
ಬೆಂಗಳೂರು(ಸೆ.25): ಮುಖ್ಯಮಂತ್ರಿ ಹುದ್ದೆ ಹಾಗೂ ಉಪಮುಖ್ಯಮಂತ್ರಿ ಸ್ಥಾನಗಳ ಬಗ್ಗೆ ಕೆಲ ಸಚಿವರು ಮತ್ತು ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳಿಂದ ಪಕ್ಷದ ವರ್ಚಸ್ಸು, ಸರ್ಕಾರದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಎಚ್ಚೆತ್ತ ಕಾಂಗ್ರೆಸ್ ಹೈಕಮಾಂಡ್, ಇನ್ನು ಮುಂದೆ ಯಾರೂ ಈ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದೆ.
ಈ ಸಂಬಂಧ ಭಾನುವಾರ ಪತ್ರದ ಮೂಲಕ ಸ್ಪಷ್ಟ ಸಂದೇಶ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾರೇ ಆಗಲಿ ಸಾರ್ವಜನಿಕವಾಗಿ ಹೇಳಿಕೆ ನೀಡುವುದು, ಟೀಕಿಸುವುದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ಇನ್ಮುಂದೆ ಪಕ್ಷದ ಪ್ರತಿಯೊಬ್ಬ ಮುಖಂಡರು, ನಾಯಕರು, ಸರ್ಕಾರದ ಸಚಿವರುಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
ಉಪಮುಖ್ಯಮಂತ್ರಿ ಸ್ಥಾನ ನೀಡಿದ್ರೆ ನಾ ಬೇಡಾ ಅಂತೀನಾ?: ಸತೀಶ್ ಜಾರಕಿಹೊಳಿ
ಕರ್ನಾಟಕದ ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳು ದೇಶಾದ್ಯಂತ ‘ಕರ್ನಾಟಕ ಮಾದರಿ’ ಎಂದು ಹೆಸರಾಗಿದೆ. ಇದರಿಂದ ಪ್ರತಿಪಕ್ಷ ಬಿಜೆಪಿ ಮತ್ತು ಇತರೆ ಪ್ರಾದೇಶಿಕ ಪಕ್ಷಗಳು ತಲ್ಲಣಗೊಂಡಿವೆ. ಈ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರಕ್ಕೆ ಸಿಗುತ್ತಿರುವ ಜನಪ್ರಿಯತೆಯನ್ನು ಮರೆಮಾಚಿ ಜನರ ಗಮನ ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಹುದ್ದೆ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳ ಬಗ್ಗೆ ಅನಗತ್ಯ ಗೊಂದಲ ಹಾಗೂ ವದಂತಿ ಸೃಷ್ಟಿಸುತ್ತಿವೆ ಎಂದು ದೂರಿದ್ದಾರೆ.
ಆದರೆ, ಪ್ರತಿಪಕ್ಷಗಳ ಇಂತಹ ಅನಗತ್ಯ ವದಂತಿ ಸೃಷ್ಟಿ ತಂತ್ರಗಾರಿಕೆಗೆ ಒಳಗಾಗಿ ಅಥವಾ ಉತ್ತೇಜನಗೊಂಡು ಕೆಲ ಸಚಿವರು, ಪಕ್ಷದ ನಾಯಕರುಗಳು ಕೂಡ ಮುಖ್ಯಮಂತ್ರಿ ಹುದ್ದೆ ಹಾಗೂ ಉಪಮುಖ್ಯಮಂತ್ರಿ ಸ್ಥಾನಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದು ಕಳವಳಕಾರಿ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ನೀಡುವುದರಿಂದ ಪಕ್ಷದ ಶಿಸ್ತು ಮತ್ತು ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ರಾಜ್ಯದ ಜನರಿಗೆ ಕೊಟ್ಟಿರುವ ಇತರೆ ಎಲ್ಲಾ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಸುಗಮ ಕಾರ್ಯನಿರ್ವಹಣೆಗೂ ಪರಿಣಾಮ ಬೀರುತ್ತದೆ. ಹಾಗಾಗಿ ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕೇ ಹೊರತು ಸಾರ್ವಜನಿಕ ವೇದಿಕೆಯಲ್ಲಿ ಯಾರೂ ಕೂಡ ಮಾತನಾಡಕೂಡದು ಎಂದು ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.