ರಾಯಚೂರು: ಮಹಿಳಾ ಮತದಾರರನ್ನ ಟಾರ್ಗೆಟ್ ಮಾಡಿದ ರಾಜಕೀಯ ನಾಯಕರು!

By Ravi Janekal  |  First Published Mar 18, 2023, 10:03 AM IST

ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. ಹೀಗಾಗಿ ಮಹಿಳಾ ಮತದಾರರನ್ನಸೆಳೆಯಲು ರಾಜಕೀಯ ನಾಯಕರು ಮಠ ಮತ್ತು ಮಂದಿರಗಳ ಸ್ವಾಮೀಜಿಗಳ ನೇತೃತ್ವದಲ್ಲಿ  ಪುರಾಣ, ಪೂಜೆ, ಕುಂಕುಮ ಪೂಜೆ, ಉಂಡಿ ತುಂಬುವ ಕಾರ್ಯಕ್ರಮ ನಡೆಸುವ ಮೂಲಕ ಒಟ್ಟಿಗೆ ಸೇರಿಸಲು ಮುಂದಾಗಿದ್ದಾರೆ.


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಮಾ.18) : ಇನ್ನೇನು ಕೆಲ ದಿನಗಳಲ್ಲಿ ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗಲಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ತಮ್ಮ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಅದರಲ್ಲೂ ಮುಖ್ಯವಾಗಿ ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. ಹೀಗಾಗಿ ಮಹಿಳಾ ಮತದಾರರನ್ನ ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ರಾಜಕೀಯ ನಾಯಕರು ಮಠ ಮತ್ತು ಮಂದಿರಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಮಹಿಳೆಯರ ಮನಸೆಳರಯಲು ಪುರಾಣ, ಪೂಜೆ, ಕುಂಕುಮ ಪೂಜೆ, ಉಂಡಿ ತುಂಬುವ ಕಾರ್ಯಕ್ರಮ, ಮಹಿಳಾ ದಿನಾಚರಣೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಹಿಳೆಯನ್ನ ಒಟ್ಟಿಗೆ ಸೇರಿಸಲು ಮುಂದಾಗಿದ್ದಾರೆ.

Tap to resize

Latest Videos

ಉಡಿ ತುಂಬುವ ಕಾರ್ಯಕ್ರಮಕ್ಕೆ ಬಂದ್ರೆ ಸೀರೆ ಉಚಿತ:

ಚುನಾವಣೆ(Karnataka assembly election) ಹತ್ತಿರ ಬರುತ್ತಿದ್ದಾಗ ಇಷ್ಟು ದಿನಗಳ ಕಾಲ ಜನರಿಂದ ಅಂತರ ಕಾದುಕೊಂಡ ನಾಯಕರು ಈಗ ಫುಲ್ ಆಕ್ಟಿವ್ ಆಗಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕ್ಷೇತ್ರದಲ್ಲಿ ಬರುವ ಮಠ ಮತ್ತು ಮಂದಿರಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಮನವೊಲಿಸಿ ಅವರ ನೇತೃತ್ವದಲ್ಲಿ ಪುರಾಣ, ಉಡಿ ತುಂಬುವ ಕಾರ್ಯಕ್ರಮ, ಕುಂಭ ಮೆರವಣಿಗೆ ಹೀಗೆ ನಾನಾ ರೀತಿಯ ಕಾರ್ಯಕ್ರಮಕ್ಕೆ ಪ್ಲಾನ್ ಮಾಡಿದ್ದಾರೆ. 

ರಾಯಚೂರು ಜನತೆಯ ಸಹನೆ ಪರೀಕ್ಷಿಸಬೇಡಿ: ಮಂತ್ರಾಲಯ ಶ್ರೀಗಳಿಂದ ಸರ್ಕಾರಕ್ಕೆ ಖಡಕ್ ಸಂದೇಶ ರವಾನೆ

ಇನ್ನೂ ಕಾರ್ಯಕ್ರಮಕ್ಕೆ ಖರ್ಚು ಆಗುವ ವೆಚ್ಚವನ್ನು ರಾಜಕೀಯ ನಾಯಕರೇ ಭರಿಸಿ ಮಹಿಳೆಯರನ್ನ ಒಟ್ಟಿಗೆ ಸೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ವಿಚಾರಗಳನ್ನು ಅವರಿಗೆ ಮುಟ್ಟಿಸಲು ಮುಂದಾಗಿದ್ದಾರೆ. 

ಮಹಿಳಾ ದಿನಾಚರಣೆ ಹೆಸರಿನಲ್ಲಿಯೂ ರಾಜಕೀಯ ಶಕ್ತಿ ಪ್ರದರ್ಶನ:

ಮಾ.8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ(International Women's Day), ಆದ್ರೆ ರಾಜಕೀಯ ನಾಯಕರಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಲು ಮಹಿಳಾ ದಿನಾಚರಣೆವೂ ಒಂದು ವೇದಿಕೆಯಾಗಿದೆ. ಮಹಿಳಾ ದಿನಾಚರಣೆ ನೆಪದಲ್ಲಿ ಮಹಿಳೆಯನ್ನು ಕರೆದು ಅವರು ಮಾಡಿರುವ ವಿಶೇಷ ಸಾಧನೆ ಹೆಸರಿನಲ್ಲಿ ಅವರನ್ನ ಗುರುತಿಸುವುದು ಮತ್ತೆ ವೇದಿಕೆ ಮೇಲೆ ಅವರ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡುವುದು. ವಿಶೇಷ ಕ್ರೀಡೆಗಳು ಆಯೋಜನೆ ಮಾಡಿ    ಸ್ಪರ್ಧೆಯಲ್ಲಿ ಗೆದ್ದವರಿಗೆ ಸನ್ಮಾನಿಸುವುದು. ಈ ವೇದಿಕೆ ಕಾರ್ಯಕ್ರಮಕ್ಕೆ ಮಹಿಳೆಯನ್ನು ಕರೆದುಕೊಂಡು ಬರುವಂತೆ ಸ್ವಸಹಾಯ ಗುಂಪುಗಳ ಮುಖಂಡರಿಗೆ ಸೂಚನೆ ನೀಡುವುದು. ಹೀಗೆ ನಾನಾ ರೀತಿಯ ಪ್ರಯೋಗ ಮಾಡಿ ಮಹಿಳಾ ಮತದಾರರನ್ನ ಸೆಳೆಯಲು ರಾಜಕೀಯ ಮುಖಂಡರು ಕಸರತ್ತು ನಡೆಸಿದ್ದಾರೆ.

ನಾಯಕರ ಹುಟ್ಟು ಹಬ್ಬದ ವೇಳೆ ಸನ್ಮಾನಿಸಿ ಮಹಿಳೆಯರ ಪಾದಪೂಜೆ:

ಇದು ಚುನಾವಣೆ ವರ್ಷ ಅದರಲ್ಲೂ ಮಹಿಳಾ ಮತದಾರರು ಹೆಚ್ಚಾಗಿರುವ ರಾಯಚೂರು(Raichur assembly constituency) ಜಿಲ್ಲೆಯಲ್ಲಿ ಮಹಿಳೆಯರನ್ನು ಟಾರ್ಗೆಟ್ ಮಾಡಿದ ರಾಜಕೀಯ ನಾಯಕರು. ಮಹಿಳೆಯರ ಮನ ಒಲಿಸಲು ನಾನಾ ರೀತಿಯ ಕಾರ್ಯಕ್ರಮಗಳ ಆಯೋಜನೆ ಮಾಡಲು ಮುಂದಾಗಿದ್ದಾರೆ. 

ಕಳೆದ 6-7 ತಿಂಗಳಿಂದ ಮತದಾರರ ಪಟ್ಟಿ ಪಡೆದ ನಾಯಕರು, ಮಹಿಳೆಯರು ಹೆಚ್ಚಾಗಿ ಸೇರಿಸುವ ಕಾರ್ಯಕ್ರಮ ಆಯೋಜನೆ ಮಾಡಲು‌ ಮುಂದಾಗಿದ್ದಾರೆ. ಕೆಲ ನಾಯಕರು ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡುವುದು. 
ವೇದಿಕೆ ಮೇಲೆ ಮಹಿಳೆಯರಿಗೆ ಆಹ್ವಾನಿಸಿ ಉಡಿ ತುಂಬುವುದು, ಆ ಬಳಿಕ ಅವರ ಪಾದಪೂಜೆ ಮಾಡಿ ಆರ್ಶಿವಾದ ಪಡೆಯುವುದು, ಹೀಗೆ ನಾನಾ ಕಸರತ್ತು ನಡೆಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಎಷ್ಟು ಇದ್ದಾರೆ ಮಹಿಳಾ ಮತದಾರರು:

ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 16,05,258 ಮತದಾರರು ಇದ್ದಾರೆ. ಅದರಲ್ಲಿ ಪುರುಷ ಮತದಾರರು 7,90,204 ಇದ್ರೆ ಮಹಿಳಾ ಮತದಾರರು 8,14,773 ಇದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಮಹಿಳಾ ಮತದಾರರೇ ಅತೀ ಹೆಚ್ಚು ಇರುವರು. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು 1, 13,738 ಇದ್ರೆ ಮಹಿಳಾ ಮತದಾರರು 
1,18, 316 ಇದ್ದಾರೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು 1,11,289 ಇದ್ದು, ಮಹಿಳಾ ಮತದಾರರು 1,13,337 ಇದ್ದಾರೆ. 

ಮಾನ್ವಿ ವಿಧಾನಸಭಾ ಕ್ಷೇತ್ರ(Manvi assembly constituency)ದಲ್ಲಿ ಒಟ್ಟು ಮತಗಳು 2,29,357 ಇದ್ದು ಈ ಪೈಕಿ ಪುರುಷ ಮತದಾರರು 1,11,798 ಇದ್ದು, ಮಹಿಳಾ ಮತದಾರರು 1,17, 489 ಇದ್ದಾರೆ. ಇನ್ನೂ ದೇವದುರ್ಗ ವಿಧಾನಸಭಾ ಕ್ಷೇತ್ರ(Devadurga assembly constituency)ದಲ್ಲಿ ಪುರುಷ ಮತದಾರರು 1,15,862 ಇದ್ರೆ ಮಹಿಳಾ ಮತದಾರರು 1,19,143 ಇದ್ದಾರೆ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರ(Lingasuguru assembly constituency)ದಲ್ಲಿ ಪುರುಷ ಮತದಾರರು 1,12,307 ಇದ್ದು, ಮಹಿಳಾ ಮತದಾರರು 1,24,071 ಇದ್ದಾರೆ. ಸಿಂಧನೂರು ವಿಧಾನಸಭಾ ಕ್ಷೇತ್ರ(Sindhanur assembly constituency)ದಲ್ಲಿ ಪುರುಷ ಮತದಾರರು 1,14,775 ಇದ್ದು, 1,19,019ಮಹಿಳಾ ಮತದಾರರು ಇದ್ದಾರೆ. ಏಳನೇ ವಿಧಾನಸಭಾ ಕ್ಷೇತ್ರವಾದ ಮಸ್ಕಿಯಲ್ಲಿ ಪುರುಷ ಮತದಾರರು 1,00,435 ಇದ್ರೆ 1,03,398 ಮಹಿಳಾ ಮತದಾರರು ಇದ್ದಾರೆ. ಹೀಗಾಗಿ ಎಲ್ಲಾ ಪಕ್ಷಗಳ ನಾಯಕರು ಮಹಿಳಾ ಮತದಾರರ ಮನಸೆಳೆಯಲು ಕಸರತ್ತು ನಡೆಸಿದ್ದಾರೆ. 

Raichur: ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಕಾಂಗ್ರೆಸ್-ಜೆಡಿಎಸ್ ರಾಜಕೀಯ

ಒಟ್ಟಿನಲ್ಲಿ ಮಹಿಳಾ ಮತದಾರರು ಹೆಚ್ಚಾಗಿರುವ ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ನಾಯಕರು ಮಹಿಳೆಯರ ಮತ ಸೆಳೆಯುವ ಓಡಾಟ ನಡೆಸಿದ್ದಾರೆ. 

ಇತ್ತ ಮಹಿಳಾ ಮತದಾರರು ಎಲ್ಲಾ ಪಕ್ಷಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ರಾಜಕೀಯ ನಾಯಕರು ‌ಮಾಡುವ ಸನ್ಮಾನ ಮತ್ತು ಉಡುಗೊರೆ ಪಡೆಯುತ್ತಿದ್ದಾರೆ. ಆದ್ರೆ ಯಾವ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಜೈ ಎನ್ನುತ್ತಾರೆ ಎಂಬುವುದು ಕುತೂಹಲವಿದೆ.

click me!