
ಬೆಂಗಳೂರು (ಜು.17): ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಆಧಾರಿತ ಜನಗಣತಿಗೆ ತೆಲಂಗಾಣ ಮಾದರಿ ಅನುಸರಿಸುವುದು, ಶಿಕ್ಷಣ, ರಾಜಕೀಯ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಒಬಿಸಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಶೇ.50ರಿಂದ 75ಕ್ಕೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ, ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ರ್‍ಯಾಲಿ ನಡೆಸುವುದು ಸೇರಿ ಇನ್ನಿತರ ವಿಷಯಗಳ ಕುರಿತು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಖಾಸಗಿ ಹೋಟೆಲ್‌ನಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಎರಡನೇ ದಿನದ ಸಭೆಯಲ್ಲಿ ಒಬಿಸಿ ಸಮುದಾಯದವನ್ನು ಒಗ್ಗೂಡಿಸುವುದು, ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅವರಿಗೆ ಬಲ ತುಂಬುವ ಕುರಿತು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೇಂದ್ರ ಸರ್ಕಾರದ ಮೇಲೆ ಯಾವೆಲ್ಲ ವಿಚಾರಗಳ ಕುರಿತು ಒತ್ತಡ ಹೇರಬೇಕು ಎಂಬ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಒಬಿಸಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಅವರಿಗೆ ಶಕ್ತಿ ತುಂಬುವಂತಹ ವಿಷಯಗಳ ಕುರಿತು ನಿರ್ಣಯಿಸಲಾಯಿತು.
ಬಿಹಾರ ಎಲೆಕ್ಷನ್‌ವರೆಗೆ ಹೈಕಮಾಂಡ್ ಮೌನ: ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ ಹುಟ್ಟುಹಾಕಿದ್ದರೂ ಹೈಕಮಾಂಡ್ ಮಾತ್ರ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡದೆ ದಿವ್ಯ ಮೌನ ವಹಿಸಿದೆ. ಅಷ್ಟೇ ಅಲ್ಲ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೂ ನಿರ್ದೇಶಿಸಿದೆ ಎನ್ನುತ್ತವೆ ಉನ್ನತ ಮೂಲಗಳು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ದಾಢಸಿ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರೂ ಹೈಕಮಾಂಡ್ ಈ ರೀತಿ ಮೌನ ವಹಿಸಿರುವುದರ ಹಿಂದೆ ಬಿಹಾರ ಚುನಾವಣೆಯ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ.
ಅದು ಸಿದ್ದರಾಮಯ್ಯ ಅವರ ಹೇಳಿಕೆ. ಉಪ ಮುಖ್ಯಮಂತ್ರಿಯಾಗಲಿ ಅಥವಾ ಹೈಕಮಾಂಡ್ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದರೆ ಅದು ರಾಷ್ಟ್ರಮಟ್ಟದಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ. ಅಕ್ಟೋಬರ್‌ನಲ್ಲಿ ಬಿಹಾರ ಚುನಾವಣೆಯಿದ್ದು, ಈ ಹಂತದಲ್ಲಿ ಒಬಿಸಿ ಸಮುದಾಯದ ನಾಯಕರೊಬ್ಬರ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿಕೊಳ್ಳುವ ಮನಸ್ಸು ಹೈಕಮಾಂಡ್‌ಗೆ ಇಲ್ಲ.ಹೀಗಾಗಿ, ಅಕ್ಟೋಬರ್‌ವರೆಗೆ ಈ ಬಗ್ಗೆ ಹೈಕಮಾಂಡ್ ಮೌನ ಮುಂದುವರೆಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ ಮೂಲಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.