ಬೆಂಗಳೂರು (ಜು.17): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಿಲ್ಲದೆ ಶಾಸಕರು ಹಾಗೂ ಸಚಿವರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಾರ್ಯವೈಖರಿ ಬಗ್ಗೆ ಸಿದ್ದರಾಮಯ್ಯ ಬಣದ ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ವಪಕ್ಷೀಯ ಸಚಿವ ಕೆ.ಎನ್. ರಾಜಣ್ಣ ಹಾಗೂ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಸುರ್ಜೇವಾಲಾ ಸಭೆಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಸುರ್ಜೇವಾಲಾ ಅವರು ನಡೆಸುತ್ತಿರುವ ಪ್ರಕ್ರಿಯೆ ಬಗ್ಗೆ ನನಗೆ ಸಮಾಧಾನ ಇಲ್ಲ. ಅವರಿಗೆ ನನ್ನ ಬಗ್ಗೆ ಬೇಜಾರಿದ್ದರೆ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ನೇರವಾಗಿ ಕೆ.ಎನ್. ರಾಜಣ್ಣ ಹೇಳಿದ್ದರು. ಬುಧವಾರ ಸುರ್ಜೇವಾಲಾ ಅವರನ್ನು ಭೇಟಿ ಮಾಡಬೇಕಾಗಿದ್ದ ಅವರು ವಿದೇಶಕ್ಕೆ ತೆರಳಿದ್ದು, ಎಚ್.ಸಿ. ಮಹದೇವಪ್ಪ ಅವರೂ ಭೇಟಿ ಮಾಡಿಲ್ಲ. ಮತ್ತೆ ಕೆಲ ಸಚಿವರು ಸುರ್ಜೇವಾಲ ಅವರನ್ನು ಭೇಟಿಯಾಗಿದ್ದರೂ ಒಳಗೆ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗಿದೆ.
ಬೆನ್ನಲ್ಲೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸುರ್ಜೇವಾಲಾ ಅವರು ಸೂಪರ್ ಸಿಎಂ ಆಗಿದ್ದಾರೆ. ಗುರುವಾರ ನಡೆಯುವ ಸಂಪುಟ ಸಭೆಯೂ ಸುರ್ಜೇವಾಲ ಅವರ ಅಧ್ಯಕ್ಷತೆಯಲ್ಲೇ ನಡೆಯುತ್ತಾ ಎಂದು ವ್ಯಂಗ್ಯವಾಡಿದ್ದರು. ಇದರ ಬೆನ್ನಲ್ಲೇ ರಾಜೇಂದ್ರ, ‘ಸುರ್ಜೇವಾಲ ಅವರ ನಡೆಗೆ ಅಸಮಾಧಾನ ಇದೆ ನಿಜ. ಬಹಳಷ್ಟು ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸುರ್ಜೆವಾಲ ಅನುದಾನ ಕೊಡುತ್ತಾರಾ? ಸುರ್ಜೆವಾಲ ಸಭೆ ಮುಗಿದ ಬಳಿಕ ಇದು ಯಾವ ತಿರುವು ಪಡೆಯುತ್ತದೆ ಎಂಬುದು ನೋಡಬೇಕು’ ಎಂದು ಹೇಳಿದ್ದರು.
ಮಹದೇವಪ್ಪ ಗೈರಿನ ಬಗ್ಗೆ ಚರ್ಚೆ: ಎರಡು ದಿನಗಳಿಂದಲೂ ಉಸ್ತುವಾರಿ ಸಭೆಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಹಾಜರಾಗಿರಲಿಲ್ಲ. ಸಭೆಗೆ ಬರುವಂತೆ ಸುರ್ಜೇವಾಲಾ ಮೊದಲ ದಿನವೇ ಕರೆ ಮಾಡಿದ್ದರೂ ಸಮಯಾವಕಾಶವನ್ನು ಮಹದೇವಪ್ಪ ಕೇಳಿದ್ದರು. ಕೊನೆಯ ದಿನವಾದ ಬುಧವಾರವೂ ಹಾಜರಾಗಿಲ್ಲ. ಇವರಲ್ಲದೆ ಕೆ.ಎಚ್. ಮುನಿಯಪ್ಪ, ಶರಣಪ್ಪ ದರ್ಶನಾಪುರ, ಆರ್.ಬಿ. ತಿಮ್ಮಾಪುರ, ಶಿವರಾಜ್ ತಂಗಡಗಿ, ಎಂ.ಸಿ. ಸುಧಾಕರ್, ಶಿವಾನಂದ ಪಾಟೀಲ್ ಕೂಡ ಗೈರಾಗಿದ್ದರೂ ಅವರು ಬೇರೆ ಬೇರೆ ಕಾರಣಗಳಿಂದ ಗೈರಾಗಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.