Karnataka Politics: ಶ್ರೀಗಳ ಜತೆ ವಿಜಯೇಂದ್ರ ಮಹತ್ವದ ಚರ್ಚೆ, ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟನೆ

By Suvarna News  |  First Published Dec 12, 2021, 2:32 AM IST

* ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದ ಶ್ರೀ ಭೇಟಿಯಾದ ವಿಜಯೇಂದ್ರ
* ಹಾಸನದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಭೇಟಿ, ಮಾತುಕತೆ
* ಕುತೂಹಲ ಮೂಡಿಸಿದ ಬಿಎಸ್ ವೈ ಪುತ್ರ ವಿಜಯೇಂದ್ರ ಭೇಟಿ


ಹಾಸನ, (ಡಿ.12): ವಿಧಾನಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆಯೇ ಅತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವರ ಮೊರೆ ಹೋಗಿದ್ದಾರೆ. ಇತ್ತ ಬಿಎಸ್‌ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ(BY Vijayendra) ಹಾಸನದ ಆದಿಚುಂಚನಗಿರಿ ಶಾಖಾ ಮಠಕ್ಕೆ (Adichunchanagiri Mutt) ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಹೌದು...ಹಾಸನದ(Hassan) ಆದಿಚುಂಚನಗಿರಿ ಶಾಖಾ ಮಠಕ್ಕೆ ಶನಿವಾರ ವಿಜಯೇಂದ್ರ ಭೇಟಿ ನೀಡಿದ್ದು, ಪೀಠಾಧಿಪತಿ ನಿರ್ಮಲಾನಂದ ಶ್ರೀಗಳ(Nirmalananda Swamiji) ಜತೆ ಮಾತುಕತೆ ನಡೆಸಿದರು. ಶ್ರೀಗಳ ಜೊತೆ ಸುಮಾರು 20 ನಿಮಿಷ ಮಾತುಕತೆ ನಡೆಸಿರುವುದು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

Latest Videos

undefined

Karnataka Politics: ನಾನು ಸಿಎಂ ಆಗುತ್ತೆನೆಂದು ಎಲ್ಲಿಯೂ ಹೇಳಿಲ್ಲ, ವದಂತಿಗಳಿಗೆ ತೆರೆಎಳೆದ ಸಚಿವ

ಇನ್ನು ಶ್ರೀಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ನಮ್ಮ ಪಕ್ಷದ ಮುಖಂಡ ಸುರೇಶ್ ರವರ ಮಗಳ ಮದುವೆ ನಿಮಿತ್ತ ಹಾಸನಕ್ಕೆ ಬಂದಿದ್ದೆ. ಶ್ರೀಗಳೂ ಹಾಸನದಲ್ಲಿ ಇದ್ದುದರಿಂದ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿಧಾನಪರಿಷತ್ ಚುನಾವಣೆ ಬಗ್ಗೆ  ಯಡಿಯೂರಪ್ಪನವರು ಅಂದಿನಿಂದಲೂ ಹೇಳಿದ್ದಾರೆ. ಕನಿಷ್ಟ15 ಕ್ಷೇತ್ರ ಬಿಜೆಪಿ ಗೆಲ್ಲುತ್ತೇವೆಂದು ಹೇಳಿದ್ದಾರೆ. ಚುನಾವಣೆ ಬಳಿಕ ನಮ್ಮ ಅಭ್ಯರ್ಥಿ ಗಳ ಜೊತೆ ಚರ್ಚೆಮಾಡಿದ ಬಳಿಕ ನಿಶ್ಚಿತವಾಗಿ ನಾವು 15.ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಡೆಗಣಿಸುವ ಪ್ರಶ್ನೆ ಇಲ್ಲ
ನಾನು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಚಿತ್ರದುರ್ಗ, ತುಮಕೂರು ಕೋಲಾರ ಎಲ್ಲಾ ಕಡೆ ಎಂಎಲ್ಸಿ ಚುನಾವಣೆಯಲ್ಲಿ ಪ್ರವಾಸ ಮಾಡಿದ್ದೇನೆ. ಯಡಿಯೂರಪ್ಪ ಕೂಡ ಎಲ್ಲಾ ಕಡೆ ಪ್ರವಾಸ ಮಾಡಿದ್ದಾರೆ. ಹಾಗಾಗಿ ಬಿಜೆಪಿ ನಮ್ಮನ್ನ ಕಡೆಗಣಿಸಿದೆ ಅನ್ನೋ ಪ್ರಶ್ನೆ ಇಲ್ಲ. ನಾನು ಉಪಾಧ್ಯಕ್ಷನಾಗಿ ನನ್ನ ಕರ್ತವ್ಯ ಏನಿದೆ ಅದನ್ನು ಮಾಡಿದ್ದೇನೆ. ಯಡಿಯೂರಪ್ಪನವರು ಕೂಡ ಮುಂದೆ ಬರೋ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಟ 130 -140 ಸ್ಥಾನ ಗೆಲ್ಲಬೇಕು ಅನ್ನೋ ದೃಷ್ಟಿಕೋನದಲ್ಲಿ‌ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಸುಮಾರು1700 ಕಿಲೋಮೀಟರ್ ಪ್ರವಾಸ ಮಾಡಿ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ನವರು ಅಧಿಕಾರ ಇರಲಿ ಇಲ್ಲದಿರಲಿ ಎಂದೂ ಮನೆಯಲ್ಲಿ ಕೂತವರಲ್ಲ, ಕೂರುವುದು ಇಲ್ಲ. ಸಂಪೂರ್ಣ ಬಹುಮತ ಬರಬೇಕು ಅನ್ನೋ‌ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಪಕ್ಷ, ನಮ್ಮ ಮನೆ ಕೆಲಸಕ್ಕೆ ಯಾರೂ ಆಹ್ಚಾನ ಮಾಡೋ ಪ್ರಶ್ನೆ ಇಲ್ಲ. ಯಡಿಯೂರಪ್ಪನವರು ಕಳೆದ ನಾಲ್ಕು ದಶದಿಂದ ಪಕ್ಷ ಸಂಘಟನೆ ಮಾಡಿದ್ದಾರೆ ಎಂದರು.

ನಾಲ್ಕು ಬಾರಿ ಪಕ್ಷವನ್ಮು ಅಧಿಕಾರಕ್ಕೂ ತಂದಿದ್ದಾರೆ. ಸಿಎಂ ಸ್ಥಾನದಿಂದ ಅವರು ಇಳಿದಿರಬಹುದು. ಆದರೆ ಪಕ್ಷದ ಚುನಾವಣೆ ಬಂದಾಗ, ಪಕ್ಷದ ಅಭ್ಯರ್ಥಿ ಗಳ ಪರವಾಗಿ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯ ಪ್ರವಾಸವನ್ನು ಮಾಡಿದ್ದಾರೆ. ಯಾರೂ ಆಹ್ವಾನ  ಮಾಡುವ ಪ್ರಶ್ನೆ ಇಲ್ಲ, ಅವತ್ತು ಮಾಡಿದಾರೆ, ಇವತ್ತು ಮಾಡಿದ್ದಾರೆ, ಮುಂದೆಯೂ ಮಾಡ್ತಾರೆ ಎಂದು ತಿಳಿಸಿದರು.

ತಮಗೆ ಸ್ಥಾನಮಾನ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನನಗೆ ಸ್ಥಾನವನ್ನು ಕೊಟ್ಟಿದಾರೆ, ಮಾನವನ್ನು ಕೊಟ್ಟಿದಾರೆ. ರಾಜ್ಯ ಉಪಾಧ್ಯಕ್ಷ ನಾಗಿ ಕೆಲಸ ಮಾಡುತ್ತಿದ್ದೇನೆ. ಕೇಂದ್ರ ಸರ್ಕಾರ ಆಗಲಿ, ರಾಜ್ಯ ಸರ್ಕಾರ ಆಗಲಿ ಎಲ್ಲ ಸಮಾಜವನ್ನು ಜೊತೆಗೆ ತೆಗೆದುಕೊಂಡು ಹೋಗೊ ಪಕ್ಷ ಬಿಜೆಪಿ. ವಿಶೇಷವಾಗಿ ಎಲ್ಲಾ ಸಮಾಜದ ಅತಿ ಹೆಚ್ಚು ಶಾಸಕರನ್ನ ಹೊಂದಿರೊ ಪಕ್ಷ . ಹಾಗಾಗಿಯೆ ಬಿಜೆಪಿ ಎಲ್ಲರೂ ಒಪ್ಪೋ ಪಕ್ಷ ಅನ್ನೋದು ಗೊತ್ತಾಗುತ್ತೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಹತಾಶರಾಗಿದ್ದಾರೆ. ದಿನೇ ದಿನೇ ಅವರ ಅಸ್ಥಿತ್ವ ಕುಸಿಯುತ್ತಿದೆ. ಹಾಗಾಗಿ ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಬದಲಾವಣೆ ಇಲ್ಲ 
ರಾಜ್ಯದಲ್ಲಿ ಮೂರನೇ ಸಿಎಂ ಆಗ್ತಾರೆ ಎನ್ನೋ ಚರ್ಚೆ ಬಗ್ಗೆ ಮಾತನಾಡಿದ ವಿಜಯೇಂದ್ರ, ಕೇಂದ್ರ ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ,ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಎಂದು. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ನಮ್ಮ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರೂ ಹೇಳಿದ್ದಾರೆ. ಈ ರೀತಿ ವಿನಾಕಾರಣ ಚರ್ಚೆಮಾಡೋದ್ರಲ್ಲಿ ಏನೂ ಅರ್ಥ ಇಲ್ಲ. ಈ ರೀತಿ ಹೇಳಿಕೆ ನೀಡೋ ಮೂಲಕ ರಾಜ್ಯ ದ ಜನತೆಯನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ಈಶ್ವರಪ್ಪನವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿರಾಣಿಯವರು ಮುಂದೊಂದು ದಿನ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಆಗುತ್ತಾರೆ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ಕೊಟ್ಟರು.

click me!