ಅರುಣ್ ಸಿಂಗ್ ರಾಜ್ಯ ಪ್ರವಾಸ, ಬಿಜೆಪಿ ಬಿಕ್ಕಟ್ಟು ಶಮನಕ್ಕೆ ಇಂದಿನಿಂದ ಸರಣಿ ಸಭೆ!

By Kannadaprabha News  |  First Published Jun 16, 2021, 11:02 AM IST

* ಬಿಜೆಪಿ ಬಿಕ್ಕಟ್ಟು ಶಮನಕ್ಕೆ ಇಂದಿನಿಂದ ಸರಣಿ ಸಭೆ

* 3 ದಿನ ಶಾಸಕರು, ಸಚಿವರ ಜತೆ ಉಸ್ತುವಾರಿ ಅರುಣ್‌ ಸಿಂಗ್‌ ಚರ್ಚೆ

* 20ಕ್ಕೂ ಹೆಚ್ಚು ಶಾಸಕರಿಂದ ಪಕ್ಷದ ಕಚೇರಿಯಲ್ಲಿ ಹೆಸರು ನೋಂದಣಿ


ಬೆಂಗಳೂರು(ಜೂ.16): ನಾಯಕತ್ವ ಬದಲಾವಣೆ ಬಗ್ಗೆ ಕೆಲವರು ನೀಡುತ್ತಿರುವ ಹೇಳಿಕೆ, ರಾಜ್ಯ ಸರ್ಕಾರದ ವರ್ಚಸ್ಸು ಹೆಚ್ಚಿಸುವುದು ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಬುಧವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಶಾಸಕರು ಹಾಗೂ ಸಚಿವರೊಂದಿಗೆ ಮುಖಾಮುಖಿ ಚರ್ಚಿಸುವ ಮೂಲಕ ಅಭಿಪ್ರಾಯ ಸಂಗ್ರಹಿಸಲಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸರ್ಕಾರದ ದೃಷ್ಟಿಯಿಂದ ಈ ಮೂರು ದಿನಗಳ ಸರಣಿ ಸಭೆ ಮಹತ್ವದ್ದಾಗಿದ್ದು, ಇದರ ಆಧಾರದ ಮೇಲೆಯೇ ಪ್ರಸಕ್ತ ನಾಯಕತ್ವದ ಬಗ್ಗೆ ಉದ್ಭವಿಸಿರುವ ಗೊಂದಲಗಳಿಗೂ ಸ್ಪಷ್ಟತೆ ಸಿಗಲಿದೆ ಎಂದು ತಿಳಿದು ಬಂದಿದೆ.

Tap to resize

Latest Videos

undefined

ಬುಧವಾರ ಮಧ್ಯಾಹ್ನ ದೆಹಲಿಯಿಂದ ಆಗಮಿಸುವ ಅರುಣ್‌ ಸಿಂಗ್‌ ಅವರು ಸಂಜೆ ಮೊದಲಿಗೆ ಎಲ್ಲ ಸಚಿವರ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಸಚಿವರ ಸಾಧನೆಗಳ ಪರಾಮರ್ಶೆಯೂ ಮಾಡಲಿದ್ದಾರೆ. ಜತೆಗೆ ಹಲವು ಸಲಹೆ ಸೂಚನೆಗಳನ್ನೂ ನೀಡಲಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಉಪಸ್ಥಿತರರಿಲಿದ್ದಾರೆ.

ಎರಡನೆಯ ದಿನವಾದ ಗುರುವಾರ ಅರುಣ್‌ ಸಿಂಗ್‌ ಇಡೀ ದಿನ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಈ ಸಭೆಯೇ ಅತ್ಯಂತ ಮುಖ್ಯವಾದದ್ದು. ಪ್ರತಿಯೊಬ್ಬ ಶಾಸಕರು ನೇರವಾಗಿ ಸಿಂಗ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ರಾತ್ರಿವರೆಗೆ ಸುಮಾರು 20 ಶಾಸಕರು ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಲು ಇಚ್ಛೆ ವ್ಯಕ್ತಪಡಿಸಿ ಪಕ್ಷದ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಬುಧವಾರದ ಹೊತ್ತಿಗೆ ಈ ಸಂಖ್ಯೆ ಮತ್ತಷ್ಟುಹೆಚ್ಚಲಿದೆ. ನೋಂದಣಿ ಪ್ರತಿಯೊಬ್ಬ ಶಾಸಕರಿಗೂ ಯಾವ ಸಮಯಕ್ಕೆ ಪಕ್ಷದ ಕಚೇರಿಗೆ ಆಗಮಿಸಿ ಭೇಟಿ ಮಾಡಬೇಕು ಎಂಬುದನ್ನು ತಿಳಿಸಲಾಗಿರುತ್ತದೆ. ಶಾಸಕರ ಸಂಖ್ಯೆ ಹೆಚ್ಚಾದಲ್ಲಿ ಕಾಲಾವಕಾಶ ವಿಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಪರ ಹಾಗೂ ವಿರೋಧದ ಅಭಿಪ್ರಾಯ ಹೊಂದಿರುವ ಶಾಸಕರ ನೇತೃತ್ವ ವಹಿಸಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ದಾಖಲಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎಂಬ ಕುತೂಹಲಕರ ಅಂಶವೂ ಬೆಳಕಿಗೆ ಬಂದಿದೆ.

ಅನೇಕ ಶಾಸಕರು ದೆಹಲಿಗೆ ತೆರಳಿ ಸರ್ಕಾರದ ನಾಯಕತ್ವ ಮತ್ತು ಕಾರ್ಯವೈಖರಿ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದರಿಂದ ಅಂತಿಮವಾಗಿ ವರಿಷ್ಠರು ಅರುಣ್‌ ಸಿಂಗ್‌ ಅವರನ್ನು ಕಳುಹಿಸುವ ನಿರ್ಧಾರ ಕೈಗೊಂಡಿತು. ಆ ಪ್ರಕಾರ ಅರುಣ್‌ ಸಿಂಗ್‌ ಅವರು ಖುದ್ದಾಗಿ ಆಗಮಿಸಿ ಶಾಸಕರ ಅಹವಾಲು ಸ್ವೀಕರಿಸಲಿದ್ದಾರೆ.

ಮೂರನೆಯ ದಿನವಾದ ಶುಕ್ರವಾರ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರೊಂದಿಗೆ ಅರುಣ್‌ ಸಿಂಗ್‌ ಸಭೆ ನಡೆಸಲಿದ್ದಾರೆ. ಅಂತಿಮವಾಗಿ ಸಂಜೆ ರಾಜ್ಯದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ನಡೆಸಲಿದ್ದಾರೆ. ಬಳಿಕ ರಾತ್ರಿ ಅವರು ದೆಹಲಿಗೆ ವಾಪಸಾಗಲಿದ್ದಾರೆ.

ದೆಹಲಿಗೆ ತೆರಳಿ ರಾಜ್ಯದಲ್ಲಿ ಮೂರು ದಿನಗಳ ಕಾಲ ಸಂಗ್ರಹಿಸಿದ ಅಹವಾಲು, ಅಭಿಪ್ರಾಯಗಳನ್ನು ಒಳಗೊಂಡ ವಿಸ್ತೃತ ವರದಿಯನ್ನು ವರಿಷ್ಠರಿಗೆ ನೀಡಲಿದ್ದಾರೆ. ಇದನ್ನು ಮುಂದಿಟ್ಟುಕೊಂಡು ನಾಯಕತ್ವ ಸೇರಿದಂತೆ ಇತರ ಬದಲಾವಣೆಗಳ ಬಗ್ಗೆ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

click me!