ಚಿಕ್ಕಬಳ್ಳಾಪುರ (ಡಿ.12) : ನನಗೆ ರಾಜಕೀಯ (Politics) ಪುನರ್ಜನ್ಮ ನೀಡಲು ಅಲ್ಲ, ನನ್ನ ನಾಶ ಮಾಡಲಿಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಪ್ರಯತ್ನಿಸಿದರು. ಅವರನ್ನು ನಂಬಲೇಬಾರದಾಗಿತ್ತು. ನನ್ನ ಜೀವನದಲ್ಲಿ ಮೊದಲ ಬಾರಿಗೆ ಎಚ್.ಡಿ.ದೇವೇಗೌಡ (HD Devegowda), ಎಚ್.ಡಿ.ಕುಮಾರಸ್ವಾಮಿ ಬಳಿಗೆ ಸೌಜನ್ಯದಿಂದ ಹೋಗಿ ನನ್ನ ಜೀವನದಲ್ಲಿ ದೊಡ್ಡ ತಪ್ಪು ಮಾಡಿದೆ. ಇನ್ನು ಮುಂದೆ ಹೋಗುವುದಿಲ್ಲ. ಅವರ ಮುಂದೆ ಹೋಗಿ ನಾನು ಸಿಲುಕಿಕೊಂಡೆ ಎಂದು ಮಾಜಿ ಮುಖ್ಯಮಂತ್ರಿ , ಮಾಜಿ ಸಂಸದ ವೀರಪ್ಪ ಮೊಯ್ಲಿ (Veerappamoily) ಬೇಸರ ವ್ಯಕ್ತಪಡಿಸಿದ್ದಾರೆ.
ವೀರಪ್ಪ ಮೊಯ್ಲಿಗೆ ರಾಜಕೀಯ (Politics) ಪುನರ್ ಜನ್ಮ ಕೊಟ್ಟಿದ್ದು ನಾನೇ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಮೊಯ್ಲಿ, ನನಗೆ ಪುನರ್ ಜನ್ಮ ಅಲ್ಲ, ನನ್ನ ನಾಶ ಮಾಡಲಿಕ್ಕೆ ಪ್ರಯತ್ನಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ (Loksabha Election) ಜೆಡಿಎಸ್ (JDS) ಮೈತ್ರಿಯಿಂದಲೇ ನಾವು ಸೋತೆವು ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ : ರಾಜ್ಯ ಕಾಂಗ್ರೆಸ್ (Congress) ವತಿಯಿಂದ 50 ಲಕ್ಷ ಸದಸ್ಯತ್ವ ನೋಂದಣಿಯ ಮಹತ್ವಾಕಾಂಕ್ಷೆಯೊಂದಿಗೆ ಹಮ್ಮಿಕೊಂಡಿರುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಅವರು ಚಾಲನೆ ನೀಡಿದ್ದು, ರಾಜ್ಯದ ಮೂಲೆ-ಮೂಲೆಯಲ್ಲೂ ಸದಸ್ಯತ್ವ ನೋಂದಣಿ ಯಶಸ್ವಿಗೊಳಿಸುವ ಮೂಲಕ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರ್ಜೇವಾಲಾ ನೇತೃತ್ವದಲ್ಲಿ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರು ವೇದಿಕೆಯ ಮೇಲೆ ಸದಸ್ಯತ್ವ ನೋಂದಣಿ ಅರ್ಜಿ ತುಂಬುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸುರ್ಜೇವಾಲಾ, ದೇಶದ ಪಾಲಿಗೆ ಸಂವಿಧಾನವೇ ಧರ್ಮ. ಸಂವಿಧಾನಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ. ಸಂವಿಧಾನ ಇಂದು ಅಪಾಯದಲ್ಲಿದ್ದು, ಅದರ ರಕ್ಷಣೆಗೆ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡುವುದಿಲ್ಲ: ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ (M Veerappa moily) ಮಾತನಾಡಿ, ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡುವುದಿಲ್ಲ, ಮಾಡಬಾರದು.
ಕಾಂಗ್ರೆಸ್ಸಿನಲ್ಲಿರುವವರು ಈವರೆಗೆ ಮಾಡುತ್ತಿದ್ದರೂ ಇನ್ನು ಮುಂದೆ ಮದ್ಯಪಾನ ತ್ಯಜಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಿ ಎಂದು ಹೇಳಿದರು. ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ ಮಹಾತ್ಮಾ ಗಾಂಧೀಜಿ ಹೆಸರು ಹೇಳುವವರು, ಗಾಂಧೀಜಿ ಹೇಳಿರುವ ಏಳರಲ್ಲಿ ಒಂದಾದರೂ ಸತ್ಯ ವ್ರತ ಪಾಲಿಸಬೇಕು. ನಾನು ಮದ್ಯ ಸೇವಿಸಿಲ್ಲ, ಸೇವಿಸಲ್ಲ ಎಂದರು.
ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇವೆ: ಇದೇ ವೇಳೆ, ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ರಾಷ್ಟ್ರೀಯ ನಾಯಕ ಎಂ.ವೀರಪ್ಪ ಮೊಯ್ಲಿ, ನಾವು ಸೋನಿಯಾ ಗಾಂಧಿಯವರ (Sonia Gandhi) ಭಾವನೆಗಳಿಗೆ ನೋವು ತಂದಿದ್ದರೆ ಕ್ಷಮೆ ಕೇಳುತ್ತೇವೆ. ಅವರು ನಮ್ಮ ಪಕ್ಷಕ್ಕೆ ಮತ್ತು ನಮಗೆಲ್ಲ ತಾಯಿಯಿದ್ದಂತೆ. ಅವರ ನಾಯಕತ್ವವನ್ನು ನಾವು ಎಂದೂ ಪ್ರಶ್ನೆ ಮಾಡಿಲ್ಲ. ಪತ್ರಕ್ಕೆ ಸಹಿ ಮಾಡಿದ 23 ನಾಯಕರಲ್ಲಿ ಯಾರೊಬ್ಬರಿಗೂ ಪಕ್ಷ ತೊರೆಯುವ ಯೋಚನೆಯಾಗಲೀ, ಬಿಜೆಪಿಯ ಜೊತೆಗೆ ನಂಟಾಗಲೀ ಇಲ್ಲ ಎಂದು ಹೇಳಿದ್ದರು.
ಪಕ್ಷ ಇಂದು ಸಂಕಷ್ಟದ ಸಮಯವನ್ನು ಹಾದುಹೋಗುತ್ತಿದೆ. ಸಾಕಷ್ಟುಬದ್ಧತೆ ಹಾಗೂ ತ್ಯಾಗದಿಂದ ಕಟ್ಟಿದ ಪಕ್ಷವನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಸೋನಿಯಾ ಮಾಡಿದ ತ್ಯಾಗ ನಮಗೆಲ್ಲರಿಗೂ ಗೊತ್ತು. ಹಿಂದೆ ಅವರು ಈ ಹುದ್ದೆ ಒಪ್ಪಿಕೊಳ್ಳುವುದಕ್ಕೇ ನಿರಾಕರಿಸಿದ್ದರು. ಆದರೆ, ನಂತರ ಪಕ್ಷಕ್ಕಾಗಿ ಜೀವನವನ್ನೇ ನೀಡಿದರು. ಅವರಿಗೆ ದ್ರೋಹ ಬಗೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂದಿಗೂ ನಾವು ಅವರನ್ನು ತಾಯಿಯಂತೆ ಗೌರವಿಸುತ್ತೇವೆ. ಪಕ್ಷದ ಹಾಗೂ ದೇಶದ ಭವಿಷ್ಯಕ್ಕೆ ಅವರು ಮಾರ್ಗದರ್ಶನ ನೀಡಬೇಕೆಂದು ಬಯಸುತ್ತೇವೆ ಎಂದು ತಿಳಿಸಿದರು.
ಸೋನಿಯಾ ಬಗ್ಗೆ ನಮಗಿರುವ ಗೌರವ ಹೀಗೇ ಮುಂದುವರೆಯುತ್ತದೆ. ಆದರೆ, ಇದೇ ವೇಳೆ ಪಕ್ಷಕ್ಕೆ ಮರುಜೀವ ನೀಡಬೇಕಿದೆ. ಪಕ್ಷವನ್ನು ಎಲ್ಲಾ ಹಂತದಲ್ಲೂ ಪುನರುಜ್ಜೀವನಗೊಳಿಸುವುದು ನಮ್ಮ ಪತ್ರದ ಮುಖ್ಯ ಆಶಯವಾಗಿತ್ತು. ಅದರರ್ಥ ಸೋನಿಯಾ ಅಧ್ಯಕ್ಷೆಯಾಗಬಾರದು ಎಂದಲ್ಲ. ಅವರು ಮತ್ತೆ ಹಂಗಾಮಿ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ. ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ ಎಂದು ಹೇಳಿದ್ದರು.
ಕಿತಾಪತಿಗಳಿಂದ ಪತ್ರ ಸೋರಿಕೆ: ಪಕ್ಷದಲ್ಲಿರುವ ಕೆಲ ಕಿತಾಪತಿಗಳು ಈ ಪತ್ರವನ್ನು ಸೋರಿಕೆ ಮಾಡಿದ್ದಾರೆ. ಅದು ಎಲ್ಲಿಂದ ಸೋರಿಕೆಯಾಯಿತು ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಸೋರಿಕೆ ಮಾಡಿದ್ದು ಸರಿಯಲ್ಲ. ಅದರ ಬಗ್ಗೆ ಪಕ್ಷದಲ್ಲಿ ಆಂತರಿಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದೂ ಮೊಯ್ಲಿ ಅಭಿಪ್ರಾಯಪಟ್ಟರು.
ಸಿಡಬ್ಲ್ಯುಸಿ ಸಭೆಯ ನಂತರ ಕಪಿಲ್ ಸಿಬಲ್ (Kapin sibal), ಶಶಿ ತರೂರ್ ಮುಂತಾದ ನಾಯಕರು ಸೋಮವಾರ ರಾತ್ರಿ ದೆಹಲಿಯ ಗುಲಾಂ ನಬಿ ಆಜಾದ್ ಮನೆಯಲ್ಲಿ ಸಭೆ ನಡೆಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ದೆಹಲಿಯಲ್ಲಿರಲಿಲ್ಲ. ಹೀಗಾಗಿ ಇದರ ಬಗ್ಗೆ ನನಗೆ ಗೊತ್ತಿಲ್ಲ. ಅದೇನೇ ಇದ್ದರೂ, ನಮಗ್ಯಾರಿಗೂ ಪಕ್ಷದಿಂದ ದೂರವಾಗುವ ಉದ್ದೇಶ ಇಲ್ಲ. ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯಂತೂ ಬರುವುದೇ ಇಲ್ಲ. ನಾವು ಬಿಜೆಪಿಯನ್ನು ದ್ವೇಷಿಸುತ್ತೇವೆ. ನರೇಂದ್ರ ಮೋದಿಯವರ ನೀತಿಯನ್ನು ದ್ವೇಷಿಸುತ್ತೇವೆ’ ಎಂದಿದ್ದರು.