ಡಿಕೆಶಿಗೆ ಸಿಎಂ ಆಸೆ ಇದ್ದರೆ ತಪ್ಪೇನು? ಆರೋಗ್ಯಕರ ಪೈಪೋಟಿ ತಪ್ಪಲ್ಲ: ಸಿದ್ದು

By Govindaraj S  |  First Published Jul 29, 2022, 5:10 AM IST

ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದ, ಅಸಲಿಗೆ ಹುಟ್ಟಿದ ದಿನಾಂಕ ನಿರ್ದಿಷ್ಟವಾಗಿ ಯಾವುದು ಎಂಬುದು ಗೊತ್ತಿಲ್ಲ ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಮೃತ ಮಹೋತ್ಸವ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಹುಟ್ಟು ಹಾಕಿದೆ.


ಎಸ್‌.ಗಿರೀಶ್‌ ಬಾಬು

ಬೆಂಗಳೂರು (ಜು.29): ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದ, ಅಸಲಿಗೆ ಹುಟ್ಟಿದ ದಿನಾಂಕ ನಿರ್ದಿಷ್ಟವಾಗಿ ಯಾವುದು ಎಂಬುದು ಗೊತ್ತಿಲ್ಲ ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಮೃತ ಮಹೋತ್ಸವ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಹುಟ್ಟು ಹಾಕಿದೆ. ಇದು ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಆಯೋಜಿಸಿರುವ ಸಿದ್ದರಾಮೋತ್ಸವ ಎಂದು ಒಂದು ವರ್ಗ ಬಿಂಬಿಸಿದರೆ, ಕಾಂಗ್ರೆಸ್‌ನಲ್ಲಿನ ಸಿಎಂ ಹುದ್ದೆ ಪೈಪೋಟಿ ಬಹಿರಂಗಕ್ಕೆ ಬರಲು ಕಾರಣವಾದ ಸಮಾರಂಭ ಎಂದು ಮತ್ತೊಂದು ವರ್ಗ ಆರೋಪಿಸುತ್ತಿದೆ. ಬಿಜೆಪಿಯಂತೂ, ವ್ಯಕ್ತಿ ಪೂಜೆಯೇ ಕಾಂಗ್ರೆಸ್‌ ಸಿದ್ದಾಂತ ಎಂದು ಬಿಂಬಿಸಲು ಮುಂದಾಗಿದೆ. ಇಷ್ಟಕ್ಕೂ ಚುನಾವಣಾ ವರ್ಷದಲ್ಲಿ ನಡೆಯಲಿರುವ ಈ ಉತ್ಸವದ ಅಸಲಿ ಉದ್ದೇಶವೇನು? ಇದು ರವಾನಿಸಲಿರುವ ಸಂದೇಶವೇನು? ಕಾಂಗ್ರೆಸ್‌ಗೆ ಸಹಾಯಕಾರಿಯೇ? ಮುಖ್ಯಮಂತ್ರಿ ಹುದ್ದೆ ಪೈಪೋಟಿಯಿಂದಾಗಿ ಟಿಕೆಟ್‌ ಹಂಚಿಕೆ ವೇಳೆ ಹೊಯ್‌ಕೈ ನಡೆಯುವುದೇ? ಈ ಎಲ್ಲ ಪ್ರಶ್ನೆಗಳಿಗೆ ಈ ಉತ್ಸವದ ಕೇಂದ್ರ ಬಿಂದು ಸಿದ್ದರಾಮಯ್ಯ ಅವರೇ ನೇರಾನೇರ ಉತ್ತರ ನೀಡಿದ್ದಾರೆ.

Tap to resize

Latest Videos

* 75 ವಸಂತಗಳು. ಜೀವನದ ಮಹತ್ವದ ಮೈಲಿಗಲ್ಲು. ಅಭಿಮಾನಿಗಳಿಂದ ಅದ್ದೂರಿ ಸಮಾರಂಭ. ನಿಮ್ಮ ಅನಿಸಿಕೆ?
ನಾನು 1ರಿಂದ 4ನೇ ತರಗತಿವರೆಗೂ ಸರ್ಕಾರಿ ಶಾಲೆಯಲ್ಲಿ ಓದಿಲ್ಲ. ಜಾನಪದ ನೃತ್ಯ ಕಲಿಸುತ್ತಿದ್ದ ಮೇಷ್ಟ್ರರು ನಂಜೇಗೌಡರು ಅಕ್ಷರಾಭ್ಯಾಸ, ಕಾಗುಣಿತ, ಲೆಕ್ಕ ಕಲಿಸಿದ್ದರು. ಚುರುಕಿದ್ದೆ ಅಂತ ಆಗ ನಮ್ಮ ಹಳ್ಳಿ ಶಾಲೆಯ ಹೆಡ್ಮಾಸ್ಟ್ರಾದ ರಾಜಪ್ಪ ಅವರು ಐದನೇ ತರಗತಿಗೆ ಸೇರಿಸಿಕೊಂಡರು. ಅವರು ಬರೆದುಕೊಂಡ ಹುಟ್ಟಿದ ದಿನಾಂಕವಿದು. ಹೀಗಾಗಿ ನಾವು ನಾನು ಯಾವತ್ತು ಹುಟ್ಟಿದ ಹಬ್ಬ ಆಚರಿಸಿರಲಿಲ್ಲ. ಈಗ ನನ್ನ ಸ್ನೇಹಿತರು ಶಾಲಾ ದಿನಾಂಕದ ಪ್ರಕಾರ ಎಪ್ಪತ್ತೈದು ತುಂಬುತ್ತಿದೆ ಆಚರಿಸೋಣ ಎಂದು ಒತ್ತಾಯಿಸಿದರು. ಹೀಗಾಗಿ, ಒಪ್ಪಿದೆ. ಅಭಿಮಾನಿಗಳು ಸಿದ್ದರಾಮೋತ್ಸವ ಅಂತ ಬರೆದುಕೊಳ್ಳುತ್ತಾರೆ. ಆದರೆ, ಇದು ಅಮೃತ ಮಹೋತ್ಸವ ಅಷ್ಟೆ.

* ಚುನಾವಣೆ ವರ್ಷದಲ್ಲೇ ಈ ಮಹೋತ್ಸವ ಆಚರಣೆಯ ಹಿಂದೆ ರಾಜಕಾರಣ ಇಲ್ಲವೇ?
ಇನ್ನು 8-9 ತಿಂಗಳ ನಂತರ ಚುನಾವಣೆ ಬರುತ್ತೆ. ಹೀಗಾಗಿ ಎಲ್ಲವನ್ನು ಚುನಾವಣೆಗೆ ಅಂತ ಬಿಂಬಿಸುತ್ತಾರೆ. ಆದರೆ, ಅಂತಹ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ.

Mysuru: ಸಿದ್ದರಾಮಯ್ಯ ಜನಪರ ಕಾರ‍್ಯಕ್ರಮಗಳಿಗೆ ಮಲ್ಲಿಕಾರ್ಜುನ ಖರ್ಗೆ ಪರಾಕ್‌

* ನಿಮ್ಮ ಅನುಯಾಯಿಗಳ ಪ್ರಕಾರ ಈ ಆಚರಣೆಯಿಂದ ಕಾಂಗ್ರೆಸ್‌ಗೆ ಸಹಾಯವಾಗುತ್ತಾ?
ಹೌದು, ಚುನಾವಣೆಗೆ ಪರೋಕ್ಷವಾಗಿ ನೆರವಾಗುತ್ತದೆ. ಅಮೃತ ಮಹೋತ್ಸವದ ದಿನ ದಾವಣಗೆರೆಯಲ್ಲಿ ಐದಾರು ಲಕ್ಷ ಜನ ಸೇರುತ್ತಾರೆ. ಅಷ್ಟುಪ್ರಮಾಣದಲ್ಲಿ ಜನ ಸೇರುವಾಗ ನಾವು ರಾಜಕಾರಣ ಮಾತಾಡೇ ಮಾಡುತ್ತೇವೆ. ಸಮಾರಂಭಕ್ಕೆ ಬರುವ ಅತಿಥಿಗಳು ರಾಜಕಾರಣದ ಬಗ್ಗೆಯೇ ಮಾತನಾಡಬೇಕಾಗುತ್ತದೆ. ಹೀಗಾಗಿ, ಸಹಜವಾಗಿ ಚುನಾವಣೆಗೆ ಸಂದೇಶ ರವಾನೆ ಆಗಿಯೇ ಆಗುತ್ತದೆ.

* ಈ ಮಹೋತ್ಸವ ಘೋಷಣೆ ನಂತರ ಸಿಎಂ ಹುದ್ದೆ ಪೈಪೋಟಿ ಹೆಚ್ಚಾಯ್ತು?
ಎಲ್ಲಿ ಕಾಂಪಿಟೇಷನ್‌ ಹುಟ್ಟಿದೆ. ಯಾರ ಜತೆ ಕಾಂಪಿಟೇಷನ್‌? ನನ್ನ ಹುಟ್ಟುಹಬ್ಬ ಆಚರಣೆಯಿಂದ ಪೈಪೋಟಿ ವಿಷಯ ಏಕೆ? ಈ ಹಿಂದೆ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನಾಚರಣೆಯನ್ನು ಮಾಡಲಾಗಿತ್ತು. ಇತ್ತೀಚೆಗೆ ಬಿಜೆಪಿಯ ಯಡಿಯೂರಪ್ಪ ಅವರ ಹುಟ್ಟಹಬ್ಬ ಆಚರಣೆ ಮಾಡಿಕೊಂಡರಲ್ಲ. ಅದು ಕಾಂಪಿಟೇಷನ್‌. ಆ... ನಾಯಕರೇನೂ ಆ ರೀತಿ ಭಾವಿಸುತ್ತಿಲ್ಲ. ಇದು ಮಾಧ್ಯಮಗಳ ಸೃಷ್ಟಿ. ಇಷ್ಟಕ್ಕೂ ಇದು ಚರ್ಚೆ ವಿಚಾರ ಅಲ್ಲ. ಆದರೆ, ಚರ್ಚಾ ವಿಷಯ ಮಾಡಿದ್ದಾರೆ. ಇದಕ್ಕೆ ಪರ- ವಿರೋಧ ಅಭಿಪ್ರಾಯ ವ್ಯಕ್ತಆಗುತ್ತಿದೆ. ಆದರೆ, ಅದನ್ನು ಇಷ್ಯೂ ಮಾಡಬೇಕಿಲ್ಲ.

* ಕೆಪಿಸಿಸಿ ಅಧ್ಯಕ್ಷರು ನಾನು ಸಿಎಂ ಆಗಬೇಕು ಅಂತಾರೆ. ಅದು ಪೈಪೋಟಿ ಅಲ್ವ?
ನೋಡಿ, ಡಿ.ಕೆ.ಶಿವಕುಮಾರ್‌ ಇಂತಹ ಬಯಕೆ ಹೊಂದಿದ್ದರೆ ಏನು ತಪ್ಪು? ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌, ಎಂ.ಬಿ. ಪಾಟೀಲ್‌ ಸೇರಿದಂತೆ ಯಾರೇ ಆಸೆ ಇಟ್ಟುಕೊಂಡರೂ ತಪ್ಪಲ್ಲ. ಜಮೀರ್‌ ಅಹ್ಮದ್‌ ಕೂಡ ತಾನು ಸಿಎಂ ಆಗಬೇಕು ಎಂದು ಬಯಸಿದರೆ ತಪ್ಪೇನೂ ಇಲ್ಲ. ಆರೋಗ್ಯಕರ ಪೈಪೋಟಿ ಇರಬೇಕು. ನಾವು ಪ್ರಜಾತಂತ್ರದಲ್ಲಿ ಇದ್ದೇವೆ. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರವಾದ ಭಿನ್ನ ಅಭಿಪ್ರಾಯಗಳು ಇರಬೇಕಾಗುತ್ತದೆ. ಆದರೆ, ಅದು ಪಕ್ಷಕ್ಕೆ ಹಾನಿಯಾಗುವಂತೆ ಇರಬಾರದು. ಅಷ್ಟೇ.

* ಈ ಬಯಕೆ ಸ್ಪರ್ಧೆಯಾಗಿ, ಪೈಪೋಟಿಯಾಗಿದೆ ಅಂತ ಜನರಿಗೆ ಅನಿಸಿದೆ. ಇದರಿಂದ ಪಕ್ಷಕ್ಕೆ ಹಾನಿಯಲ್ಲವೆ?
ಇಂತಹ ಪೈಪೋಟಿ ಜೆಡಿಎಸ್‌ ಪಕ್ಷ ಹೊರತು ಪಡಿಸಿ ಬೇರೆ ಯಾವ ಪಕ್ಷದಲ್ಲಿ ಇಲ್ಲ? ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಾಗ ಎಷ್ಟುಪೈಪೋಟಿ ಆರಂಭವಾಗಲಿಲ್ಲ? ನಿರಾಣಿ, ಅಶೋಕ, ಬಸವರಾಜ ಸಿಎಂ ಹುದ್ದೆಗೆ ಪೈಪೋಟಿ ಮಾಡಲಿಲ್ವ? ಬಸನಗೌಡ ಪಾಟೀಲ್‌ ಯತ್ನಾಳ್‌ ಈಗಲೂ ತಾನು ಮುಖ್ಯಮಂತ್ರಿಯಾಗಬೇಕು ಅನ್ನೋದಿಲ್ವ? ಇಲ್ಲಿ ಮುಖ್ಯ ಆಗೋದು ಪಕ್ಷ ಅಧಿಕಾರಕ್ಕೆ ಬರುವುದು. ಕಾಂಗ್ರೆಸ್‌ಗೆ ಬಹುಮತ ಬಂದ ಮೇಲೆ ತಮ್ಮ ನಾಯಕ ಯಾರು ಆಗಬೇಕು ಅಂತ ಶಾಸಕರು ನಿರ್ಧಾರ ಮಾಡುತ್ತಾರೆ. ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ. ಇದು ಪದ್ಧತಿ. ಇಷ್ಟಕ್ಕೂ ಯಾರು ಏನೇ ಹೇಳಿದರೂ ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡುತ್ತಲ್ಲ?

* ಶಾಸಕರು ನಿರ್ಧಾರ ಮಾಡುತ್ತಾರೆ ನಿಜ. ಹೀಗಾಗಿ ಟಿಕೆಟ್‌ ಹಂಚಿಕೆ ವೇಳೆಯೇ ಭಾರಿ ಪೈಪೋಟಿ ನಡೆಯತ್ತೆ ಅಂತಾರೆ?
ಈ ವಿಚಾರದ ಬಗ್ಗೆ ನಾವೆಲ್ಲರೂ ಹೈಕಮಾಂಡ್‌ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಈ ಬಾರಿ ಗೆಲ್ಲುವ ಸಾಮರ್ಥ್ಯ ಹೊಂದಿರುವವರಿಗೇ ಟಿಕೆಟ್‌. ನನ್ನ ಕ್ಯಾಂಡಿಡೇಟ್‌, ಹೈಕಮಾಂಡ್‌ ಕ್ಯಾಂಡಿಡೇಟ್‌ ಅಥವಾ ಇನ್ನೊಬ್ಬರ ಕ್ಯಾಂಡಿಡೇಟ್‌ ಅಂತ ಟಿಕೆಟ್‌ ಕೊಡಲ್ಲ. ಗೆಲ್ಲವ ಸಾಮರ್ಥ್ಯ ಇದ್ದವರಿಗೆ ಟಿಕೆಟ್‌ ಕೊಡುತ್ತೇವೆ. ಸಾಮಾಜಿಕ ನ್ಯಾಯ ಹಾಗೂ ಮಹಿಳಾ ಪ್ರಾತಿನಿಧ್ಯವೂ ಇರುತ್ತದೆ. ಸಾಮಾಜಿಕ ನ್ಯಾಯ ನೀಡುವಾಗಲೂ ವಿನ್ನಬಿಲಿಟಿ (ಗೆಲ್ಲುವ ಅರ್ಹತೆ) ನೋಡುತ್ತೇವೆ. ಕೇವಲ ಸಾಮಾಜಿಕ ನ್ಯಾಯ ಅಂತ ಟಿಕೆಟ್‌ ಕೊಡಲು ಆಗಲ್ಲ. ಅದನ್ನು ನೀಡುವಾಗಲು ವಿನ್ನಬಿಲಿಟಿ ನೋಡಿ ಯಾವ ವರ್ಗಕ್ಕೆ ಅದು ಇದೆಯೋ ಅವರಿಗೆ ಕೊಡುತ್ತೇವೆ. ಒಟ್ಟಾರೆ ಗೆಲ್ಲುವ ಸಾಮರ್ಥ್ಯವೇ ಟಿಕೆಟ್‌ ನೀಡಲು ಮಾನದಂಡ.

* ಈ ಮಾನದಂಡ ಹೇಗೆ ನಿರ್ಧಾರವಾಗುತ್ತೆ?
ಇದಕ್ಕಾಗಿಯೇ ಆಂತರಿಕ ಸರ್ವೇ ನಡೆಸಲಾಗುತ್ತಿದೆ. ಹೈಕಮಾಂಡ್‌ ಕೂಡ ಈ ಬಗ್ಗೆ ಸರ್ವೇ ಮಾಡಿಸಿದೆ. ಜನಾಭಿಪ್ರಾಯವನ್ನು ಗಮನಿಸುತ್ತೇವೆ. ಇದೆಲ್ಲವರನ್ನು ಗಮನಿಸಿ ಟಿಕೆಟ್‌ ನೀಡುತ್ತೇವೆ.

* ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವಿರಿ?
ಕೇಂದ್ರ ಸರ್ಕಾರದ ವೈಫಲ್ಯ. ರಾಜ್ಯ ಸರ್ಕಾರದಲ್ಲಿನ ಅತಿಯಾದ ಭ್ರಷ್ಟಾಚಾರ. ಈ ಸರ್ಕಾರ ಬಂದ ನಂತರ ರಾಜ್ಯದ ಆರ್ಥಿಕತೆ ಹಾಳಾಗಿರೋದು. ರೈತರ ಸಮಸ್ಯೆಗಳು. ಮಹಿಳೆಯರ ಸಮಸ್ಯೆ, ಯುವಕರ ಸಮಸ್ಯೆಗಳನ್ನು ಮುಂದಿಡುತ್ತೇವೆ. ಕೇವಲ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮಾತ್ರ ಮುಂದಿಡುವುದಿಲ್ಲ. ಜತೆಗೆ, ನಾವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇವೆ. ಮುಂದೆ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದೂ ಹೇಳುತ್ತೇವೆ.

* ಚುನಾವಣಾ ಇಷ್ಯೂ ಕಾಂಗ್ರೆಸ್‌ಗೆ ಯಾವಾಗಲೂ ಸಮಸ್ಯೆಯೇ. ಕಳೆದ ಬಾರಿ ಸಾಧನೆ ಮೇಲೆ ಹೋಗದೆ, ಲಿಂಗಾಯತ ಧರ್ಮ, ಒಕ್ಕಲಿಗ...
(ಪ್ರಶ್ನೆಯನ್ನು ಮಧ್ಯದಲ್ಲೇ ತುಂಡರಿಸಿ) ನಾವು ಅಧಿಕಾರದಲ್ಲಿ ಇದ್ದಾಗ ಒಳ್ಳೆ ಕೆಲಸ ಮಾಡಿದ್ದರೂ ಅದನ್ನು ಪ್ರಚಾರ ಮಾಡುವುದರಲ್ಲಿ ಹಿಂದೆ ಬಿದ್ದೆವು. ಬಿಜೆಪಿಯವರು ಸುಳ್ಳನ್ನೇ ಮಾರುಕಟ್ಟೆಮಾಡುತ್ತಾರೆ. ಆದರೆ, ನಾವು ಕೆಲಸ ಮಾಡಿದರೂ ಅದರ ಪ್ರಚಾರ ಮಾಡಿಕೊಳ್ಳಲಿಲ್ಲ. ಜತೆಗೆ, ಲಿಂಗಾಯತ ಧರ್ಮದ ವಿಚಾರವಾಗಿ ವಿಪರೀತ ಅಪಪ್ರಚಾರವನ್ನು ಮಾಡಲಾಯ್ತು. ಸಿದ್ದರಾಮಯ್ಯ ಲಿಂಗಾಯತರ ವಿರೋಧಿ, ಒಕ್ಕಲಿಗರ ವಿರೋಧಿ, ಬ್ರಾಹ್ಮಣರ ವಿರೋಧಿ ಅಂತ ಅಪಪ್ರಚಾರ ನಡೆಯಿತು. ಆದರೆ, ನಾನು ಹ್ಯೂಮನ್‌ ಬೀಯಿಂಗ್‌ ಅಂಡ್‌ ಐ ಲವ್‌ ಆಲ್‌ ಹ್ಯೂಮನ್‌ ಬೀಯಿಂಗ್‌್ಸ. ಮನುಷ್ಯತ್ವದ ಮೇಲೆ ನಂಬಿಕೆ ಹೊಂದಿರುವವನು ನಾನು.

* ಕಳೆದ ಬಾರಿಯ ತಪ್ಪುಗಳನ್ನು ಈ ಬಾರಿ ಹೇಗೆ ಸರಿಪಡಿಸಿಕೊಳ್ಳುವಿರಿ?
ಚುನಾವಣೆ ಅತ್ಯಂತ ಸಮೀಪ ಇದ್ದಾಗ ಇಂತಹ ಅಪಪ್ರಚಾರವನ್ನು ನನ್ನ ವಿರುದ್ಧ ನಡೆಸಲಾಯಿತು. ಜನರಿಗೆ ಸತ್ಯವನ್ನು ತಿಳಿಸಲು ಸಮಯವೇ ದೊರೆಯಲಿಲ್ಲ. ಆದರೆ, ಈ ಬಾರಿ ಆ ರೀತಿ ಆಗಲು ಬಿಡೋದಿಲ್ಲ. ಜನರಿಗೆ ಸತ್ಯವನ್ನು ಖಚಿತವಾಗಿ ತಿಳಿಸುತ್ತೇವೆ.

* ಬಿಜೆಪಿಯ ಹಿಂದು ಅಸ್ತ್ರದ ಮುಂದೆ ಕಾಂಗ್ರೆಸ್‌ ದುರ್ಬಲ ಆಗುತ್ತಲ್ಲ?
ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಹುಟ್ಟುಹಾಕುತ್ತಾರೆ. ಆದರೆ, ನಾವು ಸರ್ವ ಧರ್ಮ ಸಮಾನತೆ ಪ್ರತಿಪಾದಿಸುತ್ತೇವೆ. ಹಿಜಾಬ್‌, ಹಲಾಲ್‌, ಆಜಾನ್‌, ಪುಲ್ವಾಮಾದಂತಹ ವಿಚಾರಗಳನ್ನು ಮುಂದೆ ಮಾಡಿ ಜನರನ್ನು ಕೆರಳಿಸುತ್ತಾರೆ. ಆದರೆ, ನಾವು ಸಾಮರಸ್ಯ, ಸಮಾನತೆ ಪ್ರತಿಪಾದಿಸುತ್ತೇವೆ. ಇದನ್ನೇ ಅವರು ನಮ್ಮನ್ನು ಹಿಂದು ವಿರೋಧಿಗಳು ಅಂತ ಬಿಂಬಿಸುತ್ತಾರೆ.

* ಅದನ್ನೇ ಹೇಗೆ ಎದುರಿಸುವಿರಿ?
ನಾವು ಹಿಂದುಗಳೇ. ಕಾಂಗ್ರೆಸ್‌ನಲ್ಲಿ ಇರುವ ಬಹುತೇಕ ಮಂದಿ ಹಿಂದುಗಳೇ ಅಲ್ಲವೇ?. ಎಲ್ಲ ಧರ್ಮಗಳನ್ನು ನಾವು ಸಮಾನ ಗೌರವದಿಂದ ಕಾಣುವವರು ನಾವು. ಇದನ್ನು ಜನರಿಗೆ ಅರ್ಥ ಮಾಡಿಸುತ್ತೇವೆ.

* ಸಾಫ್ಟ್‌  ಹಿಂದುತ್ವ ಪ್ರತಿಪಾದಿಸಬೇಕು ಅಂತ ಕೆಲ ಕಾಂಗ್ರೆಸ್‌ ನಾಯಕರ ಪ್ರಯತ್ನವಿದೆ?
ಸಾಫ್ಟ್‌ ಹಿಂದುತ್ವ ಅಥವ ಹಾರ್ಡ್‌ ಹಿಂದುತ್ವ ಅನ್ನೋದೆಲ್ಲ ಇಲ್ಲ. ಅದು ಬಿಜೆಪಿ ಹುಟ್ಟುಹಾಕಿರೋದು. ಅದಕ್ಕೆ ಮಾಧ್ಯಮದವರು ಸ್ವಲ್ಪ ಉಪ್ಪು-ಖಾರ ಹಾಕಿದ್ದಾರೆ. ಆದರೆ, ಕಾಂಗ್ರೆಸ್‌ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ.

Belagavi: ನಮಗೂ ಸಾಮರ್ಥ್ಯ ಇದೆ ಎಂದು ಸಿಎಂ ಖುರ್ಚಿಗೆ ಟವಲ್ ಹಾಕಿದ್ರಾ ಎಂ.ಬಿ.ಪಾಟೀಲ್?

* ಬಿಜೆಪಿ ಧರ್ಮ ಆಧಾರಿತ ರಾಜಕಾರಣ ಮಾಡಿದರೆ, ಕಾಂಗ್ರೆಸ್‌ ಜಾತಿ ರಾಜಕಾರಣ ಮಾಡುತ್ತೆ ಅಂತ ಆರೋಪ?
ನೆವರ್‌. ಕಾಂಗ್ರೆಸ್‌ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ, ಮಾಡೋದು ಇಲ್ಲ. ಈಗ ಅಲ್ಲ ಕಾಂಗ್ರೆಸ್‌ ಹುಟ್ಟಿದಾಗಿನಿಂದಲೂ ಮಾಡಿಲ್ಲ. ಇಷ್ಟಕ್ಕೂ ಜಾತಿಯನ್ನು ಕಾಂಗ್ರೆಸ್‌ ಹುಟ್ಟು ಹಾಕಿತ್ತಾ? ಅದು ಸಾವಿರಾರು ವರ್ಷದಿಂದ ಇದೆ. ಜಾತಿಯ ಅನಾಹುತಗಳ ಬಗ್ಗೆ ಮಾತನಾಡಬೇಕು ಅಂದರೆ ಅದರ ಮೂಲದಿಂದ ಮಾತನಾಡಬೇಕಾಗುತ್ತದೆ. ಜಾತಿ ಯಾರಿಂದ ಹುಟ್ಟಿತು. ಹೇಗೆ ಹುಟ್ಟಿತು? ಹೇಗೆ ಬೆಳೀತು? ಅದನ್ನು ಯಾರು ಮತ್ತು ಹೇಗೆ ಗಟ್ಟಿಗೊಳಿಸಿದರು ಅಂತ ಆರಂಭದಿಂದ ಹೇಳಬೇಕಾಗುತ್ತದೆ. ಆ ಕೆಲಸಕ್ಕೆ ಈಗ ನಾನು ಹೋಗೋದಿಲ್ಲ. ಅದು ಬೇಕಾಗೂ ಇಲ್ಲ. ಆದರೆ, ಕಾಂಗ್ರೆಸ್‌ ಜಾತಿ ರಾಜಕಾರಣ ಮಾಡಲ್ಲ. ಎಲ್ಲ ಜಾತಿ ಧರ್ಮಗಳನ್ನು ಒಳಗೊಂಡು ಅವರಿಗಾಗೇ ಕಾರ್ಯಕ್ರಮ ರೂಪಿಸುವ ಪಕ್ಷ ಕಾಂಗ್ರೆಸ್‌ ಮಾತ್ರ.

* ಹಳೆ ಮೈಸೂರು ಭಾಗ ಅರ್ಥಾತ್‌ ಒಕ್ಕಲಿಗ ಬೆಲ್ಟ್‌ನಲ್ಲಿ ಈ ಬಾರಿ ಮೇಲುಗೈ ಸಾಧಿಸಿದವರೆ ಕಿಂಗ್‌ ಅಂತಾರೆ?
ಕಾಂಗ್ರೆಸ್‌ಗೆ ಎಲ್ಲ ಸಮುದಾಯಗಳು ಮತ ನೀಡುತ್ತವೆ. ಪರ್ಸಂಟೇಜ್‌ನಲ್ಲಿ ವ್ಯತ್ಯಾಸವಿರಬಹುದು. ಆದರೆ, ಎಲ್ಲ ಜಾತಿಗಳಿಂದಲೂ ಕಾಂಗ್ರೆಸ್‌ಗೆ ಮತ ಬರುತ್ತದೆ. ಅಲ್ಲದೆ, ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ನೀಡಿದ ಅನ್ನಭಾಗ್ಯ ಯೋಜನೆಯನ್ನು ಕೊರೋನಾ ಸಮಯದಲ್ಲಿ ಜನರು ಬಹುವಾಗಿ ಸ್ಮರಿಸಿದರು. ಆಗ ನಾವು ಕೊಟ್ಟಕಾರ್ಯಕ್ರಮಗಳನ್ನು ಈಗ ಜನ ನಿಜಕ್ಕೂ ಸ್ಮರಿಸುತ್ತಿದ್ದಾರೆ. ಹೀಗಾಗಿ ಎಲ್ಲ ಜಾತಿಯ, ಧರ್ಮದ ಜನ ಈ ಬಾರಿ ನಮಗೆ ಮತ ನೀಡುತ್ತಾರೆ ಅಂತ ವಿಶ್ವಾಸವಿದೆ.

click me!