ಬಿಜೆಪಿಯ ‘ಲಿಂಗಾಯತ ವಿರೋಧಿ ಕಾಂಗ್ರೆಸ್’ ಅಭಿಯಾನದ ಬಗ್ಗೆ ತಿರುಗೇಟು ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಬಿಜೆಪಿಯವರು ತಮ್ಮ ಸರ್ಕಾರದ ಭ್ರಷ್ಟಾಚಾರ, ತಪ್ಪುಗಳನ್ನು ಮುಚ್ಚಿಕೊಳ್ಳಲು ಜಾತಿ ಬಣ್ಣ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಸೆ.26): ಬಿಜೆಪಿಯ ‘ಲಿಂಗಾಯತ ವಿರೋಧಿ ಕಾಂಗ್ರೆಸ್’ ಅಭಿಯಾನದ ಬಗ್ಗೆ ತಿರುಗೇಟು ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಬಿಜೆಪಿಯವರು ತಮ್ಮ ಸರ್ಕಾರದ ಭ್ರಷ್ಟಾಚಾರ, ತಪ್ಪುಗಳನ್ನು ಮುಚ್ಚಿಕೊಳ್ಳಲು ಜಾತಿ ಬಣ್ಣ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಲಿಂಗಾಯತ ವಿರೋಧಿ ಅನ್ನುವುದಾದರೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಯಾರು? ಯಡಿಯೂರಪ್ಪ ಯಾವ ಜಾತಿ? ವಿಜಯೇಂದ್ರನಿಗೆ ಸಚಿವ ಸ್ಥಾನ ನೀಡದಿರುವುದು ಯಾಕೆ? ವಿಜಯೇಂದ್ರ ಯಾವ ಜಾತಿ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯೇ ಲಿಂಗಾಯತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಪರೋಕ್ಷ ಟಾಂಗ್ ಕೂಡ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ‘ಲಿಂಗಾಯತ ವಿರೋಧಿ ಕಾಂಗ್ರೆಸ್’ ಅಭಿಯಾನ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ತಮ್ಮ ಸರ್ಕಾರದ ತಪ್ಪು, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಜಾತಿ ಮೊರೆ ಹೋಗಿದ್ದಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ. ಗುತ್ತಿಗೆದಾರರು ಬಿಜೆಪಿ ಸರ್ಕಾರದ ಮೇಲೆ ಮಾಡಿದ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಸದನದಲ್ಲಿ ಪ್ರಸ್ತಾಪ ಮಾಡಿದರೆ ಅದು ಹೇಗೆ ಜಾತಿ ಲೆಕ್ಕಾಚಾರ ಆಗುತ್ತದೆ.
ನಾನು ಲಾ ಓದಿದ್ದೇನೆ, ಬೊಮ್ಮಾಯಿ ಲಾ ಓದಿಲ್ಲ, ಬೆದರಿಕೆಗೆ ಬಗ್ಗಲ್ಲ: ಸಿದ್ದರಾಮಯ್ಯ
ಹಾಗಾದರೆ ನರೇಂದ್ರ ಮೋದಿ ಅವರು ನಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವುದೇ ಆಧಾರಗಳಿಲ್ಲದೆ ‘10 ಪರ್ಸೆಂಟ್ ಸರ್ಕಾರ’ ಅಂತ ಆರೋಪ ಮಾಡಿದರು. ಹಾಗಾದರೆ ಆ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ಕುರುಬ ಸಮುದಾಯದವನು ಅಂತ ಈ ಆರೋಪ ಮಾಡಿದ್ರಾ? ನಮ್ಮ ಸರ್ಕಾರ, ಪಕ್ಷದಲ್ಲಿ ಲಿಂಗಾಯತರು ಇಲ್ವಾ ಎಂದು ಪ್ರಶ್ನಿಸಿದರು. ನನ್ನ ವಿರುದ್ಧವೂ ಇವರು ಸುಳ್ಳು ಸುಳ್ಳು ಮಾಹಿತಿಯನ್ನು ನೀಡಿ ಪುಸ್ತಕ ಪ್ರಕಟಿಸಿದ್ದಾರಲ್ಲಾ, ನಾನು ಹೇಳಬಹುದಾ ಕುರುಬ ಅನ್ನೋ ಕಾರಣಕ್ಕೆ ನನ್ನ ವಿರುದ್ಧ ಇಂತಹ ಪುಸ್ತಕ ಹೊರಡಿಸಿದ್ದಾರೆ ಅಂತ ಎಂದು ಪ್ರಶ್ನಿಸಿದರು.
ನಾನು ಅಕ್ರಮ ಮಾಡಿದ್ರೆ ಜೈಲಿಗೆ ಹಾಕಿ: ‘ಧಮ್ ಇದ್ದರೆ, ತಾಕತ್ತಿದ್ದರೆ’ ಎಂದು ವೀರಾವೇಶದ ಭಾಷಣ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಸರ್ಕಾರಕ್ಕೆ ತಾಕತ್ತಿದ್ದರೆ ನನ್ನ ಅವಧಿ ಸೇರಿ 2006ರಿಂದ ಈಚೆಗಿನ ಎಲ್ಲಾ ಅವ್ಯವಹಾರ ಆರೋಪಗಳ ಬಗ್ಗೆಯೂ ನ್ಯಾಯಾಂಗ ತನಿಖೆ ನಡೆಸಿ. ನಾನು ಅಕ್ರಮ ಮಾಡಿದ್ದರೆ ಅಪರಾಧಿ ಎಂದು ಸಾಬೀತುಪಡಿಸಿ ಜೈಲಿಗೆ ಹಾಕಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ‘ಸಿದ್ದರಾಮಯ್ಯ, ಸ್ಕ್ಯಾಮ್ ರಾಮಯ್ಯ’ ಎಂಬ ಸುಳ್ಳಿನ ಪುಸ್ತಕ ಹೊರತಂದಿದ್ದಾರೆ. ನಾವು 40 ಪರ್ಸೆಂಟ್ ಭ್ರಷ್ಟಾಚಾರ, ಪಿಎಸ್‌ಐ ನೇಮಕಾತಿ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ಹಗರಣಗಳನ್ನು ಬಯಲಿಗೆಳೆದಿದ್ದೇವೆ. ಇದರಿಂದ ತಪ್ಪಿಸಿಕೊಳ್ಳಲು ಸುಳ್ಳು ಪುಸ್ತಕ ತಂದಿದ್ದು, ಈ ಪುಸ್ತಕದಲ್ಲಿರುವ ಯಾವುದಾದರೂ ಒಂದು ಆರೋಪವನ್ನು ಬಿಜೆಪಿಯವರು ಹಿಂದಿನ 3 ವರ್ಷಗಳಲ್ಲಿ ಸದನದ ಒಳಗೆ ಅಥವಾ ಸದನದ ಹೊರಗೆ ಪ್ರಸ್ತಾಪ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ನೂರು ಸಿದ್ದರಾಮಯ್ಯ ಬಂದರೂ ಬಿಜೆಪಿ ಭಯಪಡಲ್ಲ: ಸಚಿವ ಕಾರಜೋಳ
ಕಟೀಲ್‌ಗೆ ಏನೂ ಗೊತ್ತಿಲ್ಲ: ಕಾನೂನು ಗೊತ್ತಿಲ್ಲದ ನಳಿನ್‌ಕುಮಾರ್ ಕಟೀಲ್ ಮತ್ತಿತರರು ನನ್ನನ್ನು ಜೈಲಿಗೆ ಕಳುಹಿಸುವ ಮಾತನಾಡಿದ್ದಾರೆ. ಕೇಶವಕೃಪದಲ್ಲಿ ಬರೆದುಕೊಟ್ಟಿದ್ದನ್ನು ಬಂದು ಓದಿದ್ದಾರೆ. ನನ್ನನ್ನು ಜೈಲಿಗೆ ಹಾಕಬೇಕಾದರೆ ಮೊದಲು ನ್ಯಾಯಯುತ ತನಿಖೆ ಆಗಬೇಕು, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಾನು ಅಪರಾಧಿ ಎಂದು ಸಾಬೀತಾಗಬೇಕು. ಹೀಗಾಗಿ ನಾನೇ ಹೇಳುತ್ತಿದ್ದೇನೆ 2006 ರಿಂದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡರು ಮತ್ತು ನಮ್ಮ ಸರ್ಕಾರ ಹಾಗೂ ಈ 4 ವರ್ಷಗಳ ಸರ್ಕಾರದ ಎಲ್ಲವನ್ನೂ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ತನಿಖೆ ಬಗ್ಗೆ ನನಗೆ ಯಾವ ಹೆದರಿಕೆಯೂ ಇಲ್ಲ ಎಂದು ಹೇಳಿದರು.