ಬೈಎಲೆಕ್ಷನ್‌ನಲ್ಲಿ ಹುಸಿಯಾದ ಬಿಜೆಪಿ ನಿರೀಕ್ಷೆ: ಶಕ್ತಿ ವೃದ್ಧಿಸಿಕೊಂಡ ಕಾಂಗ್ರೆಸ್‌

By Kannadaprabha News  |  First Published Nov 4, 2021, 2:46 PM IST

*  ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ ಎಂಬ ಲೆಕ್ಕಾಚಾರ ಹಾಕುತ್ತಿರುವ ಮುಖಂಡರು
*  ಮಾನೆ ಮುಂದಿದೆ ಸವಾಲು
*  ಹಿರೂರು ಜಿಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಬೆಂಬಲ 
 


ನಾರಾಯಣ ಹೆಗಡೆ

ಹಾವೇರಿ(ನ.04):  ಹಾನಗಲ್ಲ ಉಪಚುನಾವಣೆ ಫಲಿತಾಂಶದ ಬಳಿಕ ಈಗ ಅದರ ಪೋಸ್ಟ್‌ ಮಾರ್ಟಂ ಶುರುವಾಗಿದೆ. ಗೆದ್ದ ಖುಷಿಯಲ್ಲಿ ಕಾಂಗ್ರೆಸಿಗರಿದ್ದರೆ(Congress), ಸೋಲಿಗೆ ಕಾರಣ ಹುಡುಕುತ್ತಿರುವ ಬಿಜೆಪಿ(BJP) ಮುಖಂಡರು, ಯಾವ ಊರು, ಯಾವ ಜಿಪಂ ಕ್ಷೇತ್ರ ಕೈಕೊಟ್ಟಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

Tap to resize

Latest Videos

undefined

ಹಾನಗಲ್ಲ ಉಪಚುನಾವಣೆ(Hanagal Byelection) ಫಲಿತಾಂಶ(Result) ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಶಾಕ್‌ ನೀಡಿದೆ. ಗೆಲ್ಲುವ ಅತಿಯಾದ ವಿಶ್ವಾಸದಲ್ಲಿದ್ದ ಬಿಜೆಪಿಗರು ಈಗ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಕೆಲವರು ಎಲ್ಲಿ ತಮ್ಮ ಲೆಕ್ಕಾಚಾರ ಕೈಕೊಟ್ಟಿತು ಎಂಬ ಅವಲೋಕನ ಮಾಡುತ್ತಿದ್ದಾರೆ. ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಪ್ರತಿ ಮತಗಟ್ಟೆ ವಾರು ಬಿದ್ದ ಮತಗಳನ್ನು ತಾಳೆ ಹಾಕಿ ನೋಡುತ್ತಿದ್ದಾರೆ. ಕಾಂಗ್ರೆಸ್‌ಗೆ ಎಲ್ಲಿ ಎಷ್ಟು ಲೀಡ್‌ ಬಂತು, ತಮಗೆ ಯಾವ ಬೂತ್‌ ಕೈಕೊಟ್ಟಿತು ಎಂಬುದನ್ನು ನೋಡುತ್ತಿದ್ದಾರೆ. ತಾವು ನಂಬಿದ್ದ ಕಡೆಗೇ ಮತದಾರರು ಕೈಕೊಟ್ಟಿರುವುದು ಗೊತ್ತಾಗಿದೆ.

'ಹಾನಗಲ್ ಫಲಿತಾಂಶದ ಕ್ರೆಡಿಟ್‌ಗಾಗಿ ಕಾಂಗ್ರೆಸ್‌ನಲ್ಲಿ ಒಳಜಗಳ'

ಬಿಜೆಪಿಗೆ ಈಗ ಒಳ ಹೊಡೆತದ ಅನುಭವ ಗೊತ್ತಾಗುತ್ತಿದೆ. ಜಾತಿ ಸಮೀಕರಣದ ಲೆಕ್ಕಾಚಾರ ಎಲ್ಲಿ ತಪ್ಪಿತು ಎಂಬ ವಿಚಾರ ಒಂದೊಂದೇ ಹೊರಬೀಳುತ್ತಿದೆ. ಸೋತ ಮೇಲೆ ಫಲಿತಾಂಶದ ವಿಶ್ಲೇಷಣೆ(Analysis) ಮಾಡಿ ಪ್ರಯೋಜನವಿಲ್ಲ ಎಂದು ಕೆಲವರು ಲೆಕ್ಕಾಚಾರದಿಂದ ದೂರ ಉಳಿದಿದ್ದಾರೆ. ಆದರೆ, ಸಿಎಂ ತವರು ಜಿಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸ ಕೈಕೊಟ್ಟಿರುವುದರ ಅರಿವು ಎಲ್ಲರಿಗೂ ಆಗಿದೆ.

ಎಲ್ಲ ಜಿಪಂಗಳಲ್ಲೂ ಕೈ ಹಿಡಿದ ಮತದಾರ:

ಹಾನಗಲ್ಲ ಕ್ಷೇತ್ರದಲ್ಲಿ ಹಿಂದಿನಿಂದಲೂ ಕೆಲವು ಜಿಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಕ್ತಿಯುತವಾಗಿದೆ. ಇನ್ನು ಕೆಲವು ಕಡೆ ಬಿಜೆಪಿಗೆ ಮುನ್ನಡೆ ಬರುತ್ತಿತ್ತು. ಆದರೆ, ಈ ಸಲ ಎಲ್ಲ ಜಿಪಂ ಕ್ಷೇತ್ರಗಳಲ್ಲೂ ಮತದಾರರು(Voters) ಕಾಂಗ್ರೆಸ್‌ ಕೈಹಿಡಿದಿದ್ದಾರೆ. ಸಚಿವ ಶಿವರಾಮ ಹೆಬ್ಬಾರ(Shivaram Hebbar) ಉಸ್ತುವಾರಿ ವಹಿಸಿಕೊಂಡಿದ್ದ ಬಮ್ಮನಹಳ್ಳಿ ಜಿಪಂ ಕ್ಷೇತ್ರದಲ್ಲಿ ಬಿಜೆಪಿಗೆ 632 ಮತಗಳ ಹಿನ್ನಡೆಯಾಗಿದೆ. ಇಲ್ಲಿ ಬಿಜೆಪಿ 12,076 ಮತ ಪಡೆದಿದ್ದರೆ, ಕಾಂಗ್ರೆಸ್‌ 12,708 ಮತಗಳನ್ನು ಪಡೆದಿದೆ.

Hangal By Poll Result: ಬಿಎಸ್‌ವೈ, ವಿಜಯೇಂದ್ರಗೆ ಮನ್ನಣೆ ಸಿಗದೆ ಬಿಜೆಪಿ ಸೋತಿತೇ?

ಆಡೂರು ಜಿಪಂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸಮಬಲದ ಬೆಂಬಲ ವ್ಯಕ್ತವಾಗಿದೆ. ಇಲ್ಲಿ ಬಿಜೆಪಿ 13,258 ಮತಗಳನ್ನು ಪಡೆದರೆ, ಕಾಂಗ್ರೆಸ್‌ 13,378 ಮತಗಳನ್ನು ಪಡೆದಿದೆ. ಇಲ್ಲಿ ಕಾಂಗ್ರೆಸ್‌ ಕೇವಲ ​120 ಮತಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಹಿರೂರು ಜಿಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ಸಿಕ್ಕಿದೆ. ಇಲ್ಲಿ ಬಿಜೆಪಿ 11,677 ಮತಗಳನ್ನು, ಕಾಂಗ್ರೆಸ್‌ 13,487 ಮತಗಳನ್ನು ಪಡೆದಿದೆ. ​1,810 ಮತಗಳ ಮುನ್ನಡೆ ಕಾಂಗ್ರೆಸ್‌ಗೆ ಸಿಕ್ಕಿದೆ.
ಅಕ್ಕಿಆಲೂರು ಜಿಪಂ ವ್ಯಾಪ್ತಿಯಲ್ಲೂ ಬಿಜೆಪಿಗೆ 1,896 ಮತಗಳ ಹಿನ್ನಡೆಯಾಗಿದೆ. ಇಲ್ಲಿ ಬಿಜೆಪಿಗೆ 12,237 ಮತಗಳು ಬಂದಿದ್ದರೆ, ಕಾಂಗ್ರೆಸ್‌ಗೆ 14,133 ಮತಗಳು ಬಿದ್ದಿವೆ. ನರೇಗಲ್ಲ ಜಿಪಂ ವ್ಯಾಪ್ತಿಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ 840 ಮತಗಳನ್ನು ಹೆಚ್ಚು ಪಡೆದಿದೆ. ಇಲ್ಲಿ ಬಿಜೆಪಿಗೆ 12,364 ಮತ ಬಿದ್ದಿದ್ದರೆ, ಕಾಂಗ್ರೆಸ್‌ಗೆ 13,204 ಮತಗಳು ಬಿದ್ದಿವೆ. ಇನ್ನು ಹಾನಗಲ್ಲ ಪಟ್ಟಣದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ 2,075 ಹೆಚ್ಚು ಮತ ಪಡೆದಿದೆ. ಹೀಗೆ ಎಲ್ಲ ಕಡೆ ಕಾಂಗ್ರೆಸ್‌ ಲೀಡ್‌ ಪಡೆದುಕೊಂಡು ಒಟ್ಟು 7,373 ಮತಗಳ ಅಂತರದಿಂದ ಶ್ರೀನಿವಾಸ ಮಾನೆ ಜಯಭೇರಿ ಬಾರಿಸಿದ್ದಾರೆ.

ಮಾನೆ ಮುಂದಿದೆ ಸವಾಲು:

ಕಳೆದ ಮೂರೂವರೆ ವರ್ಷಗಳಿಂದ ಕ್ಷೇತ್ರದಲ್ಲೇ ಇದ್ದುದರಿಂದ ಶ್ರೀನಿವಾಸ ಮಾನೆ(Srinivas Mane) ಅವರಿಗೆ ಹಾನಗಲ್ಲ ಕ್ಷೇತ್ರದ ಹಳ್ಳಿಹಳ್ಳಿಗಳ ಪರಿಚಯವೂ ಇದೆ. ಜನರ ಬೇಕು-ಬೇಡಿಕೆಗಳ ಅರಿವಿದೆ. ಅವರ ಶಾಸಕ ಸ್ಥಾನದ ಅವಧಿ ಒಂದೂವರೆ ವರ್ಷಗಳು ಮಾತ್ರ ಇದ್ದು, ಅಲ್ಲಿಯವರೆಗೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿದೆ. ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು 2023ರ ಸಾರ್ವತ್ರಿಕ ಚುನಾವಣೆಯಲ್ಲಿ(General Election) ಜನರ ಮುಂದೆ ನಿಲ್ಲಬೇಕಿದೆ. ಆದ್ದರಿಂದ ಸಿಕ್ಕಿರುವ ಕಡಿಮೆ ಅವಧಿಯಲ್ಲಿ ಜನರಿಗೆ ಸ್ಪಂದಿಸಬೇಕಿದೆ. ಜತೆಗೆ, ಸಿ.ಎಂ. ಉದಾಸಿ(CM Udasi) ಅವರ ಅವಧಿಯಲ್ಲಿ ಆರಂಭಗೊಂಡಿದ್ದ ಏತ ನೀರಾವರಿ(Irrigation) ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಚುನಾವಣಾ ರಾಜಕೀಯ(Politics) ಇಲ್ಲಿಗೆ ಮುಗಿದಿದ್ದು, ಇನ್ನು ಕ್ಷೇತ್ರದ ಅಭಿವೃದ್ಧಿಯತ್ತ ಚಿತ್ತ ನೆಡಬೇಕಿದೆ. ಇದಕ್ಕೆ ಬಿಜೆಪಿಯವರೂ ಕೈಜೋಡಿಸಬೇಕಿದೆ.
 

click me!