ಬಿಜೆಪಿ ಬೆದರಿಕೆ ಪತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ: ಡಿ.ಕೆ.ಸುರೇಶ್‌

By Govindaraj S  |  First Published Sep 18, 2022, 12:28 AM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ನೀಡಿರುವುದು ಇ.ಡಿ.ನೋಟಿಸ್‌ ಅಲ್ಲ, ಬಿಜೆಪಿ ಬೆದರಿಕೆ ಪತ್ರ. ಬಿಜೆಪಿ ಬೆದರಿಕೆ ಪತ್ರಕ್ಕೆ ಕಾಂಗ್ರೆಸ್‌ ಆಗಲಿ, ಡಿ.ಕೆ.ಶಿವಕುಮಾರ್‌ ಆಗಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಸ್ಪಷ್ಟಪಡಿಸಿದರು.


ಚನ್ನಪಟ್ಟಣ (ಸೆ.18): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ನೀಡಿರುವುದು ಇ.ಡಿ.ನೋಟಿಸ್‌ ಅಲ್ಲ, ಬಿಜೆಪಿ ಬೆದರಿಕೆ ಪತ್ರ. ಬಿಜೆಪಿ ಬೆದರಿಕೆ ಪತ್ರಕ್ಕೆ ಕಾಂಗ್ರೆಸ್‌ ಆಗಲಿ, ಡಿ.ಕೆ.ಶಿವಕುಮಾರ್‌ ಆಗಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಸ್ಪಷ್ಟಪಡಿಸಿದರು. ನೆರೆ ಸಂತ್ರಸ್ತರಿಗೆ ನಗರದಲ್ಲಿ ದಿನಸಿ ಕಿಟ್‌ ವಿತರಿಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಮೇಲೆ ಆಗಾಗ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಶಿವಕುಮಾರ್‌ ಅವರನ್ನ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಏನು ಮಾಡುತ್ತಾರೋ ಗೊತ್ತಿಲ್ಲ. ಅದರೆ, ಅವರು ಏನೇ ಮಾಡಿದರು ಅದನ್ನು ಎದುರಿಸಲು ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಪಕ್ಷ ತಯಾರಿದೆ ಎಂದರು.

ಲಂಚ ಕೊಡಬೇಕು: ಕಳೆದ 75 ವರ್ಷಗಳಿಂದ ರಾಮನಗರ ಅಭಿವೃದ್ಧಿಪಡಿಸಿಲ್ಲ ಎಂಬ ಸಚಿವ ಅಶ್ವತ್ಥ ನಾರಾಯಣ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ 75 ವರ್ಷಗಳಿಂದ ಬಿಜೆಪಿಯವರ ಕೊಳಕು ಹಾಗೂ ಭ್ರಷ್ಟರಾಜಕೀಯ ಇರಲಿಲ್ಲ. ನಾಡಕಚೇರಿ ಹಾಗೂ ತಹಶಿಲ್ದಾರ್‌ ಕಚೇರಿ ಹಾಗೂ ಪೊಲೀಸ್‌ ಠಾಣೆಯಲ್ಲಿ ಕೆಲಸ ಆಗಬೇಕಾದರೆ ಹಣ ಕೊಡಬೇಕು. ಯಾರಾದರೂ ಉದ್ಯೋಗ ಪಡೆಯಬೇಕಾದರೂ ಹಣ ಕೊಡಬೇಕು ಅಂತ ವಾತಾವರಣ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

Tap to resize

Latest Videos

Ramanagara ಕೋಟ್ಯಾಂತರ ರೂ ಮೌಲ್ಯದ ಭೂಮಿಯನ್ನ ಕಬಳಿಸಲು ಹುನ್ನಾರ, 6 ಮಂದಿ ಅಂದರ್!

ಬಿಜೆಪಿ ಪಕ್ಷದಿಂದ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಬೇಕು ಎಂಬ ಉದ್ದೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯಅವಧಿಯಿಂದ ತನಿಖೆ ಮಾಡ್ತೇವೆ ಎಂದು ಹೇಳುತ್ತಿದ್ದಾರೆ. ಬರಿ ಭಾಷಣದಲ್ಲಿ ತಾಕತ್ತು ಪ್ರದರ್ಶನ ಆಗೋದು ಬೇಡ. ಅವರ ತಾಕತ್ತನ್ನು ಅವರು ಪ್ರದರ್ಶನ ಮಾಡಲಿ ಎಂದು ಸವಾಲು ಹಾಕಿದರು. ಇದೇ ವೇಳೆ ಮಳೆಯಿಂದ ಹಾನಿಗೊಳಗಾದ ನಗರದ ಎಪಿಎಂಸಿ, ಪೇಟೆಚೇರಿ, ಬೀಡಿಕಾಲೋನಿಗಳ ಸಂತ್ರಸ್ತರಿಗೆ ದಿನಸಿಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಪ್ರಸನ್ನ ಪಿ.ಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಗಂಗಾಧರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುನೀಲ್‌, ಮುಖಂಡರಾದ ಬೋರ್‌ವೆಲ್‌ ರಂಗನಾಥ್‌, ಶಿವಮಾದು ಇತರರಿದ್ದರು.

ಆಧಾರಗಳಿದ್ದರೆ ಬಹಿರಂಗ ಪಡಿಸಲಿ: ಬಿಜೆಪಿ ಬೆದರಿಕೆಗೆ ಎದುರುವಂತಹ ವ್ಯಕ್ತಿತ್ವ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್‌ ಅವರದಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ್‌ ವಿರುದ್ಧ ವಾಗ್ದಾಳಿ ನಡೆಸಿದರು. ರಾಮನಗರದ ರಾಜಕಾಲುವೆ ಒತ್ತುವರಿ ನಡೆದಿರುವುದು ಘಟಾನುಘಟಿ ನಾಯಕರ ಕಾಲದಲ್ಲಿ ಎಂಬ ಅಶ್ವತ್ಥ ನಾರಾಯಣ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್‌, ಅಶ್ವಥ್‌ ನಾರಾಯಣ್‌ ಅವರೇ ರಾಮನಗರವನ್ನ ಕ್ಲೀನ್‌ ಮಾಡಲಿ. ಅವರು ಏನ್‌ ಏನು ಕ್ಲೀನ್‌ ಮಾಡಿದ್ದಾರೆ ಅಂತ ನೀವೇ ನೋಡುತ್ತಿದ್ದೀರಾ ಎಂದರು. ಜಮೀನು ಕೊಡಲು ಯೋಗ್ಯತೆ ಇಲ್ಲದಿದ್ದವರು ರೈತರ ಭೂಮಿ ಕಸಿದುಕೊಂಡಿದ್ದಾರೆ. ಮಾಗಡಿ ಭಾಗದ ರೈತರ ಹಾಗೂ ದಲಿತರ ಬಳಿ ಭೂಮಿ ಕಸಿದುಕೊಳ್ಳುವಂತ ನೀಚ ಪ್ರವೃತ್ತಿ ಹೊಂದಿರುವವರ ಬಗ್ಗೆ ನಾನು ಮಾತನಾಡಲಾ? ಅವನು ಮೊದಲು ಬೆಂಗಳೂರಿನ ಸ್ಯಾಂಕಿಟ್ಯಾಂಕಿ ಬಳಿ ಕ್ಲೀನ್‌ ಮಾಡಲಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಡಿಕೆ ಸಹೋ​ದ​ರರಿಂದ ಭ್ರಷ್ಟ​ರಿಗೆ ಮಣೆ: ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ತಾಲೂಕಿನಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಲೂಟಿಕೋರರು ಹಾಗೂ ಭ್ರಷ್ಟರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಆಡನಕುಪ್ಪೆ ರಾಮಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ ಪಕ್ಷಕ್ಕಾಗಿ ಕಳೆದ 8 - 10 ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ನನ್ನಂತಹ ನೂರಾರು ಕಾರ್ಯಕರ್ತರಿಗೆ ಪಕ್ಷ ಅಧಿಕಾರಕ್ಕೆ ಬಂದ ಸಮಯದಲ್ಲಿ ಯಾವುದೇ ಸ್ಥಾನಮಾನ ನೀಡದೆ ನಮ್ಮನ್ನು ಕಡೆಗಣಿಸಿದ್ದಾರೆ. ಅಲ್ಲದೆ ಹಲವು ಮೋಸ, ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಮನ್ನಣೆ ನೀಡುತ್ತಿರುವುದು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಸಾರ್ವಜನಿಕರ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾ​ರೆ.

ಪಾರ್ಟಿ ಮುಗಿಸಿದ ಬಳಿಕ ಕೆರೆಯಲ್ಲಿ ಈಜಲು ಹೋದ ವೈದ್ಯ ನಾಪತ್ತೆ

ನಗರಸಭೆ ಉಪಾಧ್ಯಕ್ಷ ರಾಮದುರ್ಗಯ್ಯ ಅಕ್ರಮ ಇ-ಖಾತೆ ಸೇರಿದಂತೆ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರ​ಗಿ​ದ್ದಾರೆ. ಅವರ ವಿರುದ್ಧ ಯಾವುದೇ ಶಿಸ್ತುಕ್ರಮ ಜರುಗಿಸಿಲ್ಲ. ಅಲ್ಲದೆ, ನಗ​ರ​ಸ​ಭೆ ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿರುವುದು ನಗರದ ಪ್ರಜ್ಞಾವಂತ ಜನರಲ್ಲಿ ಬೇಸರ ತಂದಿದೆ ಎಂದಿದ್ದಾರೆ. ಪಕ್ಷದ ನಾಯಕರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷಕ್ಕೆ ಭಾರಿ ಹೊಡೆತ ಬೀಳುವುದರ ಜೊತೆಗೆ ನಮ್ಮ ನಾಯಕರು ಮುಜುಗರ ಅನುಭವಿಸಬೇಕಾಗುತ್ತದೆ ಎಂದು ರಾ​ಮ​ಚಂದ್ರು ಎಚ್ಚ​ರಿ​ಸಿ​ದ್ದಾರೆ.

click me!