ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆ ಬಿಜೆಪಿಯ ಕೇಂದ್ರ ನಾಯಕರ ಭರ್ಜರಿ ಪ್ರವಾಸ ಶುರುವಾಗಿದ್ದು, ಇದೇ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ನಾಯಕರ ಹಲವು ಸುತ್ತಿನ ಭೇಟಿ ಕಾರ್ಯಕ್ರಮ ನಿಗದಿಯಾಗಿವೆ.
ಬೆಂಗಳೂರು(ಫೆ.03): ಮುಂಬರುವ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ಇಂದು(ಶುಕ್ರವಾರ) ನಡೆಯಲಿದೆ. ರಾಜ್ಯದ 4 ದಿಕ್ಕುಗಳಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ರಥಯಾತ್ರೆಯ ರೂಪುರೇಷೆ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಿ ವೇಳಾಪಟ್ಟಿಅಂತಿಮವಾಗುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆ ಬಿಜೆಪಿಯ ಕೇಂದ್ರ ನಾಯಕರ ಭರ್ಜರಿ ಪ್ರವಾಸ ಶುರುವಾಗಿದ್ದು, ಇದೇ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ನಾಯಕರ ಹಲವು ಸುತ್ತಿನ ಭೇಟಿ ಕಾರ್ಯಕ್ರಮ ನಿಗದಿಯಾಗಿವೆ.
ಸಿದ್ದು, ಡಿಕೆಶಿ ಪ್ರತ್ಯೇಕ ಬಸ್ ಯಾತ್ರೆ ಇಂದಿನಿಂದ ಆರಂಭ
ಪ್ರಧಾನಿ ಮೋದಿ ಅವರು ಈ ತಿಂಗಳಲ್ಲಿ ಮೂರು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದರೆ, ಗೃಹ ಸಚಿವ ಅಮಿತ್ ಶಾ ಅವರು ಎರಡು ಬಾರಿ ಪ್ರವಾಸ ಕೈಗೊಳ್ಳುವುದು ನಿಶ್ಚಿತವಾಗಿದೆ. ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರವಾಸವೂ ನಿಗದಿಯಾಗುವ ಸಾಧ್ಯತೆಯಿದೆ.
ಮೋದಿ ಅವರು ಈ ತಿಂಗಳ 6ರಂದು ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬಳಿಕ 13ರಂದು ಬೆಂಗಳೂರಿಗೆ ಆಗಮಿಸಿ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ನಂತರ 27ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಮೋದಿ ಅವರು ನೂತನ ವಿಮಾನ ನಿಲ್ದಾಣ ಉದ್ಘಾಟನೆ ನೆರವೇರಿಸಲಿದ್ದಾರೆ.
ಇನ್ನು ಅಮಿತ್ ಶಾ ಅವರು ಈ ತಿಂಗಳ 11ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯುವ ಮಂಗಳೂರು ವಿಭಾಗದ ಸಹಕಾರಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 25 ಸಾವಿರ ಸಹಕಾರಿಗಳು ಸೇರುವ ಸಾಧ್ಯತೆಯಿದೆ. ಬಳಿಕ 21ರಂದು ಬಳ್ಳಾರಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಯೋಗಿ ಆದಿತ್ಯನಾಥ್ ಅವರು ಈ ತಿಂಗಳಲ್ಲಿ ಒಂದು ಬಾರಿ ಭೇಟಿ ನೀಡುವ ಕಾರ್ಯಕ್ರಮ ಸಿದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.