
ಬೆಂಗಳೂರು (ಫೆ.03): ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜ್ಯ ನಾಯಕರು ಮುಂದಿನ ಚುನಾವಣೆಗೆ ಸರಣಿ ಭರವಸೆಗಳನ್ನು ಘೋಷಣೆ ಮಾಡುತ್ತಿರುವುದರಿಂದ ಅಸಮಾಧಾನಗೊಂಡಿದ್ದ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು 10 ದಿನದ ಹಿಂದೆಯೇ ಸಮಿತಿಗೆ ರಾಜೀನಾಮೆ ನೀಡಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಅಸಮಾಧಾನಗೊಂಡಿದ್ದ ಪರಮೇಶ್ವರ್ ಅವರನ್ನು ಸಮಾಧಾನಪಡಿಸಲು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಬುಧವಾರ ಅವರ ನಿವಾಸಕ್ಕೆ ತೆರಳಿ ಸುದೀರ್ಘ ಮಾತುಕತೆ ನಡೆಸಿದ್ದರು. ಇಷ್ಟಾಗಿಯೂ ಬೇಸರ ಸಂಪೂರ್ಣವಾಗಿ ಮಾಯವಾದಂತಿಲ್ಲ. ಹೀಗಾಗಿಯೇ ಶುಕ್ರವಾರ ಕೋಲಾರದ ಕುರುಡುಮಲೆಯಿಂದ ಚಾಲನೆ ಪಡೆಯಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಯಾತ್ರೆಯಲ್ಲಿ ಪರಮೇಶ್ವರ್ ಭಾಗಿಯಾಗುವರೇ ಎಂಬುದು ಕಡೆ ಕ್ಷಣದವರೆಗೂ ಖಾತರಿಯಾಗಿಲ್ಲ.
137 ‘ಕಾಂಗ್ರೆಸ್’ ಅಭ್ಯರ್ಥಿ ಪಟ್ಟಿ ರೆಡಿ: 67 ಹಾಲಿ ಶಾಸಕರಿಗೆ ಟಿಕೆಟ್‌ಗೆ ಒಲವು
ರಾಜ್ಯ ನಾಯಕರು ಸತತವಾಗಿ ಪ್ರಣಾಳಿಕೆಯ ಮುಖ್ಯಾಂಶಗಳಲ್ಲಿ ತಮ್ಮನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಘೋಷಣೆ ಮಾಡುತ್ತಿರುವ ಬಗ್ಗೆ ಪರಮೇಶ್ವರ್ ಅಸಮಾಧಾನಗೊಂಡಿದ್ದರು. ಇದು ವಿಕೋಪಕ್ಕೆ ಹೋಗಿದ್ದು 10 ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಕ್ಷದ ಕರಾವಳಿ ಪ್ಯಾಕೇಜ್ ಘೋಷಣೆಗೊಂಡ ಸಂದರ್ಭದಲ್ಲಿ. ಕರಾವಳಿ ಭಾಗದ ಪ್ರಣಾಳಿಕೆಯ ಹತ್ತು ಅಂಶಗಳನ್ನು ಸದರಿ ಕಾರ್ಯಕ್ರಮದಲ್ಲಿ ಬಿ.ಕೆ.ಹರಿಪ್ರಸಾದ್ ಘೋಷಣೆ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಪರಮೇಶ್ವರ್ ಅಂದು ಸಂಜೆಯೇ ಹೈಕಮಾಂಡ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನಪಡಿಸಲು ಬುಧವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿ ಮನವೊಲಿಕೆ ಪ್ರಯತ್ನ ಮಾಡಿದರು. ಇಷ್ಟಾದರೂ ಪರಮೇಶ್ವರ್ ಅವರ ಬೇಗುದಿ ಕಡಿಮೆಯಾದಂತಿಲ್ಲ. ಫೆ.3ರಂದು ಮುಳಬಾಗಿಲಿನ ಕುರುಡುಮಲೆಯಿಂದ ಆರಂಭವಾಗಲಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವರು ಹಿಂಜರಿಕೆ ತೋರಿದ್ದಾರೆ ಎನ್ನಲಾಗಿದೆ.
ಕೋವಿಡ್ ನಿಯಂತ್ರಣ: ಸಚಿವ ಸುಧಾಕರ್ ಕಾರ್ಯಕ್ಕೆ ಪರಂ ಮೆಚ್ಚುಗೆ
ಹೀಗಾಗಿ ಹಿರಿಯ ನಾಯಕರಾದ ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪಿ.ಟಿ.ಪರಮೇಶ್ವರ್ ನಾಯ್‌್ಕ ಸೇರಿದಂತೆ ಪ್ರಮುಖ ನಾಯಕರು ಗುರುವಾರ ತಡರಾತ್ರಿವರೆಗೆ ಪರಮೇಶ್ವರ್ ಅವರ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ. ಮನವೊಲಿಕೆ ಯತ್ನದ ಫಲಿತಾಂಶ ಶುಕ್ರವಾರ ಬೆಳಕಿಗೆ ಬರಬೇಕಿದೆ. ಈ ಕಾರಣಕ್ಕೆ ಶುಕ್ರವಾರ ಕುರುಡುಮಲೆಯಿಂದ ಚಾಲನೆ ಸಿಗಲಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರಜಾಧ್ವನಿ ಯಾತ್ರೆ ಉದ್ಘಾಟನಾ ಕಾರ್ಯಕ್ರಮ ಮತ್ತಷ್ಟುಪ್ರಾಮುಖ್ಯತೆ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.