ಸುಳ್ಳು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ: ನಳಿನ್‌ ಕುಮಾರ್‌ ಕಟೀಲ್‌

By Kannadaprabha News  |  First Published Jul 5, 2023, 12:21 PM IST

ಚುನಾವಣೆಗೂ ಮುನ್ನ ಕಾಂಗ್ರೆಸ್‌ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಮಂಡಲದ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎಚ್ಚರಿಸಿದ್ದಾರೆ.


ಬೆಂಗಳೂರು (ಜು.05): ಚುನಾವಣೆಗೂ ಮುನ್ನ ಕಾಂಗ್ರೆಸ್‌ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಮಂಡಲದ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎಚ್ಚರಿಸಿದ್ದಾರೆ. ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ಸುಳ್ಳು ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಜನವಿರೋಧಿ ನೀತಿ ಅನುಸರಿಸುತ್ತಿದೆ. ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಗ್ಯಾರಂಟಿ ಈಡೇರಿಸುತ್ತೇವೆ ಎಂದಿದ್ದರು. 

ಸರ್ಕಾರ ಬಂದು ಎರಡು ತಿಂಗಳು ಕಳೆದರೂ ಸಮರ್ಪಕ ಮಾರ್ಗಸೂಚಿ ರೂಪಿಸಿಲ್ಲ. ಭರವಸೆಗಳನ್ನು ಈಡೇರಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಕೊಟ್ಟಮಾತನಿಂತೆ ಕಾಂಗ್ರೆಸ್‌ ಸರ್ಕಾರ ತಲಾ 10 ಕೆ.ಜಿ. ಅಕ್ಕಿ ಕೊಡಬೇಕು. ವಿದ್ಯುತ್‌ ಶುಲ್ಕ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ಹೀಗಾಗಿ ಶುಲ್ಕ ಹೆಚ್ಚಳ ಹಿಂಪಡೆಯಬೇಕು. ನಮ್ಮ ಸರ್ಕಾರ ಜಾರಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್‌ ರದ್ದು ಮಾಡಲು ಹೊರಟ್ಟಿದೆ. ಪಠ್ಯ ಪುಸ್ತಕದಲ್ಲಿ ಪಾಠ ಕೈ ಬಿಡುತ್ತಿದೆ. 

Tap to resize

Latest Videos

ಅಧಿವೇಶನ ಬಳಿಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ: ಬಿಎಸ್‌ವೈ

ಈ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಈಡೇರಿಸಬೇಕು. ದುಬಾರಿ ವಿದ್ಯುತ್‌ ಶುಲ್ಕ ಹಿಂಪಡೆಬೇಕು. ವಿದ್ಯುತ್‌ ಶುಲ್ಕ ಹಿಂಪಡೆಯದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಜನರಿಗೆ ವಿದ್ಯುತ್‌ ಶುಲ್ಕ ಕಟ್ಟಲು ಬಿಡುವುದಿಲ್ಲ. ಇಂದು ಕೇವಲ ಸಾಂಕೇತಿಕ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಈ ಗ್ಯಾರಂಟಿಗಳನ್ನು ರಾಜ್ಯದ ಜನತೆಯ ಮನೆ-ಮನೆಗೆ ತಲುಪಿಸುವವರೆಗೂ ಈ ಹೋರಾಟ ಮುಂದುವರೆಯಲಿದೆ ಎಂದು ಕಟೀಲ್‌ ಗುಡುಗಿದರು.

ಕಟೀಲ್‌ ಕಾಂಗ್ರೆಸ್‌ ಸರ್ಕಾರ ಟೀಕಿಸುತ್ತಿರುವುದು ನಾಚಿಕೆಗೇಡು: ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸರ್ವ ರೀತಿಯಲ್ಲಿಯೂ ವಿಫಲರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಜನಪರ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮೈಲ್ಯಾಕ್‌ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌ ಕಿಡಿಕಾರಿದ್ದಾರೆ. ಬಿಜೆಪಿಯ ಹೀನಾಯ ಸೋಲಿಗೆ ಅವರ ಪಕ್ಷದ ನಾಯಕರೇ ರಾಜ್ಯಾಧ್ಯಕ್ಷರ ರಾಜೀನಾಮೆಗಾಗಿ ದಿನ ನಿತ್ಯವೂ ಬೇಡಿಕೆ ಮುಂದಿಡುತ್ತಿದ್ದಾರೆ. ಇವರೊಬ್ಬ ಕೆಲಸಕ್ಕೆ ಬಾರದ ವ್ಯಕ್ತಿ ಎಂದೆಲ್ಲಾ ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. 

ಬೆಂಗಳೂರು-ಮೈಸೂರು ಎಕ್ಸ್​​​ಪ್ರೆಸ್​​ವೇನಲ್ಲಿ ಸ್ಪೀಡ್ ಲಿಮಿಟ್: ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್!

ಹೀಗಾಗಿ ನಳಿನ್‌ ತಮ್ಮ ಪಕ್ಷದೊಳಗಿನ ಜಗಳ ಬಗೆಹರಿಸಿಕೊಳ್ಳಲು, ಮತ್ತು ಪಕ್ಷದೊಳಗೆ ತಮ್ಮ ವ್ಯಕ್ತಿತ್ವದ ಘನತೆ ಉಳಿಸಿಕೊಳ್ಳಲು ಆದ್ಯತೆ ನೀಡಬೇಕಾದ ತುರ್ತು ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಕಮಿಷನ್‌ ದಂಧೆ ನಡೆಸುತ್ತಿದೆ, ವರ್ಗಾವಣೆಯಲ್ಲಿ ಅವ್ಯವಹಾರ ನಡೆಸುತ್ತಿದೆ ಎನ್ನುತ್ತಿರುವ ನಳಿನ್‌ ಕುಮಾರ್‌ ತಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ನಡೆದಿರುವ ಇಂತಹ ಕೃತ್ಯಗಳನ್ನು ನೆನಪಿಸಿಕೊಂಡು ಇಲ್ಲಿಯೂ ಹಾಗೇ ಇರಬಹುದೆಂದು ಭಾವಿಸಿ ಕಣ್ಣುಮುಚ್ಚಿಕೊಂಡು ಆರೋಪಿಸುತ್ತಿರುವಂತಿದೆ. ಒಂದು ಪಕ್ಷದ ರಾಜ್ಯಾಧ್ಯಕ್ಷರಾದವರು ಇಷ್ಟೊಂದು ಹಗುರವಾಗಿ ನಡೆದುಕೊಳ್ಳುವುದು ಒಪ್ಪತಕ್ಕದ್ದಲ್ಲ ಎಂದು ಕಿಡಿಕಾರಿದ್ದಾರೆ.

click me!