
ನವದೆಹಲಿ (ಜನವರಿ 22, 2023): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶನಿವಾರ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದು, ಬಿಜೆಪಿಯನ್ನು ‘ಭ್ರಷ್ಟಜುಮ್ಲಾ ಪಕ್ಷ’ ಎಂದು ಕರೆದಿದೆ. ಅಲ್ಲದೇ ನಿರುದ್ಯೋಗ, ರೈತರ ಸಮಸ್ಯೆ, ಮಹಿಳಾ ಸುರಕ್ಷತೆಗಳ ಕುರಿತಾಗಿಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಭಾಗಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಕೆ.ಸಿ.ವೇಣುಗೋಪಾಲ್ (K.C. Venugopal) ಹಾಗೂ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜೈರಾಂ ರಮೇಶ್ (Jairam Ramesh), ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಈ ಚಾರ್ಜ್‌ಶೀಟ್ (Chargesheet) ಅನ್ನು ಬಿಡುಗಡೆ ಮಾಡಿದರು. ಬಿಜೆಪಿ (BJP) ಎಂದರೆ ಭ್ರಷ್ಟಜುಮ್ಲಾ ಪಕ್ಷ (ಸುಳ್ಳು ಹೇಳುವ ಭ್ರಷ್ಟಪಕ್ಷ) ಆಗಿದೆ. ಅಲ್ಲದೇ ಇದರ ಮಂತ್ರ ಕುಛ್ ಕಾ ಸಾಥ್, ಖುದ್ ಕಾ ವಿಕಾಸ್, ಸಬ್ ಕೆ ಸಾಥ್ ವಿಶ್ವಾಸಘಾತ್ (ಕೆಲವರ ಜೊತೆಗೆ ಸ್ವಂತದ ವಿಕಾಸ, ಎಲ್ಲರೊಂದಿಗೆ ವಿಶ್ವಾಸಘಾತಕ) ಎಂದು ವಾಗ್ದಾಳಿ ನಡೆಸಿದ್ದಾರೆ. 3 ವಿಭಾಗಗಳಲ್ಲಿ ಚಾರ್ಜ್‌ಶೀಟ್ ಬಿಡುಗಡೆ ಮಾಡಿದರು.
ಇದನ್ನು ಓದಿ: ಜೋಡೋ ಯಾತ್ರೆ ಕಾಶ್ಮೀರ ಪ್ರವೇಶಕ್ಕೂ ಮೊದಲೇ ಶಾಕ್, J&K ಪ್ರಮುಖ ನಾಯಕಿ ರಾಜೀನಾಮೆ!
ಚಾರ್ಜ್‌ಶೀಟ್‌ನಲ್ಲೇನಿದೆ?
ಚಾರ್ಜ್‌ಶೀಟ್‌ನ ‘ಕುಛ್ ಕಾ ಸಾಥ್’ (ಕೆಲವರ ಲಾಭಕ್ಕಾಗಿ) ವಿಭಾಗದಲ್ಲಿ, ಆಯ್ದ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಲಾಗಿದೆ. ಶೇ.10ರಷ್ಟು ಮಂದಿ ಭಾರತದ ಶೇ. 64ರಷ್ಟು ಸಂಪತ್ತು ಹೊಂದಿದ್ದಾರೆ. ಅಲ್ಲದೇ ಪ್ರಧಾನಿಗಳ ಆತ್ಮೀಯ ಸ್ನೇಹಿತರಿಗೆ ವಿಮಾನ ನಿಲ್ದಾಣಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.‘ಖುದ್ ಕಾ ವಿಕಾಸ್’ ವಿಭಾಗದಲ್ಲಿ, ಪ್ರಚಾರಕ್ಕಾಗಿ ಬಿಜೆಪಿ ಕೋಟ್ಯಂತರ ರು. ವೆಚ್ಚ ಮಾಡುತ್ತಿದೆ ಮತ್ತು ಸ್ವಜನ ಪಕ್ಷಪಾತದಲ್ಲಿ ತೊಡಗಿದೆ ಎಂದು ಆರೋಪಿಸಲಾಗಿದೆ. ಮೂರನೇ ವಿಭಾಗದಲ್ಲಿ ದೇಶದಲ್ಲಿರುವ ನಿರುದ್ಯೋಗ, ಆಹಾರ ಕೊರತೆ, ಮಹಿಳಾ ಸುರಕ್ಷತೆ, ರೈತರ ಸಮಸ್ಯೆ ಮತ್ತು ದ್ವೇಷ ಭಾಷಣಗಳನ್ನು ಸೇರಿಸಲಾಗಿದೆ.
‘ಹಾಥ್ ಸೆ ಹಾಥ್ ಜೋಡೋ’ ಲೋಗೋ ಬಿಡುಗಡೆ
ಭಾರತ್ ಜೋಡೋ ಪಾದಯಾತ್ರೆಯ ಬಳಿಕ ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿರುವ ಹಾಥ್ ಸೆ ಹಾಥ್ ಜೋಡೋ ಅಭಿಯಾನದ ಲೋಗೋವನ್ನು ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿತು. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಭಾಗಿಯಾದ ಪ್ರಧಾನ ಕಾರ್ಯದರ್ಶಿಗಳಾದ ಜೈರಾಂ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಈ ಲೋಗೋ ಬಿಡುಗಡೆ ಮಾಡಿದರು. ಇದು ಬಹುಪಾಲು ಭಾರತ್ ಜೋಡೋ ಯಾತ್ರೆಯ ಲೋಗೋವನ್ನೇ ಹೋಲುತ್ತಿದ್ದು, ಹೆಚ್ಚುವರಿಯಾಗಿ ಕಾಂಗ್ರೆಸ್ನ ಗುರುತಾದ ‘ಕೈ’ ಚಿಹ್ನೆಯನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ನಾನು RSS ಕಚೇರಿಗೆ ಬರ್ಬೇಕಾದ್ರೆ ನನ್ನ ತಲೆ ಕಡೀಬೇಕಷ್ಟೇ: ರಾಹುಲ್ ಗಾಂಧಿ
ಚಾರ್ಜ್‌ಶೀಟಲ್ಲಿ ಏನು ಆರೋಪ..?
- ಕೆಲವೇ ಕೆಲವರಿಗೆ ಸಾಲ ಮನ್ನಾ
- ದೇಶದ ಶೇ.64 ಸಂಪತ್ತು ಕೇವಲ ಶೇ.10 ಜನರಲ್ಲಿ ಕ್ರೋಡೀಕರಣ
- ಪ್ರಧಾನಿ ಮಿತ್ರರಿಗೆ ಏರ್‌ಪೋರ್ಟ್ ‘ಗಿಫ್ಟ್’
- ಪ್ರಚಾರಕ್ಕೆ ಬಿಜೆಪಿಯಿಂದ ಕೋಟಿಗಟ್ಟಲೇ ಖರ್ಚು
- ದೇಶದಲ್ಲಿ ಆಹಾರ ಕೊರತೆ, ನಿರುದ್ಯೋಗ ತಾಂಡವ
- ರೈತರ ಸ್ಥಿತಿ ಅಯೋಮಯ, ಮಹಿಳಾ ಸುರಕ್ಷತೆ ಇಲ್ಲ
- ಬಿಜೆಪಿಯಿಂದ ಬರೀ ದ್ವೇಷ ಕಾರುವ ಭಾಷಣ
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಯನ್ನು ತಬ್ಬಿಕೊಂಡ ಅಭಿಮಾನಿ: ತಳ್ಳಿದ ಕಾಂಗ್ರೆಸ್ ಕಾರ್ಯಕರ್ತರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.