ನಕಲಿ ಪತ್ರದ ಬಗ್ಗೆ ಎಚ್ಚರ ವಹಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್‌ ಮನವಿ

Published : Aug 10, 2023, 02:00 AM IST
ನಕಲಿ ಪತ್ರದ ಬಗ್ಗೆ ಎಚ್ಚರ ವಹಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್‌ ಮನವಿ

ಸಾರಾಂಶ

ಈ ಪತ್ರ ಪ್ರಕರಣದ ಹಿಂದೆ ರಾಜಕಾರಣದ ದುರುದ್ದೇಶವಿದೆ. ಜಿಲ್ಲೆಯ ಕೃಷಿ ಅಧಿಕಾರಿಗಳೇ ಇಂತಹ ಯಾವುದೇ ಪತ್ರವನ್ನು ನಾವು ಬರೆದಿಲ್ಲ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸರ್ಕಾರ ಕೂಡ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ ಎಂದು ತಿಳಿಸಿದ ಕಾಂಗ್ರೆಸ್‌ ಮುಖಂಡರು 

ಬೆಂಗಳೂರು(ಆ.10): ಮಂಡ್ಯ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವಿರುದ್ಧ ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾಗುತ್ತಿರುವ ಪತ್ರದ ಅಸಲಿಯತ್ತು ಪತ್ತೆಗೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿರುವ ನಡುವೆಯೇ ಕೃಷಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ನಕಲಿ ಪತ್ರಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಸಚಿವರೊಂದಿಗೆ ಮಂಡ್ಯ ಜಿಲ್ಲೆ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಾಬು ಬಂಡಿಸಿದ್ದೇಗೌಡ, ರವಿ ಗಣಿಗ, ಕೆ.ಎಂ.ಉದಯ್‌ಗೌಡ, ವಿಧಾನ ಪರಿಷತ್‌ ಸದಸ್ಯರಾದ ದಿನೇಶ್‌ ಗೂಳೀಗೌಡ, ಮಧು ಮಾದೇಗೌಡ ಮತ್ತಿತರರ ನಿಯೋಗ ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ, ಈ ಪತ್ರ ಪ್ರಕರಣದ ಹಿಂದೆ ರಾಜಕಾರಣದ ದುರುದ್ದೇಶವಿದೆ. ಜಿಲ್ಲೆಯ ಕೃಷಿ ಅಧಿಕಾರಿಗಳೇ ಇಂತಹ ಯಾವುದೇ ಪತ್ರವನ್ನು ನಾವು ಬರೆದಿಲ್ಲ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸರ್ಕಾರ ಕೂಡ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ ಎಂದು ತಿಳಿಸಿದ್ದಾರೆ.

ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ನೀಡಿರುವ ದೂರು ನಮ್ಮದಲ್ಲ; ಜಂಟಿ ಕೃಷಿ ನಿರ್ದೇಶಕ ಸ್ಪಷ್ಟನೆ

ಮೇಲು ನೋಟಕ್ಕೆ ಈ ಪತ್ರ ನಕಲಿ ಎಂದು ಪತ್ತೆಯಾಗಿದೆ. ಹೀಗಾಗಿ ಸಚಿವರ ಬಗೆಗಿನ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವ ಮುನ್ನ ಅರ್ಜಿಗಳು ನಕಲಿಯೋ ಅಥವಾ ಅಸಲಿಯೋ ಎಂಬ ಬಗ್ಗೆ ವಿಚಾರಿಸಿ ಅನಂತರ ಮುಂದಿನ ಕ್ರಮ ಕೈಗೊಳ್ಳುವಂತೆ ನಿಯೋಗ ರಾಜ್ಯಪಾಲರನ್ನು ಕೋರಿತು ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ ಸೃಷ್ಟಿ- ಚಲುವರಾಯಸ್ವಾಮಿ:

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ, ನನ್ನ ವಿರುದ್ಧ ಪತ್ರ ಬರೆದವರು ಯಾರು? ಅವರ ಮನೆ ವಿಳಾಸ ಯಾವುದು ಎಂಬುದು ತಿಳಿಯುತ್ತಿಲ್ಲ. ಆದರೆ, ಪತ್ರದಲ್ಲಿ ಕುಮಾರಸ್ವಾಮಿ ನಮ್ಮ ನಾಯಕರು ಅಂತ ಉಲ್ಲೇಖಿಸಲಾಗಿದೆ. ಹಾಗಾಗಿ ಈ ಪತ್ರವನ್ನು ಜಾತ್ಯತೀತ ಜನತಾದಳದವರೇ ಸೃಷ್ಟಿಸಿರಬಹುದು ಎಂಬ ಅನುಮಾನಗಳಿವೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಆರು ಸ್ಥಾನ ಗೆದ್ದಿರೋದು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಹಿಸಲಾಗ್ತಿಲ್ಲ. ರಾಜ್ಯದಲ್ಲಿ ಬಹುಶಃ ಮೈತ್ರಿ ಸರ್ಕಾರ ಬರುತ್ತದೆ ಎಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಆದರೆ, ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದನ್ನುಅವರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ಸರ್ಕಾರದ ವಿರುದ್ಧ ಷಡ್ಯಂತ್ರಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಸ್ಥಾನದಿಂದ ಚಲುವರಾಯ ಸ್ವಾಮಿ ಕೈಬಿಡಿ: ಕೆ.ಎಸ್‌.ಈಶ್ವರಪ್ಪ ಒತ್ತಾಯ

ನಾನು ಒಕ್ಕಲಿಗ. ಹಾಗಾಗಿ ಕುಮಾರಸ್ವಾಮಿ ಅವರಿಗೆ ನನ್ನನ್ನು ಸಹಿಸಲು ಆಗುತ್ತಿಲ್ಲ. ಎರಡು ಬಾರಿ ಸಿಎಂ ಆದವರು ಇಂತಹ ಕೆಳಮಟ್ಟಕ್ಕೆ ಇಳಿಯೋದು ಸಂಸ್ಕಾರ ಅಲ್ಲ. ಅವರ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು. ಇದೆಲ್ಲಾ ಜಾಸ್ತಿ ದಿನ ನಡೆಯಲ್ಲ. ಅವರು ಇದನ್ನೇ ಮುಂದುವರೆಸಿದರೆ ನಮ್ಮ ಕೆಲಸ ನಾವು ಮಾಡಬೇಕಾಗುತ್ತೆ. ನಕಲಿ ಪತ್ರಕ್ಕೆ ಯಾರು ಬೆಂಬಲ ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕು. ಅದಕ್ಕೆ ಮುಖ್ಯಮಂತ್ರಿ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದಾರೆ ಎಂದರು.

ಶಾಸಕ ನರೇಂದ್ರಸ್ವಾಮಿ ಮಾತನಾಡಿ, ರಾಜ್ಯಪಾಲರಿಗೆ ಅನಾಮಧೇಯ ಪತ್ರ ಹೋಗಿದೆ. ಪತ್ರದಲ್ಲಿ ಯಾವುದೇ ವಿಷಯ ಸ್ಪಷ್ಟತೆಯಿಂದ ಕೂಡಿಲ್ಲ. ಪಕ್ಷದ ಘನತೆ ಗೌರವ ಹಾಳು ಮಾಡುವ ಉದ್ದೇಶದಿಂದ ಮಾಡಿದ್ದಾರೆ. ಪತ್ರ ಬರೆದ ರೂವಾರಿ ಯಾರು? ಆತನ ಹೆಸರು, ಫೋನ್‌ ನಂಬರ್‌ ಏನೂ ಬರೆದಿಲ್ಲ. ಸದ್ಯ ಈ ಪ್ರಕರಣ ತನಿಖೆಯ ಹಂತದಲ್ಲಿದೆ. ರಾಜ್ಯಪಾಲರಲ್ಲಿ ನಿವೇದನೆ ಮಾಡಿಕೊಂಡಿದ್ದೇವೆ. ಯಾರು ಈ ಪತ್ರವನ್ನು ರಾಜಭವನಕ್ಕೆ ನೀಡಿದರು, ಅದನ್ನು ಸ್ವೀಕರಿಸಿದ ತಮ್ಮ ಕಚೇರಿಯ ಸಿಬ್ಬಂದಿ ಯಾರು ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿರುವುದಾಗಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌