ತೋರುತ್ತಿದ್ದಾರೆ ಎಂದ ಕೂಡಲೇ ಅವರು ಉದ್ದೇಶ ಪೂರ್ವಕವಾಗಿಯೆ ಹೇಳಿದ್ದಾರೆಂಬುದನ್ನು ನಂಬಬೇಕು ಎಂದು ಅನಿಸುತ್ತದೆ. ಯಾಕೆ ಎಂದರೆ ಕಾಂಗ್ರೆಸ್ ನಾಯಕರ ಈ ಹಿಂದಿನ ಟ್ರ್ಯಾಕ್ ರೆಕಾರ್ಡ್ ಹಾಗಿದೆ. ಅದು ಬಾಟ್ಲಾ ಎನ್‌ಕೌಂಟರ್ ಪ್ರಕರಣ, ಯಾಕೂಬ್ ಮೆನನ್ ಪರ ಸಹಾನುಭೂತಿ, ಯಾಸಿನ್ ಮಲ್ಲಿಕ್‌ಗೆ ರತ್ನಗಂಬಳಿ ಸ್ವಾಗತ, ಮುಂಬೈ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಕಠಿಣ ನಿರ್ಧಾರ ಕೈಗೊಳ್ಳದೇ ಇರೋದು, ಸೈನಿಕರು ಸರ್ಜಿಲ್ ಸ್ಟ್ರೈಕ್ (Surgical Strike) ಮಾಡಿದ್ರೆ ಸಾಕ್ಷಿ‌‌ ಕೇಳೊದರಿಂದ ಹಿಡಿದು, ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡುತ್ತೇವೆ ಎಂಬ ದಾಷ್ಟ್ಯ ಹೀಗೆ ಕಾಂಗ್ರೆಸ್ ನಾಯಕರ ವಾದ, ಅವರ ನಿಲುವುಗಳು ನಿಶ್ಚಿತವಾಗಿ ಪ್ರಶ್ನಾರ್ಹವಾಗಿದೆ. 

ಸೋನಿಯಾ ಗಾಂಧಿಯ ಕಣ್ಣೀರ ಕತೆ
ಸೆಪ್ಟೆಂಬರ್ 19, 2008 ರಲ್ಲಿ ದೆಹಲಿಯ ಓಖ್ಲಾದ ಜಾಮಿಯಾ ನಗರದ ಬಟ್ಲಾ ಹೌಸ್ ಪ್ರದೇಶದಲ್ಲಿನ ಫ್ಲಾಟ್‌ನಲ್ಲಿ ಅಡಗಿದ್ದ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಬಂಧಿಸಲು ದೆಹಲಿ ಪೊಲೀಸ್ ಶಸ್ತ್ರ ಸಜ್ಜಿತವಾಗಿ ಕಾರ್ಯಾಚರಣೆ ಶುರು ಮಾಡಿತ್ತು. ಆಗ ಪರಸ್ಪರ ಗುಂಡಿನ ಚಕಮಕಿ ನಡೆಯಿತು. ದೆಹಲಿ ಪೊಲೀಸ್ ಇಬ್ಬರು ಭಯೋತ್ಪಾದಕರನ್ನು ಹೊಡೆದು ಹಾಕಿತ್ತು. ಇದೇ ವೇಳೆ ಇನ್ಸ್‌ಪೆಕ್ಟರ್ ಮೋಹನ್ ಚಂದ ಶರ್ಮಾ ಹುತಾತ್ಮರಾದರು. ಈ ಘಟನೆ ಬಳಿಕ ಎನ್ ಕೌಂಟರ್ ಆದ (ಭಯೋತ್ಪಾದಕರ) ಫೋಟೊ‌ ನೋಡಿ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರೆಂದು ಸಾರ್ವಜನಿಕ ಭಾಷಣದಲ್ಲಿ ಹೇಳುವ ಮೂಲಕ ಅದೇ ಸಮಯದಲ್ಲಿ ಎದುರಾಗಿದ್ದ ದೆಹಲಿ ಚುನಾವಣೆಗೆ ಅಲ್ಪಸಂಖ್ಯಾತರ ವೋಟ್ ಪಡೆಯಲು ಯಾವ ಸ್ಟೇಟ್ಮೆಂಟ್ ನೀಡಬೇಕೊ ಅದೇ ಹೇಳಿಕೆ ನೀಡಿ, ಇದೊಂದು ಫೇಕ್ ಎನ್‌ಕೌಂಟರ್ ಎಂದು ಕಾಂಗ್ರೆಸ್ ಬಿಂಬಿಸಿದ್ದು, ಇತಿಹಾಸ ಪುಟದಲ್ಲಿ ಭದ್ರವಾಗಿದೆ.

ಯಾಕುಬ್ ಮೆನನ್ ನೇಣಿಗೆ ಏರಿಸಿದ್ದಾಗ ದಿಗ್ವಿಜಯ್ ಸಿಂಗ್ ಸಂಕಟ
1993 ಮುಂಬೈ ಸರಣಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ ಯಾಕೂಬ್ ಮೆನನ್ ತಪ್ಪಿತಸ್ಥ ಎಂದು ಪ್ರೂ ಆಗಿತ್ತು. ಪರಿಣಾಮ ಯಾಕುಬ್‌ನನ್ನು 30 ಜುಲೈ 2015ರಲ್ಲಿ ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ನೇಣಿಗೆ ಹಾಕಲಾಯಿತು. ಆಗ ಕಾಂಗ್ರೆಸ್ ನ ಮೋಸ್ಟ್ ಕಾಂಟ್ರೋವರ್ಸಿಯಲ್ ಮ್ಯಾನ್ (Controversial Man) ದಿಗ್ವಿಜಯ್ ಸಿಂಗ್ ಸರಣಿ ಟ್ವೀಟ್ ಮಾಡಿ, ತನ್ನ ಒಡಲೊಳಗೆ ಇದ್ದ ನೋವನ್ನು  ಕಾರಿ ಕೊಂಡಿದ್ದರು. ಯಾಕೂಬ್‌ನ ಯಾಕೆ ಗಲ್ಲಿಗೆ ಏರಿಸಿದ್ರಿ ಎಂದು ಎಲ್ಲಿಯೂ ನೇರವಾಗಿ ಕೇಳದೇ ಇದ್ದರು. 'ಯಾಕುಬ್‌ನನ್ನು ಗಲ್ಲಿಗೇರಿಸಲು ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ತೋರಿದ ತರಾತುರಿಯನ್ನು ಎಲ್ಲಾ ಕೇಸ್ ಗಳಲ್ಲೂ ತೋರಬೇಕು. ಮತ್ತು ಧರ್ಮ ನೋಡದೆ, ಜಾತಿ ಬೇಧ ಮಾಡದೆ ಒಂದೇ ತರನಾದ ಶಿಕ್ಷೆ ಆಗಬೇಕು ಎಂದು ದಿಗ್ವಿಜಯ್ ಸಿಂಗ್ ತಮ್ಮ ವೇದನೆಯನ್ನು ಸುತ್ತಿ ಬಳಸಿ, ಹೇಳಿದ್ದರು. ದಿಗ್ವಿಜಯ್ ಸಿಂಗ್‌ಗೆ ಕಾಂಗ್ರೆಸ್‌ನ ಇನ್ನೊಬ್ಬ ಹ್ಯಾಂಡ್ಸಮ್ ಲೀಡರ್ ಶಶಿ ತರೂರ್ ಕೂಡ ದನಿಗೂಡಿಸಿದ್ದರು. 
 

Karnataka Politics: ಯತ್ನಾಳ್ ನಾಯಕನಲ್ಲ ಹೇಳಿಕೆಯ ಹಿಂದಿನ ಕಾರಣಗಳು?!

ಯಾಸಿನ್ ಮಲಿಕ್ ಪ್ರಧಾನಿ ನಿವಾಸಕ್ಕೆ ಅತಿಥಿಯಾಗಿದ್ದ!!
ಕಾಶ್ಮೀರದ ಪ್ರತ್ಯೇಕತಾವಾದಿ ಭಯೋತ್ಪಾದಕ ಯಾಸಿನ್ ಮಲಿಕ್ ವಿಷಯದಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅದೆಷ್ಟು ಮೃದು ಧೋರಣೆ ತೋರಿತ್ತು ಎಂದರೆ ಆತ ನೇರವಾಗಿ ಪ್ರಧಾನಿ ನಿವಾಸಕ್ಕೆ ಸ್ವತಃ ಪ್ರಧಾನಿ‌ ಮನಮೋಹನ್ ಸಿಂಗ್ ಅವರಿಂದ ಆಹ್ವಾನ ಸ್ವಿಕರಿಸಿ, ಪ್ರಧಾನಿ ಕರೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದ. ಯಾಸಿನ್ ಮಲಿಕ್ ಉಗ್ರರಿಗೆ ಹಣಕಾಸಿನ ಸಹಾಯ ಮಾಡುತ್ತಿದ್ದವ, 1990 ರಲ್ಲಿ ಭಾರತೀಯ ಏರ್ ಪೋರ್ಸ್ ನ 4 ಅಧಿಕಾರಿಗಳನ್ನು ನಿರ್ದಯವಾಗಿ ಕೊಂದೆ ಎಂದು ಬಿಬಿಸಿ ಚಾನೆಲ್‌ ಮುಂದೆ ಕುಳಿತು ಗರ್ವದಿಂದ ಓಪನ್ ಆಗಿ ಹೇಳಿಕೊಂಡವ. 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರಿಂದ ಅಧಿಕೃತ ಆಹ್ವಾನ ಪಡೆದು, ಅವರ ನಿವಾಸಕ್ಕೆ ಭೇಟಿ ನೀಡಿದ್ದ ಎನ್ನೋದೆ ದೇಶದ ಇತಿಹಾಸದಲ್ಲಿ ಮೊದಲು. ಈಗ ಅದೇ ಭಯೋತ್ಪಾದಕನನ್ನು ನ್ಯಾಯಾಲಯ ಅಪರಾಧಿ ಎಂದು ಮೇ 19 2022 ರಂದು ತೀರ್ಪು ನೀಡಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಾಂಗ್ರೆಸ್‌ಗೂ ಬೇಕು. ಪಾಕಿಸ್ತಾನಕ್ಕೂ ಬೇಕು!!
ಪ್ರಧಾನಿ‌ ನರೇಂದ್ರ ಮೋದಿ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370 ರದ್ದು ಮಾಡಿದೆ. ವಿಶೇಷ ಸ್ಥಾನಮಾನ‌ ರದ್ದು ಮಾಡುವ ಮೂಲಕ ಗಡಿಯಲ್ಲಿ ಸೈನಿಕರ ಮೇಲೆ ಕಲ್ಲು ಎಸೆಯುತ್ತಿದ್ದವರ, ಕಾಶ್ಮೀರ ಪ್ರತ್ಯೇಕವಾದಿಗಳ ದನಿ ಅಡಗಿಸಿ ಲಾಲ್ ಚೌಕನಲ್ಲಿ ತ್ರಿವರ್ಣ ಧ್ವಜ ನಿರ್ಭಿಡೆಯಿಂದ ಹಾರುವಂತ ಐತಿಹಾಸಿಕ‌ ತೀರ್ಮಾನ ಮಾಡಿದೆ. ಆದರೆ ಅದ್ಯಾಕೋ ಏನೋ ಕಾಂಗ್ರೆಸ್ ಮಾತ್ರ ವಿಶೇಷ ರದ್ದು ಮಾಡಿದ್ದನ್ನೇ ಪ್ರಶ್ನೆ ಮಾಡುತ್ತಿದೆ. ಮಾತ್ರವಲ್ಲ, ತಾವು ಅಧಿಕಾರಕ್ಕೆ ಮರಳಿದರೆ ಪುನಃ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಘೋಷಣೆ ಮಾಡೋದಾಗಿ ಇದೇ ದಿಗ್ವಿಜಯ್ ಸಿಂಗ್ ಕನಸಲ್ಲೂ ಗೋಗೆರೆಯುತ್ತಿದ್ದಾರೆ. ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ ಪ್ರತ್ಯೇಕ ಕಾನೂನು ಬೇಕು ಎಂಬ ಬಯಕೆ ಕಾಂಗ್ರೆಸ್‌ಗೆ ಅದ್ಯಾಕೆ ಕಾಡುತ್ತಿದೆಯೊ ಗೊತ್ತಿಲ್ಲ. ವಿಶೇಷ ಅಂದರೆ ಇಷ್ಟೆಲ್ಲಾ‌ ಮಾಡಿಯೂ ಭಾರತದಲ್ಲಿ ಸಂವಿಧಾನ ಅಪಾಯದಲ್ಲಿ ಇದೆ ಎಂದು ಬೊಬ್ಬೆ ಹಾಕುವವರು ಸಹ ಇದೆ ಕಾಂಗ್ರೆಸ್ ನಾಯಕರು! ವಿಪರ್ಯಾಸ ನೋಡಿ ತುಷ್ಟೀಕರಣದ ಪರಾಕಾಷ್ಠೆಯ ತುತ್ತ ತುದಿಯನ್ನು ಕಾಂಗ್ರೆಸ್ ಈಗಾಗಲೇ ತಲುಪಿ ಆಗಿದೆ ಎನ್ನೋದಕ್ಕೆ ಇದೆ ನಿದರ್ಶನ. ಕಾಂಗ್ರೆಸ್ ಕಾಶ್ಮೀರದಲ್ಲಿ ಏನು ಮರಳಿ ತರುತ್ತೇವೆ ಎನ್ನುತ್ತಿದೆಯೋ, ಅದನ್ನೇ ನೆರೆಯ ಪಾಕಿಸ್ತಾನ ಕೂಡ ಬಯಸುತ್ತಿದೆ. ಹಾಗಾದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಪಾಕಿಸ್ತಾನದ ನಿಲುವು ಒಂದೇ!!

Karnataka Politics: ರಾಜ್ಯ ಬಿಜೆಪಿಗೆ ಪ್ರಧಾನಿ ಮೋದಿಯೇ ಸಂಜೀವಿನಿ!

ಹೀಗೆ ಕಾಂಗ್ರೆಸ್ ಇತಿಹಾಸದುದ್ದಕ್ಕೂ ತುಷ್ಟೀಕರಣದ ಭಾಗವಾಗಿ ದೇಶಿಗರ ಮುಂದೆ ಬೆತ್ತಲಾಗುತ್ತಲೇ ಬಂದಿದೆ.‌ ಡಿಕೆ ಶಿವಕುಮಾರ್ ಹೋಲಿಕೆ ಮಾಡಿದ್ದನ್ನು ಗಮನಿಸಿದರೆ, ಅದು ಬಾಯ್ ತಪ್ಪಿನಿಂದ ಬಂದ ಪದ ಎಂದು ಯಾಕೆ ಅನಿಸೋದಿಲ್ಲ ಎಂದರೆ ಕಾಂಗ್ರೆಸ್ ಇಷ್ಟು ವರ್ಷ ನಡೆದುಕೊಂಡ ರೀತಿ ಓಲೈಕೆಯೆ ಸಾಕ್ಷಿ. ಅದಕ್ಕಾಗಿಯೇ ಇರಬೇಕು 2014ರ ಲೋಕಸಭಾ ಚುನಾವಣೆಯಲ್ಲಿ40 ಸ್ಥಾನ 2019 ರ ಲೋಕಸಭಾ ಚುನಾವಣೆಯಲ್ಲಿ 50 ಸ್ಥಾನಕ್ಕೆ ಸೀಮಿತವಾಗಿದ್ದು. ಇನ್ನು ಇದೇ ರೀತಿ ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಾ ಸಾಗಿದರೆ, ಹೊಸ ತಲೆಮಾರಿನ ಯುವ ಸಮೂಹ ನಿಶ್ಚಿತವಾಗಿ ಕಾಂಗ್ರೆಸ್‌ನಿಂದ ಮತ್ತಷ್ಟು ದೂರವಾಗೋದ್ರಲ್ಲಿ ಅನುಮಾನ ಇಲ್ಲ.‌

click me!