* ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಒಮ್ಮೆಯೂ ಗೆಲ್ಲದ ಕಾಂಗ್ರೆಸ್
* ಕಳೆದ ಬಾರಿ ಕಾಂಗ್ರೆಸ್ ಸರ್ಕಾರವಿದ್ದರೂ ವಿಕ್ರಮ ಮೆರೆದಿದ್ದ ಜೆಡಿಎಸ್
* ಜೆಡಿಎಸ್‌ಗೆ ದಳ ಪ್ರಾಬಲ್ಯದ ಜಿಲ್ಲೆಗಳಲ್ಲೇ ಠಕ್ಕರ್ ನೀಡಲು ಬಿಜೆಪಿ ಪ್ರಯತ್ನ
ಅಂಶಿ ಪ್ರಸನ್ನಕುಮಾರ್
ಮೈಸೂರು(ಜೂ.11): ದಕ್ಷಿಣ ಪದವೀಧರ ಕ್ಷೇತ್ರದಿಂದ ಜೂ.13ರಂದು ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಮಣಿಸಿ, ಮತ್ತೆ ಗೆಲ್ಲಲು ಬಿಜೆಪಿ ಬೆನ್ನು ಬಿದ್ದಿದೆ. ಚೊಚ್ಚಲ ಜಯ ದಾಖಲಿಸಲು ಕಾಂಗ್ರೆಸ್ ಕೂಡ ಪೈಪೋಟಿ ನೀಡುತ್ತಿದೆ. ರೈತಸಂಘ, ದಸಂಸ ಸಹ ಹೊಸ ಸಮೀಕರಣಕ್ಕೆ ಯತ್ನಿಸಿದೆ.
undefined
1992ರಲ್ಲಿ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಪದವೀಧರ ಕ್ಷೇತ್ರ ರಚಿಸಲಾಯಿತು. ಈವರೆಗೆ ಒಂದು ಉಪ ಚುನಾವಣೆ ಸೇರಿದಂತೆ 6 ಬಾರಿ ಚುನಾವಣೆ ನಡೆದಿದ್ದು, 4 ಬಾರಿ ಬಿಜೆಪಿ, 2 ಬಾರಿ ಜೆಡಿಎಸ್ ಗೆದ್ದಿದೆ. ಕಾಂಗ್ರೆಸ್ ಈವರೆಗೂ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು: ಎಂ.ಬಿ. ಪಾಟೀಲ್ ವಿಶ್ವಾಸ
ಪ್ರಸ್ತುತ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಅವರು ಸ್ಪರ್ಧಿಸಿಲ್ಲ. ರಾಜ್ಯಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಬಿಜೆಪಿಯು ಕಳೆದ ಬಾರಿ ಸೋತಿದ್ದ ಮೈ.ವಿ.ರವಿಶಂಕರ್ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಮಂಡ್ಯದ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರ ಪುತ್ರ ಮಧು ಅವರನ್ನು ಕಾಂಗ್ರೆಸ್ ಕಣಕ್ಕಳಿಸಿದೆ.
ಕಳೆದ ಬಾರಿ ಜೆಡಿಎಸ್ ವಿಕ್ರಮ: ಕಳೆದ ಬಾರಿ ಚುನಾವಣೆ ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಜೆಡಿಎಸ್ ಪ್ರಥಮ ಪ್ರಾಶಸ್ತ್ಯದಲ್ಲಿ ಮುನ್ನಡೆ ಕಾಯ್ದುಕೊಂಡು ಜಯ ದಾಖಲಿಸಿತ್ತು. ಈ ಬಾರಿಯೂ ಉಳಿಸಿಕೊಳ್ಳಲು ಯತ್ನಿಸಿದೆ. ಆದರೆ ಇದೇ 4 ಜಿಲ್ಲೆಗಳ ವ್ಯಾಪ್ತಿಯ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿರುವ ಮರಿತಿಬ್ಬೇಗೌಡರು ತಮ್ಮ ಆಪ್ತ ಜಯರಾಮು ಕೀಲಾರ ಅವರಿಗೆ ಟಿಕೆಟ್ ನೀಡದಿರುವ ಜೆಡಿಎಸ್ ವರಿಷ್ಠರ ವಿರುದ್ಧ ಬಹಿರಂಗ ಬಂಡಾಯ ಸಾರಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಅಲ್ಲದೇ ಆ ಪಕ್ಷದ ಪರ ಪ್ರಚಾರ ಸಭೆಗಳಲ್ಲೂ ಭಾಗವಹಿಸಿದ್ದಾರೆ. ಇದನ್ನು ಮನಗಂಡಿರುವ ಜೆಡಿಎಸ್ ತನ್ನ ಭದ್ರನೆಲೆಗಳಾಗಿರುವ ಮಂಡ್ಯ, ಹಾಸನ, ಮೈಸೂರು ಗ್ರಾಮಾಂತರಗಳಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದು ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದ್ದಾರೆ.
ಬಿಜೆಪಿ ಸರ್ವಪ್ರಯತ್ನ: ಇನ್ನು ಆಡಳಿತಾರೂಢ ಬಿಜೆಪಿ ಕ್ಷೇತ್ರವನ್ನು ಮರಳಿ ವಶಪಡಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಸಂತೋಷ್, ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಗಣ್ಯರ ದಂಡನ್ನೇ ಪ್ರಚಾರಕ್ಕೆ ಕರೆ ತಂದಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಎಸ್. ವಿನಯ್ ಪಕ್ಷೇತರರಾಗಿ ಕಣದಲ್ಲಿದ್ದು, ಇದರಿಂದ ಫಲಿತಾಂಶ ಏರುಪೇರು ಆಗದಂತೆ ಎಚ್ಚರಿಕೆ ವಹಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಮಧು ಅವರಿಗೆ ಪಕ್ಷದ ಜೊತೆಗೆ ತಂದೆ ಮಾದೇಗೌಡರ ನಾಮಬಲದ ಶ್ರೀರಕ್ಷೆ ಇದೆ. ಹೀಗಾಗಿ ಗೆಲ್ಲಲು ಕಾಂಗ್ರೆಸ್ ಸಂಘಟಿತ ಹೋರಾಟ ನಡೆಸುತ್ತಿದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಣಕ್ಕಿಳಿದು ಪ್ರಚಾರ ನಡೆಸಿದ್ದಾರೆ.
ರೈತ ಸಂಘ- ದಲಿತ ಸಂಘರ್ಷ ಸಮಿತಿಯು ಎಂಜಿನಿಯರಿಂಗ್ ಪದವೀಧರ ಪ್ರಸನ್ನ ಎನ್.ಗೌಡ ಅವರನ್ನು ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಸಿ, ಹೊಸ ಸಮೀಕರಣಕ್ಕೆ ಯತ್ನಿಸಿದೆ. ಬಿಎಸ್ಪಿಯಿಂದ ಡಾ.ಬಿ.ಎಚ್.ಚನ್ನಕೇಶವಮೂರ್ತಿ, ಎಸ್‌ಡಿಪಿಐನಿಂದ ರಫತ್ ಉಲ್ಲಾಖಾನ್ ಕಣದಲ್ಲಿದ್ದಾರೆ. ಮಾಜಿ ಶಾಸಕ ವಾಟಾಳ್ ನಾಗರಾಜ್ ಕಳೆದ ಬಾರಿಯಂತೆ ಈ ಬಾರಿಯೂ ಸ್ಪರ್ಧಿಸಿದ್ದಾರೆ. ಉಳಿದ ಪಕ್ಷೇತರರು ಪದವೀಧರರು, ಅತಿಥಿ ಉಪನ್ಯಾಸಕರು, ಶಿಕ್ಷಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗಮನ ಸೆಳೆಯುವ ಯತ್ನ ನಡೆಸಿದ್ದಾರೆ.
ಮೈಸೂರು: ವಿಜಯೇಂದ್ರ ಪರ ನಿರಂತರ ಜೈಕಾರ, ಮುಜುಗರಕ್ಕೆ ಒಳಗಾದ ಸೋಮಣ್ಣ
ಇದು ಪ್ರಾಶಸ್ತ್ಯ ಮತಗಳ ಚುನಾವಣೆ. ಮೊದಲ ಪ್ರಾಶಸ್ತ್ಯದಲ್ಲಿ ಗೆಲ್ಲಲು ಸ್ವೀಕೃತ ಮತಗಳ ಪೈಕಿ ಶೇ.50 ಪ್ಲಸ್ 1 ಮತ ಪಡೆಯಬೇಕು. ಯಾರಿಗೂ ಆ ವಿಶ್ವಾಸವಿಲ್ಲ. ಹೀಗಾಗಿ ಎಲ್ಲರೂ ಎರಡನೇ ಪ್ರಾಶಸ್ತ್ಯದ ಮತಗಳನ್ನು ನೆಚ್ಚಿಕೊಂಡು ಹೋರಾಡುತ್ತಿದ್ದಾರೆ.
ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಗೆಲವಿಗೆ ಒಂದೊಂದು ತೊಡಕುಗಳಿವೆ. ಅದನ್ನು ನಿವಾರಿಸಿಕೊಂಡು ‘ತೆನೆ ಹೊತ್ತ ಮಹಿಳೆ’ ಗೆಲುವಿನ ನಗೆ ಬೀರುತ್ತಾರೆಯೇ, ಬಿಜೆಪಿಯ ‘ಕಮಲ’ ಅರಳುತ್ತದೋ ಅಥವೈ ‘ಕೈ’ ಮೇಲಾಗುತ್ತದೋ, ‘ಹೊಸ ಸಮೀಕರಣ’ ಕಾರ್ಯಸಾಧುವೇ ಎಂಬುದನ್ನು ಕಾದು ನೋಡಬೇಕಿದೆ.
ಮತದಾರರು
ಒಟ್ಟು ಮತದಾರರು- 1,41,963
ಪುರುಷರು-82,512
ಮಹಿಳೆಯರು-59427
ಇತರ-24
ಕಣದಲ್ಲಿರುವ ಅಭ್ಯರ್ಥಿಗಳು
ಜಿ.ಎಂ.ಮಧು-ಕಾಂಗ್ರೆಸ್
ಎಂ.ವಿ.ರವಿಶಂಕರ್-ಬಿಜೆಪಿ
ಎಚ್.ಕೆ.ರಾಮು-ಜೆಡಿಎಸ್
ರಫತ್ ಉಲ್ಲಾಖಾನ್-ಎಸ್‌ಡಿಪಿಐ
ವಾಟಾಳ್ ನಾಗರಾಜ್-ಕನ್ನಡ ಚಳವಳಿ ವಾಟಾಳ್ ಪಕ್ಷ,
ಎನ್.ವೀರಭದ್ರಸ್ವಾಮಿ-ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
ಪಕ್ಷೇತರರು-ಡಾ.ಜೆ.ಅರುಣಕುಮಾರ್, ಸಿ.ಕಾವ್ಯಶ್ರೀ, ಡಾ.ಬಿ.ಎಚ್.ಚನ್ನಕೇಶವಮೂರ್ತಿ, ಪುಟ್ಟಸ್ವಾಮಿ, ಎನ್.ಪ್ರಸನ್ನ, ಕೆ.ಪಿ.ಪ್ರಸನ್ನಕುಮಾರ್, ಎಂ.ಮಹೇಶ್, ಡಾ.ಜೆ.ಸಿ.ರವೀಂದ್ರ, ಎನ್.ರಾಜೇಂದ್ರಸಿಂಗ್ ಬಾಬು, ಎಸ್.ರಾಮು. ಎನ್.ಎಸ್.ವಿನಯ್. ಡಾ.ಎಚ್.ಎಲ್.ವೆಂಕಟೇಶ ಹಾಗೂ ಎಚ್.ಪಿ.ಸುಜಾತಾ.
2016ರ ಚುನಾವಣಾ ಫಲಿತಾಂಶ
ಪ್ರಥಮ ಪ್ರಾಶಸ್ತ್ಯದಲ್ಲಿ ಅಭ್ಯರ್ಥಿಗಳು ಪಡೆದಿದ್ದ ಮತಗಳು
ಕೆ.ಟಿ. ಶ್ರೀಕಂಠೇಗೌಡ(ಜೆಡಿಎಸ್)-17,161
ಮೈ.ವಿ.ರವಿಶಂಕರ್(ಬಿಜೆಪಿ)-16,853
ಎಚ್.ಎನ್. ರವೀಂದ್ರ (ಕಾಂಗ್ರೆಸ್)-8,245