
ಮಂಡ್ಯ (ಡಿ.25): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) ಪಕ್ಷಕ್ಕೆ ಶೇ.48ರಷ್ಟು ಮತ ಬಂದಿದ್ದು, ಇದು ಮುಂಬರುವ 2023ರ ವಿಧಾನಸಭಾ ಚುನಾವಣೆಗೆ (Assembly election) ದಿಕ್ಸೂಚಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಶೇ.41ರಷ್ಟುಮತ ಬಂದಿದ್ದರೆ, ಜೆಡಿಎಸ್ಗೆ (JDS) ಶೇ.12ರಷ್ಟು ಮಾತ್ರ ಮತ ಬಂದಿದೆ. ಹಾನಗಲ್ ಉಪ ಚುನಾವಣೆಯಲ್ಲೂ ಕಾಂಗ್ರೆಸ್ (Congress) ಪಕ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಮತ ಗಳಿಸಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಜನರು ಕಾಂಗ್ರೆಸ್ ಪಕ್ಷದತ್ತ ವಾಲಿದ್ದಾರೆ ಎಂಬುದರ ಸಂಕೇತವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನವಿರೋಧಿ ಸರ್ಕಾರ: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ (BJP) ನೇತೃತ್ವದ ಸರ್ಕಾರ ಜನವಿರೋಧಿಯಾಗಿದೆ. ತೈಲೋತ್ಪನ್ನ ಬೆಲೆಗಳು ಗಗನಕ್ಕೇರಿವೆ. ಸಿಲಿಂಡರ್ ಬೆಲೆ 350 ರು.ನಿಂದ 1000 ರು.ವರೆಗೂ ಹೆಚ್ಚಾಗಿದೆ. ವರ್ಷಕ್ಕೆ 15 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈವರೆವಿಗೂ ಉದ್ಯೋಗ ಸೃಷ್ಟಿಗೆ ಆದ್ಯತೆಯನ್ನೇ ನೀಡಿಲ್ಲ ಎಂದು ಹರಿಹಾಯ್ದರು.
ದುರಹಂಕಾರ ಪ್ರದರ್ಶನ: ರೈತರ (Farmers) ವಿರೋಧದ ನಡುವೆಯೂ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ ಒಂದು ವರ್ಷದ ಬಳಿಕ ವಾಪಸ್ ಪಡೆದಿದ್ದಾರೆ. ಇದರಿಂದಾಗಿ 700 ಮಂದಿ ರೈತರು ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ದುರಹಂಕಾರದ ನಡೆಯೇ ಕಾರಣ ಎಂದು ಟೀಕಿಸಿದರು.
ಕಮೀಷನ್ ಬಗ್ಗೆ ತನಿಖೆ ಇಲ್ಲ: ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ (BJP) ಸರ್ಕಾರ ಕಮೀಷನ್ ದಂಧೆಯಲ್ಲಿ ತೊಡಗಿದೆ. ಶೇ.40ರಷ್ಟುಕಮೀಷನ್ ಕೊಡಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ಮೋದಿಗೆ (Prime Minister Narendra modi) ಪತ್ರ ಬರೆದಿದ್ದಾರೆ. ಆದರೂ ಈವರೆವಿಗೂ ಯಾವುದೇ ತನಿಖೆ ನಡೆಸಿಲ್ಲ. ನಾನೂ ಭ್ರಷ್ಟಾಚಾರ ಮಾಡಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ ಎಂದು ಹೇಳುವ ಮೋದಿಯವರು ಈ ವಿಚಾರದಲ್ಲಿ ಏಕೆ ಮೌನ ವಹಿಸಿದ್ದಾರೆ. ಸಿಬಿಐ, ಇಡಿ, ಐಟಿಯಂತಹದ ತನಿಖಾ ಸಂಸ್ಥೆಗಳಿಂದ ತನಿಖೆಗೆ ಆದೇಶ ಮಾಡಬೇಕಿತ್ತು ಎಂದು ಕುಟುಕಿದರು.
ಕೋವಿಡ್ನಲ್ಲಿ ಭ್ರಷ್ಟಾಚಾರ: ಕೋವಿಡ್ನಂತಹ (Covid) ಸಾಂಕ್ರಾಮಿಕ ರೋಗವನ್ನು ಕೇವಲ 21 ದಿನಗಳಲ್ಲಿ ತೊಲಗಿಸುವುದಾಗಿ ಹೇಳಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ, ಜಾಗಟೆ ಬಾರಿಸಿ ಎಂದೆಲ್ಲಾ ಕರೆ ನೀಡಿದ್ದ ಮೋದಿ ರೋಗವನ್ನು ಹತೋಟಿಗೆ ತರುವಲ್ಲಿ ವಿಫಲರಾದರು. ವೆಂಟಿಲೇಟರ್, ಪಿಪಿಇ ಕಿಟ್ ಸೇರಿದಂತೆ ಔಷಧ ಖರೀದಿಯಲ್ಲೂ ಭಾರೀ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಭೂ ಕಬಳಿಕೆಗೆ ಒಳಗಾಗಿರುವ ಸಚಿವ ಭೈರತಿ ಬಸವರಾಜ್ ರಾಜೀನಾಮೆಗೆ ಕಾಂಗ್ರೆಸ್ (Congress) ಒತ್ತಾಯಿಸಿದೆ. ಆದರೂ ಈವರೆವಿಗೂ ಅವರನ್ನು ವಜಾ ಮಾಡಲಿಲ್ಲ. ಇಲ್ಲವೇ ಅವರಿಂದ ರಾಜೀನಾಮೆಯನ್ನೂ (Resignation) ಪಡೆಯಲಿಲ್ಲ. ಇದರ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತದೆ ಎಂದರು.
ಜಿಪಂ ಚುನಾವಣೆ ಪಲಾಯನ: ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳನ್ನು ಮುಂದೂಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಪಲಾಯನ ವಾದ ಅನುಸರಿಸುತ್ತಿದೆ. ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಜನಾಶೀರ್ವಾದ ಇಲ್ಲ ಎಂಬ ಕಾರಣಕ್ಕೆ ಇಲ್ಲ ಸಲ್ಲದ ನೆಪವೊಡ್ಡಿ ಚುನಾವಣೆ ಮುಂದೂಡುತ್ತಿದೆ. ಬಿಜೆಪಿ ಸಂಸದರು, ಶಾಸಕರು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಆದರೆ, ಆಡಳಿತ ನಡೆಸುವವರಿಗೆ ರಾಜ್ಯದ ಜನರು ಆಶೀರ್ವಾದ ಮಾಡುವ ಬದಲು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಜರಿದರು.
ಕೇಂದ್ರದಲ್ಲಿ ಈ ಹಿಂದೆ ಡಾ.ಮನ್ಮೋಹನ್ ಸಿಂಗ್ ನೇತೃತ್ವದ ಯುಪಿಎ (UPA) ಸರ್ಕಾರ ಉತ್ತಮವಾಗಿ ಆಡಳಿತ ನಡೆಸಿದೆ. ರಾಜ್ಯದಲ್ಲಿ 5 ವರ್ಷಗಳ ಕಾಲ ಸಿದ್ದರಾಮಯ್ಯ ಸರ್ಕಾರ ಉತ್ತಮ ಯೋಜನೆ ನೀಡಿದೆ. ರಾಷ್ಟ್ರದ ಜನತೆ ಎಲ್ಲವನ್ನೂ ತುಲನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಡಳಿತ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್. ಆತ್ಮಾನಂದ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಮಲ್ಲಾಜಮ್ಮ, ಮುಖಂಡರಾದ ಸುರೇಶ್ಕಂಠಿ ಹಾಗೂ ವಿಜಯಕುಮಾರ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.