ಬುಲ್ಡೋಜರ್‌ ಸಂಸ್ಕೃತಿ ನಮ್ಮದಲ್ಲ: ಕೋಗಿಲು ಒತ್ತುವರಿ ತೆರವು ಬಗ್ಗೆ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

Published : Dec 28, 2025, 05:26 AM IST
DK Shivakumar

ಸಾರಾಂಶ

ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಅಲ್ಲದೆ, ಒತ್ತುವರಿ ತೆರವು ಪ್ರಕರಣ ಕುರಿತು ಪಕ್ಷ ಮತ್ತು ಕೇರಳದ ನಮ್ಮ ನಾಯಕರಿಗೆ ವರದಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು (ಡಿ.28): ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ಪ್ರದೇಶ ನೆಲಸಮಗೊಳಿಸಿರುವ ಪ್ರಕರಣದ ಸತ್ಯಾಸತ್ಯತೆ ಅರಿಯದೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಅಲ್ಲದೆ, ಒತ್ತುವರಿ ತೆರವು ಪ್ರಕರಣ ಕುರಿತು ಪಕ್ಷ ಮತ್ತು ಕೇರಳದ ನಮ್ಮ ನಾಯಕರಿಗೆ ವರದಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಪಿಣರಾಯಿ ವಿಜಯನ್‌ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ಪಿಣರಾಯಿ ವಿಜಯನ್‌ ಅವರಂತಹ ಹಿರಿಯ ನಾಯಕರು ಸತ್ಯಾಸತ್ಯತೆ ಅರಿಯದೇ ಮಾತನಾಡಿರುವುದು ದುರಾದೃಷ್ಟಕರ. ಕೋಗಿಲು ಬಡಾವಣೆಯಲ್ಲಿ ಒತ್ತುವರಿ ತೆರವು ಮಾಡಿರುವ ಜಾಗವು ಘನತ್ಯಾಜ್ಯ ವಿಲೇವಾರಿ ಮಾಡುವ ಕ್ವಾರಿ ಜಾಗವಾಗಿದೆ. ಅಲ್ಲಿ ಕೆಲವರು ಕಾನೂನು ಬಾಹಿರವಾಗಿ ಅತಿಕ್ರಮಣ ಮಾಡಿದ್ದರು ಎಂದರು.

ನಮಗೂ ಮಾನವೀಯತೆಯಿದ್ದು, ಒತ್ತುವರಿದಾರರು ಬೇರೆ ಜಾಗಗಳಿಗೆ ಹೋಗಲು ಸರ್ಕಾರ ಮತ್ತು ಸ್ಥಳೀಯ ಶಾಸಕರು ಅವರಿಗೆ ಅವಕಾಶ ನೀಡಿದ್ದೆವು. ಇದೆಲ್ಲ ತಿಳಿಯದ ಪಿಣರಾಯಿ ವಿಜಯನ್‌ ನಮ್ಮ ರಾಜ್ಯದ ವಿಚಾರವಾಗಿ ಹಸ್ತಕ್ಷೇಪ ಮಾಡಬಾರದು. ಭೂ-ಗಳ್ಳರು ಕೊಳಗೇರಿ ನಿರ್ಮಿಸಲು ನಾವು ಬಿಡದೇ, ಭೂಮಿ ರಕ್ಷಣೆ ಮಾಡಿಕೊಳ್ಳುತ್ತೇವೆ. ಅದರಲ್ಲಿ ಯಾರೆಲ್ಲ ಅರ್ಹರಿದ್ದಾರೋ ಅವರಿಗೆ ರಾಜೀವ್‌ ಗಾಂಧಿ ವಸತಿ ಯೋಜನೆ ಅಡಿ ಮನೆ ನೀಡುತ್ತೇವೆ ಎಂದರು.

ಬುಲ್ಡೋಜರ್‌ ಸಂಸ್ಕೃತಿ ನಮ್ಮಲ್ಲಿಲ್ಲ. ನಾವು ಸರ್ಕಾರಿ ಜಮೀನಿನ ರಕ್ಷಣೆ ಮಾಡಿಕೊಂಡಿದ್ದೇವೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿಗದಿಯಾಗಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಬಿಡುವುದಿಲ್ಲ. ಇಡೀ ಘಟನೆ ಕುರಿತಂತೆ ಪಕ್ಷ ಮತ್ತು ಕೇರಳದ ನಾಯಕರಿಗೆ ವರದಿ ನೀಡುತ್ತೇನೆ. ಇನ್ನು, ಯಾರೆಲ್ಲ ಕರ್ನಾಟಕದಲ್ಲಿ ವಾಸವಿದ್ದು, ದಾಖಲೆ ಹೊಂದಿದ್ದಾರೋ ಅವರಿಗೆ ಕಾನೂನಿನಂತೆ ಅಗತ್ಯ ನೆರವು ನೀಡಲಾಗುವುದು. ಈ ಕುರಿತಂತೆ ಸ್ಪಷ್ಟ ವರದಿ ನೀಡುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ವಿವರಿಸಿದರು.

ಸೂಕ್ತ ರೀತಿಯಲ್ಲಿ ಮನೆ ನೀಡಲಾಗುವುದು

ಬೆಂಗಳೂರಿನಲ್ಲಿ ಬೇರೆ ನಗರಗಳಂತೆ ಹೆಚ್ಚಿನ ಕೊಳಗೇರಿಗಳಿಲ್ಲ. ಹೊಸದಾಗಿ ಕೊಳಗೇರಿ ನಿರ್ಮಾಣಕ್ಕೆ ಬಿಡುವುದಿಲ್ಲ. ಸಚಿವ ಕೃಷ್ಣ ಬೈರೇಗೌಡ ಕ್ಷೇತ್ರದಲ್ಲಿರುವ ಜಾಗ ಇದಾಗಿದ್ದು, ಅವರು ಅಧಿಕಾರಿಗಳ ಜತೆ ಮಾತನಾಡಿದ್ದಾರೆ. ಜಾಗ ಖಾಲಿಯಿದೆ ಎಂದು ಗುಡಿಸಲು ಹಾಕಿಕೊಳ್ಳಲಾಗದು. ಇದು ಅಲ್ಪಸಂಖ್ಯಾತ ಅಥವಾ ಬೇರೆ ವಿಚಾರವಲ್ಲ. ಬೇರೆ ಸರ್ಕಾರಗಳು ಜನರಿಗೆ ಮನೆ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ನಮ್ಮ ಸರ್ಕಾರ ಬಡವರಿಗೆ ಲಕ್ಷಾಂತರ ಮನೆ ನಿರ್ಮಾಣ ಮಾಡಿದೆ. ಅರ್ಹರಿಗೆ ಸೂಕ್ತ ರೀತಿಯಲ್ಲಿ ಮನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪಿಣರಾಯಿ ಹೇಳಿಕೆ ಬೆನ್ನಲ್ಲೇ ಪ್ರತಿಭಟನೆಗಳು ನಡೆಯುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಅದೆಲ್ಲವೂ ರಾಜಕೀಯ ಹೇಳಿಕೆ ಮತ್ತು ರಾಜಕೀಯ ಪ್ರೇರಿತ ಪ್ರತಿಭಟನೆಗಳು. ಸತ್ಯಾಸತ್ಯತೆ ಅರಿಯದೇ ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಕೇರಳದಲ್ಲಿ ಚುನಾವಣೆ ಸಮಯವಾದ ಕಾರಣ ಈ ರೀತಿಯ ರಾಜಕೀಯ ಮಾಡಲಾಗುತ್ತಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋದಿಯಿಂದ ರಾಜ್ಯಗಳು, ಬಡವರ ಮೇಲೆ ವಿನಾಶಕಾರಿ ದಾಳಿ: ರಾಗಾ
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ