Karnataka election 2023: ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಕಸರತ್ತು

By Kannadaprabha News  |  First Published Mar 18, 2023, 10:52 AM IST

ವಿಧಾನಸಭಾ ಚುನಾವಣೆಯಲ್ಲಿ ಈ ಸಲ ಹೇಗಾದರೂ ಮಾಡಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲ ಹೊಂದಿರುವ ಕಾಂಗ್ರೆಸ್‌ ಇದೀಗ  ವಾರ್ಡ್‌ ಕಮಿಟಿ, ಬೂತ್‌ ಕಮಿಟಿಗಳನ್ನು ಪುನಾರಚಿಸಿಕೊಂಡು ಸಿದ್ಧತೆ ನಡೆಸಿದೆ.


ಶಿವಾನಂದ ಗೊಂಬಿ

ಹುಬ್ಬಳ್ಳಿ (ಮಾ.18) : ವಿಧಾನಸಭಾ ಚುನಾವಣೆಯಲ್ಲಿ ಈ ಸಲ ಹೇಗಾದರೂ ಮಾಡಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲ ಹೊಂದಿರುವ ಕಾಂಗ್ರೆಸ್‌ ಇದೀಗ ಕಸರತ್ತು ನಡೆಸಿದೆ. ವಾರ್ಡ್‌ ಕಮಿಟಿ, ಬೂತ್‌ ಕಮಿಟಿಗಳನ್ನು ಪುನಾರಚಿಸಿಕೊಂಡು ಸಿದ್ಧತೆಯಲ್ಲಿ ತೊಡಗಿರುವ ಕಾಂಗ್ರೆಸ್‌ಗೆ ಭಿನ್ನಮತ ದೊಡ್ಡ ಸವಾಲಾಗಿದೆ. ಹೀಗಾಗಿ, ಪಕ್ಷ ಸಂಘಟನೆಯ ಜತೆ ಜತೆಗೆ ಭಿನ್ನಮತ ಶಮನಕ್ಕೂ ಮುಖಂಡರು ಆದ್ಯತೆ ನೀಡುತ್ತಿದ್ದಾರೆ.

Tap to resize

Latest Videos

ರಾಜ್ಯದಲ್ಲಿ ಕಾಂಗ್ರೆಸ್‌(Karnataka congress) ಅಧಿಕಾರದ ಗದ್ದುಗೆ ಏರಬೇಕೆಂದರೆ ಭಿನ್ನಮತ ಶಮನ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಪ್ರತಿ ಕ್ಷೇತ್ರದಲ್ಲೂ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ. ಒಬ್ಬರಿಗೆ ಟಿಕೆಟ್‌ ಖಚಿತವಾದರೆ ಮತ್ತೊಬ್ಬರಿಗೆ ಸಿಟ್ಟು. ಆದರೆ ಎಲ್ಲರಿಗೂ ಟಿಕೆಟ್‌ ಕೊಡಲು ಸಾಧ್ಯವಿಲ್ಲ. ಹೀಗಾಗಿ, ಟಿಕೆಟ್‌ ವಂಚಿತರನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳುವುದಷ್ಟೇ ಅಲ್ಲ. ಬದಲಿಗೆ ಅವರನ್ನು ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ದೊಡ್ಡ ಸವಾಲಿನ ಕೆಲಸವೇ ಆಗಿದೆ.

KARNATAKA POLITICS: ಈಗಿರುವ ಕಾಂಗ್ರೆಸ್‌ ತಾಯಿ-ಮಕ್ಕಳ ಪಕ್ಷ: ಗೋವಿಂದ ಕಾರಜೋಳ ವ್ಯಂಗ್ಯ

ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಇದೆ. ಈ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜತೆಗೆ ಕನಿಷ್ಠವೆಂದರೂ ಹೆಚ್ಚು ಮೂರು ಕ್ಷೇತ್ರಗಳಲ್ಲಿ ಅಂದರೆ 5 ಕ್ಷೇತ್ರಗಳಲ್ಲಿ ಕೈ ವಶಕ್ಕೆ ತೆಗೆದುಕೊಳ್ಳಬೇಕು ಎಂಬ ಇರಾದೆ ಕೆಪಿಸಿಸಿಯದ್ದು. ಆದರೆ, ಪಕ್ಷದಲ್ಲಿ ಒಳಜಗಳ, ಗುಂಪುಗಾರಿಕೆ, ಭಿನ್ನಮತಗಳೆಲ್ಲ ಹಾಸುಹೊದ್ದಂತಿವೆ. ಪ್ರತಿ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್ಸೇ ಕಾರಣವಾಗಿರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೀಗಾಗಿ, ಈ ಸಲ ಹೇಗಾದರೂ ಮಾಡಿ ಭಿನ್ನಮತ ಶಮನ ಮಾಡಿ ಯಾರಿಗೆ ಟಿಕೆಟ್‌ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಕೈ ಜೋಡಿಸಬೇಕು ಎಂಬ ಸಂದೇಶವನ್ನು ಮುಖಂಡರು ನೀಡುತ್ತಲೇ ಇದ್ದಾರೆ. ಪೂರ್ವ ಕ್ಷೇತ್ರವೊಂದನ್ನು ಹೊರತುಪಡಿಸಿದರೆ, ಉಳಿದ ಎಲ್ಲ ಕ್ಷೇತ್ರಗಳಲ್ಲೂ ಭಿನ್ನಮತ ಶಮನಗೊಳಿಸುವುದೇ ಪಕ್ಷಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಜತೆಗೆ ಇತ್ತೀಚಿಗಷ್ಟೇ ಪಕ್ಷಕ್ಕೆ ಕೆಲ ಮುಖಂಡರು ಸೇರಿದ್ದಾರೆ. ಇದರಿಂದ ಮೂಲ ಹಾಗೂ ವಲಸೆ ಎಂಬ ಕೂಗು ಕೇಳಿ ಬರುತ್ತಿದೆ. ಇದನ್ನೆಲ್ಲ ನಿಭಾಯಿಸಲು ಈಗಾಗಲೇ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಸೇರಿದಂತೆ ಹಲವರು ಪ್ರಯತ್ನ ನಡೆಸಿರುವುದುಂಟು. ಆದರೆ, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

ಚುನಾವಣೆ ಕಸರತ್ತು:

ಹೀಗೆ ಭಿನ್ನಮತ ಶಮನಕ್ಕೆ ಪ್ರಯತ್ನಿಸುತ್ತಿರುವುದರ ಜತೆಗೆ ವಾರ್ಡ್‌ ಕಮಿಟಿ, ಬೂತ್‌ ಕಮಿಟಿಗಳನ್ನು ರಚಿಸಿಕೊಂಡಿದೆ. ಬಿಎಲ್‌ಎಗಳನ್ನು ನೇಮಿಸಿಕೊಂಡಿದೆ. ಪಕ್ಷದ ವತಿಯಿಂದ ಮತದಾರರ ಪಟ್ಟಿಪರಿಶೀಲನೆಯನ್ನೂ ನಡೆಸಿದೆ. ಡಿಲೀಟ್‌ ಆದವರ ಹೆಸರು ಮರುಸೇರ್ಪಡೆ, ಹೊಸ ಮತದಾರರ ಸೇರ್ಪಡೆಗೆ ಕೈ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಈ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಈ ಮೂಲಕ ಮತದಾರರನನ್ನು ಸೆಳೆಯುವ ಪ್ರಯತ್ನ ಕಾಂಗ್ರೆಸ್‌ ಮಾಡುತ್ತಿದೆ.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದ ಯಡಿಯೂರಪ್ಪ ಪರಮಾಪ್ತ..!

ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿನ ಭಿನ್ನಮತವನ್ನೆಲ್ಲ ಶಮನಗೊಳಿಸಿಕೊಂಡು ಈ ಸಲದ ಚುನಾವಣೆಯಲ್ಲಿ ಗೆಲವು ಸಾಧಿಸಬೇಕೆಂದು ಏನೆಲ್ಲ ಕಸರತ್ತು ನಡೆಸಿರುವುದಂತೂ ಸತ್ಯ. ಆದರೆ ಏನಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಈ ಸಲ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಈ ಸಲ ಹೆಚ್ಚು ಸ್ಥಾನಗಳಲ್ಲಿ ನಮ್ಮ ಪಕ್ಷವೇ ಗೆಲ್ಲಲಿದೆ. ಅಲ್ಪಸ್ವಲ್ಪ ಭಿನ್ನಮತ ಇರುವುದಂತೂ ಹೌದು. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆಶಿವಕುಮಾರ ಅವರು ಅದನ್ನು ಶಮನಗೊಳಿಸುತ್ತಾರೆ.

ಅಲ್ತಾಫ್‌ ಹಳ್ಳೂರ, ಮಹಾನಗರ ಜಿಲ್ಲಾಧ್ಯಕ್ಷ, ಕಾಂಗ್ರೆಸ್‌

ವಾರ್ಡ್‌, ಬೂತ್‌ ಕಮಿಟಿಗಳನ್ನು ರಚಿಸಿದ್ದೇವೆ. ಪಕ್ಷದ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲಾಗುತ್ತಿದೆ. ಗ್ಯಾರಂಟಿ ಕಾರ್ಡ್‌ ಪ್ರತಿಮನೆಗೆ ವಿತರಿಸುತ್ತಿದ್ದೇವೆ. ಸಣ್ಣ ಪುಟ್ಟಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುತ್ತೇವೆ. ಎಲ್ಲೆಡೆ ನಮ್ಮ ಪಕ್ಷವೇ ಗೆಲ್ಲುವುದು.

- ಅನೀಲಕುಮಾರ ಪಾಟೀಲ, ಗ್ರಾಮೀಣ ಜಿಲ್ಲಾಧ್ಯಕ್ಷ, ಕಾಂಗ್ರೆಸ್‌

click me!