ಶಾಸಕರ ಈ ಅಸಮಾಧಾನಕ್ಕೆ ಮಣಿದ ಕಾಂಗ್ರೆಸ್ ನಾಯಕತ್ವ ಎಲ್ಲ ಶಾಸಕರಿಗೂ ಟಿಕೆಟ್ ನೀಡುವುದಾಗಿ ಸಭೆಯಲ್ಲೇ ಖಚಿತಪಡಿಸಿತು ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ(ಡಿ.21): ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್‌ಗಾಗಿ ಹಾಲಿ ಶಾಸಕರ ಕ್ಷೇತ್ರಗಳಿಗೂ ಅರ್ಜಿ ಆಹ್ವಾನಿಸಿದ ಪಕ್ಷದ ನಾಯಕರ ಧೋರಣೆಯನ್ನು ಕಾಂಗ್ರೆಸ್ ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದಿದೆ. ಶಾಸಕರ ಈ ಅಸಮಾಧಾನಕ್ಕೆ ಮಣಿದ ಕಾಂಗ್ರೆಸ್ ನಾಯಕತ್ವ ಎಲ್ಲ ಶಾಸಕರಿಗೂ ಟಿಕೆಟ್ ನೀಡುವುದಾಗಿ ಸಭೆಯಲ್ಲೇ ಖಚಿತಪಡಿಸಿತು ಎಂದು ಮೂಲಗಳು ತಿಳಿಸಿವೆ. ಬೆಳಗಾವಿಯಲ್ಲಿ ಸೋಮವಾರ ಸಂಜೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಘಟನೆ ನಡೆದಿದೆ.
ಹಾಲಿ ಶಾಸಕರಿರುವ ಕ್ಷೇತ್ರಗಳಿಂದಲೂ ಟಿಕೆಟ್‌ಗಾಗಿ ಅರ್ಜಿ ಪಡೆದಿರುವುದು ಹಲವು ಗೊಂದಲಗಳನ್ನು ಸೃಷ್ಟಿಸಿದೆ. ಅರ್ಜಿ ಸಲ್ಲಿಸಿದವರು ನಾವೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಕ್ಷೇತ್ರ ಮಟ್ಟದ ನಾಯಕರು, ಕಾರ್ಯಕರ್ತರಲ್ಲಿ ಬಣಗಳು ಸೃಷ್ಟಿಯಾಗುತ್ತಿದ್ದು, ಅನಗತ್ಯ ಗೊಂದಲಗಳಿಗೆ ಕಾರಣವಾಗುತ್ತಿದೆ ಎಂದು ಅಸಮಾಧಾನ ತೋಡಿಕೊಂಡರು ಎನ್ನಲಾಗಿದೆ.
ಬರೀ ಗಾಂಧಿ ಎಂಬ ಹೆಸರನ್ನು ಇಟ್ಟುಕೊಂಡರೆ ಎಲ್ಲರೂ ಮಹಾತ್ಮರಾಗುವುದಿಲ್ಲ: ಈಶ್ವರಪ್ಪ
ಈ ವೇಳೆ ಸುರ್ಜೇವಾಲಾ ಅವರು, ಆ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲಾ ಶಾಸಕರಿಗೂ ಟಿಕೆಟ್ ನೀಡಲಾಗುವುದು. ಇದನ್ನು ಸ್ಥಳೀಯ ಕಾಂಗ್ರೆಸ್ ಸಮಿತಿಗಳಿಗೂ ಮಾಹಿತಿ ನೀಡಲಾಗುವುದು ಎಂದು ಹೇಳಿ ಸಮಾಧಾನಪಡಿಸಿದರು.
ಅನುದಾನಕ್ಕೆ ಒತ್ತಾಯಿಸಲು ನಿರ್ಧಾರ:
ಇನ್ನು ಚುನಾವಣಾ ವರ್ಷವಾಗಿರುವುದರಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾದ ಒತ್ತಡವಿದೆ. ಆದರೆ, ಸರ್ಕಾರವು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 25 ಕೋಟಿ ರು. ಅನುದಾನವನ್ನು ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಬಿಡುಗಡೆ ಮಾಡುತ್ತಿದೆ. ಕಾಂಗ್ರೆಸ್ ಕ್ಷೇತ್ರಗಳಿಗೆ ಅನುದಾನ ಮಂಜೂರಾಗಿದ್ದರೂ ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಬೇಕು. ಇಲ್ಲದಿದ್ದರೆ ಕ್ಷೇತ್ರದಲ್ಲಿ ಕಾಮಗಾರಿಗಳು ನೆನೆಗುದಿಗೆ ಬೀಳಲಿದ್ದು, ಚುನಾವಣೆಗೆ ಕಷ್ಟವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ತಿಳಿದುಬಂದಿದೆ.
ಸದನದಲ್ಲಿ ಹೋರಾಟಕ್ಕೆ ನಿರ್ಧಾರ:
ಇನ್ನು ಸದನದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ, ಚಿಲುಮೆ ಮತದಾರರ ಪಟ್ಟಿಹಗರಣ, ಎಸ್ಸಿ-ಎಸ್ಟಿಮೀಸಲಾತಿ ಹೆಚ್ಚಳ, ರೈತರ ಸಮಸ್ಯೆ ಹಾಗೂ ಗಡಿ ವಿಚಾರವನ್ನು ಪ್ರಮುಖವಾಗಿ ಮುಂದಿಟ್ಟುಕೊಂಡು ಹೋರಾಟ ಮಾಡಬೇಕು ಎಂದು ನಿರ್ಧರಿಸಲಾಯಿತು.
ನಿಮ್ಮ ಮನೆಯ ನಾಯಿಯಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ಯಾ ಎಂದ ಖರ್ಗೆ: ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ
‘ಚಿಲುಮೆ’ ಮತದಾರರ ಪಟ್ಟಿಹಗರಣವು ರಾಷ್ಟ್ರೀಯ ಮಟ್ಟದಲ್ಲಿ ವಿವಾದ ಸೃಷ್ಟಿಸಿದ್ದು, ಅಧಿವೇಶನದಲ್ಲಿ ಸೂಕ್ತ ದಾಖಲೆಗಳೊಂದಿಗೆ ಅಕ್ರಮವನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಳ್ಳಬೇಕು. ಜತೆಗೆ 40 ಪರ್ಸೆಂಟ್ ಭ್ರಷ್ಟಾಚಾರದ ವ್ಯವಸ್ಥೆ ಮುಂದುವರೆದಿದೆ. ಅದನ್ನು ಬಲವಾಗಿ ಪ್ರಸ್ತಾಪ ಮಾಡಬೇಕು. ರೈತರ ಸಮಸ್ಯೆಗಳ ಪೈಕಿ ಬೆಂಬಲ ಬೆಲೆ ಸಿಗದಿರುವುದು, ಕಬ್ಬು ಬೆಳೆಗಾರರ ಸಮಸ್ಯೆ, ಜಾನುವಾರುಗಳಿಗೆ ಗಂಟು ರೋಗ (ಲಿಂಪಿಸ್ಕಿನ್) ಸಮಸ್ಯೆಗಳನ್ನು ಪ್ರಸ್ತಾಪಿಸಬೇಕು. ಈಗಾಗಲೇ ಸಾವಿರಾರು ಜಾನುವಾರುಗಳು ಮೃತಪಟ್ಟಿವೆ. ಗೋಮಾತೆ ಹೆಸರಿನಲ್ಲಿ ರಾಜಕೀಯ ಮಾಡುವ ಸರ್ಕಾರವು ಸೂಕ್ತ ಪ್ರಮಾಣದಲ್ಲಿ ಲಸಿಕೆ ಒದಗಿಸಿಲ್ಲ. ಜತೆಗೆ ಔಷಧ ಹಾಗೂ ಪಶು ಆ್ಯಂಬುಲೆನ್ಸ್ ವ್ಯವಸ್ಥೆ ಒದಗಿಸಿಲ್ಲ. ಈ ಬಗ್ಗೆ ಬಿಜೆಪಿ ಶಾಸಕರೇ ಆಕ್ರೋಶ ವ್ಯಕ್ತಪಡಿಸಿರುವುದನ್ನು ಸದನದ ಗಮನಕ್ಕೆ ತರಬೇಕು ಎಂದು ತೀರ್ಮಾನಿಸಲಾಯಿತು.
ಇನ್ನು ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾಗಿರುವ ತೊಗರಿಗೆ ‘ನೆಟೆ ರೋಗ’ ತಗುಲಿರುವ ವಿಚಾರವನ್ನು ಚರ್ಚಿಸಿ ಉತ್ತರ ಕರ್ನಾಟಕದ ರೈತರಿಗೆ ಆಗಿರುವ ಅನ್ಯಾಯವನ್ನು ಮುನ್ನೆಲೆಗೆ ತರಬೇಕು. ನೆಟೆರೋಗದಿಂದ ಬೀದರ್, ಯಾದಿಗಿರಿ ಜಿಲ್ಲೆಗಳಲ್ಲಿ 1.23 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿರುವುದಾಗಿ ಕೃಷಿ ಇಲಾಖೆ ಪ್ರಾಥಮಿಕ ವರದಿ ಸಲ್ಲಿಸಿದೆ. ಇದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಬೆಳೆ ನಾಶವಾಗಿದ್ದು, ಉತ್ತರ ಕರ್ನಾಟಕ ಭಾಗದ ರೈತರು ಅರ್ಧದಷ್ಟು ಇಳುವರಿಯನ್ನು ಕಳೆದುಕೊಂಡು ಚಿಂತಾಜನಕರಾಗಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ ನೀರಾವರಿ ಯೋಜನೆಗಳ ವಿಳಂಬದ ಕುರಿತೂ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.