ರಾಜ್ಯದ 224 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ನಡೆಸಿ ಪಕ್ಷವನ್ನು ಸ್ವಂತ ಬಲದಿಂದ ಅಧಿಕಾರಕ್ಕೆ ತರುವ ಮೂಲಕ ಮತ್ತೊಮ್ಮೆ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ: ಶರವಣ
ಚಿಕ್ಕಬಳ್ಳಾಪುರ(ಸೆ.09): 2023ರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಎಸ್ ಇತ್ತೀಚೆಗೆ ಜನತಾ ಜಲಧಾರೆ ಯಶಸ್ವಿಗೊಳಿಸಿದ ಬೆನ್ನಲೇ ರಾಜ್ಯದ 224 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ನಡೆಸಿ ಪಕ್ಷವನ್ನು ಸ್ವಂತ ಬಲದಿಂದ ಅಧಿಕಾರಕ್ಕೆ ತರುವ ಮೂಲಕ ಮತ್ತೊಮ್ಮೆ ರೈತ ನಾಯಕ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಹಾಗೂ ಎಂಎಲ್‌ಸಿ ಶರವಣ ತಿಳಿಸಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಜಿಲ್ಲೆಗೆ 2023 ರ ವಿಧಾನಸಭಾ ಚುನಾವಣೆಗೂ ಮೊದಲು ಆಗಮಿಸಲಿರುವ ಪಂಚರತ್ನ ರಥಯಾತ್ರೆಯ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರಮುಖ ಜೆಡಿಎಸ್ ನಾಯಕರ ಸಭೆ ಬಳಿಕ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೈಸೂರು ಮಹಾನಗರ ಪಾಲಿಕೆ: ಜೆಡಿಎಸ್ ಎಡವಟ್ಟಿನಿಂದ ತಪ್ಪಿದ ಉಪ ಮೇಯರ್ ಸ್ಥಾನ!
ಆಶೀರ್ವಾದ ಪಡೆಯಲು ಯಾತ್ರೆ
ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಅಭೂತಪೂರ್ವವಾಗಿ ಯಶಸ್ವಿಗೊಳಿಸಿದರ ಹಿಂದೆ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಪಕ್ಷದ ನಾಯಕರ ಮುಖಂಡರ ಕೊಡುಗೆ ಅಪಾರವಾಗಿದೆಯೆಂದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರದ್ದೇ ಹಂಗಿಲ್ಲದೆ ಪೂರ್ಣ ಬಹುಮತದೊಂದಿಗೆ ಜೆಡಿಎಸ್‌ಗೆ ಅಧಿಕಾರ ನೀಡುವಂತೆ ರಾಜ್ಯದ ಜನರ ಆಶೀರ್ವಾದ ಪಡೆಯಲು ಸೆ.26ರಿಂದ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಭ್ರಷ್ಟಾಚಾರ, ದುರಾಡಳಿತದ ಪರಿಣಾಮ ರಾಷ್ಟ್ರೀಯ ಪಕ್ಷಗಳ ಬಗ್ಗೆ ರಾಜ್ಯದ ಜನತೆಯು ಬೇಸತ್ತಿದ್ದು, ಈ ನಿಟ್ಟಿನಲ್ಲಿ ಕಷ್ಟಕಾರ್ಪಣ್ಯಗಳಿಗೆ ಸ್ಪಂಧಿಸುವ ಶಕ್ತಿಯುಳ್ಳ ಜೆಡಿಎಸ್ ಪಕ್ಷವನ್ನು ಈ ಬಾರಿ ಬೆಂಬಲಿಸಲಿದ್ದಾರೆ. 2023ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಜೆಡಿಎಸ್‌ಗೆ ಒಳ್ಳೆ ಮಕ್ಮಲ್ ಟೋಪಿ ಹಾಕಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ
ರಾಷ್ಟ್ರೀಯ ಪಕ್ಷಗಳ ವೈಫಲ್ಯ
ಕಾಂಗ್ರೆಸ್, ಬಿಜೆಪಿಗೆ ಅಧಿಕಾರವನ್ನು ನೀಡಿದ್ದರೂ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ರಾಷ್ಟ್ರೀಯಪಕ್ಷಗಳ ವೈಫಲ್ಯಗಳನ್ನು ಸಾರುವ ಜೊತೆಗೆ ಜನಶೀರ್ವಾದ ಪಡೆಯಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಂಚರತ್ನ ರಥಯಾತ್ರೆ ನಡೆಸಲು ಸಿದ್ದತೆ ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿ, ಪಕ್ಷ ಸಂಘಟನೆ ಒತ್ತು ನೀಡುವಂತೆ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಚಿಂತಾಮಣಿ ಶಾಸಕರಾದ ಜೆಕೆ ಕೃಷ್ಣಾರೆಡ್ಡಿ, ಮಾಜಿ ಶಾಸಕ ಚಿಕ್ಕಬಳ್ಳಾಪುರದ ಕೆ.ಪಿ.ಬಚ್ಚೇಗೌಡ, ಎಂಎಲ್‌ಸಿಗಳಾದ ಶ್ರೀಕಂಠೇಗೌಡ, ಭೋಜೇಗೌಡ, ರಮೇಶ್ ಗೌಡ, ಮಾಜಿ ಎಂಎಲ್‌ಸಿ ತೂಪಲ್ಲಿ ಆರ್.ಚೌಡರೆಡ್ಡಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕುಂಟಹಳ್ಳಿ ಮುನಿಯಪ್ಪ. ಬಾಗೇಪಲ್ಲಿ ಡಿ.ಕೆ.ನಾಗರಾಜರೆಡ್ಡಿ ಉಪಸ್ಥಿತರಿದ್ದರು.