ಕಲಬುರಗಿಯಲ್ಲಿ ಇಂದು ಖರ್ಗೆ ಬೃಹತ್‌ ಶೋ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಸಲ ತವರಿಗೆ

Published : Dec 10, 2022, 08:04 AM IST
ಕಲಬುರಗಿಯಲ್ಲಿ ಇಂದು ಖರ್ಗೆ ಬೃಹತ್‌ ಶೋ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಸಲ ತವರಿಗೆ

ಸಾರಾಂಶ

ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ತವರೂರಿಗೆ ಆಗಮಿಸುತ್ತಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲಬುರಗಿಯಲ್ಲಿ ಅದ್ಧೂರಿ ಸ್ವಾಗತ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಕಲಬುರಗಿ (ಡಿ.10): ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ತವರೂರಿಗೆ ಆಗಮಿಸುತ್ತಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲಬುರಗಿಯಲ್ಲಿ ಅದ್ಧೂರಿ ಸ್ವಾಗತ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೇ ವೇಳೆ ‘ಕಲ್ಯಾಣ ಕ್ರಾಂತಿ’ ಹೆಸರಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಬೃಹತ್‌ ಕಾಂಗ್ರೆಸ್‌ ಸಮಾವೇಶವನ್ನೂ ಹಮ್ಮಿಕೊಳ್ಳಲಾಗಿದೆ.

ಸಮಾವೇಶದಲ್ಲಿ ಕಲ್ಯಾಣ ನಾಡಿನ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ 41 ಅಸೆಂಬ್ಲಿ ಕ್ಷೇತ್ರಗಳಿಂದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಖರ್ಗೆ ಸ್ವಾಗತ ನೆಪದಲ್ಲಿ ಕಾಂಗ್ರೆಸ್‌ನಿಂದ ಬೃಹತ್‌ ಶಕ್ತಿ ಪ್ರದರ್ಶನ ನಡೆಯಲಿದೆ. ಈ ಬೃಹತ್‌ ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಒಡೆದ ಭಾರತವನ್ನು ಒಗ್ಗೂಡಿಸಲು ಜೋಡೋ ಯಾತ್ರೆ; ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ!

4 ಕಿ.ಮೀ. ಮೆರವಣಿಗೆ: ಖರ್ಗೆಯವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಶನಿವಾರ ಬೆಳಗ್ಗೆ 10.40ಕ್ಕೆ ಕಲಬುರಗಿಗೆ ಬಂದಿಳಿಯಲಿದ್ದು, ಆ ಬಳಿಕ ನಗರವೇಶ್ವರ ಶಾಲೆ ಮೈದಾನದಲ್ಲಿ ಖರ್ಗೆ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗುವುದು. ಅಲ್ಲಿಂದ ಪಕ್ಷದ ಕಾರ್ಯಕರ್ತರೆಲ್ಲರೂ ಸೇರಿ ಸಮಾವೇಶ ನಡೆಯಲಿರುವ ಎನ್‌.ವಿ. ಕಾಲೇಜುವರೆಗೆ 4 ಕಿ.ಮೀ. ಮೆರವಣಿಗೆ ನಡೆಸಲಿದ್ದಾರೆ.

ಗಣ್ಯರ ದಂಡು: ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ದಿನೇಶ್‌ ಗುಂಡೂರಾವ್‌, ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಎಚ್‌.ಕೆ.ಪಾಟೀಲ್‌, ಕೆ.ಎಚ್‌.ಮುನಿಯಪ್ಪ, ಡಾ.ಜಿ.ಪರಮೇಶ್ವರ್‌ ಮತ್ತಿತರರು ಸೇರಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಕಾಂಗ್ರೆಸ್‌ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಲಬುರಗಿ ನಗರ ಸಂಪೂರ್ಣವಾಗಿ ಕಾಂಗ್ರೆಸ್‌ಮಯವಾಗಿದೆ. ಕಾರ್ಯಕ್ರಮಕ್ಕಾಗಿ ಎನ್‌.ವಿ.ಕಾಲೇಜು ಮೈದಾನದಲ್ಲಿ ಸುಮಾರು 200 ಮಂದಿ ಗಣ್ಯರು ಕೂರಬಹುದಾದ ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, ಎಂಟು ಎಕರೆ ಪ್ರದೇಶದಲ್ಲಿ ಮೂರು ಲಕ್ಷ ಜನ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ್‌ ತಿಳಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ: ಭಾರಿ ಕುತೂಹಲ

3 ಲಕ್ಷ ಜನ ಭಾಗಿ ನಿರೀಕ್ಷೆ
- ಇಂದು ಬೆಳಗ್ಗೆ 10.40ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬರಲಿರುವ ಖರ್ಗೆ
- ಸ್ವಾಗತ ಸಮಾರಂಭ. ಬಳಿಕ ಕಾರ‍್ಯಕರ್ತರ ಜತೆ 4 ಕಿ.ಮೀ. ಉದ್ದದ ಮೆರವಣಿಗೆ
- ಎನ್‌.ವಿ.ಕಾಲೇಜು ಮೈದಾನದಲ್ಲಿ ‘ಕಲ್ಯಾಣ ಕ್ರಾಂತಿ’ ಹೆಸರಿನಲ್ಲಿ ಸಮಾವೇಶ
- ಕಲ್ಯಾಣ ಕರ್ನಾಟಕದ 7 ಜಿಲ್ಲೆ, 41 ವಿಧಾನಸಭೆ ಕ್ಷೇತ್ರದ ಕಾರ‍್ಯಕರ್ತರು ಭಾಗಿ
- ಸುರ್ಜೇವಾಲಾ, ಸಿದ್ದು, ಡಿಕೆಶಿ, ಹರಿಪ್ರಸಾದ್‌ ಸೇರಿದಂತೆ ಹಲವರು ಉಪಸ್ಥಿತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!