ಕುಂಬಳಕಾಯಿ ಕಳ್ಳರು ಎಲ್ಲೆಡೆ ಇದ್ದರೆ ನಾನೇನ್‌ ಮಾಡ್ಲಿ: ದಳಪತಿಗಳಿಗೆ ಸುಮಲತಾ ತಿರುಗೇಟು

By Kannadaprabha News  |  First Published Sep 9, 2022, 11:30 PM IST

ಯಾರನ್ನೂ ಗುರಿಯಾಗಿಸಿಕೊಂಡು ಹೇಳಿದ ಮಾತಲ್ಲ, ಮಳೆ ಹಾನಿ ಸಮಸ್ಯೆಗಳ ಕಡೆ ಅಧಿಕಾರಿಗಳ ಗಮನವಿರಲಿ: ಸಂಸದೆ ಸುಮಲತಾ ಅಂಬರೀಶ್‌


ಮದ್ದೂರು(ಸೆ.09): ಕುಂಬಳಕಾಯಿ ಕಳ್ಳರು ಎಲ್ಲಾ ಕಡೆ ಇದ್ದರೆ ನಾನೇನು ಮಾಡಲಿ. ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ದಳಪತಿಗಳ ಟೀಕೆಗೆ ಸಂಸದೆ ಸುಮಲತಾ ಅಂಬರೀಶ್‌ ತಿರುಗೇಟು ನೀಡಿದರು. ನಾನು ಪಾಂಡವಪುರ, ಮದ್ದೂರು, ಮಳವಳ್ಳಿ ಎಂದು ಯಾವುದೇ ಪಕ್ಷ, ಶಾಸಕರ ಹೆಸರು ಪ್ರಸ್ತಾಪ ಮಾಡಿಲ್ಲ. ಯಾರನ್ನೂ ಗುರಿಯಾಗಿಸಿಕೊಂಡು ಹೇಳಿದ ಮಾತಲ್ಲ. ಅವರವರೇ ವೀರಾವೇಶದಿಂದ ನನ್ನ ಬಗ್ಗೆ ಆರೋಪ ಮಾಡುತ್ತಾ ಮಾತನಾಡುತ್ತಿದ್ದಾರೆ. ನಾನು ಯಾರಿಗೆ ಹೇಳಿದೆನೋ ಅವರಿಗೆ ಖಂಡಿತ ತಟ್ಟೇ ತಟ್ಟುತ್ತೆ ಎಂದು ಮತ್ತೆ ದಳಪತಿಗಳನ್ನು ಕುಟುಕಿದರು.

ಕೇಂದ್ರ ಸಚಿವರ ದಿನಾಂಕ ಗೊತ್ತುಪಡಿಸುವೆ: 

Tap to resize

Latest Videos

ಕೇಂದ್ರೀಯ ವಿದ್ಯಾಲಯದ ಅನುದಾನ ಬಿಡುಗಡೆಯಾಗಿ ನಾಲ್ಕೈದು ತಿಂಗಳಾದರೂ ಕಟ್ಟಡ ಕಾಮಗಾರಿ ಆರಂಭಿಸಿಲ್ಲವೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಕೇಂದ್ರೀಯ ವಿದ್ಯಾಲಯ ಕಟ್ಟಡದ ಶಂಕುಸ್ಥಾಪನೆಗೆ ಕೇಂದ್ರ ಸಚಿವರಾದ ಧಮೇಂದ್ರ ಪ್ರಧಾನ್‌, ಪ್ರಹ್ಲಾದಜೋಶಿ ಅವರನ್ನು ಆಹ್ವಾನಿಸಿದ್ದೆ. ಅವರೂ ಬರುವುದಾಗಿ ಹೇಳಿದ್ದರು. ಆನಂತರ ಎಲೆಕ್ಷನ್‌ ಎಂದುಕೊಂಡು ಬರಲಿಲ್ಲ. ಸೆಪ್ಟೆಂಬರ್‌ನಲ್ಲಿ ಬರುವುದಾಗಿ ಹೇಳಿದ್ದಾರೆ. ಈ ತಿಂಗಳಲ್ಲಿ ಅವರ ದಿನಾಂಕ ಗೊತ್ತುಪಡಿಸಿಕೊಂಡು ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದರು.

ಸುಮಲತಾ ಪಕ್ಷ ಸೇರ್ಪಡೆ ಸದ್ಯಕ್ಕಿಲ್ಲ: 2023 ಚುನಾವಣೆವರೆಗೆ ಕಾದುನೋಡುವ ಸಾಧ್ಯತೆ

ಮಳೆ ಹಾನಿ ಕಾಮಗಾರಿಗಳಿಗೆ ಮೊದಲ ಆದ್ಯತೆ: 

ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸುವುದಕ್ಕೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು. ಸರ್ಕಾರ ಕೂಡ ಅಧಿಕಾರಿಗಳಿಗೆ ಈ ವಿಷಯವನ್ನು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕುಂಭಮೇಳ, ಶ್ರೀರಂಗಪಟ್ಟಣ ದಸರಾ ಹಲವರಿಗೆ ಬೇಕೆನಿಸಬಹುದು, ಮತ್ತೆ ಕೆಲವರಿಗೆ ಬೇಡ ಎನ್ನಬಹುದು. ಅದರ ಬಗ್ಗೆ ತರ್ಕ ಮಾಡಲು ನಾನು ಹೋಗುವುದಿಲ್ಲ. ಕೆಲವೊಂದರ ಮೇಲೆ ಜನರು ಭಾವನೆಗಳನ್ನಿಟ್ಟುಕೊಂಡಿರುತ್ತಾರೆ. ಅವುಗಳನ್ನು ಬೇಡ ಎನ್ನಲಾಗದು ಎಂದರು.

ಸುಮಲತಾರನ್ನು ಭೇಟಿಯಾದ ಗುರುಚರಣ್‌: 

ಪಟ್ಟಣದ ಪ್ರವಾಸಿಮಂದಿರಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ವಿಧಾನಪರಿಷತ್‌ ಮಾಜಿ ಸದಸ್ಯ ಎಸ್‌.ಎಂ.ಶಂಕರ್‌ ಪುತ್ರ ಗುರುಚರಣ್‌ ಭೇಟಿಯಾಗಿ ಕೆಲ ಸಮಯದವರೆಗೆ ಸಮಾಲೋಚನೆ ನಡೆಸಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ಗುರುಚರಣ್‌ ಔಪಚಾರಿಕವಾಗಿ ಭೇಟಿಯಾಗಿ ಮಾತನಾಡಿದರು. ಕೆಲ ದಿನಗಳ ಹಿಂದೆ ಸಂಸದೆ ಸುಮಲತಾ ಅವರನ್ನು ಮದ್ದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿತ ಅಭ್ಯರ್ಥಿ ಎಸ್‌.ಪಿ.ಸ್ವಾಮಿ ಭೇಟಿ ಮಾಡಿ ಚರ್ಚಿಸಿದ್ದನ್ನು ಸ್ಮರಿಸಬಹುದು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ, ಮದ್ದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಲೂಕು ಕಾಂಗ್ರೆಸ್‌ ವಕ್ತಾರ ಎಂ.ಪಿ.ಅಮರಬಾಬು, ಮುಖಂಡರಾದ ಕೋಣಸಾಲೆ ಜಯರಾಂ, ಕೆ.ಪಿ.ಶ್ರೀಧರ್‌ , ಬೊಮ್ಮೇಗೌಡ, ಕಸಾಪ ಮಾಜಿ ಅಧ್ಯಕ್ಷ ವಿ.ಹರ್ಷ, ಹನಕೆರೆ ಶಶಿ ಇದ್ದರು.
 

click me!