ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ರೌಡಿಗಳ ಅಟ್ಟಹಾಸದಿಂದ ಜನತೆಗೆ ತೊಂದರೆ: ಡಾ. ಶರಣಪ್ರಕಾಶ ಪಾಟೀಲ್
ಕಲಬುರಗಿ(ಜು.29): ರಾಜ್ಯದಲ್ಲಿ ಜನೋತ್ಸವ ಮಾಡಲು ಬಿಜೆಪಿ ಸರ್ಕಾರ ಅದೇನ್ ಕಡೆದು ಗುಡ್ಡೆ ಹಾಕಿದೆ? ಸರ್ಕಾರ ತನ್ನ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಬಿಜೆಪಿ ಸರ್ಕಾರದ 3 ವರ್ಷ, ಬೊಮ್ಮಾಯಿ ಆಡಳಿತದ 1 ವರ್ಷ ಶೂನ್ಯ ಸಾಧನೆ. ಅದಕ್ಕೇ ಮಧ್ಯರಾತ್ರಿ ಮುಖ್ಯಮಂತ್ರಿ ಸುದ್ದಿಗೋಷ್ಠಿ ಕರೆದು ಜನೋತ್ಸವ ರದ್ದು ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಮಂತ್ರಿ ಡಾ. ಶರಣಪ್ರಕಾಶ ಪಾಟೀಲ್ ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಪಿ ಸರ್ಕಾರದ ಅವಧಿಯಲ್ಲಿ ಜನರ ಸಂಕಟಗಲು ಹೆಚ್ಚಿವೆಯೇ ಹೊರತು ಕಮ್ಮಿಯಾಗಿಲ್ಲ. ಲಕ್ಷಾಂತರ ರುಪಾಯಿಗೆ ಪಿಎಸ್‌ಐ ಸೇರಿದಂತೆ ಹಲವು ಹುದ್ದೆಗಳು ಮಾರಾಟಕ್ಕಿವೆ. ವಿಧಾನಸೌಧದ 3ನೇ ಮಹಡಿಯಲ್ಲಿದ್ದು ಪಿಎಸ್‌ಐ ಹಗರಣ ಮಾಡುತ್ತಿದ್ದಾರೆ. ಇಂತಹವರಿಗೆ ಮಾನ ಮರ್ಯಾದೆ ಇದೆಯೆ? ಎಂದು ಪ್ರಶ್ನಿಸಿದರು.
ಠಾಣೆಯಲ್ಲಿ ರಿಯಲ್ ಎಸ್ಟೇಟ್ ದಂಧೆ:
ರಾಜ್ಯದಲ್ಲಿ ಸಾವು-ನೋವು ಹೆಚ್ಚಿದ್ದು, ಹತ್ಯೆಗಳನ್ನು ತಡೆಯಲಾಗುತ್ತಿಲ್ಲ. ರೌಡಿ ಶೀಟರ್‌ಗಳ ಅಟ್ಟಹಾಸದಿಂದಲೇ ಕಾನೂನು- ಸುವ್ಯವಸ್ಥೆ ಹಾಳಾಗಿದೆ. ಪೊಲೀಸರ ಬೆದರಿಕೆ ರೌಡಿಗಳಿಗೆ ಲವಲೇಶವೂ ಇಲ್ಲ. ಠಾಣೆಗಳಲ್ಲಿ ರಿಯಲ್ ಎಸ್ಟೇಟ್ ದಲ್ಲಾಳಿ ದಂಧೆ ಸಾಗಿದೆಯೇ ಹೊರತು ನೊಂದವರ ಕಣ್ಣೀರು ಒರೆಸುವ ಕೆಲಸವಾಗುತ್ತಿಲ್ಲ. ಎಲ್ಲಾ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಣ ಗಳಿಕೆಯಲ್ಲಿ ತೊಡಗಿದ್ದಾರೆಂದು ಡಾ. ಪಾಟೀಲ್ ಆಕ್ರೋಶ ಹೊರಹಾಕಿದರು.
ಪ್ರವೀಣ್ ಹಂತಕರನ್ನು ಗುಂಡಿಟ್ಟು ಕೊಲ್ಲಿ, ಆಂದೋಲ ಸ್ವಾಮೀಜಿ ಅಗ್ರಹ!
ನಾವು ವಿರೋಧ ಪಕ್ಷವಾಗಿ ಕಾಂಗೆಸ್ಸಿಗರು ವಿರೋಧ ಮಾಡಿದರೆ ಅದು ರಾಜಕೀಯವಾಗಬಹುದು. ಆದರೆ ಇಂದು ಬಿಜೆಪಿ ಪ್ರಮುಖ ಕಾರ್ಯಕರ್ತರೇ ತಮ್ಮ ಪಕ್ಷದ ಆಡಳಿತದ ವಿರುದ್ಧ ಗಟ್ಟಿಧ್ವನಿಯಲ್ಲಿ ವಿರೋಧಿಸುತ್ತಿದ್ದಾರೆ. ಅನೇಕ ಹಂತಗಳಲ್ಲಿ ಬಿಜೆಪಿಗರೇ ರಾಜೀನಾಮೆ ನೀಡಿ ಹೊರಬರುತ್ತಿದ್ದಾರೆ. ಇದಕ್ಕಿಂತ ಬೇರೆ ವಿರೋಧ ಬೇಕೆ? ಆಡಲಿಳಿತದಲ್ಲಿರುವ ಪಕ್ಷಕ್ಕೆ ಸ್ವಪಕ್ಷೀಯರೇ ವಿರೋಧ ಮಾಡೋದನ್ನು ನಾವಿಂದು ನೋಡುವಂತಾಗಿದೆ ಎಂದು ಟೀಕಿಸಿದರು.
ರೌಡಿ ಶೀಟರ್‌ಗೆ ಬೆಂಬಲ:
ಕಲಬುರಗಿ ಸಂಸದ ಡಾ.ಉಮೇಶ ಜಾಧವ್, ಬೀದರ್ ಸಚಿವ ಪ್ರಭು ಚವ್ಹಾಣ್ ಇವರಿಬ್ಬರೂ ರೌಡಿಗಳ ಬೆಂಬಲಕ್ಕೆ ನಿಂತಿದ್ದಾರೆ. ಜನನಾಕರೇ ಹೀಗೆ ಬಹಿರಂಗವಾಗಿ ರೌಡಿಗಳ ಬೆಂಬಲಕ್ಕೆ ಮುಂದಾದರೆ ಗತಿ ಏನು? ಎಂದು ಡಾ. ಶರಣಪ್ರಕಾಶ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಪ್ರಸ್ನಿಸಿದರು.
ಕಲಬುರಗಿಯಲ್ಲಿ ಸಭೆ ನಡೆಸಿದ್ದ ರಾಜ್ಯ ಎಡಿಜಿಪಿ ಅಲೋಕ ಕುಮಾರ್ ಅವರು ಮಣಿಕಂಠ ರಾಠೋಡನನ್ನು ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಿದೆ, ಗಡಿಪಾರು ಮಾಡುವ ಮೂಲಕ ಕಟ್ಟುನಿಟ್ಟು ಸಂದೇಶ ರವಾನಿಸುತ್ತೇವೆಂದು ಹೇಳಿದ್ದರು. ಇದನ್ನು ವಿರೋಧಿಸಿ ಕಲಬುರಗಿ ಸಂಸದ ಡಾ.ಜಾಧವ್, ಮಂತ್ರಿ ಪ್ರಭು ಚವ್ಹಾಣ್ ಇಬ್ಬರೂ ಹಲವರನ್ನು ತಮ್ಮ ಜೊತೆ ಕರೆದಕೊಂಡು ಬೆಂಗಳೂರಿಗೆ ಹೋಗಿ ಸಿಎಂ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಗಡಿಪಾರು ಮಾಡದಂತೆ ಮನವಿ ಮಾಡಿದ್ದಾರೆ. ಇದಕ್ಕಿಂತ ಬೇರೆ ಹಾಸ್ಯಾಸ್ಪದ ಸಂಗತಿ ಬೇಕೆ? ಜನಪ್ರತಿನಿಧಿಗಳು ರೌಡಿಗಳ ಪರ ನಿಲ್ಲುವ ವಿಲಕ್ಷಣ ಪ್ರಸಂಗ ಇದಾಗಿದೆ. ಇಂಹವರಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಮ್ಮಿ ಇರಲು ಸಾಧ್ಯವೆ? ಎಂದು ಪ್ರಶ್ನಿಸಿದರು.
ಸುವ್ಯವಸ್ಥೆ ಹದಗೆಡಲು ಇದಷ್ಟೇ ಸಾಕಲ್ಲವೆ:
ಅಕ್ಕಿ ಅಕ್ರಮ ಸಾಗಾಟದಲ್ಲಿ ತೊಡಗಿರುವ ಮಣಿಕಂಠ ರಾಠೋಡ ವಿರುದ್ಧ ಆದಗಿರಿ, ಕಲಬುರಗಿ, ಪಕ್ಕದ ಜಿಲ್ಲೆಗಳಲ್ಲಿ ಸಾಕಷ್ಟು ಕೇಸ್ ಇವೆ. ಬಿಜೆಪಿ ಸರ್ಕಾರದಲ್ಲಿಯೇ ಇವೆಲ್ಲ ಕೇಸ್ ಮಾಡಲಾಗಿದೆ. ತಮ್ಮ ಸರ್ಕಾರದ ಅವಧಿಯಲ್ಲಿನ ಕೇಸ್‌ಗಳನ್ನೇ ಸುಳ್ಳೆಂದು ರೌಡಿ ಪರ ನಿಲ್ಲುವ ಇಂತಹ ಜನನಾಯಕರಿಂದ ಸಮಾಜದಲ್ಲಿ ಸಾಮರಸ್ಯ, ನೆಮ್ಮದಿ, ಶಾಂತಿ ಇರಲು ಸಾಧ್ಯವೆ? ಕಾನೂನು-ಸುವ್ಯವಸ್ಥೆ ಹದಗೆಡಲು ಇದಷ್ಟೇ ಸಾಕಲ್ಲವೆ ಎಂದು ಪ್ರಶ್ನಿಸಿದರು.
ಎಡಿಜಿಪಿ ಕಾನೂನು ಸುವ್ಯವಸ್ಥೆ ಅಲೋಕ ಕುಮಾರ್ ಕಲಬುರಗಿಗೆ ಬಂದು ಕಾನೂನು ರೀತ್ಯಾ ಗಡಿಪಾರಿಗೆ ಮುಂದಾದರೆ ಅದನ್ನು ವಿರೋಧಿಸುವ ಜನನಾಯಕರಿಗೆ ಏನೆನ್ನಬೇಕು? ಇಂತಹವರಿಂದಲೇ ಇಂದು ಬಿಜೆಪಿ ಆಡಳಿತ ಕುಸಿತ ಕಂಡಿದೆ. ಹೀಗಿದ್ದರೂ ಬಿಜೆಪಿಗರು ಇನ್ನೂ ಪಾಠ ಕಲಿಯುತ್ತಿಲ್ಲ. ಜನರೇ ಪಾಠ ಕಲಿಸುತ್ತಾರೆಂದು ಡಾ. ಶರಣಪ್ರಕಾಶ, ಜಗದೇವ ಗುತ್ತೇದಾರ್ ದೂರಿದರು. ಕಾಂಗ್ರೆಸ್ ಮುಖಂಡ ರಾಜಗೋಪಾಲರೆಡ್ಡಿ ಇದ್ದರು.
ಇಂದಿನಿಂದ ಮಾಜಿ ಶಾಸಕ ಶರಣಪ್ರಕಾಶ ಪಾದಯಾತ್ರೆ
ಸೇಡಂ ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ , ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವ 75 ನೇ ವರ್ಷಾಚರಣೆ ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರಾದ್ಯಂತ ಪಾದಯಾತ್ರೆ 2 ಹಂತಗಳಲ್ಲಿ ನಡೆಸಲು ಮುಂದಾಗಿದ್ದಾರೆ.
ಮೊದಲ ಹಂತವಾಗಿ ಜು. 29 ರಿಂದ ಪಾದಯಾತ್ರೆ ಶುರುವಾಗಲಿದ್ದು 4 ದಿನ ಸತತ ನಡೆಯಲಿದೆ. ಇದಾದ ನಂತರ ಸಿದ್ದರಾಮಯ್ಯ ಜನ್ಮದಿನ ಅಮೃತಮಹೋತ್ಸವ ನಿಮಿತ್ತ ಮಧ್ಯದಲ್ಲಿ ವಿರಾಮವಿದ್ದು ಮತ್ತೆ 12, 13, ಹಾಗೂ 17 ರಿಂದ 21 ರ ವರೆಗೆ ಸತತ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಡಾ. ಶರಣ್ರಕಾಶ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಡಿಕೆಶಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ: ಶ್ರೀರಾಮಲು ಹೇಳಿದ್ದಿಷ್ಟು
ಯಾನಾಗುಂದಿ ಮಾತಾ ಮಾಣಿಕೇಶ್ವರಿ ಪವಿತ್ರ ತಾಣದಲ್ಲಿ ಜು. 29 ರಂದು ಬೆ. 11 ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಇಲ್ಲಿಂದ ಹೊರಟು ಬುರಗಪಲ್ಲಿ ಊಲಕ ಇಟಗಾದಲ್ಲಿ ವಾಸ್ತವ್ಯ, ಜು. 30 ರಂದು ಶಕಲಾಸಪಲ್ಲಿ, ಮೋತಕಪಲ್ಲಿ, ಕೋಲಕುಂದಾ ವಾಸ್ತವ್ಯ, ಅಲ್ಲಿಂದ ಜು. 31 ರಂದು ಮುಧೋಳ, ಆ. 1 ರಂದು ಆಡಕಿ ವಾಸ್ತವ್ಯ ಮಾಡುವ ಮೂಲಕ ಪಾದಯಾತ್ರೆಯ 4ನೇ ದಿನ ಪೂರೈಸಲಾಗುತ್ತದೆ. ನಂತರ ಶುರುವಾಗುವ ಪಾದಯಾತ್ರೆ ಆ 21 ರಂದು ಸುಲೇಪೇಟ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಈ 9 ದಿನಗಳಲ್ಲಿ 108 ಕಿಮೀ ಪಾದಯಾತ್ರೆ ಮಾಡಲಾಗುತ್ತಿದೆ. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ಹೋರಾಟದ ಕೊಡುಗೆಗಳು, ದೇಶದ ಪ್ರಗತಿಗೆ ಕಾಂಗ್ರೆಸ್ ನೀಡಿದ ಯೋಜನೆಗಳ ಬಗ್ಗೆ ಜನತೆಗೆ ಮನೆ ಮನೆಗೂ ಹೋಗಿ ತಿಳಿಹೇಳಲಾಗುತ್ತದೆ ಎಂದರು.
ಸೇಡಂ ಕ್ಷೇತ್ರದಲ್ಲಿನ ತಮ್ಮ ಪಾದಯಾತ್ರೆ ಇದೇ ಮೊದಲು, ಹಿಂದೆ ಬಳ್ಳಾ್ಳರಿ ಹಾಗೂ ಮೇಕೆದಾಟುವಿನಲ್ಲಿ ಪಕ್ಷ ನಡೆಸಿದ ಪಾದಯಾತ್ರೆಗಳಲ್ಲಿ ತಾವು ಪಾಲ್ಗೊಂಡಿದ್ದಾಗಿ ಡಾ. ಶರಣಪ್ರಕಾಶ ಹೇಳಿದ್ದು ಕಾಂಗ್ರೆಸ್ ಪಕ್ಷದ ಅಭಿಮಾನಿಗಳು, ಪ್ರಮುಖರೆಲ್ಲರೂ ತಮ್ಮ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದರು.