ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸ್ಪೀಡ್ ಲಿಮಿಟ್: ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್!
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಹೆಚ್ಚುತ್ತಿರುವ ಅಪಘಾತ ಹಿನ್ನೆಲೆ ವೇಗಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು (ಜು.05): ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಹೆಚ್ಚುತ್ತಿರುವ ಅಪಘಾತ ಹಿನ್ನೆಲೆ ವೇಗಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ. 120 ಕಿ.ಮೀ. ವೇಗದಲ್ಲಿ ವಾಹನ ಸಂಚಾರದಿಂದ ಅಪಘಾತ ಹೆಚ್ಚಳವಾಗಿದೆ. ಹೀಗಾಗಿ ಅಪಘಾತ ತಡೆಯಲು ಗಂಟೆಗೆ 100 ಕಿ.ಮೀ. ವೇಗದ ಮಿತಿ ನಿಗದಿ ಮಾಡಲಾಗಿದೆ. ಅದರಂತೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸ್ಪೀಡ್ ರಡಾರ್ ಗನ್, ವಾಹನಗಳ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಎಕ್ಸ್ಪ್ರೆಸ್ವೇನಲ್ಲಿ ನಿಗದಿತ ವೇಗದಲ್ಲಿ ವಾಹನಗಳು ಸಂಚರಿಸಬೇಕು. 100 ಕಿ.ಮೀ. ವೇಗದ ಮಿತಿ ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲು ಮಾಡಲಾಗುತ್ತದೆ ಎಂದು ರಸ್ತೆ ಸುರಕ್ಷಿತ ಮತ್ತು ಸಂಚಾರ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮೈ-ಬೆಂ ಹೈವೇಯಲ್ಲಿ ವಾರಾಂತ್ಯ ‘ಡ್ರಿಂಕ್ ಆ್ಯಂಡ್ ಡ್ರೈವ್’ ಪರೀಕ್ಷೆ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ವಾರಾಂತ್ಯದ ದಿನಗಳಲ್ಲಿ ಮದ್ಯ ಸೇವಿಸಿ ಕಾರು ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದು, ಇಂತವರಿಂದ ಅಪಘಾತಗಳು ಹೆಚ್ಚುತ್ತಿವೆ ಎಂಬುದಾಗಿ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾರಾಂತ್ಯದ ದಿನಗಳಲ್ಲಿ ಟೋಲ್‌ಗೇಟ್ ಬಳಿ ‘ಡ್ರಿಂಕ್ ಆ್ಯಂಡ್ ಡ್ರೈವ್’ ಟೆಸ್ಟ್ ಮಾಡುವುದಾಗಿ ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದ್ದಾರೆ. ಮದ್ದೂರು ಗಡಿಭಾಗವಾದ ನಿಡಘಟ್ಟದಿಂದ ಶ್ರೀರಂಗಪಟ್ಟಣದ ಗಡಿಭಾಗ ಕಳಸ್ತವಾಡಿವರೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹೆದ್ದಾರಿಯ ಪರಿಶೀಲನೆ ನಡೆಸಿದರು.
ಬಿಟ್ಕಾಯಿನ್ ದಂಧೆ ತನಿಖೆ ಶುರು: ಎಸ್‌ಐಟಿ ರಚನೆ ಬೆನ್ನಲ್ಲೇ ಡಿಜಿಪಿ ಅಲೋಕ್ ಉನ್ನತ ಮಟ್ಟದ ಸಭೆ
ಪರಿಶೀಲನೆ ವೇಳೆ, ವಾರಾಂತ್ಯದ ದಿನಗಳಲ್ಲಿ ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸಿಕೊಂಡು ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಮೋಜು-ಮಸ್ತಿ ನಡೆಸುತ್ತಿದ್ದಾರೆ. ಏನಾದರೂ ಹೇಳಿದರೆ ನಮ್ಮ ವಿರುದ್ಧವೇ ಜಗಳಕ್ಕೆ ಬರುತ್ತಾರೆ. ಇಂತವರಿಂದಲೂ ಅಪಘಾತಗಳು ಹೆಚ್ಚಾಗುತ್ತಿವೆ. ಹೆದ್ದಾರಿಯನ್ನು ಕುಡುಕರಿಂದ ಮುಕ್ತಗೊಳಿಸಿ ಎಂದು ಹೆದ್ದಾರಿ ಅಕ್ಕ-ಪಕ್ಕದ ಗ್ರಾಮಸ್ಥರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ಇನ್ನು ಮುಂದೆ ವಾರಾಂತ್ಯ ಟೋಲ್‌ಗೇಟ್ ಬಳಿ ‘ಡ್ರಿಂಕ್ ಆ್ಯಂಡ್ ಡ್ರೈವ್’ ಟೆಸ್ಟ್ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ, ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಎರಡೂ ಕಡೆ ಹೈವೇ ಪೆಟ್ರೋಲಿಂಗ್ ವಾಹನಗಳು ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು. ಹೆದ್ದಾರಿಯಲ್ಲಿ 5 ಕಿ.ಮೀ.ಗೊಂದು ಫೋನ್ ಬೂತ್ ಅಳವಡಿಸಬೇಕು ಎಂದು ಮಂಡ್ಯ ಎಸ್ಪಿ ಎನ್.ಯತೀಶ್‌ಗೆ ಸೂಚನೆ ನೀಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಸದ್ಯಕ್ಕೆ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ದ್ವಿಚಕ್ರ ವಾಹನಗಳ ರದ್ದಿಗೆ ಗೆಜೆಟ್ ನೋಟಿಫಿಕೇಷನ್ ಮಾಡುವ ಪ್ರಕ್ರಿಯೆ ನಡೆದಿದೆ. ಟೋಲ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತೇವೆ. ಯಾವ ವಾಹನಗಳಿಗೆ ಸ್ಟಿಕ್ಕರ್ ಇರುವುದಿಲ್ಲವೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ: ಸ್ವಪಕ್ಷದ ನಾಯಕರ ವಿರುದ್ದ ಮಾಜಿ ಸಚಿವ ರಾಜೂಗೌಡ ಗರಂ
ಹೆದ್ದಾರಿಯಲ್ಲಿ ಅಲ್ಲಲ್ಲಿ ಸ್ಪೀಡ್ ಗನ್‌ಗಳನ್ನು ಇನ್ನೊಂದು ವಾರದೊಳಗೆ ಅಳವಡಿಸಲಾಗುವುದು. ಅದರ ಮೂಲಕ ಯಾವ ವಾಹನ ಎಷ್ಟುವೇಗದಲ್ಲಿ ಬರುತ್ತಿದೆ ಎನ್ನುವುದನ್ನು ಬಹುದೂರದಿಂದಲೇ ಗುರುತಿಸಬಹುದಾಗಿದೆ. ನಿಗದಿತ ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಬರುತ್ತಿದ್ದರೆ ಈ ಸ್ಪೀಡ್‌ಗನ್ ಆ ವಾಹನಗಳ ಫೋಟೋ ತೆಗೆದು ಕಳುಹಿಸುತ್ತದೆ. ಅಂತಹ ವಾಹನ ಚಾಲಕರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು. ಅಲ್ಲದೆ, ಹೆದ್ದಾರಿಗೆ ಸಾರ್ವಜನಿಕರು ಓಡಾಡದಂತೆ ಅಡ್ಡಲಾಗಿ ಕಬ್ಬಿಣದ ಫೆನ್ಸಿಂಗ್‌ಗಳನ್ನು ಅಳವಡಿಸಲಾಗಿದೆ. ಕಬ್ಬಿಣದ ಫೆನ್ಸಿಂಗ್‌ಗಳನ್ನು ಮುರಿದು ಒಳಬರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.