ಅಭದ್ರತೆ ಕಾಡಿದಾಗಷ್ಟೇ ಬಿಜೆಪಿಗೆ ದೇಶಪ್ರೇಮ: ಆಯನೂರು ಮಂಜುನಾಥ್

By Kannadaprabha NewsFirst Published Feb 14, 2024, 11:30 PM IST
Highlights

ಮೇಕೆದಾಟು ಯೋಜನೆ, ಮಹದಾಯಿ ಯೋಜನೆ,ವಿಐಎಸ್ ಐಎಲ್ ಕಾರ್ಖಾನೆ, ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಹಾಗೂ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮೌನವಾಗಿರುವ ಬಿಜೆಪಿ ನಾಯಕರಲ್ಲಿ ಸಮಾಜಘಾತುಕ, ಉದ್ರೇಕದಿಂದ ಮಾತನಾಡುವ ದೇಶಭಕ್ತಿ ಮುಗಿಲು ಮುಟ್ಟಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಿಡಿಕಾರಿದರು. 
 

ಶಿವಮೊಗ್ಗ (ಫೆ.14): ಮೇಕೆದಾಟು ಯೋಜನೆ, ಮಹದಾಯಿ ಯೋಜನೆ,ವಿಐಎಸ್ ಐಎಲ್ ಕಾರ್ಖಾನೆ, ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಹಾಗೂ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮೌನವಾಗಿರುವ ಬಿಜೆಪಿ ನಾಯಕರಲ್ಲಿ ಸಮಾಜಘಾತುಕ, ಉದ್ರೇಕದಿಂದ ಮಾತನಾಡುವ ದೇಶಭಕ್ತಿ ಮುಗಿಲು ಮುಟ್ಟಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೆಲವು ದಿನಗಳಿಂದ ಸಂಸದ ಡಿ.ಕೆ.ಸುರೇಶ್ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವ್ಯಕ್ತಮಾಡಿದ್ದಾರೆ. ಅವರ ಬಾಯ್ತಪ್ಪಿನಿಂದ ಬಂದ ಒಂದು ಪದವನ್ನು ಇಟ್ಟುಕೊಂಡು ರಾಷ್ಟ್ರಪ್ರೇಮ ಮೆರೆಯುತ್ತಿರುವ ಬಿಜೆಪಿ ನಾಯಕರು ಅವರ ಒಳ್ಳೆಯ ಉದ್ದೇಶವನ್ನು ಗಮನಿಸಿಲ್ಲ. ರಾಜ್ಯಕ್ಕೆ ಆದ ಅನ್ಯಾಯವನ್ನು ಹೇಳುವುದು ತಪ್ಪಾ? ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಒಂದು ಪೈಸೆ ಬರಗಾಲದ ಪರಿಹಾರ ಸಿಕ್ಕಿಲ್ಲ. ಬಿಜೆಪಿಯವರಿಗೆ ಯಾವಾಗ ರಾಜಕೀಯ ಅಭದ್ರತೆ ಕಾಡುತ್ತೋ ಆಗ ಇಂತಹ ಹೇಳಿಕೆ ನೀಡುತ್ತಾರೆ. ಬಿಜೆಪಿಯವರು ಇಂತಹ ಹೇಳಿಕೆ ನೀಡಿ ತಾವು ಇರುವಿಕೆ ತೋರಿಸುತ್ತಾರೆ. ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದರೂ ಬಿಜೆಪಿ ಯಾವ ಎಂಪಿಯೂ ಪ್ರಶ್ನೆ ಮಾಡಿಲ್ಲ. ರಾಜ್ಯದಲ್ಲಿ ಬಲಗಾಲವಿದ್ದರೂ ಕೇಂದ್ರ ಸರ್ಕಾರ ಒಂದು ಪೈಸೆಯು ಬರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡಿನ ಪರ ನಿಲುವು ತಾಳಿದ್ದ ಕೇಂದ್ರ ಸರ್ಕಾರ ಕನ್ನಡಿಗರ ಹಿತಕಾಪಾಡುವಲ್ಲಿ ವಿಫಲವಾಗಿದೆ. 

ರಾಷ್ಟ್ರದ್ರೋಹಿ ಹೇಳಿಕೆ: ಈಶ್ವರಪ್ಪನವರ ಮಾತಿಗೆ ಅಪಾರ್ಥ ಕಲ್ಪಿಸಲಾಗುತ್ತಿದೆ: ಬಿ.ಎಸ್‌.ಯಡಿಯೂರಪ್ಪ

ಕೇಂದ್ರ ಗೃಹ ಅಮಿತ್ ಶಾ ಬೆಳಗಾವಿ ಪ್ರವಾಸ ಮಾಡಿ ರಾಜ್ಯಕ್ಕೆ ಒಂದು ಪೈಸೆ ಪರಿಹಾರ ನೀಡಿಲ್ಲ. ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಅಮಿತ್ ಶಾ ಗೆ ಮಾಜಿ ಸಿಎಂ ಯಡಿ ಯೂರಪ್ಪ ಅವರು ಪತ್ರ ಬರೆದಿದ್ದಾರೆ. ಅಮಿತ್ ಶಾ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದ್ದಾರೆ. ಇದು ಕೇವಲ ನಾಟಕೀಯ ಪತ್ರ ವ್ಯವಹಾರ ನಡೆಸಿದ್ದಾರೆ ಎಂದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್ ಅವರಿಗೆ ಸೇಲಂ ಪ್ಲಾಂಟ್ ಬಗ್ಗೆ ಇರುವ ಪ್ರೀತಿ ವಿಐಎಸ್ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಯಾಕಿಲ್ಲ. ಸೇಲಂ ಪ್ಲಾಂಟ್ ಗೆ 1500 ಕೋಟಿ ರು. ಹೂಡಿಕೆ ಮಾಡಿದ್ದಾರೆ. ಆದರೆ, ಭದ್ರಾವತಿಯ ವಿಐಎಸ್ ಐಎಲ್ ಕಾರ್ಖಾನೆಗೆ ಹೂಡಿಕೆ ಮಾಡಿಲ್ಲ ಎಂದು ಆಪಾದಿಸಿದರು.

ಸಂಶೋಧನಾ ಕೇಂದ್ರ ಯಾಕಿಲ್ಲ: ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗಾರರ ಸಮಾವೇಶ ನಡೆಸಿದ ಬಿಜೆಪಿಯವರು ಅಮಿತ್ ಶಾ ಮೂಲಕ ಅಡಕೆ ಸಂಶೋಧನಾ ಕೇಂದ್ರ ತೆರೆಯುವುದಾಗಿ ಪ್ರಕಟಿಸಿದ್ದರು. ಇಲ್ಲಿಯವರೆಗೆ ಪ್ರಾರಂಭವಾಗಿಲ್ಲ ಯಾಕೆ? ಇದು ಅಡಕೆ ಬೆಳೆಗಾರರಿಗೆ ಮೋಸ ಮಾಡಿದ ಹಾಗಲ್ಲವೇ ಎಂದರು. ತುಮಕೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ದಿನಕ್ಕೆ 25 ಕಿ.ಮೀ. ನಡೆಯುತ್ತಿದ್ದೆ ಅಂತ ಸಂಸದರು ಹೇಳಿಕೆ ನೀಡುತ್ತಿದ್ದಾರೆ. ದಿನಕ್ಕೆ 25 ಕಿಮೀ ಕಾಮಗಾರಿ ನಡೆಯುತ್ತಿದ್ದರೆ ಯಾಕೆ ವಿಳಂಬವಾಗುತ್ತಿದೆ. ಭದ್ರಾವತಿ ನಗರದ ಪ್ರೈಓವರ್ ಕಾಮಗಾರಿ ವಿಳಂಬವಾಗುತ್ತಿದೆ ಯಾಕೆ. ಶಿವಮೊಗ್ಗದ ಫ್ಲೈಓವರ್ ಬೇಗ ಕಾಮಗಾರಿ ಮುಗಿಸಲು ಬಿಜೆಪಿ ನಾಯಕರ ಅಸ್ತಿ ಇರುವುದು ಕಾರಣ ಎಂದು ಕುಟುಕಿದರು.

ಈಶ್ವರಪ್ಪಗೆ ಟಾಂಗ್‌: ದೇಶ ವಿಭಜನೆ ಹೇಳಿಕೆ ನೀಡಿದವರನನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ತಪ್ಪು. ಸಮಾಜದಲ್ಲಿ ಬೆಂಕಿ ಹಚ್ಚುವ ಉದ್ರೇಕಕಾರಿ ಹೇಳಿಕೆ ನೀಡ ಬಾರದು. ಒಂದೊಮ್ಮೆ ಮೋದಿಯವರು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತಂದರೇ ಕೇವಲ ಮೊದಲು ಸಮಾಜಘಾತುಕ ಉದ್ರೇಕದಿಂದ ಮಾತನಾಡುವವರೇ ಬಲಿಯಾಗುತ್ತಾರೆ ಎಂದು ಕೆ.ಎಸ್‌.ಈಶ್ವರಪ್ಪ ಅವರಿಗೆ ಟಾಂಗ್‌ ನೀಡಿದರು. ಪದೇ, ಪದೇ ಡಿ.ಕೆ.ಶಿವಕುಮಾರ್‌ಗೆ ಜೈಲಿಗೆ ಹೋಗಿ ಬಂದವರು ಎಂದು ಹೇಳುವ ಮೂಲಕ ಈಶ್ವರಪ್ಪ ಅವರು ತಮ್ಮ ನಾಯಕನಿಗೆ ತಿವಿಯುತ್ತಿದ್ದಿದ್ದಾರೆ. ಅವರಿಗೆ ಧೈರ್ಯ ಇದ್ದರೆ ನೇರವಾಗಿ ಅವರ ನಾಯಕನಿಗೆ ಜೈಲಿಗೆ ಹೋಗಿ ಬಂದವರು ಎಂದು ಹೇಳಲಿ. ಅದನ್ನ ಬಿಟ್ಟು ಡಿ.ಕೆ. ಶಿವಕುಮಾರ್ ಅವರ ಹೆಗಲ ಮೇಲೆ ಬಂದೂಕಿಟ್ಟು ಅವರ ನಾಯಕನಿಗೆ ಟ್ರಿಗರ್ ಮಾಡುತ್ತಿದ್ದಾರೆ ಎಂದು‌ ಕುಟುಕಿದರು.

ದೇಶದ ವಿಚಾರವಾಗಿ ನೂರು ನೋಟಿಸ್ ಬಂದರೂ ತಲೆಕೆಡಿಸಿಕೊಳ್ಳಲ್ಲ: ಕೆ.ಎಸ್.ಈಶ್ವರಪ್ಪ ಕಿಡಿ

ಮೋದಿ ಮತ ಕೇಳುವ ಒಂದು ಮುಖವಾಡ: ಒಂದು ಕಡೆ ಮೋದಿ, ಮತ್ತೊಂದು ಕಡೆ ರಾಮನ ಮುಖ ಇಟ್ಟುಕೊಂಡು ಮತ ಕೇಳುತ್ತೇವೆ ಅಂತಾ ಹೊರಟಿದ್ದಾರೆ. ನಾವು ರಾಮಮಂದಿರವನ್ನು ಸ್ವಾಗತಿಸುತ್ತೇವೆ. ಮೋದಿ ಮತ ಕೇಳುವ ಒಂದು ಮುಖವಾಡ ಅಷ್ಟೆ. ಮೋದಿ ಮುಖದ ಮುಖವಾಡ ಹಾಕಿಕೊಂಡು ಮತ ಕೇಳುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಖರ್ಗೆಯವರ ಹೊಟ್ಟೆಯಲ್ಲಿ ಕೆಟ್ಟ ಹುಳು ಹುಟ್ಟಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಲಿಗೆ ಮೇಲೆ ಹಿಡಿತ ಇರಬೇಕು. ಇವರ ಮಕ್ಕಳ ಬಗ್ಗೆ ನಾವೇನು ಹೇಳ ಬೇಕು. ಡಿ.ಕೆ.ಸುರೇಶ್ ರೀತಿ ನನಗೆ ಹೇಳಿದ್ದರೆ ಅದನ್ನು ಸಾಬೀತು ಪಡಿಸುವವರೆಗೂ ನಾನು ಬಿಡುತ್ತಿರಲಿಲ್ಲ. ಕೋರ್ಟಿನ ಕಟೆಕಟೆ ಹತ್ತಿಸಿ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೆ ಎಂದು ಹೇಳಿದರು.

click me!