Karnataka Politics : ಸಚಿವಗೆ ಸಿದ್ದರಾಮಯ್ಯ ನೇರ ಆಹ್ವಾನ

Kannadaprabha News   | Asianet News
Published : Dec 25, 2021, 10:39 AM ISTUpdated : Dec 25, 2021, 10:43 AM IST
Karnataka Politics : ಸಚಿವಗೆ  ಸಿದ್ದರಾಮಯ್ಯ ನೇರ ಆಹ್ವಾನ

ಸಾರಾಂಶ

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆ ವೇಳೆ ವಸತಿ ಸಚಿವ ವಿ.ಸೋಮಣ್ಣಗೆ ಆಹ್ವಾನ ‘ಈಗಲೂ ನಮ್ಮ ಗರಡಿಗೆ ಬರುತ್ತೀಯಾ’ ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ವಿಧಾನಸಭೆ (ಡಿ.25):   ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆ ವೇಳೆ ವಸತಿ ಸಚಿವ ವಿ.ಸೋಮಣ್ಣಗೆ (Somanna) ‘ಈಗಲೂ ನಮ್ಮ ಗರಡಿಗೆ ಬರುತ್ತೀಯಾ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸೂಚ್ಯವಾಗಿ ಹೇಳಿದ ಪ್ರಸಂಗ ಜರುಗಿತು. ಶುಕ್ರವಾರ ಕಲಾಪದಲ್ಲಿ ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಮತ್ತಷ್ಟು ಸಮಯ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸೋಮಣ್ಣ (Somanna), ಈ ಹಿಂದಿನಂತೆ ಸಿದ್ದರಾಮಯ್ಯ  ನೇರವಾಗಿ ಮಾತನಾಡುತ್ತಿಲ್ಲ. ಪದೇ ಪದೇ ಒಂದೇ ವಿಚಾರ ಪ್ರಸ್ತಾಪಿಸುತ್ತಿದ್ದೀರಿ ಎಂದು ಹೇಳಿದರು. ಆಗ ಸಿದ್ದರಾಮಯ್ಯ, ನಾನು ಆ ಭಾಗದ ಶಾಸಕನಾಗಿರುವ (MLA) ಕಾರಣ ಅಲ್ಲಿನ ಸಮಸ್ಯೆಗಳನ್ನು ಹೇಳಬೇಕಾಗಿರುವುದು ನನ್ನ ಕರ್ತವ್ಯ ಎಂದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಸೋಮಣ್ಣ (Somanna), ನೀವು ತಿಳಿದುಕೊಂಡಂತೆ ನಾನು ದಡ್ಡನಲ್ಲ. ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ ಮತ್ತು ಈಗ ಯಾರೊಂದಿಗೆಲ್ಲಾ ಒಡನಾಟ ಇಟ್ಟು ಕೊಂಡಿದ್ದೀರಾ ಎಂಬುದು ಗೊತ್ತಿದೆ. 35 ವರ್ಷಗಳ ಕಾಲ ನಿಮ್ಮ ಗರಡಿಯಲ್ಲಿದ್ದೆ ಎಂದು ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ (Siddaramaiah), ಈಗಲೂ ನಮ್ಮ ಗರಡಿಗೆ ಬರುತ್ತೀಯಾ ಎಂದು ಟಾಂಗ್‌ ಕೊಟ್ಟರು.

ಕಳ್ಳರಂತೆ  ಕಾಯ್ದೆ  ಜಾರಿ :  ಬಿಜೆಪಿ ಸರ್ಕಾರ(BJP Government) ಮತಾಂತರ ಕಾಯ್ದೆಯನ್ನು ಕಳ್ಳರ ರೀತಿ ಜಾರಿಗೆ ತರಲು ಹೊರಟಿದೆ. ಇದರ ವಿರುದ್ಧ ಸದನದ ಹೊರ, ಒಳಗೆ ಹಾಗೂ ಕಾನೂನು ರೀತಿಯಲ್ಲೂ ಹೋರಾಟ ಮಾಡಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮತಾಂತರ ನಿಷೇಧದ ವಿಚಾರವಾಗಿ ಬಿಜೆಪಿ ಸರ್ಕಾರ ಸಂವಿಧಾನ ಬಾಹಿರ ಕಾನೂನು ತರುತ್ತಿದೆ. ಈವರೆಗೆ ಆಮಿಷ ಹಾಗೂ ಪ್ರಚೋದನೆಗಳಿಗೆ ಒಳಗಾಗಿ ಮತಾಂತರವಾಗಿದಕ್ಕಿಂತ(Conversion) ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಿಂದಾದ ಅವಮಾನ ಹಾಗೂ ಆರ್ಥಿಕ, ಸಾಮಾಜಿಕ ಅಸಮಾನತೆಯಿಂದ ಮತಾಂತರ ಆಗಿದ್ದೇ ಜಾಸ್ತಿ ಎಂದರು.

ರಾಜ್ಯದಲ್ಲಿ(Karnataka) ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಜನರ ಗಮನ ಬೇರೆಡೆ ತಿರುಗಿಸಲು ಬಿಜೆಪಿ ಸರ್ಕಾರ ಹೊರಟಿದೆ. ಮತಾಂತರ ನಿಷೇಧ ಕಾಯ್ದೆ(Anti Conversion Bill) ಸಂವಿಧಾನ ಬಾಹಿರ ಮತ್ತು ಖಂಡನೀಯ. ನಾವು ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರು.

ಹಿಂದೂ ಧರ್ಮದಲ್ಲಿನ(Hinduism) ನ್ಯೂನತೆಗಳನ್ನು ಸರಿಪಡಿಸಲು ಯತ್ನಿಸಿದರೂ ಸುಧಾರಣೆ ಸಾಧ್ಯವಾಗಲಿಲ್ಲ. ಹೀಗಾಗಿ ತಾವು ಮತಾಂತರ ಆಗಿದ್ದಾಗಿ ಡಾ.ಅಂಬೇಡ್ಕರ್‌(Dr BR Ambedkar) ತಿಳಿಸಿದ್ದಾರೆ. ಜಾತಿ, ವರ್ಣ ವ್ಯವಸ್ಥೆಯ ನಡುವೆ ಗೌರವದಿಂದ ಬದುಕಲು ಸಾಧ್ಯವಿಲ್ಲ, ಅವಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೇ ಬಹುತೇಕರು ಮತಾಂತರ ಆಗಿದ್ದಾರೆ. ಆಮಿಷ, ಹೆದರಿಕೆಗೆ ಮತಾಂತರ ಆಗಿರುವುದು ಬಹಳ ಕಡಿಮೆ ಎಂದರು ಸಿದ್ದರಾಮಯ್ಯ.

ಮತಾಂತರ ನಿಷೇಧ ವಿಧೇಯಕ ವಿರುದ್ಧ ಕಾಂಗ್ರೆಸ್‌ ಉಗ್ರ ಹೋರಾಟ

ಮತಾಂತರ ನಿಷೇಧ ವಿಧೇಯಕದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ತೀವ್ರವಾಗಿ ವಿರೋಧಿಸಲು ಮಂಗಳವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಯಿತು.

ಇದೇ ವೇಳೆ ಗುರುವಾರ ನಡೆಯಲಿರುವ ಉತ್ತರ ಕರ್ನಾಟಕ(North Karnataka) ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ರಾಜ್ಯ ಸರ್ಕಾರವು(Government of Karnataka) ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಹಿಸಿರುವ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಜತೆಗೆ ಉತ್ತರ-ಕರ್ನಾಟಕ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚಿಸಲು ಅನುವಾಗುವಂತೆ ಅಧಿವೇಶನವನ್ನು ಒಂದು ವಾರ ವಿಸ್ತರಿಸಬೇಕು ಎಂದು ಸದನದಲ್ಲೂ ಧ್ವನಿ ಎತ್ತಲು ನಿರ್ಧರಿಸಲಾಯಿತು.

ಮಂಗಳವಾರ ಬೆಳಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೊರೋನಾ(Coronavirus) ನೆಪ ನೀಡಿ ಕಳೆದ ಎರಡು ವರ್ಷದಿಂದ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಿಲ್ಲ. ಜತೆಗೆ ಮಹದಾಯಿ ಹಾಗೂ ಭದ್ರಾ ಮೇಲ್ದಂಡೆ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಸರ್ಕಾರ ಬಂದರೆ ಒಂದೇ ತಿಂಗಳಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಬಿಜೆಪಿ ಪಕ್ಷ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದು ಇಷ್ಟುವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಬೇಕು ಎಂದು ತೀರ್ಮಾನಿಸಲಾಯಿತು. ಜತೆಗೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಘೋಷಿಸಿರುವ ಅನುದಾನ ಹಾಗೂ ನೀಡಿರುವ ಅನುದಾನದ ಅಂಕಿ-ಅಂಶ ಮುಂದಿಟ್ಟುಕೊಂಡು ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಬೇಕು ಎಂದು ಚರ್ಚಿಸಲಾಯಿತು.

40 ಪರ್ಸೆಂಟ್‌ ಕಮಿಷನ್‌, ಬಿಟ್‌ ಕಾಯಿನ್‌ ಬಗ್ಗೆ ಚರ್ಚೆ:

ಅಧಿವೇಶನದ ಆರಂಭದಲ್ಲೇ ಪ್ರಸ್ತಾಪಿಸಲು ಸಜ್ಜಾಗಿದ್ದ 40 ಪರ್ಸೆಂಟ್‌ ಕಮಿಷನ್‌ ವಿಚಾರ ಹಾಗೂ ಬಿಟ್‌ಕಾಯಿನ್‌ ವಿಚಾರದ ಬಗ್ಗೆಯೂ ಮಂಗಳವಾರದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ ಉತ್ತರ ಕರ್ನಾಟಕ ಚರ್ಚೆ ಹಾಗೂ ಮತಾಂತರ ನಿಷೇಧ ಕಾಯಿದೆ ನಡುವೆ ಈ ವಿಚಾರಗಳನ್ನು ಪ್ರಸ್ತಾಪಿಸಿದರೆ ವಿಷಯಾಂತರವಾಗುತ್ತದೆ. ಹೀಗಾಗಿ ಅವಕಾಶ ಸಿಕ್ಕರೆ ಮಾತ್ರ ಪ್ರಸ್ತಾಪಿಸಬೇಕು ಎಂದು ಕಾದು ನೋಡುವ ತಂತ್ರ ಅನುಸರಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿ ಹಲವರು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್