Karnataka assembly election: ಟಿಕೆಟ್‌ಗಾಗಿ ಎಲ್ಲ ಪಕ್ಷಗಳಲ್ಲೂ ಗುದ್ದಾಟ

ಗದಗ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜ ಪ್ರಬಲವಾಗಿದ್ದು, ಕುರುಬ, ಎಸ್ಸಿ-ಎಸ್ಟಿ, ಬಣಜಿಗ ಸಮುದಾಯಗಳೂ ಅಪಾರ ಬಲ ಹೊಂದಿವೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಿರಹಟ್ಟಿಮೀಸಲು ಕ್ಷೇತ್ರವಾಗಿದ್ದರೂ ಅಲ್ಲೂ ಪಂಚಮಸಾಲಿ ಸಮುದಾಯವೇ ನಿರ್ಣಾಯಕ.

Fight in all parties to get tickets assembly election at gadag rav

ಶಿವಕುಮಾರ ಕುಷ್ಟಗಿ

ಗದಗ (ನ.29) : ಭೌಗೋಳಿಕವಾಗಿ ಅತ್ಯಂತ ಚಿಕ್ಕ ಜಿಲ್ಲೆಯಾಗಿದ್ದರೂ ರಾಜಕೀಯ ಇತಿಹಾಸದಲ್ಲಿ ಸಾಕಷ್ಟುಮೈಲುಗಲ್ಲು ಸ್ಥಾಪಿಸಿದ್ದು ಗದಗ ಜಿಲ್ಲೆಯ ರಾಜಕೀಯ ಹಿರಿಮೆ. ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್‌.ಪಾಟೀಲ್‌, ಉಪನಾಳ ಗೂಳಪ್ಪ, ಎಸ್‌.ಆರ್‌.ಪಾಟೀಲ್‌, ಡಿ.ಆರ್‌.ಪಾಟೀಲ್‌ ಅವರಂಥ ಮುತ್ಸದ್ದಿಗಳಿಂದಾಗಿ ರಾಜ್ಯವೇ ಗುರುತಿಸಿದ ರಾಜಕಾರಣ ಕಂಡಿದೆ. ರಾಜಕೀಯ ಇತಿಹಾಸ ಅವಲೋಕಿಸಿದಾಗ ಕಾಂಗ್ರೆಸ್‌ ಹೆಚ್ಚಿನ ಬಾರಿ ಅಧಿಕಾರ ನಡೆಸಿದ ದಾಖಲೆ ಇದೆ. ಆದರೆ, ಪ್ರಸ್ತುತ ಬಿಜೆಪಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಕಾಂಗ್ರೆಸ್‌ನಲ್ಲಿ ಮಹಾರಾಷ್ಟ್ರ ಉಸ್ತುವಾರಿ, ಹಾಲಿ ಶಾಸಕ ಎಚ್‌.ಕೆ. ಪಾಟೀಲ, ಬಿಜೆಪಿಯಿಂದ ಹಾಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಪ್ರಮುಖ ನಾಯಕರಾಗಿದ್ದಾರೆ.

ಗದಗ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜ ಪ್ರಬಲವಾಗಿದ್ದು, ಕುರುಬ, ಎಸ್ಸಿ-ಎಸ್ಟಿ, ಬಣಜಿಗ ಸಮುದಾಯಗಳೂ ಅಪಾರ ಬಲ ಹೊಂದಿವೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಿರಹಟ್ಟಿಮೀಸಲು ಕ್ಷೇತ್ರವಾಗಿದ್ದರೂ ಅಲ್ಲೂ ಪಂಚಮಸಾಲಿ ಸಮುದಾಯವೇ ನಿರ್ಣಾಯಕ.

Karnataka Assembly Election: ಬಂಡಾಯದ ನೆಲದಲ್ಲಿ ಚುನಾವಣೆ ರಂಗು

1.ಗದಗ: ಎಚ್‌.ಕೆ. ಪಾಟೀಲಗೆ ಹಿಂದುತ್ವ ಸವಾಲು

ಜಿಲ್ಲಾ ಕೇಂದ್ರವಾದ ಗದಗ ವಿಧಾನಸಭಾ ಕ್ಷೇತ್ರದ ಇತಿಹಾಸ ಅವಲೋಕಿಸಿದಾಗ ಕಾಂಗ್ರೆಸ್‌ ಗಟ್ಟಿಪ್ರಾಬಲ್ಯ ಹೊಂದಿದ್ದು, ಕೇವಲ ಮೂರು ಬಾರಿ ಮಾತ್ರ ಕಾಂಗ್ರೆಸ್ಸೇತರರು ಜಯಗಳಿಸಿದ್ದಾರೆ. ಒಮ್ಮೆ ಬಿಜೆಪಿ, ಎರಡು ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದ್ದು, ಉಳಿದೆಲ್ಲಾ ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಗದಗ ಕ್ಷೇತ್ರದ ಫಲಿತಾಂಶ ನಿರ್ಧಾರವಾಗುವುದು ಲಿಂಗಾಯತ ಮತಗಳ ಮೇಲೆ. ಅದರಲ್ಲೂ ಪಂಚಮಸಾಲಿ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಇವರೊಟ್ಟಿಗೆ ಬಣಜಿಗ, ಗಾಣಿಗ ಸೇರಿ ಲಿಂಗಾಯತ ಒಳ ಪಂಗಡಗಳು ಒಟ್ಟಿಗೆ ಸೇರಿದಲ್ಲಿ ಆ ಪಕ್ಷಕ್ಕೆ ಗೆಲುವು ನಿಶ್ಚಿತ. ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ, ಹಿರಿಯ ಕಾಂಗ್ರೆಸ್‌ ನಾಯಕ ಎಚ್‌.ಕೆ. ಪಾಟೀಲ, ಬಲರಾಮ ಬಸವಾ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

ಬಿಜೆಪಿಯಲ್ಲಿ ಈಗಾಗಲೇ ಎಚ್‌.ಕೆ.ಪಾಟೀಲ ವಿರುದ್ಧ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಿಂದ ಸೋತಿರುವ ಬಣಜಿಗ ಸಮುದಾಯದ ಅನಿಲ ಮೆಣಸಿನಕಾಯಿ ಅವರಿಗೆ ಟಿಕೆಟ್‌ ಅಂತಿಮವಾಗುವ ಸಾಧ್ಯತೆ ಇದೆ. ವಿಜಯಕುಮಾರ ಗಡ್ಡಿ, ರಾಜು ಕುರುಡಗಿ ಕೂಡಾ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ ಇಲ್ಲಿ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದು, ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಲಿಂಗಾಯತ ಮತ್ತು ಮರಾಠಾ ಎಸ್‌ಎಸ್‌ಕೆ ಸಮುದಾಯದ ಮತಗಳು ಮತ್ತು ಹಿಂದುತ್ವ ಇಲ್ಲಿ ಬಹಳ ಪ್ರಬಲವಾಗಿ ಕೆಲಸ ಮಾಡುತ್ತದೆ. ಆಮ್‌ ಆದ್ಮಿ, ಜೆಡಿಎಸ್‌ ಇಲ್ಲಿ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿವೆ.

2.ನರಗುಂದ: ಆಂತರಿಕ ಬೇಗುದಿಯೇ ಕಾಂಗ್ರೆಸ್‌ಗೆ ಹಿನ್ನಡೆ

ಬಂಡಾಯದ ನಾಡು, ಎಂಬತ್ತರ ದಶಕದ ರಾಜ್ಯದ ರೈತ ಚಳವಳಿಗೆ ನಾಂದಿ ಹಾಡಿದ ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಹಿಂದಿನ ಚುನಾವಣೆಗಳಲ್ಲಿ ಸಮಬಲದಲ್ಲಿ ಹೋರಾಡಿ ಒಮ್ಮೆ ಕಾಂಗ್ರೆಸ್‌, ಒಮ್ಮೆ ಬಿಜೆಪಿ ಸಮಬಲದ ಗೆಲುವು ಸಾಧಿಸಿವೆ. ಇದು ಪಂಚಮಸಾಲಿ ಸಮುದಾಯದ ಪ್ರಬಲ ಹಿಡಿತ ಹೊಂದಿರುವ ಕ್ಷೇತ್ರವಾಗಿದ್ದು, ಲಿಂಗಾಯತ ಒಳ ಪಂಗಡಗಳ ಮತಗಳೆಲ್ಲ ಒಗ್ಗೂಡಿದಲ್ಲಿ ಅವರೇ ನಿರ್ಣಾಯಕ. ಹಾಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೊರತುಪಡಿಸಿದರೆ ಬಿಜೆಪಿಯಲ್ಲಿ ಮತ್ಯಾರೂ ಈವರೆಗೂ ಟಿಕೆಟ್‌ ಕೇಳಿಲ್ಲ. ಕಾಂಗ್ರೆಸ್‌ನ ಮಾಜಿ ಸಚಿವ ಹಿರಿಯ ಕಾಂಗ್ರೆಸಿಗ ಬಿ.ಆರ್‌.ಯಾವಗಲ್ಲ ಮುಂಚೂಣಿಯಲ್ಲಿದ್ದರೂ, ಡಾ.ಸಂಗಮೇಶ ಕೊಳ್ಳಿ, ದಶರಥ ಗಾಣಿಗೇರ, ಪ್ರಕಾಶ ಕರಿ ಸೇರಿ 6ಕ್ಕೂ ಹೆಚ್ಚು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷಾಂತರವಿಲ್ಲದಿದ್ದರೂ ಕಾಂಗ್ರೆಸ್‌ನ ಆಂತರಿಕ ಬೇಗುದಿ ಯಾವುದೇ ಕ್ಷಣದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಇನ್ನು ಆಮ್‌ ಆದ್ಮಿ ಮತ್ತು ಜೆಡಿಎಸ್‌ ಇಂದಿಗೂ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿವೆ.

3.ರೋಣ: ಕಳಕಪ್ಪ ಬಂಡಿಗೆ ಟಿಕೆಟ್‌ ಅನುಮಾನ?

ರಾಜ್ಯದಲ್ಲಿಯೇ ಹೆಚ್ಚಿನ ರಾಜಕೀಯ ಪ್ರಜ್ಞೆಯ ಕ್ಷೇತ್ರ ಎಂದು ಗುರುತಿಸಿಕೊಂಡು ಸತತವಾಗಿ ಯಾರನ್ನೂ, ಯಾವ ಪಕ್ಷವನ್ನು ಆಯ್ಕೆ ಮಾಡದೇ ಪ್ರತಿ ಚುನಾವಣೆಯಲ್ಲೂ ವಿಶಿಷ್ಟತೆ ಕಾಯ್ದುಕೊಂಡು ಬಂದ ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸಮಬಲದ ಶಕ್ತಿಯನ್ನು ಹೊಂದಿವೆ. ಇತಿಹಾಸದಲ್ಲಿ ಕಾಂಗ್ರೆಸ್‌ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಬಿಜೆಪಿಯ ಹಾಲಿ ಶಾಸಕ ಕಳಕಪ್ಪ ಬಂಡಿ ಮೊತ್ತೊಮ್ಮೆ ಟಿಕೆಟ್‌ ಕೇಳಿದ್ದಾರೆ. ಆದರೆ, ಈಚೆಗೆ ಗದಗ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಕಳಕಪ್ಪ ಬಂಡಿ ಅವರಿಗೆ ಜನರೇ ಟಿಕೆಟ್‌ ಬೇಡ ಎನ್ನುತ್ತಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸಿದ್ದಾರೆ. ಇದರಿಂದಾಗಿ ಇನ್ನುಳಿದ ಆಕಾಂಕ್ಷಿಗಳಾದ ರವಿ ದಂಡಿನ ಮುಂತಾದವರಲ್ಲಿ ಉತ್ಸಾಹ ಹೆಚ್ಚಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಪಾಟೀಲ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಇಲ್ಲಿ ಬೆಂಗಳೂರು ಮೂಲದ ಆನೇಕಲ್‌ ದೊಡ್ಡಯ್ಯ ಎನ್ನುವವರು ಭಾರೀ ತಯಾರಿ ನಡೆಸಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರ ಕೊರತೆ ಎದುರಿಸುತ್ತಿದೆ. ಪಕ್ಷಕ್ಕಾಗಿ ಹಗಲು ರಾತ್ರಿ ದುಡಿಯುವ ಉತ್ತಮ ಕಾರ್ಯಕರ್ತರ ಪಡೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಹೊಂದಿದ್ದು, ಇದು ಅಭ್ಯರ್ಥಿಗಳ ಚುನಾವಣೆ ಎನ್ನುವುದಕ್ಕಿಂತ ಕಾರ್ಯಕರ್ತರ ನಡುವಿನ ಫೈಟ್‌ ಎನ್ನುವ ರೀತಿಯಲ್ಲಿ ಇಲ್ಲಿ ಚುನಾವಣೆ ನಡೆಯುತ್ತದೆ.

Ticket Fight: ಘಟಾನುಘಟಿಗಳ ಪೈಪೋಟಿಗೆ ಸಜ್ಜಾಗುತ್ತಿದೆ ಮೈಸೂರು ಜಿಲ್ಲೆ

4.ಶಿರಹಟ್ಟಿ: ಲಮಾಣಿ ಮತ್ತೆ ಕಣಕ್ಕಿಳಿಯುತ್ತಾರಾ?

ಶಿರಹಟ್ಟಿಮೀಸಲು ಕ್ಷೇತ್ರದಲ್ಲಿ ಎಸ್ಸಿ ಮತ್ತು ಎಸ್ಟಿ, ಲಂಬಾಣಿ ಸಮುದಾಯಗಳು ಹೆಚ್ಚು ಪ್ರಬಲವಾಗಿವೆ. ಆದರೆ, ಇವುಗಳಿಗೆ ಸಮನಾದ ಮತಗಳನ್ನು ಲಿಂಗಾಯತ, ಕುರುಬ ಸಮುದಾಯ ಹೊಂದಿವೆ. ಹಾಗಾಗಿ, ಈ ಕ್ಷೇತ್ರದಲ್ಲಿ ಜಾತಿ ಸಮೀಕರಣದಿಂದಲೇ ಪ್ರತಿ ಬಾರಿಯೂ ಬಿಜೆಪಿ, ಕಾಂಗ್ರೆಸ್‌ ಸತತವಾಗಿ ಗೆಲುವು- ಸೋಲುಗಳನ್ನು ಕಾಣುತ್ತಲೇ ಬಂದಿವೆ. ಬಿಜೆಪಿಯಲ್ಲಿ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಅದರಲ್ಲಿಯೂ ಈ ಕ್ಷೇತ್ರ ವ್ಯಾಪ್ತಿಯ ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿ ಹಾಲಿ ಶಾಸಕರಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಗುರುನಾಥ ದಾನಪ್ಪನವರ, ಬಿಜೆಪಿಯ ರಾಜ್ಯಕಾರ್ಯಕಾರಿ ಮಂಡಳಿ ಸದಸ್ಯ ಡಾ.ಭೀಮಸಿಂಗ್‌ ರಾಠೋಡ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು. ಕಾಂಗ್ರೆಸ್‌ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮಹಿಳಾ ಘಟಕದ ಹಿರಿಯ ನಾಯಕಿ ಸುಜಾತಾ ದೊಡ್ಡಮನಿ, ಕಾಂಗ್ರೆಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ನಂತರ ಶಿರಹಟ್ಟಿಮೀಸಲು ಕ್ಷೇತ್ರದ ಟಿಕೆಟ್‌ ಬಗ್ಗೆ ವ್ಯಾಪಕ ಚರ್ಚೆ ಕೇಳಿ ಬರುತ್ತಿದೆ. ಇದು ಮೀಸಲು ಕ್ಷೇತ್ರವಾದರೂ ಜೆಡಿಎಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳಿಗೆ ಇದುವರೆಗೂ ಅಭ್ಯರ್ಥಿಗಳೇ ಸಿಗದಿರುವ ಸ್ಥಿತಿ ನಿರ್ಮಾಣವಾಗಿದೆ.

ಬಲಾಬಲ

  • ಬಿಜೆಪಿ 3
  • ಕಾಂಗ್ರೆಸ್‌ 1
  • ಜೆಡಿಎಸ್‌ 0
  • ಒಟ್ಟು 4
Latest Videos
Follow Us:
Download App:
  • android
  • ios