ಎರಡುವರೆ ಲಕ್ಷ ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟಿದೆ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ

By Suvarna News  |  First Published Jun 16, 2021, 4:13 PM IST

* ಮಾಜಿ ಸಚಿವ ಎಚ್‌ಕೆ ಪಾಟೀಲ್ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ 
* ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟಿದ್ಯಾ ರಾಜ್ಯ ಸರ್ಕಾರ?
* ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ


ಬೆಂಗಳೂರು, (ಜೂ.16): ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎರಡುವರೆ ಲಕ್ಷ ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು (ಬುಧವಾರ) ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿಯಿಂದ ಇಂದಿನಿವರೆಗೂ ಕೊರೋನಾದಿಂದ 33,033 ಜನ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Latest Videos

undefined

ಲಭ್ಯ ಇರುವ ಮಾಹಿತಿಯ ಪ್ರಕಾರ ರಾಜ್ಯಲ್ಲಿ ಜನವರಿಂದ ಜೂನ್ ತಿಂಗಳವರೆಗೆ ಒಟ್ಟು 3,27,985 ಸಾವುಗಳು ಸಂಭವಿಸಿವೆ ಎಂದು ಸರ್ಕಾರವೇ ತಿಳಿಸಿದೆ. ಕೋವಿಡ್ ನಿಂದ ಮೃತ ಪಟ್ಟವರ ಸಂಖ್ಯೆ 33 ಸಾವಿರ ಮಾತ್ರವಾದರೆ, ಉಳಿದ 3 ಲಕ್ಷ ಸಹಜ ಸಾವುಗಳಾಗಿವೆಯೇ ಎಂದು ಪ್ರಶ್ನಿಸಿದರು.

ಕೊರೋನಾ ವೈರಾಣು ಬಾರದಂತೆ ತಡೆಯಲು ಹೊಸ ಔಷಧಿ

ಕೊರೋನಾ ಆರಂಭವಾದ ನಂತರ ಡೆತ್ ಆಡಿಟ್ ಮಾಹಿತಿಯನ್ನು ಹಾಗೂ ಅಂಕಿ ಅಂಶಗಳು ಬಹಿರಂಗವಾಗದಂತೆ ಸರ್ಕಾರ ತಡೆ ಹಿಡಿದಿದೆ. ನಮ್ಮ ಬಳಿ 2018-19ರ ಜನವರಿಯಿಂದ ಜೂನ್ ವರೆಗ 88 ಸಾವಿರ ಸಾವುಗಳಾಗಿದ್ದವು. ಈ ವರ್ಷ 3.27 ಲಕ್ಷಕ್ಕೂ ಹೆಚ್ಚಿನ ಸಾವುಗಳಾಗಿವೆ. ಸರ್ಕಾರದ ಮಾಹಿತಿಯನ್ನು ಅವಲೋಕಿಸಿದರೆ ಎರಡುವರೆ ಲಕ್ಷಕ್ಕೂ ಹೆಚ್ಚಿನ ಸಾವುಗಳ ಸಂಖ್ಯೆಯನ್ನು ಸರ್ಕಾರ ಮುಚ್ಚಿಟ್ಟಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು. 

ಇದು ಮನುಷ್ಯತ್ವದ ಲಕ್ಷಣ ಅಲ್ಲ. ಜನರಿಗೆ ಯಾಕೆ ಮೋಸ ಮಾಡುತ್ತಿದ್ದಾರೆ. ಪರಿಹಾರ ಪಡೆಯಲು ಮೃತ ಪಟ್ಟ ಕುಟುಂಬಗಳನ್ನು ವಂಚಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

2019-20ರ ನಂತರ ಮರಣದ ಮಾಹಿತಿಯನ್ನು ಪ್ರಕಟಿಸುವುದನ್ನೇ ನಿಲ್ಲಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಪಾರದರ್ಶಕವಾಗಿರಬೇಕಿತ್ತು. ಆದರೆ ಸರ್ಕಾರ ಅದನ್ನು ಮಾಡದೆ ಮುಚ್ಚಿಟ್ಟು ಮೋಸ ಮಾಡಿದೆ. ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಸರ್ಕಾರಇಂತಹ ಅಪರಾಧಿ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.

ಸರ್ಕಾರ ಸಾವಿನ ಸತ್ಯ ಮುಚ್ಚಿಟ್ಟು ಸುಳ್ಳಿನ ಗೋಪುರ ಕಟ್ಟುತ್ತಿದೆ. ಅದನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮತ್ತು ವಾಸ್ತವಿಕ ಮಾಹಿತಿಯ ಶ್ವೇತಪತ್ರವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 81289 ಮಕ್ಕಳಿಗೆ ಶೇ.8ರಷ್ಟು ಕೊರೋನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 45 ಸಾವಿರ ಮಕ್ಕಳು ಸೋಂಕಿತರಾಗಿದ್ದರು. ಅವರಲ್ಲಿ ಶೇ.2ರಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ. ಮೂರನೇ ಅಲೆ ಮಕ್ಕಳ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳಿವೆ. ಸರ್ಕಾರ ಕೂಡಲೇ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ವಿಧಾನಸಭೆಯ ಅನೇಕ ಸಮಿತಿಗಳು ಕೆಲಸ ಮಾಡಲು ಅವಕಾಶ ನೀಡದಂತೆ ಸಭಾಧ್ಯಕ್ಷರು ತಡೆ ನೀಡಿದ್ದಾರೆ. ನಾವು ಒತ್ತಡ ಹಾಕಿದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ನಾವು ಸಭೆ ನಡೆಸಿ ಸಲ್ಲಿಸಿದ ವರದಿಯನ್ನು ಶಾಸನ ಸಭೆಯಲ್ಲಿ ಮಂಡಿಸದೆ ಮುಚ್ಚಿಡಲಾಗುತ್ತಿದೆ. ಇದು ದುರಂತ. ಭ್ರಷ್ಟಚಾರ ವ್ಯಾಪಕವಾಗಿದೆ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ವರದಿಯನ್ನು ಬಹಿರಂಗ ಮಾಡಿ, ಸಮಿತಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.

ಸಂಪುಟ ಸಭೆ ನಡೆಯುತ್ತಿದೆ, ಪಕ್ಷ ಸಭೆಗಳು ನಡೆಯುತ್ತಿವೆ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಯಾಕೆ ಸಭೆ ನಡೆಸಬಾರದು. ಭ್ರಷ್ಟಚಾರ ಹೊರ ಬರುತ್ತದೆ ಎಂಬ ಕಾರಣಕ್ಕೆ ಕೆಲಸ ಮಾಡಲು ಅಡ್ಡಿ ಪಡಿಸಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 1600 ವೆಂಟಿಲೆಟರ್ ಗಳು ಈಗಲೂ ದಾಸ್ತಾನಿನಲ್ಲಿ ಕೊಳೆಯುತ್ತಾ ಬಿದ್ದಿವೆ. ಪಿಎಂ ಕೇರ್ಸ್ ನಿಂದ ಕಳುಹಿಸಿದ ವೆಂಟಿಲೇಟರ್ ಡಬ್ಬಾಗಳು ದಾಸ್ತಾನಿನಲ್ಲಿ ಇರುವುದು ಅನ್ಯಾಯಯ ಪರಮಾವಧಿಯಾಗಿದೆ ಎಂದರು.

ಕೋವಿಡ್ ಸಂಕಷ್ಟ ಕಾಲದಲ್ಲಿ ಬಿಜೆಪಿಯಲ್ಲಿ ನಾಯಕತ್ವ ಚರ್ಚೆಯಾಗುತ್ತಿದೆ. ಇದು ಜನ ವಿರೋಧಿ ಕೃತ್ಯ, ಸಂಕಷ್ಟ ಕಾಲದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು ರಾಜಕೀಯರಲ್ಲಿ ಮುಳಗುವ ಮುಳಗಿರುವ ಬಿಜೆಪಿಗೆ ರಾಜ್ಯಕ್ಕೆ ಶಾಪವಾಗಿದೆ. ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

click me!