ಕರ್ನಾಟಕದಾದ್ಯಂತ ಇನ್ನು ಕಾಂಗ್ರೆಸ್‌ ಬಸ್‌ ಯಾತ್ರೆ: ಡಿ.ಕೆ.ಶಿವಕುಮಾರ್‌

By Govindaraj SFirst Published Oct 25, 2022, 1:00 AM IST
Highlights

ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಎಲ್ಲಾ ನಾಯಕರು ಸೇರಿ ಸಾಮೂಹಿಕ ನಾಯಕತ್ವದಲ್ಲಿ ಬಸ್‌ ಯಾತ್ರೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು (ಅ.25): ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಎಲ್ಲಾ ನಾಯಕರು ಸೇರಿ ಸಾಮೂಹಿಕ ನಾಯಕತ್ವದಲ್ಲಿ ಬಸ್‌ ಯಾತ್ರೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಸ್‌ ಯಾತ್ರೆ ವಿಚಾರವಾಗಿ ಮಂಗಳವಾರ ದೆಹಲಿಯಲ್ಲಿ ಸಭೆ ನಿಗದಿಯಾಗಿತ್ತು. ಆದರೆ, ನನಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದೇನೆ. ಹೀಗಾಗಿ ಬುಧವಾರ ಹೋಗಿ ಹಿರಿಯ ನಾಯಕರೊಂದಿಗೆ ಕುಳಿತು ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದು ಕೇವಲ ನಾನೊಬ್ಬನೇ ತೀರ್ಮಾನಿಸುವ ವಿಚಾರವಲ್ಲ’ ಎಂದು ಹೇಳಿದರು.

‘ಪಕ್ಷದ ಹಿರಿಯ ನಾಯಕರು ಭಾರತ ಐಕ್ಯತಾ ಯಾತ್ರೆಯ ವೇಳೆ ಚರ್ಚೆ ನಡೆಸಿದ್ದು, ಯಾವ ವಿಚಾರದಲ್ಲಿ ಸುಧಾರಣೆ ಆಗಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ. ರಾಹುಲ್‌ ಗಾಂಧಿ ಅವರು ನಾಯಕರನ್ನು ಕೂರಿಸಿಕೊಂಡು ಹಲವು ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ. ಎಲ್ಲ ನಾಯಕರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ’ ಎಂದರು. ‘ಬಸ್‌ ಯಾತ್ರೆಯಲ್ಲಿ ಎಲ್ಲರೂ ಇರುತ್ತಾರಾ?’ ಎಂಬ ಪ್ರಶ್ನೆಗೆ, ‘ನಾವೆಲ್ಲಾ ಸಾಮೂಹಿಕ ನಾಯಕತ್ವದಲ್ಲೇ ಮುಂದೆ ಸಾಗುತ್ತೇವೆ. ಒಟ್ಟಾರೆ ಐಕ್ಯತಾ ಯಾತ್ರೆಯ ಸಂದೇಶವನ್ನು ಇಲ್ಲಿಗೆ ಬಿಡುವುದಿಲ್ಲ. ಪ್ರತಿ ಮನೆ-ಮನೆಗೂ ತೆಗೆದುಕೊಂಡು ಹೋಗುತ್ತೇವೆ. ಈ ನಿಟ್ಟಿನಲ್ಲಿ ಯಾತ್ರೆ ನಡೆಸುವ ಬಗ್ಗೆ ಬುಧವಾರ ದೆಹಲಿಯಲ್ಲಿ ಹಿರಿಯ ನಾಯಕರೊಂದಿಗೆ ಚರ್ಚೆಯಾಗಲಿದೆ’ ಎಂದು ಮಾಹಿತಿ ನೀಡಿದರು.

ಎಸ್ಸಿ ಎಸ್ಟಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು: ಡಿಕೆಶಿ ಹೇಳಿಕೆ

150 ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನಡೆಸುತ್ತಿರುವ ಐತಿಹಾಸಿಕ ಭಾರತ್‌ ಜೋಡೋ ಪಾದಯಾತ್ರೆ ಭಾನುವಾರ ಕರ್ನಾಟಕ ರಾಜ್ಯದಲ್ಲಿ ಮುಕ್ತಾಯಗೊಳ್ಳಲಿದ್ದು, ಬದಲಾವಣೆಯ ಹೆಜ್ಜೆಯಾಗಿರುವ ಈ ಯಾತ್ರೆಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 150 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಮೂಡಿಸಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. ಯಾತ್ರೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ರೈತರು ಮತ್ತು ಮಕ್ಕಳು ಭಾಗಿಯಾಗಿದ್ದಾರೆ. ಇವರು ಪಕ್ಷವನ್ನು ನೋಡಿಲ್ಲ, ಉತ್ತಮ ಭವಿಷ್ಯ, ದೇಶದಲ್ಲಿ ಶಾಂತಿ ಮರುಸ್ಥಾಪನೆ, ನಿತ್ಯದ ಸಮಸ್ಯೆಗಳ ವಿರುದ್ಧ ಹೋರಾಡಲು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಜೋಡೋ ಯಾತ್ರೆ ಪಕ್ಷ ಇಲ್ಲವೇ ಧರ್ಮದ ಆಧಾರದ ಮೇಲೆ ನಡೆಯುತ್ತಿರುವ ಯಾತ್ರೆಯಲ್ಲ, ಮಾನವೀಯತೆ ಹಾಗೂ ಮಾನವ ಧರ್ಮದ ಆಧಾರದ ಮೇಲೆ ಹೊರಟಿರುವ ಯಾತ್ರೆಯಾಗಿದೆ, ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಸದುದ್ದೇಶದಿಂದಲೆಯೇ ರಾಹುಲ್‌ ಗಾಂಧಿ ಅವರು ಹೆಜ್ಜೆ ಹಾಕುತ್ತಿದ್ದಾರೆ. ಹಿಂದೆ ಇಂದಿರಾ ಗಾಂಧಿ ಅವರನ್ನು ನೋಡಲು ಜನರು ಹಳ್ಳಿಗಳಿಂದ ಆಗಮಿಸಿ ಖುಷಿ ಪಡುತ್ತಿದ್ದರು. ಇಂದು ರಾಹುಲ್‌ ಗಾಂಧಿ ಅವನ್ನು ನೋಡಿ ಶುಭಕೋರಲು ಉತ್ಸುಕರಾಗಿ ಬರುತ್ತಿದ್ದಾರೆ. ಜಾತಿ, ಧರ್ಮ, ಪಕ್ಷ ಭೇದ ಮರೆತು ಎಲ್ಲರೂ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದು ಈ ನಡಿಗೆ ದೇಶಕ್ಕೆ ಒಂದು ಕೊಡುಗೆಯಾಗಿದೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ: ಖರ್ಗೆ ಆಯ್ಕೆಯಿಂದ ಭಾರತಕ್ಕೇ ಶಕ್ತಿ, ಡಿಕೆಶಿ

ನಾವು ಹಾಕಿದ ರಸ್ತೆ ಮೇಲೆ ಕಾಂಗ್ರೆಸ್‌ ಯಾತ್ರೆ ಎಂದು ಬಿಜೆಪಿಗರು ಮಾಡುತ್ತಿರುವ ಲೇವಡಿ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ ಕಾಂಗ್ರೆಸ್‌ ಕೊಟ್ಟಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ. ಕೈ ಪಕ್ಷ ದೇಶದ ಜನರಿಗೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ ಕೊಟ್ಟಿದೆ. ಅನೇಕ ಆಣೆಕಟ್ಟುಗಳನ್ನು ನಿರ್ಮಿಸಿ, ಅನ್ನಕ್ಕೆ ಅವಕಾಶ ಮಾಡಿದೆ. ಉದ್ಯೋಗ, ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳುವ ವ್ಯವಸ್ಥೆಯನ್ನು ಮಾಡಿದೆ. ಇದರ ಮೇಲೆ ಅಧಿಕಾರ ನಡೆಸುತ್ತಿರುವವರು ಬಿಜೆಪಿಗರು ಎಂದು ತಿರುಗೇಟು ನೀಡಿದರು.

click me!