ಅಮಾವಾಸ್ಯೆ ಲೆಕ್ಕಿಸದೆ ಕಡೆಯ ದಿನ ನಾಮಪತ್ರ: ಕಟ್ಟಾಜಗದೀಶ್‌, ನಾರಾಯಣಸ್ವಾಮಿರಿಂದ ಉಮೇದುವಾರಿಕೆ

By Kannadaprabha NewsFirst Published Apr 21, 2023, 6:21 AM IST
Highlights

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಗುರುವಾರ ನಗರದಲ್ಲಿ ಅಮಾವಾಸೆಯನ್ನು ಲೆಕ್ಕಿಸದೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು. 

ಬೆಂಗಳೂರು (ಏ.21): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಗುರುವಾರ ನಗರದಲ್ಲಿ ಅಮಾವಾಸೆಯನ್ನು ಲೆಕ್ಕಿಸದೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿಯಿಂದ ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಕಟ್ಟಾಜಗದೀಶ್‌, ಬಿಟಿಎಂ ಲೇಔಟ್‌ ಕ್ಷೇತ್ರದಿಂದ ಶ್ರೀಧರ್‌ ರೆಡ್ಡಿ, ಜೆಡಿಎಸ್‌ ಪಕ್ಷದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ವಿ.ನಾರಾಯಣಸ್ವಾಮಿ, ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಅಭ್ಯರ್ಥಿಯಾಗಿ ಕೆ.ಸಿ.ರಾಜಣ್ಣ, ಮಲ್ಲೇಶ್ವರಂ ಕ್ಷೇತ್ರದ ಅಭ್ಯರ್ಥಿಯಾಗಿ ಎ.ಉತ್ಕಷ್‌ರ್‍, ಆಮ್‌ ಆದ್ಮಿ ಪಾರ್ಟಿಯಿಂದ ಬಸವನಗುಡಿ ಕ್ಷೇತ್ರದ ಅಭ್ಯರ್ಥಿಯಾಗಿ ಸತ್ಯಲಕ್ಷ್ಮಿ, ವಿಜಯ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ರಮೇಶ್‌ ಬೆಲ್ಲಂಕೊಂಡ, ದಾಸರಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿ ಕೀರ್ತನ್‌ ಕುಮಾರ್‌ ಮಂಜಪ್ಪ, ಸರ್ವಜ್ಞ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಮಹಮ್ಮದ್‌ ಇಬ್ರಾಹಿಂ ನಾಮಪತ್ರ ಸಲ್ಲಿಸಿದರು.

ಹೆಬ್ಬಾಳ ಕ್ಷೇತ್ರ: ಕಟ್ಟಾಜಗದೀಶ್‌: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಟ್ಟಾಜಗದೀಶ್‌ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಸಂಸದ ಸದಾನಂದಗೌಡ, ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸಾಥ್‌ ನೀಡಿದರು. ಇದಕ್ಕೂ ಸಂಜಯ ನಗರದ ರಾಧಾಕೃಷ್ಣ ದೇವಸ್ಥಾನದಲ್ಲಿ ಕಟ್ಟಾಜಗದೀಶ್‌ ಹಾಗೂ ಅವರ ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿಬಿಐ ರಸ್ತೆಯಿಂದ ಮುನಿರೆಡ್ಡಿಪಾಳ್ಯ ಬಿಬಿಎಂಪಿ ಕಚೇರಿ ವರೆಗೆ ರೋಡ್‌ ಶೋ ನಡೆಸಿದರು. ಈ ರೋಡ್‌ ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡು ಬಿಜೆಪಿ ಹಾಗೂ ಕಟ್ಟಾಜಗದೀಶ್‌ಗೆ ಜೈಕಾರ ಕೂಗಿದರು.

Latest Videos

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ: ಒಟ್ಟು 3632 ಮಂದಿ ಕಣಕ್ಕೆ

ಬಿಟಿಎಂ ಲೇಔಟ್‌: ಶ್ರೀಧರ್‌ ರೆಡ್ಡಿ: ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಧರ್‌ ರೆಡ್ಡಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಕೋರಮಂಗಲದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದರು. ಈ ವೇಳೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಬಿಟಿಎಂ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜೇಂದ್ರ ರೆಡ್ಡಿ, ಬಿಜೆಪಿ ಯುವ ಮೋರ್ಚಾ ಖಜಾಂಚಿ ಅನಿಲ್‌ ಶೆಟ್ಟಿ, ಅಪಾರ ಸಂಖ್ಯೆಯ ಬೆಂಬಲಿಗರು, ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಹಾಗೂ ಮುಖಂಡರು ಸಾಥ್‌ ನೀಡಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಬಳಿಕ ಶ್ರೀಧರ್‌ ರೆಡ್ಡಿ ಅವರು ಕೋರಮಂಗಲದ ಲಕ್ಷ್ಮೇದೇವಿ ಮೈದಾನದಿಂದ ಬೇತಾನಿ ಶಾಲಾವರೆಗೆ ತೆರೆದ ವಾಹನದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಸಾವಿರಾರು ಕಾರ್ಯಕರ್ತರು ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು.

ಆರ್‌.ಆರ್‌.ನಗರ ಕ್ಷೇತ್ರ: ಡಾ.ವಿ.ನಾರಾಯಣಸ್ವಾಮಿ: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಡಾ.ವಿ.ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ರಾಜರಾಜೇಶ್ವರಿ ನಗರ ಕಮಾನು ದ್ವಾರದಿಂದ ಬೈಕ್‌ ಜಾಥಾ, ಪಾದಯಾತ್ರೆ ಮೂಲಕ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದರು. ಬಳಿಕ ತೆರೆದ ವಾಹನದಲ್ಲಿ ಕ್ಷೇತ್ರದ ವಿವಿಧ ರಸ್ತೆಗಳಲ್ಲಿ ರೋಡ್‌ ಶೋ ನಡೆಸಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರ: ರಾಜಣ್ಣ: ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಕೆ.ಸಿ.ರಾಜಣ್ಣ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಕ್ಷೇತ್ರದ ವೃಷಭಾವತಿ ನಗರದ ಅಂಬಾ ಮಹೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಜಿ ಶಾಸಕ ಅಶ್ವತ್‌್ಥ, ಜೆಡಿಎಸ್‌ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ರಮೇಶ್‌ ಗೌಡ, ರಾಜ್ಯ ಜೆಡಿಎಸ್‌ ವಕ್ತಾರ ಎಚ್‌.ಎನ್‌.ದೇವರಾಜ್‌, ಮಾಜಿ ಮೇಯರ್‌ ಭದ್ರೇಗೌಡ, ಮುಖಂಡರಾದ ಯಶೋಧಾ ರಾಜಣ್ಣ, ಚಂದ್ರೇಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರೊಂದಿಗೆ ಭರ್ಜರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು.

ಮಲ್ಲೇಶ್ವರ ಕ್ಷೇತ್ರ: ಎ.ಉತ್ಕಷ್‌: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಎ.ಉತ್ಕಷ್‌ರ್‍ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಮಾರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪ್ಯಾಲೇಸ್‌ ಗುಟ್ಟಹಳ್ಳಿಯಿಂದ ಮಲ್ಲೇಶ್ವರದ ಜಲಮಂಡಳಿ ಸುವರ್ಣಸೌಧದ ವರೆಗೆ ನೂರಾರು ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರು, ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ನಾಮಪತ್ರ ಸಲ್ಲಿಸಿದರು.

ಬಸವನಗುಡಿ ಕ್ಷೇತ್ರ: ಸತ್ಯ ಲಕ್ಷ್ಮೇ: ಬಸವನಗುಡಿ ವಿಧಾಸಭಾ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ಸತ್ಯಲಕ್ಷ್ಮೇ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಬಸವನಗುಡಿಯ ಕಲ್ಯಾಣಿ ರಾಘವೇಂದ್ರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದರು. ಬಳಿಕ ಐದು ಮಂದಿ ಕಾರ್ಯಕರ್ತೆಯರೊಂದಿಗೆ ಚುನಾವಣಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮಾಡಿ ನಂತರ ನಾಮಪತ್ರ ಸಲ್ಲಿಸಿ ಸರಳತೆ ಮೆರೆದರು.

ವಿಜಯನಗರ ಕ್ಷೇತ್ರ: ರಮೇಶ್‌ ಬೆಲ್ಲಂಕೊಂಡ: ವಿಜಯನಗರ ವಿಧಾನಸಭಾ ಕ್ಷೇತ್ರದ ಅಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ರಮೇಶ್‌ ಬೆಲ್ಲಂಕೊಂಡ ಉಮೇದುವಾರಿಕೆ ಸಲ್ಲಿಸಿದರು. ನೂರಾರು ಸಂಖ್ಯೆಯ ಆಪ್‌ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡಿ ವಿಜಯನಗರ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ.ಸತೀಶ್‌ ಕುಮಾರ್‌, ಮುಖಂಡ ಮೋಹನ್‌ ಸೇರಿದಂತೆ ಹಲವರು ಶುಭ ಹಾರೈಸಿ ಸಾಥ್‌ ನೀಡಿದರು.

ದಾಸರಹಳ್ಳಿ ಕ್ಷೇತ್ರ: ಕೀರ್ತನ್‌ ಕುಮಾರ್‌ ಮಂಜಪ್ಪ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕೀರ್ತನ್‌ ಕುಮಾರ್‌ ಮಂಜಪ್ಪ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಬೆಳಗ್ಗೆ ದಾಸರಹಳ್ಳಿಯ ಡಿಫೆನ್ಸ್‌ ಕಾಲೋನಿ ಬಳಿ ಇರುವ ಬಲಮುರಿ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್‌ ಚಡ್ಡಾ, ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ನೂರಾರು ಕಾರ್ಯಕರ್ತರೊಂದಿಗೆ ಬಗಲಗುಂಟೆ ಬಿಬಿಎಂಪಿ ಕಚೇರಿ ವರೆಗೆ ಬೃಹತ್‌ ಮೆರವಣಿಗೆ ನಡೆಸಿ ಬಳಿಕ ನಾಮಪತ್ರ ಸಲ್ಲಿಸಿದರು.

ಡಿಕೆಶಿ ವಿರುದ್ಧದ ಐಟಿ, ಇಡಿ ತನಿಖೆ ಬಗ್ಗೆ ಆತಂಕ: ಡಿಕೆಶಿ ನಾಮಪತ್ರ ಓಕೆ ಆದರೆ ಡಿಕೆಸು ವಾಪಸ್‌?

ಸರ್ವಜ್ಞ ನಗರ ಕ್ಷೇತ್ರ: ಮಹಮ್ಮದ್‌ ಇಬ್ರಾಹಿಮ್‌: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಅಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಮಹಮ್ಮದ್‌ ಇಬ್ರಾಹಿಮ್‌ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿ ಸರ್ವಜ್ಞ ನಗರದ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಇವರಿಗೆ ಪಕ್ಷದ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಸಾಥ್‌ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!