ಜಿ ರಾಮ್ ಜಿ ವಿರುದ್ಧ ಜ.5ರಿಂದ ಕಾಂಗ್ರೆಸ್‌ ದೇಶವ್ಯಾಪಿ ಅಭಿಯಾನ

Kannadaprabha News   | Kannada Prabha
Published : Dec 28, 2025, 05:58 AM IST
 Congress

ಸಾರಾಂಶ

ಮನರೇಗಾ (ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ) ಯೋಜನೆ ರದ್ದುಪಡಿಸಿ, ಅದಕ್ಕೆ ಪರ್ಯಾಯವಾಗಿ ರೂಪಿಸಿರುವ ‘ವಿ ಬಿ-ಜಿ ರಾಮ್‌ ಜಿ’ ಕಾಯ್ದೆಯ ವಿರುದ್ಧ ಜ.5ರಿಂದ ದೇಶಾದ್ಯಂತ ‘ನರೇಗಾ ಬಚಾವೋ ಅಭಿಯಾನ’ ನಡೆಸುವುದಾಗಿ ಕಾಂಗ್ರೆಸ್‌ ಶನಿವಾರ ಘೋಷಿಸಿದೆ.

ನವದೆಹಲಿ: ಮನರೇಗಾ (ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ) ಯೋಜನೆ ರದ್ದುಪಡಿಸಿ, ಅದಕ್ಕೆ ಪರ್ಯಾಯವಾಗಿ ರೂಪಿಸಿರುವ ‘ವಿ ಬಿ-ಜಿ ರಾಮ್‌ ಜಿ’ ಕಾಯ್ದೆಯ ವಿರುದ್ಧ ಜ.5ರಿಂದ ದೇಶಾದ್ಯಂತ ‘ನರೇಗಾ ಬಚಾವೋ ಅಭಿಯಾನ’ ನಡೆಸುವುದಾಗಿ ಕಾಂಗ್ರೆಸ್‌ ಶನಿವಾರ ಘೋಷಿಸಿದೆ. ಕೇಂದ್ರ ಸರ್ಕಾರದ ಈ ಕ್ರಮ ಬಡವರನ್ನು ಹತ್ತಿಕ್ಕಲು ಜಾರಿಗೆ ತಂದ ಕಾಯ್ದೆ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದರೆ, ಪ್ರಧಾನಿ ನರೇಂದ್ರ ಮೋದಿ ಏಕಾಂಗಿಯಾಗಿ ಯುಪಿಎ ಅವಧಿಯ ಕಾಯ್ದೆಯನ್ನು ನಾಶ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವದ ಚೌಕಟ್ಟನ್ನೇ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಹಾರ ಚುನಾವಣೆಯ ಹೀನಾಯ ಸೋಲಿನ ಬಳಿಕ ಶನಿವಾರ ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯಲ್ಲಿ ಮನರೇಗಾ ಕಾಯ್ದೆ ರದ್ದು, ವಿಶೇಷ ಮತಪಟ್ಟಿ ಪರಿಷ್ಕರಣೆ, ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಮೊದಲಾದ ವಿಷಯಗಳನ್ನು ಚರ್ಚಿಸಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನರೇಗಾ ಕೇವಲ ಒಂದು ಯೋಜನೆಯಾಗಿರಲಿಲ್ಲ. ಅದು ಸಂವಿಧಾನ ನೀಡಿದ ಕೆಲಸ ಮಾಡುವ ಹಕ್ಕಾಗಿತ್ತು. ಅದರ ರದ್ದತಿಯಿಂದ ಜನ ಕೋಪಗೊಂಡಿದ್ದಾರೆ. ಸರ್ಕಾರ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸಿಡಬ್ಲ್ಯೂಸಿ ಸಭೆಯಲ್ಲಿ, ನರೇಗಾವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಅಭಿಯಾನವನ್ನು ಪ್ರಾರಂಭಿಸುವ ಕುರಿತು ನಾವು ಶಪಥ ಮಾಡಿದ್ದೇವೆ. ಕಾಂಗ್ರೆಸ್ ನೇತೃತ್ವದಲ್ಲಿ ಜ.5ರಿಂದ ‘ನರೇಗಾ ಬಚಾವೊ ಅಭಿಯಾನ’ವನ್ನು ಪ್ರಾರಂಭಿಸುತ್ತೇವೆ. ಈ ಕಾನೂನನ್ನು ಬಡವರನ್ನು ಹತ್ತಿಕ್ಕಲು ಜಾರಿಗೆ ತರಲಾಗಿದೆ. ಇದರ ವಿರುದ್ಧ ಬೀದಿಬೀದಿಯಲ್ಲಿ ಮತ್ತು ಸಂಸತ್ತಿನಲ್ಲಿ ಹೋರಾಡುತ್ತೇವೆ’ ಎಂದು ತಿಳಿಸಿದರು.

ಗಾಂಧಿಗೆ ಅವಮಾನ:

‘ನರೇಗಾವನ್ನು ಯುಪಿಎ ಸರ್ಕಾರದ ದೂರದೃಷ್ಟಿಯಿಂದ ಜಾರಿಗೆ ತರಲಾಗಿತ್ತು. ಪ್ರಪಂಚದಾದ್ಯಂತ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಯೋಜನೆ ಬೀರಿದ ಪ್ರಭಾವದಿಂದಾಗಿ ಈ ಯೋಜನೆಗೆ ಮಹಾತ್ಮ ಗಾಂಧಿಯವರ ಹೆಸರನ್ನು ಇಡಲಾಯಿತು. ನರೇಗಾ ರದ್ದತಿ ಮಹಾತ್ಮ ಗಾಂಧಿಯವರಿಗೆ ಮಾಡಿದ ಅವಮಾನ. ಯೋಜನೆಗೆ ಮರಳಿ ಅವರ ಹೆಸರನ್ನು ಇಡುವವೆಗೂ ನಮ್ಮ ಹೋರಾಟ ನಿಲ್ಲದು’ ಎಂದು ಖರ್ಗೆ ಹೇಳಿದರು.

ಚರ್ಚೆಯಿಲ್ಲದೆ ಕಾನೂನು ಜಾರಿ:

‘ಮೋದಿ ಸರ್ಕಾರ ಯಾವುದೇ ಚರ್ಚೆಯಿಲ್ಲದೆ, ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಈ ಕಾನೂನನ್ನು ಜಾರಿಗೆ ತಂದಿದೆ. ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯಬೇಕು. ಸರ್ಕಾರ ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅದರಂತೆಯೇ ಸರ್ಕಾರ ಕಾಯ್ದೆಯನ್ನು ಹಿಂಪಡೆಯುವ ಪರಿಸ್ಥಿತಿ ಬಂತು. ಈಗ, ಅವರು ನರೇಗಾವನ್ನು ಮರಳಿ ತರಬೇಕಾಗುತ್ತದೆ ಎಂದು ಹೇಳಿದ್ದಾರೆ, ಇದು ಕೂಡ ನೆರವೇರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಯಿಂದ ಹಾಳು

ಸಂಪುಟದಲ್ಲಿ ಚರ್ಚಿಸದೆ, ಅಧ್ಯಯನ ಮಾಡದೇ ಒಬ್ಬಂಟಿಯಾಗಿ ಮೋದಿ ನರೇಗಾ ಯೋಜನೆ ಹಾಳು ಮಾಡಿದರು. ನಾವು ಇದನ್ನು ವಿರೋಧಿಸಿ, ಹೋರಾಡುತ್ತೇವೆ. ಇದರ ವಿರುದ್ಧ ವಿಪಕ್ಷಗಳು ಒಟ್ಟಿಗೆ ನಿಲ್ಲುತ್ತವೆ ಎಂಬ ವಿಶ್ವಾಸವಿದೆ.

ರಾಹುಲ್‌ ಗಾಂಧಿ, ಲೋಕಸಭೆ ವಿಪಕ್ಷ ನಾಯಕ

ಜನರ ಹಕ್ಕಿಗೆ ಚ್ಯುತಿ

ನರೇಗಾ ಕೇವಲ ಒಂದು ಯೋಜನೆಯಾಗಿರಲಿಲ್ಲ. ಅದು ಸಂವಿಧಾನ ನೀಡಿದ ಕೆಲಸ ಮಾಡುವ ಹಕ್ಕಾಗಿತ್ತು. ಅದರ ರದ್ದತಿಯಿಂದ ಜನ ಕೋಪಗೊಂಡಿದ್ದಾರೆ. ಸರ್ಕಾರ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಹುಲ್ ಭೇಟಿ ಆಗಲು ಜ.7ರ ನಂತರ ಸಿದ್ದು, ಡಿಕೆಶಿ ದೆಹಲಿಗೆ ?
ಬುಲ್ಡೋಜರ್‌ ಸಂಸ್ಕೃತಿ ನಮ್ಮದಲ್ಲ: ಕೋಗಿಲು ಒತ್ತುವರಿ ತೆರವು ಬಗ್ಗೆ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?