Karnataka assembly election: ಕೋಟೆ ನಾಡಲ್ಲಿ ಬಿಜೆಪಿಗೆ ಕೈ, ಜೆಡಿಎಸ್‌ ಸವಾಲು

By Kannadaprabha NewsFirst Published Dec 1, 2022, 12:05 AM IST
Highlights

 ಮಧ್ಯ ಕರ್ನಾಟಕದ ಚಿತ್ರದುರ್ಗ, ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಹೆಸರಾಗಿತ್ತು. ಜನತಾ ಪರಿವಾರ ಆಗೊಮ್ಮೆ, ಈಗೊಮ್ಮೆ ಕೋಟೆಯೊಳಗೆ ನುಸುಳುವ ಪ್ರಯತ್ನ ಮಾಡಿತ್ತಾದರೂ ಪೂರ್ಣ ಪ್ರಮಾಣದ ಬಾವುಟ ಹಾರಿಸಲು ಸಾಧ್ಯವಾಗಿರಲಿಲ್ಲ. ಆದರೀಗ ಕಾಂಗ್ರೆಸ್‌Üನ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡು, ಕಮಲ ಅರಳಿದೆ.

ಚಿತ್ರದುರ್ಗ ಜಿಲ್ಲಾ ಟಿಕೆಟ್‌ ಫೈಟ್‌

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ಡಿ.1) : ಮಧ್ಯ ಕರ್ನಾಟಕದ ಚಿತ್ರದುರ್ಗ, ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಹೆಸರಾಗಿತ್ತು. ಜನತಾ ಪರಿವಾರ ಆಗೊಮ್ಮೆ, ಈಗೊಮ್ಮೆ ಕೋಟೆಯೊಳಗೆ ನುಸುಳುವ ಪ್ರಯತ್ನ ಮಾಡಿತ್ತಾದರೂ ಪೂರ್ಣ ಪ್ರಮಾಣದ ಬಾವುಟ ಹಾರಿಸಲು ಸಾಧ್ಯವಾಗಿರಲಿಲ್ಲ. ಆದರೀಗ ಕಾಂಗ್ರೆಸ್‌Üನ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡು, ಕಮಲ ಅರಳಿದೆ.

ಜಿಲ್ಲೆಯಲ್ಲಿ ಪರಿಶಿಷ್ಟರ ಸಂಖ್ಯೆ ಜಾಸ್ತಿಯಿರುವುದರಿಂದ ಹಾಲಿ ಇರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಮೀಸಲು, ಉಳಿದ ಮೂರು ಸಾಮಾನ್ಯ ಕ್ಷೇತ್ರಗಳಾಗಿವೆ. ಕ್ಷೇತ್ರ ಪುನರ್‌ ವಿಂಗಡಣೆ ನಂತರ ಮೊಳಕಾಲ್ಮೂರು, ಚಳ್ಳಕೆರೆ ಪರಿಶಿಷ್ಟಪಂಗಡಕ್ಕೆ ಹಾಗೂ ಹೊಳಲ್ಕೆರೆ ಪರಿಶಿಷ್ಟಜಾತಿಗೆ ಮೀಸಲಾಗಿವೆ. ಚಿತ್ರದುರ್ಗ, ಹೊಸದುರ್ಗ, ಹಿರಿಯೂರು ಸಾಮಾನ್ಯ ಕ್ಷೇತ್ರಗಳಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ಹೊರತುಪಡಿಸಿ ಉಳಿದ ಐದು ಕಡೆ ಬಿಜೆಪಿ ಪ್ರಾಬಲ್ಯ ಸ್ಥಾಪಿಸಿತ್ತು. ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ಗೀಗ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡಿದೆ.

Karnataka assembly election: ಟಿಕೆಟ್‌ಗಾಗಿ ಎಲ್ಲ ಪಕ್ಷಗಳಲ್ಲೂ ಗುದ್ದಾಟ

ಚಿತ್ರದುರ್ಗ: ತಿಪ್ಪಾರೆಡ್ಡಿ ವಿರುದ್ಧ ಕಾಂಗ್ರೆಸ್ಸಲ್ಲಿ 5 ಮಂದಿ ಅರ್ಜಿ

ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿಯವರು ರಾಜಕೀಯ ಪ್ರವೇಶ ಮಾಡಿದಾಗಿನಿಂದ ಒಮ್ಮೆ ಮಾತ್ರ ಸೋತಿದ್ದಾರೆ. ಉಳಿದಂತೆ ಆರು ಬಾರಿ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಹನುಮಲಿ ಷಣ್ಮುಖಪ್ಪ ಅವರನ್ನು ಸೋಲಿಸಿದ್ದ ತಿಪ್ಪಾರೆಡ್ಡಿಗೆ ಕಾಂಗ್ರೆಸ್‌ನಿಂದ ಈ ಬಾರಿ ಎದುರಾಳಿ ಯಾರು ಎಂಬ ಪ್ರಶ್ನೆ ಎದುರಾಗಿದೆ. ಹನುಮಲಿ ಷಣ್ಮುಖಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಘು ಆಚಾರ್‌, ಮುರುಘಾಶ್ರೀ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಸ್‌.ಕೆ.ಬಸವರಾಜನ್‌, ಮರುಳಾರಾಧ್ಯ, ಉದ್ಯಮಿ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಜೆಡಿಎಸ್‌ನಿಂದಲೂ ವೀರೇಂದ್ರ ಪಪ್ಪಿ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಿಂದ ತಿಪ್ಪಾರೆಡ್ಡಿ ಹೊರತಾಗಿ ದಾವಣಗೆರೆ ಎಂಪಿ ಸಿದ್ದೇಶ್ವರ ಅವರ ಪುತ್ರ ಅನಿತ್‌ ಹೆಸರು ಚರ್ಚೆಯಾಗುತ್ತಿದೆ.

ಹೊಳಲ್ಕೆರೆ: ಚಂದ್ರಪ್ಪ ವಿರುದ್ಧ ಕಣಕ್ಕೆ ಆಂಜನೇಯ ತಯಾರಿ

ಪರಿಶಿಷ್ಟಸಮುದಾಯಕ್ಕೆ ಮೀಸಲಾಗಿರುವ ಹೊಳಲ್ಕೆರೆ ಕ್ಷೇತ್ರವನ್ನು ಎಂ.ಚಂದ್ರಪ್ಪ ಪ್ರತಿನಿಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ 40 ಸಾವಿರ ಮತಗಳ ಆಸುಪಾಸಿನಲ್ಲಿ ಎಚ್‌.ಆಂಜನೇಯ ಅವರನ್ನು ಮಣಿಸಿದ್ದ ಚಂದ್ರಪ್ಪ ಮತ್ತ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಆಂಜನೇಯ, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಘಟಕದ ರಾಜ್ಯಾಧ್ಯಕ್ಷ ಹಾಗೂ ಡಿಕೆಶಿ ಆಪ್ತ ಜಿ.ಎಸ್‌.ಮಂಜುನಾಥ್‌, ಜಿಪಂ ಮಾಜಿ ಸದಸ್ಯೆಸವಿತಾ ಹಾಗೂ ಆಕೆಯ ಪತಿ ರಘು ಹಾಗೂ ಲಿಡ್ಕರ್‌ ಮಾಜಿ ಅಧ್ಯಕ್ಷ ಓ.ಶಂಕರ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಹೊಸದುರ್ಗದಲ್ಲಿ ಗಾಳಿ-ಗೂಳಿ ಹೋರಾಟ ಪಕ್ಕಾ

ಹೊಸದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿಯ ಗೂಳಿಹಟ್ಟಿಶೇಖರ್‌ ಮತ್ತು ಕಾಂಗ್ರೆಸ್‌ನ ಗಾಳಿ ಗೋವಿಂದಪ್ಪ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಗಳಿವೆ. ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆದ್ದಿಲ್ಲ ಎಂಬ ಪ್ರತೀತಿಯಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಗೋವಿಂದಪ್ಪ, ಗೂಳಿಹಟ್ಟಿಶೇಖರ್‌ ನಡುವಿನ ಕಾದಾಟಕ್ಕೆ ಹೊಸದುರ್ಗ ಸಾಕ್ಷಿಯಾಗಿತ್ತು. ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟಸಮುದಾಯಕ್ಕೆ ಸೇರಿದ ಗೂಳಿಹಟ್ಟಿಶೇಖರ್‌ ಗೆಲ್ಲುತ್ತಿರುವುದು ಜಾತಿ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ವಿವಿ ಸಾಗರ ಜಲಾಶಯ ಹೊಸದುರ್ಗಕ್ಕೆ ಸೇರಿದ್ದು ಎಂಬ ವಿಷಯ ಮುಂದಿಟ್ಟುಕೊಂಡು ಭಾವನಾತ್ಮಕ ಆಟ ಶುರುವಿಟ್ಟುಕೊಂಡಿರುವ ಗೂಳಿಹಟ್ಟಿಶೇಖರ್‌, ಬಿಜೆಪಿಯ ತಾಲೂಕು ಘಟಕದಲ್ಲಿ ಒಂದಿಷ್ಟುಅಪಸ್ವರಗಳನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಗೋವಿಂದಪ್ಪ ಕೂಡ ಗೂಳಿಯೊಂದಿಗೆ ಗುದ್ದಾಟಕ್ಕೆ ರೆಡಿಯಾಗಿದ್ದಾರೆ. ಉಳಿದಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಅನಂತ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್‌ ಕೂಡಾ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಹಿರಿಯೂರರಲ್ಲಿ ಪೂರ್ಣಿಮಾ ವಿರುದ್ಧ ದೇವೇಗೌಡರ ಪುತ್ರ?

ಒಕ್ಕಲಿಗರು, ಯಾದವರು, ಮಾದಿಗ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರ ಪುನರ್‌ ವಿಂಗಡಣೆ ನಂತರ ಸಾಮಾನ್ಯ ಕ್ಷೇತ್ರವಾಗಿದೆ. ಪಕ್ಕದ ಚಳ್ಳಕೆರೆಯಿಂದ ಬಂದು ಡಿ.ಸುಧಾಕರ್‌ ಇಲ್ಲಿ ಎರಡು ಬಾರಿ ಗೆದ್ದಿದ್ದರು. ಯಾದವ ಸಮುದಾಯದ ಕೃಷ್ಣಪ್ಪ, ಜನತಾದಳದಿಂದ ಸ್ಪರ್ಧಿಸಿ ಇಲ್ಲಿ ಸೋಲುಂಡ ಬಳಿಕ ನಡೆದ ಚುನಾವಣೆಯಲ್ಲಿ ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್‌ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದರು. ಕ್ಷೇತ್ರದಲ್ಲಿ ತಮ್ಮ ಸಮುದಾಯದ ಹತ್ತು ಮತಗಳನ್ನೂ ಹೊಂದಿರದ ಡಿ.ಸುಧಾಕರ್‌ ಅವರ ಹ್ಯಾಟ್ರಿಕ್‌ ಗೆಲುವಿಗೆ ತಣ್ಣೀರೆರಚಿದ್ದ ಪೂರ್ಣಿಮಾ, ಈ ಬಾರಿಯೂ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಉಳಿದಂತೆ ಕಾಂಗ್ರೆಸ್‌ನಿಂದ ಸುಧಾಕರ್‌ ಟಿಕೆಟ್‌ ಬಯಸಿದ್ದಾರೆ. ಜೊತೆಗೆ, ಕಳೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಸೋಲುಂಡ ಬಿ.ಸೋಮಶೇಖರ್‌, ಇಲ್ಲಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ.

Karnataka assembly election: ಕಾಂಗ್ರೆಸ್‌ನಲ್ಲಿ ಸಿಎಂ ಪೈಪೋಟಿ ಕಾಮಿಡಿ ಶೋ; ರಾಜು ಗೌಡ ವ್ಯಂಗ್ಯ

ಜೆಡಿಎಸ್‌ನಿಂದ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ, ನಿವೃತ್ತ ಇಂಜಿನಿಯರ್‌ ರವೀಂದ್ರಪ್ಪ ಟಿಕೆಟ್‌ಗಾಗಿ ದೇವೇಗೌಡರ ಮನೆ ಎಡತಾಕುತ್ತಿದ್ದಾರೆ. ಈ ನಡುವೆ, ದೇವೇಗೌಡರ ಮತ್ತೋರ್ವ ಪುತ್ರ ಬಾಲಕೃಷ್ಣ ಅವರನ್ನು ಹಿರಿಯೂರಿನಿಂದ ಕಣಕ್ಕಿಳಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಾಲಕೃಷ್ಣ ಅಭ್ಯರ್ಥಿಯಾದಲ್ಲಿ ಎಲ್ಲ ವೈಮನಸ್ಸು ತೊರೆದು ಒಕ್ಕಲಿಗರು ಒಂದಾಗುತ್ತಾರೆ ಎಂಬ ನಂಬಿಕೆಯಿದೆ.

ಚಳ್ಳಕೆರೆಯಲ್ಲಿ ರಘು ವಿರುದ್ಧ ನಟ ಶಶಿಕುಮಾರ್‌ ಸ್ಪರ್ಧೆ ಸಾಧ್ಯತೆ

ಚಳ್ಳಕೆರೆ ವಿಧಾನಸಭೆ ಕ್ಷೇತ್ರ ಪರಿಶಿಷ್ಟಪಂಗಡಕ್ಕೆ ಮೀಸಲಾಗಿದ್ದು, ಸದ್ಯಶಾಸಕ ಕಾಂಗ್ರೆಸ್‌ ರಘುಮೂರ್ತಿ ಹೊರತುಪಡಿಸಿ ಕಾಂಗ್ರೆಸ್‌ನಿಂದ ಬೇರೆ ಯಾರೂ ಟಿಕೆಟ್‌ ಆಕಾಂಕ್ಷಿಗಳಿಲ್ಲ. ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿ ಕೆಲಸಗಳನ್ನು ಅತ್ಯಂತ ಜಾಣ್ಮೆಯಿಂದ ನಿರ್ವಹಿಸಿಕೊಂಡು ಹೋಗುತ್ತಿರುವ ರಘುಮೂರ್ತಿ, ಇತ್ತೀಚೆಗೆ ನಡೆದ ರಾಹುಲ್‌ ಪಾದಯಾತ್ರೆಯನ್ನು ಸಮರ್ಥವಾಗಿ ನಿಭಾಯಿಸಿದ್ದನ್ನು ಗಮನಿಸಿದರೆ ಬೇರೊಬ್ಬರು ಕೈ ಅಭ್ಯರ್ಥಿಯಾಗಿ ಇಲ್ಲಿಂದ ಕಣಕ್ಕಿಳಿಯುವುದು ಕಷ್ಟ. ಜೆಡಿಎಸ್‌ನಿಂದ ರವೀಶ್‌ ಎಂಬುವರು ಮತ್ತೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಇನ್ನು, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಮಾಜಿ ಸಂಸದ ಹಾಗೂ ಚಿತ್ರನಟ ಶಶಿಕುಮಾರ್‌, ಚಳ್ಳಕೆರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಂತಿದೆ. ಹಿಂದೊಮ್ಮೆ ಇದೇ ಕ್ಷೇತ್ರದಲ್ಲಿ ಕೇವಲ 250 ಮತಗಳ ಅಂತರದಿಂದ ರಘುಮೂರ್ತಿ ವಿರುದ್ಧ ಸೋಲುಂಡಿದ್ದ ಶಶಿಕುಮಾರ್‌ ಮತ್ತೆ ಎಂಟ್ರಿಯಾಗುವ ಲಕ್ಷಣಗಳಿವೆ.

ಮೊಳಕಾಲ್ಮುರಲ್ಲಿ ಮತ್ತೆ ರಾಮುಲು ಸ್ಪರ್ಧಿಸ್ತಾರಾ?

ಕಳೆದ ಬಾರಿ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಚಿವರಾಗಿದ್ದ ಬಿ.ಶ್ರೀರಾಮುಲು, ಈ ಬಾರಿ ಮತ್ತೆ ರೇಷ್ಮೆ ನಾಡಿನಿಂದ ಸ್ಪರ್ಧಿಸುವರಾ ಎಂಬ ಬಗ್ಗೆ ಖಚಿತ ವರ್ತಮಾನಗಳು ಕಾಣಿಸುತ್ತಿಲ್ಲ. ಬಳ್ಳಾರಿಯತ್ತ ಹೆಚ್ಚು ಚಿತ್ತ ಹರಿಸಿರುವ ಅವರು, ಕಳೆದ ಆರು ತಿಂಗಳ ಅವಧಿಯಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಮೀಸಲು ಪ್ರಮಾಣ ಹೆಚ್ಚಳ ಮಾಡಿರುವುದನ್ನು ಟ್ರಂಪ್‌ ಕಾರ್ಡ್‌ ಆಗಿ ಇಟ್ಟುಕೊಂಡು ಇದೀಗ ಮತ್ತೆ ಮೊಳಕಾಲ್ಮುರು ಆಸುಪಾಸಿನಲ್ಲಿ ಸುಳಿದಾಡುತ್ತಿದ್ದಾರೆ. ಹಿಂದೊಮ್ಮೆ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದ ತಿಪ್ಪೇಸ್ವಾಮಿ ಇದೀಗ ಪ್ರತಿ ಹಂತದಲ್ಲೂ ಶ್ರೀರಾಮುಲು ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಕಳೆದ ಚುನಾವಣೆಯಲ್ಲಿ ಸೋತಿದ್ದ ಡಾ.ಯೋಗೀಶ್‌, ಮಾಜಿ ಶಾಸಕ ತಿಪ್ಪೇಸ್ವಾಮಿ, ಪ್ರಭಾಕರ್‌ ಟಿಕೆಟ್‌ ಬಯಸಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ಗಾಗಿ ಡಾ.ಯೋಗೀಶ್‌ ಮತ್ತು ತಿಪ್ಪೇಸ್ವಾಮಿ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಹಾಲಿ ಬಲಾಬಲ

  • ಕ್ಷೇತ್ರ-06
  • ಬಿಜೆಪಿ-05
  • ಕಾಂಗ್ರೆಸ್‌-01
click me!