ಜನರ ರಕ್ಷಿಸದ ಈ ಸರ್ಕಾರ ಯಾಕೆ ಬೇಕು?: ಡಿಕೆಶಿ

By Kannadaprabha NewsFirst Published Jul 29, 2022, 6:42 AM IST
Highlights

ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದರು ಹೇಳುತ್ತಾರೆ. ಹಾಗಿದ್ದರೆ ಸರ್ಕಾರ ಯಾಕೆ ಇರಬೇಕು?: ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ಜು.29):  ಬಿಜೆಪಿಯ ಪ್ರವೀಣ್‌ ನೆಟ್ಟಾರು ಸಾವನ್ನು ಸರ್ಕಾರ ರಾಜಕೀಯಕ್ಕೆ ಬಳಸಿಕೊಳ್ಳದೆ ಮುಕ್ತ ತನಿಖೆ ನಡೆಸಬೇಕು. ಪ್ರತಿ ಬಾರಿಯೂ ಸಂತ್ರಸ್ತರು ಅಥವಾ ವಿರೋಧಪಕ್ಷಗಳನ್ನೇ ಹೊಣೆ ಮಾಡಿ ಪಲಾಯನವಾದ ಮಾಡಬಾರದು, ಜನರಿಗೆ ರಕ್ಷಣೆ ನೀಡಲಾಗದಿದ್ದರೆ ಈ ಸರ್ಕಾರ ಯಾಕೆ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದಾರೆ. ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದರು ಹೇಳುತ್ತಾರೆ. ಹಾಗಿದ್ದರೆ ಸರ್ಕಾರ ಯಾಕೆ ಇರಬೇಕು? ಮೈಸೂರಿನಲ್ಲಿ ಅತ್ಯಾಚಾರ ನಡೆದಾಗ ಅಷ್ಟು ಹೊತ್ತಲ್ಲಿ ಆಕೆ ಹೊರಗೆ ಯಾಕೆ ಹೋಗಬೇಕಿತ್ತು ಎಂದು ಗೃಹ ಸಚಿವರೇ ಕೇಳಿದ್ದರು. ಪ್ರತಿ ಬಾರಿಯೂ ಸಂತ್ರಸ್ತರು ಅಥವಾ ವಿರೋಧಪಕ್ಷಗಳದ್ದು ತಪ್ಪೆಂದು ಹೇಳುತ್ತಾರೆ. ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾಗಿದ್ದರೂ ಕ್ರಮ ಕೈಗೊಳ್ಳಿ, ಬೇಡ ಎಂದವರು ಯಾರು’ ಎಂದು ತರಾಟೆಗೆ ತೆಗೆದುಕೊಂಡರು.

‘ಪ್ರವೀಣ್‌ ಕೊಲೆಯನ್ನು ಖಂಡಿಸುತ್ತೇವೆ, ರಾಜ್ಯದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲ. ಸರ್ಕಾರವೇ ನೈತಿಕ ಪೊಲೀಸ್‌ಗಿರಿಗೆ ಪ್ರೋತ್ಸಾಹ ನೀಡಿದೆ. ಪರಿಸ್ಥಿತಿ ಹದಗೆಡಲು ಸರ್ಕಾರವೇ ಕಾರಣ. ಈಗ ನಿಯಂತ್ರಣ ಮಾಡಲೂ ವಿಫಲವಾಗಿದೆ’ ಎಂದು ಟೀಕಿಸಿದರು.

ಡಿಕೆಶಿಗೆ ಸಿಎಂ ಆಸೆ ಇದ್ದರೆ ತಪ್ಪೇನು? ಆರೋಗ್ಯಕರ ಪೈಪೋಟಿ ತಪ್ಪಲ್ಲ: ಸಿದ್ದು

‘ರಾಜಕಾರಣಿಗಳು ಮಾತು ಕಡಿಮೆ ಮಾಡಿ, ಪೊಲೀಸರಿಗೆ ಸ್ವತಂತ್ರವಾಗಿ ತನಿಖೆ ಮಾಡಲು ಬಿಡಬೇಕು. ಪೊಲೀಸ್‌ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾರಿ ತಪ್ಪಿಸಬಾರದು. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ರಾಜಕಾರಣ ಬೇಕಿಲ್ಲ, ನ್ಯಾಯ ಬೇಕು:

‘ನಮಗೆ ಈ ಪ್ರಕರಣದಲ್ಲಿ ರಾಜಕಾರಣ ಬೇಕಿಲ್ಲ. ಆದರೆ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಜನರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಸರ್ಕಾರ ಯಾವುದೇ ತನಿಖೆ ಮಾಡಲಿ, ಯಾವುದೇ ಸಂಘಟನೆ ನಿಷೇಧಿಸಲಿ, ಮೊದಲು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಕೆಲಸ ಮಾಡಲಿ’ ಎಂದು ಹೇಳಿದರು.

‘ಕಾಂಗ್ರೆಸ್‌ ಕಾಲದಲ್ಲಿ 22 ಕೊಲೆಯಾಗಿತ್ತು’ ಎಂಬ ಬಿಜೆಪಿ ಟೀಕೆಗೆ, ‘ನಮ್ಮ ಕಾಲದಲ್ಲಿ 25 ಆಗಿತ್ತೋ, ಇವರ ಕಾಲದಲ್ಲಿ 35 ಆಗಿದೆಯೋ, 100 ಆಗಿದೆಯೋ ಎಂಬ ಬಗ್ಗೆ ಮಾಧ್ಯಮಗಳೇ ಪಟ್ಟಿಪ್ರಕಟಿಸಿವೆ’ ಎಂದಷ್ಟೇ ಹೇಳಿದರು.
‘ಕಾಂಗ್ರೆಸ್‌ ಬೆಂಬಲಿತ ಮತಾಂಧ ಶಕ್ತಿಗಳು ಈ ಕೃತ್ಯದ ಹಿಂದೆ ಇವೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಆರೋಪ ಮಾಡುವವರು ಅದನ್ನು ಸಾಬೀತುಪಡಿಸಿ, ಶಿಕ್ಷೆ ನೀಡಲಿ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ’ ಎಂದರು.

ಮಂಗಳೂರಿನಲ್ಲಿ ಯುವಕನ ಭೀಕರ ಹತ್ಯೆ: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮತ್ತೊಂದು ಮರ್ಡರ್‌

ಪ್ರವೀಣ್‌ ಕುಟುಂಬ ಸಾಂತ್ವನ ಹೇಳಲು ಹೋಗುವೆ: ಡಿಕೆಶಿ

‘ನಿನ್ನೆ ಸಂಜೆಯೇ ಬೆಳ್ಳಾರೆಗೆ ತೆರಳಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಲು ನಿರ್ಧರಿಸಿದ್ದೆ. ಆದರೆ ಪೊಲೀಸ್‌ ಅಧಿಕಾರಿಗಳು ಪರಿಸ್ಥಿತಿ ತಿಳಿಯಾದ ನಂತರ ಭೇಟಿ ನೀಡಿ ಎಂದು ಸಲಹೆ ನೀಡಿದರು. ಹೀಗಾಗಿ ಸೂಕ್ತ ಸಮಯದಲ್ಲಿ ಭೇಟಿ ನೀಡುತ್ತೇನೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಜನೋತ್ಸವ ಮಾಡಬೇಕಿತ್ತು: ಡಿಕೆಶಿ

ಬೆಂಗಳೂರು: ರಾಜ್ಯ ಸರ್ಕಾರದ್ದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ. ಸರ್ಕಾರ ಸರಿಯಾಗಿ ಇದ್ದಿದ್ದರೆ ಯಾಕೆ ಹೆದರಬೇಕು? ಕಾರ್ಯಕ್ರಮ ಮಾಡಬೇಕಿತ್ತು. ಸಾಧನೆ ಮಾಡದೇ ಈ ಕಾರ್ಯಕ್ರಮ ಮಾಡಲು ಮುಂದಾಗಿದ್ದೇ ತಪ್ಪು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಜನಾಕ್ರೋಶಕ್ಕೆ ಹೆದರಿ ಕಾರ್ಯಕ್ರಮ ರದ್ದು ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ‘ಇದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ. ನಾವು ಈ ಪಟ್ಟಈಗಾಗಲೇ ನೀಡಿದ್ದೇವೆ. ಸರ್ಕಾರ ಸರಿಯಾಗಿ ಇದ್ದಿದ್ದರೆ ಯಾಕೆ ಹೆದರಬೇಕು, ಕಾರ್ಯಕ್ರಮ ಮಾಡಬೇಕಿತ್ತು’ ಎಂದರು.
 

click me!