
ಬೆಂಗಳೂರು (ಜು.17): ರಾಜ್ಯ ಸಚಿವರ ಕಾರ್ಯವೈಖರಿ ಬಗ್ಗೆ ಸ್ವಪಕ್ಷೀಯ ಶಾಸಕರೇ ದೂರುಗಳ ಸುರಿಮಳೆ ಸುರಿಸಿರುವ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಚಿವರೊಂದಿಗೆ ನಡೆಸಿದ ಮೂರು ದಿನಗಳ ಸಭೆ ಮುಕ್ತಾಯಗೊಂಡಿದ್ದು, ಶಾಸಕರು ಹಾಗೂ 22 ಮಂದಿ ಸಚಿವರೊಂದಿಗಿನ ಚರ್ಚೆಯ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಲು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಹಂತದಲ್ಲಿ ಒಟ್ಟು ಆರು ದಿನಗಳ ಕಾಲ ಶಾಸಕರೊಂದಿಗೆ ಸಭೆ ನಡೆಸಿದ್ದ ಸುರ್ಜೇವಾಲ ಅವರ ಬಳಿ ಶಾಸಕರು ಸಚಿವರ ವಿರುದ್ಧ ಸಾಲು-ಸಾಲು ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಮೂರು ದಿನಗಳ ಸಚಿವರ ಸಭೆ ನಡೆಸಿದ ಸುರ್ಜೇವಾಲ ಅವರ ಬಳಿ 22 ಮಂದಿ ಸಚಿವರು ಹಾಜರಾಗಿದ್ದು, ಇನ್ನೂ ಎಂಟು ಮಂದಿ ವಿವಿಧ ಕಾರಣ ನೀಡಿ ಸಭೆಯಲ್ಲಿ ಭಾಗವಹಿಸಿಲ್ಲ. ಬುಧವಾರ ಈಶ್ವರ್ ಖಂಡ್ರೆ, ಕೃಷ್ಣಬೈರೇಗೌಡ, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಡಾ.ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಚಲುವರಾಯಸ್ವಾಮಿ, ಮಾಂಕಾಳ್ ವೈದ್ಯ ಸೇರಿದಂತೆ ಎಂದು ಮಂದಿ ಸಚಿವರು ಸುರ್ಜೇವಾಲ ಅವರನ್ನು ಭೇಟಿ ಮಾಡಿ ತಮ್ಮ ಇಲಾಖೆ ಕಾರ್ಯವೈಖರಿ ಹಾಗೂ ಶಾಸಕರ ದೂರುಗಳ ಬಗ್ಗೆ ವಿವರಣೆ ನೀಡಿದರು.
ಬೆನ್ನಲ್ಲೇ ಶಾಸಕರು ಹಾಗೂ 22 ಮಂದಿ ಸಚಿವರೊಂದಿಗಿನ ಚರ್ಚೆಯ ವರದಿ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುರ್ಜೇವಾಲಾ ಚರ್ಚಿಸಿದ್ದಾರೆ. ಶಾಸಕರ ಕೆಲವು ಸಮಂಜಸ ಬೇಡಿಕೆಗಳನ್ನು ಈಡೇರಿಸುವಂತೆ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದಾರೆ. ಜತೆಗೆ ಶಾಸಕರು ಹಾಗೂ ಸಚಿವರ ನಡುವೆ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಸಕರ ದೂರುಗಳ ಬಗ್ಗೆ ವಿವರಣೆ: ಒಟ್ಟು ಮೂರು ದಿನಗಳ ಸಭೆಯಲ್ಲಿ ಶಾಸಕರು ಸಚಿವರ ಸಭೆಯಲ್ಲಿ ಸಚಿವರ ಬಗ್ಗೆ ನೀಡಿರುವ ದೂರುಗಳ ಬಗ್ಗೆ ಮೊದಲು ವಿವರಣೆ ಕೋರಿದರು. ಬಳಿಕ ಇಲಾಖಾ ಕಾರ್ಯವೈಖರಿ ಹಾಗೂ ಜಿಲ್ಲಾ ಉಸ್ತುವಾರಿಯಾಗಿ ಶಾಸಕರೊಂದಿಗೆ ನಡೆಸಿಕೊಳ್ಳುತ್ತಿರುವ ರೀತಿ ಕುರಿತು ಪರಿಶೀಲನೆ ನಡೆಸಿದರು. ಕೆಲ ಸಚಿವರ ವಿರುದ್ಧ ಹೆಚ್ಚು ದೂರುಗಳ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು ತಿದ್ದಿಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಶಾಸಕರ ಪತ್ರ, ಶಿಫಾರಸುಗಳಿಗೆ ಸ್ಪಂದಿಸಿ. ಕ್ಷೇತ್ರಗಳಲ್ಲಿನ ಅಧಿಕಾರಿಗಳ ವರ್ಗಾವಣೆ, ಅನುದಾನದ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರನ್ನು ವಿಶ್ವಾಸಕ್ಕೆ ಪಡೆಯಬೇಕು. ಅಧಿಕಾರಿಗಳು ಶಾಸಕರನ್ನು ಗೌರವಿಸುವಂತೆ ನೋಡಿಕೊಳ್ಳಬೇಕು. ಇದಾಗಬೇಕೆಂದರೆ ಮೊದಲು ನೀವು ಪಕ್ಷದ ಶಾಸಕರನ್ನು ಗೌರವಿಸಬೇಕು ಎಂದು ಸೂಚಿಸಿದರು ಎನ್ನಲಾಗಿದೆ.
ಶಾಸಕರನ್ನು ವಿಶ್ವಾಸಕ್ಕೆ ಪಡೆಯಿರಿ: ಎಲ್ಲಾ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಯಾವುದೇ ಕಾರ್ಯಕ್ರಮ, ಫಲಾನುಭವಿಗಳಿಗೆ ಯೋಜನೆಯ ಲಾಭ ಹಂಚಿಕೆ ವೇಳೆ ಶಾಸಕರನ್ನು ನಿರ್ಲಕ್ಷ್ಯ ಮಾಡಬೇಡಿ. ಪಕ್ಷಕ್ಕಿಂತ ಅನ್ಯ ಪಕ್ಷದ ಶಾಸಕರು, ನಾಯಕರ ಅರ್ಜಿಗಳಿಗೆ ಪ್ರಾಶಸ್ತ್ಯ ಸಿಗುತ್ತಿದೆ ಎಂಬ ಆರೋಪವಿದೆ. ಹೀಗಾದರೆ ಪಕ್ಷ ಕಟ್ಟುವುದು ಅಸಾಧ್ಯ. ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರಿಗೆ, ಶಾಸಕರಿಗೆ ಸ್ಪಂದಿಸಿ ಎಂದು ತಾಕೀತು ಮಾಡಿದರು ಎನ್ನಲಾಗಿದೆ.
ನಮ್ಮ ಇಲಾಖೆಯ ಬಗ್ಗೆ ಸುರ್ಜೇವಾಲ ಸಂತಸ: ಬುಧವಾರ ಎಂಟು ಮಂದಿ ಸಚಿವರೊಂದಿಗೆ ಸಭೆ ನಡೆಸಿದ್ದು ಹೊರ ಬಂದ ಎಲ್ಲಾ ಸಚಿವರೂ ನಮ್ಮ ಇಲಾಖೆಯ ಎರಡು ವರ್ಷಗಳ ಸಾಧನೆ ಬಗ್ಗೆ ಸುರ್ಜೇವಾಲ ಅವರಿಗೆ ವಿವರಣೆ ನೀಡಿದ್ದು ಅವರಿಗೆ ಸಮಾಧಾನ ಇದೆ ಎಂದು ಹೇಳಿದರು. ಕೆಲ ಸಚಿವರಂತೂ ನಮ್ಮ ಇಲಾಖೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು. ಶಾಸಕರು ದೂರುಗಳ ಸುರಿಮಳೆಗೈದಿದ್ದರೆ ಸಚಿವರು ಮಾತ್ರ ತಮ್ಮ ಇಲಾಖೆಯ ಸಾಧನೆ ಬಗ್ಗೆ ಸುರ್ಜೇವಾಲ ಮೆಚ್ಚಿಕೊಂಡಿದ್ದಾರೆ ಎಂದಿರುವುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.