ಕರ್ನಾಟಕದಲ್ಲಿ 40% ಕಮಿಷನ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಪೇಸಿಎಂ ಖ್ಯಾತಿಯ ಬಸವರಾಜ ಬೊಮ್ಮಾಯಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಇನ್ನೊಂದು ಅವಧಿಗೆ ಇವರು ಅಧಿಕಾರಕ್ಕೆ ಬಂದರೆ ರಾಜ್ಯವನ್ನೇ ದಿವಾಳಿ ಮಾಡುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ (ಮಾ.06): ಕರ್ನಾಟಕದಲ್ಲಿ 40% ಕಮಿಷನ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಪೇಸಿಎಂ ಖ್ಯಾತಿಯ ಬಸವರಾಜ ಬೊಮ್ಮಾಯಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಇನ್ನೊಂದು ಅವಧಿಗೆ ಇವರು ಅಧಿಕಾರಕ್ಕೆ ಬಂದರೆ ರಾಜ್ಯವನ್ನೇ ದಿವಾಳಿ ಮಾಡುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಜಿಲ್ಲಾಮಟ್ಟದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರಕ್ಕೆ 40% ಸರ್ಕಾರವೆಂಬ ಹಣೆಪಟ್ಟಿಅಂಟಿಕೊಂಡಿದೆ. ಇಂತ ಪೇ ಸಿಎಂ ಅನ್ನು ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಗೆ ನಾಚಿಕೆ ಆಗಬೇಕು. ಕರ್ನಾಟಕ ಸರ್ಕಾರದ ಕಮಿಷನ್ ಬಗ್ಗೆ ನಾವಲ್ಲ ಹೇಳುವುದು, ಗುತ್ತಿಗೆದಾರರ ಸಂಘದವರೇ ಹೇಳುತ್ತಿದ್ದಾರೆ. ಕಮಿಷನ್ ಕುರಿತು ಮೋದಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಎಲ್ಲ ಗೊತ್ತಿದ್ದರೂ ಮೋದಿ ಈ ಕುರಿತು ಯಾವುದೇ ಚಕಾರ ಎತ್ತುತ್ತಿಲ್ಲ. ಗುತ್ತಿಗೆದಾರರ ಪತ್ರಕ್ಕೆ ಉತ್ತರ ನೀಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೂ ಬರಲ್ಲ, ಹಣ, ಅಕ್ಕಿ, ವಿದ್ಯುತ್ ಇಲ್ಲ: ಸಚಿವ ಎಂಟಿಬಿ ನಾಗರಾಜ್
ಪ್ರಾಣ ವಾಪಸ್ ಬರುತ್ತದೆಯೆ: ಸರ್ಕಾರಕ್ಕೆ ಕಮಿಷನ್ ಕೊಡಲಾಗದೆ ಸಂತೋಷ್ ಪಾಟೀಲ್, ರಾಜೇಂದ್ರನ್ ಸೇರಿದಂತೆ ಸಾಕಷ್ಟುಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಆದರೂ ಬಿಜೆಪಿಯವರ ಕಮಿಷನ್ ದಾಹ ನೀಗಿಲ್ಲ. ಇವರಿಂದಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬಂದವು. ಬಿಜೆಪಿಗೆ ಗುತ್ತಿಗೆದಾರರಿಂದ ಎಷ್ಟುಕಮಿಷನ್ ಬರಬೇಕೋ ನಾವು ಜನರೇ ಸೇರಿಸಿ ಕೊಟ್ಟು ಬಿಡೋಣ. ಗಂಡನನ್ನು ಕಳದುಕೊಂಡ ಹೆಂಡತಿಗೆ ಇವರು ಮರಳಿ ಗಂಡನನ್ನು, ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ ಮತ್ತೆ ತಂದೆಯನ್ನು ತಂದು ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.
ಮಠದ ಹಣಕ್ಕೂ ಕಮಿಷನ್: ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಎಲ್ಲದಕ್ಕೂ ಇವರು ಕಮಿಷನ್, ಲಂಚ ಕೇಳುತ್ತಾರೆ. ಪಿಎಸ್‌ಐ ಹಗರಣ, ಅಧ್ಯಾಪಕರು, ಸಹಾಯಕರ ರಿಜಿಸ್ಟರ್ ಸೇರಿದಂತೆ ಎಲ್ಲ ನೌಕರರಿಗೂ ಲಂಚ ನೀಡಬೇಕು. ಇದೀಗ ಪೌರಕಾರ್ಮಿಕರ ನೇಮಕಾತಿಗೂ ಲಂಚ ಕೇಳುತ್ತಿದ್ದಾರೆ. ಗುತ್ತಿಗೆದಾರರು ಬಿಡಿ ಇವರು ಮಠಗಳನ್ನು ಬಿಟ್ಟಿಲ್ಲ. ಮಠಕ್ಕೆ ನೀಡುವ ಹಣಕ್ಕೂ 30% ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಕುರಿತು ಸ್ವಾಮೀಜಿಯೊಬ್ಬರು ಆರೋಪಿಸಿರುವುದು ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ವ್ಯವಹಾರ ಎಷ್ಟುಆಳವಾಗಿದೆ ಎಂದು ತೋರಿಸುತ್ತದೆ.
ಕೆಎಸ್‌ಆರ್‌ಡಿಎಲ್ ಹಗರಣದಲ್ಲಿ ಶಾಸಕರ ಪುತ್ರನೊಬ್ಬ ಭಾಗಿಯಾಗಿದ್ದು, ಲಂಚದ ವ್ಯವಹಾರವನ್ನು ಇಡೀ ದೇಶವೇ ನೋಡಿದೆ.ಎಲ್ಲಕ್ಕೂ ಸಾಕ್ಷಿ ಕೇಳುವ ಅಮಿತ್ ಶಾಗೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು. ಡಬ್ಬಲ್ ಎಂಜಿನ್ ಸರ್ಕಾರದ ಅವಧಿಯಲ್ಲಿ ಎಲ್ಲ ಬೆಲೆಗಳು ದುಬಾರಿಯಾಗಿವೆ. ಮೋದಿ ರಾಜ್ಯ ಪ್ರವಾಸ ಮಾಡಿ ರೋಡ್ ಶೋ ನಡೆಸಿ ನಂತರ ದೆಹಲಿಗೆ ತೆರಳಿ ಗ್ಯಾಸ್ ಬೆಲೆ ಎಚ್ಚಿಸಿದರು. ಮೋದಿ ಹಾಗೂ ಬಸವರಾಜು ಬೊಮ್ಮಾಯಿ ಮಾರುಕಟ್ಟೆಗೆ ಹೋಗಿ ಎಣ್ಣೆ, ಬೇಳೆ ಖರೀದಿ ಮಾಡಿದ್ದರೆ ಜನರ ಕಷ್ಟಏನು ಗೊತ್ತಾಗುತ್ತಿತ್ತು ಎಂದು ಕಿಡಿಕಾರಿದರು.
ಜೆಡಿಎಸ್ ಎ ಟೂ ಝೆಡ್ ಟೀಂ: ರಾಜ್ಯದಲ್ಲಿರುವ ಜೆಡಿಎಸ್ ಬಿಜೆಪಿಯ ಬಿ ಟೀಂ ಮಾತ್ರವಲ್ಲ ಅದು ಎ ಟು ಜೆಡ್ ಟೀಂ. ಜೆಡಿಎಸ್ ಕಾಲಕಾಲಕ್ಕೆ ಬಿಜೆಪಿ ತೊಡೆ ಮೇಲೆ ಕೂರುತ್ತದೆ. ಬೇಕೆಂದಾಗ ಬಿಜೆಪಿ ಪರ ನಿಲ್ಲುತ್ತದೆ. ಜೆಡಿಎಸ್ ಬೆಂಬಲಿಸಿದರೆ ಅದು ಬಿಜೆಪಿಯನ್ನು ಬೆಂಬಲಸಿದಂತೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಹಿರಿಯ ನಾಯಕ ಎಂಬ ಕಾರಣಕ್ಕೆ ರಾಜ್ಯಸಭೆ ಚುನಾವಣೆಯಲ್ಲಿ ನಾವು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಬೆಂಬಲಿಸಿದೆವು. ಆದರೆ ಇವರು ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದರು. ಕರ್ನಾಟಕದ ಮಹಿಳೆ ಮಾರ್ಗರೇಟ್ ಆಳ್ವಾರನ್ನು ಉಪ ರಾಷ್ಟ್ರಪತಿಗೆ ನಿಲ್ಲಿಸಿದಾಗ ಅವರು ಬಿಜೆಪಿ ಪರ ನಿಂತರು.
ರಾಜ್ಯಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಅವರನ್ನು ಸೋಲಿಸಿದರು. ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಪರ ನಿಂತು ಜೆಡಿಎಸ್ ಏನು ಮಾಡಿದೆ ಎಂದು ಎಲ್ಲರೂ ನೋಡಿದ್ದಾರೆ. ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ, ಮಹಿಳೆಯರ ಖಾತೆ 2 ಸಾವಿರ ಹಣ ನೀಡುವ ಗ್ಯಾರೆಂಟಿ ಕಾರ್ಡ್ ನೀಡುತ್ತಿದೆ. ಕಾಂಗ್ರೆಸ್ ಆಡಳಿತಕ್ಕೆ ಬಂದ ಮರುತಿಂಗಳಿನಿಂದ ಯೋಜನೆ ಜಾರಿಯಾಗಲಿದೆ. ಇದನ್ನು ಮನೆಮನೆಗೆ ತಲುಪಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದರು. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ರಾಮನಗರ ಜಿಲ್ಲೆಯ ಜನತೆ ಕೆಂಗಲ್ ಹನುಮಂತಯ್ಯ,ರಾಮಕೃಷ್ಣ ಹೆಗಡೆ, ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಿ ಸಿಎಂ ಮಾಡಿದೆ.
ಈ ಬಾರಿ ಜಿಲ್ಲೆಯಲ್ಲಿ ನಾಲ್ಕೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಈ ಬಾರಿ ಜಿಲ್ಲೆಯ ಮಗ ಡಿ.ಕೆ.ಶಿವಕುಮಾರ್ ಉನ್ನತ ಹುದ್ದೆ ಅಲಂಕರಿಸಲು ನೆರವಾಗಿ ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಜೆಡಿಎಸ್ ಪಂಚತಂತ್ರ ಯಾತ್ರೆ ನಡೆಸಿದೆ. ಇನ್ನೊಬ್ಬರು ವಿಜಯ ಸಂಕಲ್ಪ ಯಾತ್ರೆ ಹೊರಟಿದ್ದಾರೆ. ಆದರೆ, ಕಾಂಗ್ರಸ್ ಜನರಿಗೆ ಉತ್ತಮ ಕಾರ್ಯಕ್ರಮ ನೀಡಬೇಕೆಂದು ಪ್ರಜಾಧ್ವನಿ ನಡೆಸಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಸಿಡಿಯಿಂದಾಗಿ ಮಾನ ಹೋಗಿದೆ. ಪ್ರತಿನಿತ್ಯ ಒಂದಲ್ಲ ಒಂದು ಹಗರಣ ನಡೆಯುತ್ತಿದೆ.
ಬಿಜೆಪಿ ಅಧಿಕಾರಕ್ಕೆ ಕನಕಪುರ ಮತದಾರರು ಮುನ್ನುಡಿ ಬರೆಯಿರಿ: ಸಚಿವ ಅಶೋಕ್
ನೆಹರು ಕಾಲದಿಂದ ಬಡವರು, ಹೆಂಗಸರನ್ನು ಗಮನದಲ್ಲಿಟ್ಡುಕೊಂಡು ಕಾರ್ಯಕ್ರಮ ನೀಡುವುದು ಕಾಂಗ್ರೆಸ್ ಮಾತ್ರ. ಮತಕ್ಕಾಗಿ ನಾವು ಕಾರ್ಯಕ್ರಮ ನೀಡುವುದಿಲ್ಲ. ಜನರ ಹಿತಕ್ಕಾಗಿ ಕಾರ್ಯಕ್ರಮ ನೀಡಿದ್ದೇವೆ ಎಂದರು. ಕಾರ‍್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಲಿಂಗಪ್ಪ, ಎಸ್.ರವಿ, ಎಐಸಿಸಿ ಕಾರ‍್ಯದರ್ಶಿ ಅಭಿಷೇಕ್ ದತ್, ಮಾಜಿ ಶಾಸಕಾರದ ಎಚ್,ಸಿ,ಬಾಲಕೃಷ್ಣ, ಕೆ.ರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್, ಕಾಂಗ್ರೆಸ್ ಮುಖಂಡರಾದ ದುಂತೂರು ವಿಶ್ವನಾಥ್, ಇಕ್ಬಾಲ್ ಹುಸೇನ್, ಪ್ರಸನ್ನಗೌಡ, ಪ್ರಮೋದ್, ಸುನೀಲ್ ಉಪಸ್ಥಿತರಿದ್ದರು.
ಬಿಜೆಪಿ ಕಮಿಷನ್ ನಿಲ್ಲಿಸಿದರೆ ಸಾಕು: ರಾಜ್ಯದ ಬಜೆಟ್ 3 ಲಕ್ಷ ಕೋಟಿ ಇದೆ. ಇದರಲ್ಲಿ ಬಿಜೆಪಿಯವರು ಶೇ.40 ರಷ್ಟುಕಮಿಷನ್ ಹೊಡೆಯುತ್ತಿದೆ. ಇವರ ಪರ್ಸೆಂಟೇಜ್‌ಗೆ ಬೊಕ್ಕಸದ 1.20 ಲಕ್ಷ ಕೋಟಿ ಹಣ ಬಿಜೆಪಿಯವರ ಮನೆ ಸೇರುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು. ಕಾಂಗ್ರೆಸ್ ಭರವಸೆಗೆ ಹಣ ಎಲ್ಲಿಂದ ಬರುತ್ತದೆ ಎಂದು ವಿರೋಧ ಪಕ್ಷಗಳವರು ಕೇಳುತ್ತಾರೆ. ಕಾಂಗ್ರೆಸ್ ಪಕ್ಷದ ಜನಪರ ಕಾರ‍್ಯಕ್ರಮಗಳಿಗೆ ಸುಮಾರು 30 ಸಾವಿರ ಕೋಟಿ ಸಾಕು. ಬಿಜೆಪಿಯವರ ಈ ಕಮಿಷನ್ ಹಣ ನಿಲ್ಲಿಸಿದರೆ ಸಾಕು ನಾವು ನಮ್ಮ ಭರವಸೆ ಈಡೇರಿಸಲು. ನಮ್ಮನ್ನು ಗೆಲ್ಲಿಸಿದರೆ ನಮ್ಮ ಪ್ರಣಾಳಿಕೆಯನ್ನು ನೂರಕ್ಕೆ ನೂರಷ್ಟುಜಾರಿಗೆ ತರುತ್ತೇವೆ. ಕರ್ನಾಟಕದ ಗ್ಯಾರಂಟಿ ಮುಂದೆ ಇಡೀ ದೇಶದಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದು ವಾಗ್ದಾನ ಮಾಡಿದರು.