ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಶೆಟ್ಟರ್ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಭೇಟಿ ನೀಡಿದರು.
ಹುಬ್ಬಳ್ಳಿ (ಏ.21): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಶೆಟ್ಟರ್ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಪಕ್ಷಕ್ಕೆ ಶೆಟ್ಟರ್ ಬಂದಿರುವುದು ಆನೆ ಬಲಬಂದಂತಾಗಿದೆ ಎಂದರು.
ಬಿಜೆಪಿಗೆ ಲಿಂಗಾಯತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವುದೇ ಅಜೆಂಡಾ ಎಂದು ಕಿಡಿಕಾರಿದ ಅವರು, ಪಕ್ಷವನ್ನು ಕಟ್ಟಿಬೆಳೆಸಲು ಹಗಲಿರಳು ಶ್ರಮಿಸಿದವರನ್ನು ಮೂಲೆಗುಂಪು ಮಾಡುವ ಮೂಲಕ ಅಪಮಾನಿಸುತ್ತಿದೆ. ಈ ಮೂಲಕ ಬಿಜೆಪಿಯು ತಾನು ತೋಡುವ ಖೆಡ್ಡಾಕ್ಕೆ ತಾನೇ ಬೀಳಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿ. ಇದನ್ನರಿತು ಈಗಲಾದರೂ ಅನ್ಯರಿಗೆ ಖೆಡ್ಡಾ ತೋಡುವುದನ್ನು ಬಿಟ್ಟು ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದರು.
ವಿಧಾನಸಭಾ ಚುನಾವಣೆ ಹಿನ್ನೆಲೆ: 230 ರೌಡಿಶೀಟರ್ಗಳ ಮನೆ ಮೇಲೆ ಪೊಲೀಸರ ದಾಳಿ: 67 ಮಂದಿಯ ಬಂಧನ
ಹೊಸ ಹುಮ್ಮಸ್ಸು ಹುಟ್ಟಿಸಿದೆ: ಶೆಟ್ಟರ್ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿರುವುದು ಪಕ್ಷದ ಕಾರ್ಯಕರ್ತರು, ನಾಯಕರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಉತ್ತರ ಕರ್ನಾಟಕ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಶೆಟ್ಟರ್ ಅವರ ಅಭಿಮಾನಿಗಳಿದ್ದು, ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಮತ್ತಷ್ಟುಬಲ ಸಿಗಲಿದೆ ಎಂದರು. ದೇಶದ ಪ್ರಗತಿಗೆ ಬಿಜೆಪಿ ಮಾರಕ, ನಾಡಕವಿ ಕುವೆಂಪು, ನಾರಾಯಣಗುರು, ಬಸವಣ್ಣನವರ ಚರಿತ್ರೆ ಕುರಿತು ಪುಸ್ತಕಗಳಿಗೆ ಬಿಜೆಪಿ ಕತ್ತರಿ ಹಾಕುವ ಕಾರ್ಯ ಮಾಡುತ್ತಿದೆ. ಯುವ ಪೀಳಿಗೆಗೆ ಏನು ಸಂದೇಶ ನೀಡಲು ಹೊರಟಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಡಬಲ್ ಎಂಜಿನ್ ಸರ್ಕಾರದಿಂದ ದೇಶದ ಪ್ರಗತಿ ನಿರೀಕ್ಷಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲೆಡೆ ಶೇ. 40ರ ಹಗರಣದ್ದೇ ಮಾತಾಗಿದೆ ಎಂದು ಹೇಳಿದರು.
25 ಸಿಎಂ ಆಕಾಂಕ್ಷಿಗಳು: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ. ಎಲ್ಲ ನಾಯಕರು ಸರ್ವ ಸಮ್ಮತದಿಂದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಶೇ. 40ರ ಹಗರಣದಿಂದಾಗಿ ಬಿಜೆಪಿ ಈ ಬಾರಿ 40 ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಹೀಗಿರುವಾಗ 25ಕ್ಕೂ ಹೆಚ್ಚು ಜನರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿರುವುದು ಹಾಸ್ಯಾಸ್ಪದ. ಒಂದೆಡೆ ಬಿ.ಎಲ್. ಸಂತೋಷ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಿಎಂ ಕುರ್ಚಿ ನನ್ನದೇ ಎಂಬ ಆಲೋಚನೆಯಲ್ಲಿದ್ದರೆ, ಇತ್ತ ಸಿ.ಟಿ. ರವಿ, ಮುರುಗೇಶ ನಿರಾಣಿ, ಶೋಭಾ ಕರಂದ್ಲಾಜೆ ನಾನೂ ಸಿಎಂ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರಲ್ಲಿ ಈ ಬಗ್ಗೆ ಸ್ಪಷ್ಟತೆಯಿದ್ದು, 150ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವುದಾಗಿದ್ದು, ಹೈಕಮಾಂಡ್ ನೀಡಿದ ಮಿಷನ್-150 ಟಾರ್ಗೆಟ್ ಯಶಸ್ವಿಯಾಗಲಿದೆ ಎಂದರು.
ಬಿಜೆಪಿ ನಂದಿನಿ ಹಾಲಿನ ವ್ಯವಸ್ಥೆ ನಾಶಮಾಡಲು ಹೊರಟಿದೆ. 18 ಲಕ್ಷಕ್ಕೂ ಅಧಿಕ ರೈತರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಂದಿನಿ ವಿಲೀನಕ್ಕೆ ಅವಕಾಶ ನೀಡುವುದಿಲ್ಲ. ಕೇಂದ್ರಕ್ಕೆ ಜಿಎಸ್‌ಟಿ ರೂಪದಲ್ಲಿ ಸಾವಿರಾರು ಕೋಟಿ ಹಣ ಹೋಗುತ್ತದೆ. ಆದರೆ, ಕೇಂದ್ರ ರಾಜ್ಯಕ್ಕೆ ರುಪಾಯಿಯಲ್ಲಿ 15ಪೈಸೆಯಷ್ಟುಹಣ ನೀಡುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಜನತೆ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಡಿಕೆಶಿ ವಿರುದ್ಧದ ಐಟಿ, ಇಡಿ ತನಿಖೆ ಬಗ್ಗೆ ಆತಂಕ: ಡಿಕೆಶಿ ನಾಮಪತ್ರ ಓಕೆ ಆದರೆ ಡಿಕೆಸು ವಾಪಸ್?
ಸುರ್ಜೆವಾಲಾ ಸಮಾಲೋಚನೆ: ಈಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಶೆಟ್ಟರ್ ಅವರೊಂದಿಗೆ ಕೆಲಕಾಲ ಸುರ್ಜೇವಾಲಾ ಸಮಾಲೋಚನೆ ನಡೆಸಿದರು. ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ ಪಕ್ಷ ಸಂಘಟನೆ ಕುರಿತು ವಿಚಾರ ವಿನಿಮಯ ಆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಅನೀಲಕುಮಾರ ಪಾಟೀಲ, ಸದಾನಂದ ಡಂಗನವರ, ರಜತ್ ಉಳ್ಳಾಗಡ್ಡಿಮಠ ಸೇರಿದಂತೆ ಹಲವರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.