ಬೆಂಗ್ಳೂರು ಪ್ರವಾಹದ ಬಗ್ಗೆ ಶ್ವೇತಪತ್ರಕ್ಕೆ ಕಾಂಗ್ರೆಸ್‌ ಪಟ್ಟು: ಸರ್ಕಾರದ ವಿರುದ್ಧ 'ಕೈ' ನಾಯಕರ ವಾಗ್ದಾಳಿ

Published : Sep 10, 2022, 12:00 AM IST
ಬೆಂಗ್ಳೂರು ಪ್ರವಾಹದ ಬಗ್ಗೆ ಶ್ವೇತಪತ್ರಕ್ಕೆ ಕಾಂಗ್ರೆಸ್‌ ಪಟ್ಟು: ಸರ್ಕಾರದ ವಿರುದ್ಧ 'ಕೈ' ನಾಯಕರ ವಾಗ್ದಾಳಿ

ಸಾರಾಂಶ

ಮಳೆಯಿಂದ ರಾಜಧಾನಿಯಲ್ಲಿ ಉಂಟಾಗಿರುವ ಅನಾಹುತಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಬೆಂಗಳೂರಿನ ಈ ದುಸ್ಥಿತಿಗೆ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ ಆಡಳಿತವೇ ಕಾರಣ ಎಂದು ಹರಿಹಾಯ್ದ ಕಾಂಗ್ರೆಸ್‌ ನಾಯಕರು 

ಬೆಂಗಳೂರು(ಸೆ.10): ಕಾಂಗ್ರೆಸ್‌ ಶ್ರಮದಿಂದ ‘ಐಟಿ ರಾಜಧಾನಿ’ ಹಾಗೂ ‘ಉದ್ಯಾನ ನಗರಿ’ ಖ್ಯಾತಿ ಪಡೆದಿದ್ದ ಬೆಂಗಳೂರು ನಗರವು ಇದೀಗ ಈ ಜನದ್ರೋಹಿ 40 ಪರ್ಸೆಂಟ್‌ ಸರ್ಕಾರದಿಂದಾಗಿ ‘ಪ್ರವಾಹ ಪೀಡಿತ’ ನಗರವಾಗಿ ಬದಲಾಗಿದೆ. ಈ ದುಸ್ಥಿತಿಗೆ ತಾನು ಹೊಣೆಯಲ್ಲ ಎನ್ನುವುದಾದರೆ ಒಂದು ವಾರದೊಳಗೆ ಪ್ರವಾಹ ಹಾಗೂ ರಸ್ತೆ ಗುಂಡಿ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ರಾಜ್ಯ ಕಾಂಗ್ರೆಸ್‌ ಸವಾಲು ಎಸೆದಿದೆ.

ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಹಿರಿಯ ನಾಯಕರು, ‘ಮಳೆಯಿಂದ ರಾಜಧಾನಿಯಲ್ಲಿ ಉಂಟಾಗಿರುವ ಅನಾಹುತಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ನಗರದ ಈ ದುಸ್ಥಿತಿಗೆ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ ಆಡಳಿತವೇ ಕಾರಣ’ ಎಂದು ಹರಿಹಾಯ್ದರು.

BJP STATE INCHARGE 15 ರಾಜ್ಯಗಳಿಗೆ ಉಸ್ತುವಾರಿ ನಾಯಕರ ಘೋಷಿಸಿದ ಬಿಜೆಪಿ, ಮಾಜಿ ಸಿಎಂಗೆ ಮಹತ್ತರ ಜವಾಬ್ದಾರಿ!

ಬಿಜೆಪಿ ಹಾಳು ಮಾಡಿರುವ ಬೆಂಗಳೂರನ್ನು ಉತ್ತಮ ಪಡಿಸಲು ‘ವಿಷನ್‌ ಬೆಂಗಳೂರು’ ಹಾಗೂ ‘ಉತ್ತಮ ಬೆಂಗಳೂರಿಗೆ ಒಂದು ಯೋಜನೆ’ ಎಂಬ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಲು ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ 15 ಮಂದಿ ಸದಸ್ಯರ ಸಮಿತಿ ರಚಿಸಿ 20 ದಿನಗಳೊಳಗಾಗಿ ವರದಿ ಪಡೆಯಲಾಗುವುದು ಎಂದು ನಾಯಕರು ಘೋಷಿಸಿದರು.

ಡಿ.ಕೆ ಶಿವಕುಮಾರ್‌ ಮಾತನಾಡಿ, ಕಳೆದ 16 ವರ್ಷಗಳ ಅವಧಿಯಲ್ಲಿ ಬಿಜೆಪಿ 11 ವರ್ಷಗಳ ಕಾಲ ಆಡಳಿತ ನಡೆಸಿದೆ. ಬಿಜೆಪಿಯ ಶಾಸಕರಿರುವ 4 ವಿಧಾನಸಭಾ ಕ್ಷೇತ್ರಗಳು ಸಂಪೂರ್ಣವಾಗಿ ಪ್ರವಾಹಕ್ಕೆ ತುತ್ತಾಗಿವೆ. ಇದಕ್ಕೆ ಬೊಮ್ಮಾಯಿ ಅವರ ನೇತೃತ್ವದ 40% ಕಮಿಷನ್‌ ಸರ್ಕಾರವೇ ಕಾರಣ. ರಾಜ ಕಾಲುವೆಗಳಲ್ಲಿ ಕಸ ಎತ್ತದೇ ಇರುವುದು, ಅನಧಿಕೃತ ಒತ್ತುವರಿ ತೆರವು ಮಾಡದೇ ಇರುವುದು, ಕೆರೆಗಳ ನಡುವೆ ಸಂಪರ್ಕ ಸಾಧಿಸದೇ ಇರುವುದು ಈ ಪ್ರವಾಹ ಪರಿಸ್ಥಿತಿಗೆ ಕಾರಣ ಎಂದು ಟೀಕಿಸಿದರು.

ಸರ್ಕಾರಕ್ಕೆ 7 ಬೇಡಿಕೆ:

ಕಾಂಗ್ರೆಸ್‌ ಪರ ಏಳು ಬೇಡಿಕೆಗಳನ್ನು ಮಂಡಿಸಿದಸುರ್ಜೇವಾಲಾ, ಒಂದು ವಾರದಲ್ಲಿ ಪ್ರವಾಹ ಹಾಗೂ ರಸ್ತೆಗುಂಡಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಸರ್ವಪಕ್ಷ ಸಭೆ ಕರೆದು, ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ವಪಕ್ಷ ಪ್ರವಾಹ ಸಮಿತಿ ರಚಿಸಬೇಕು. ಸಂತ್ರಸ್ತರ ಮನೆ ಹಾನಿಯಾಗಿದ್ದರೆ 5 ಲಕ್ಷದಿಂದ 25 ಲಕ್ಷದವರೆಗೆ ಪರಿಹಾರ, ವಾಹನ ಹಾನಿಗೆ ಪ್ರತ್ಯೇಕ ಪರಿಹಾರ ನೀಡಬೇಕು. ನಗರದ ಮೂಲಭೂತ ಸೌಕರ್ಯ ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಜನರನ್ನು ಸುರಕ್ಷಿತ ಕ್ಷೇತ್ರಗಳಿಗೆ ಸ್ಥಳಾಂತರಿಸಬೇಕು. ಆರೋಗ್ಯ ಶಿಬಿರ ಮಾಡಿ ಅನಾರೋಗ್ಯ ಹರಡುವುದನ್ನು ತಡೆಯಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ವಚ್ಛ ಕಾರ್ಯ ಮಾಡಬೇಕು. ಕೂಡಲೇ ಸಹಾಯವಾಣಿ ಸ್ಥಾಪಿಸಿ ಪ್ರವಾಹ ಪೀಡಿತ ಜನರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದರು.

ಬೊಮ್ಮಾಯಿ ಸರಿಯಾಗಿ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ

ಪ್ರವಾಹಕ್ಕೆ ಬಿಜೆಪಿಯೇ ಹೊಣೆ- ಸಿದ್ದು:

ಸಿದ್ದರಾಮಯ್ಯ ಮಾತನಾಡಿ, ಕೆರೆಗಳ ಹೂಳು ಎತ್ತದಿರುವುದು, ರಾಜಕಾಲುವೆ ಒತ್ತುವರಿ ತೆರವು ಹಾಗೂ ಸ್ವಚ್ಛಗೊಳಿಸದೇ ಇರುವುದು ಈ ಪ್ರವಾಹಕ್ಕೆ ಪ್ರಮುಖ ಕಾರಣ. ಹೀಗಾಗಿ ಬಿಜೆಪಿಯೇ ಇದಕ್ಕೆ ಹೊಣೆ. ಪ್ರವಾಹದ ದುಷ್ಪರಿಣಾಮ ಎದುರಿಸಲು ಕಳೆದ 3 ವರ್ಷಗಳಿಂದ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಮುಖ್ಯಮಂತ್ರಿಗಳು ತಿಳಿಸಲಿ ಎಂದು ಕಿಡಿ ಕಾರಿದರು. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಕೆ.ಜೆ. ಜಾಜ್‌ರ್‍ ಸೇರಿ ಹಲವರು ಹಾಜರಿದ್ದರು.

ತೇಜಸ್ವಿ ಸೂರ್ಯ ಹೇಳಿಕೆಗೆ ಡಿಕೇಶಿ ತಿರುಗೇಟು

ಮಳೆ ಅನಾಹುತ ಮಾಧ್ಯಮ, ಕಾಂಗ್ರೆಸ್‌ ಪಿತೂರಿ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ನೀವು ನಿಮ್ಮ ಕ್ಯಾಮೆರಾಗಳಲ್ಲಿ ಏನೆಲ್ಲಾ ತೋರಿಸಿದ್ದಿರೋ ಅವುಗಳೇ ಸತ್ಯ. ಇವರಿಂದ ಬೆಂಗಳೂರಿನ ಘನತೆ ಕುಸಿಯುತ್ತಿದೆ. ಘನತೆ ಹೆಚ್ಚಿಸುವುದರ ಪರವಾಗಿ ನಾವು, ನೀವು ಕೆಲಸ ಮಾಡುತ್ತಿದ್ದೇವೆ’ ಎಂದು ತಿರುಗೇಟು ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್