ಚುನಾವಣಾ ಸಂದರ್ಭ ಬಂತು ಎಂದಾಕ್ಷಣ ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ, ತೊಡುವ ಬಟ್ಟೆ, ಆಡುವ ಮಾತು ಎಲ್ಲವೂ ಕೂಡಾ ಸ್ವಯಂಪ್ರೇರಿತವಾಗಿ ಧರ್ಮದ ವ್ಯಾಪ್ತಿಗೆ ಬಂದು ಬಿಡುತ್ತದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಮೈಸೂರು (ಅ.24): ಚುನಾವಣಾ ಸಂದರ್ಭ ಬಂತು ಎಂದಾಕ್ಷಣ ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ, ತೊಡುವ ಬಟ್ಟೆ, ಆಡುವ ಮಾತು ಎಲ್ಲವೂ ಕೂಡಾ ಸ್ವಯಂಪ್ರೇರಿತವಾಗಿ ಧರ್ಮದ ವ್ಯಾಪ್ತಿಗೆ ಬಂದು ಬಿಡುತ್ತದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ಕೊರೋನಾ ಸಂದರ್ಭದಲ್ಲಿ ಹೂಳುವುದಕ್ಕೂ ಜಾಗವಿಲ್ಲದೇ ನದಿಯ ದಡದಲ್ಲಿ, ಸಾರ್ವಜನಿಕ ಚಿತಾಗಾರದಲ್ಲಿ ಲೆಕ್ಕವಿಲ್ಲದಷ್ಟು ಜನರು ದಹಿಸಿ ಹೋದಾಗಲೂ ಕೂಡಾ ಲೆಕ್ಕಕ್ಕೆ ಬಾರದ ಧರ್ಮವು ಚುನಾವಣೆ ಸಂದರ್ಭದಲ್ಲಿ ಜಸ್ಟ್ ಎಡವಿ ಬಿದ್ದು ಸತ್ತರೂ ಕೂಡಾ ಹಿಂದೂ ಹತ್ಯೆ ಎಂಬ ಹಣೆಪಟ್ಟಿಯನ್ನು ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ.
ಇನ್ನು ಪ್ರತಿದಿನ ತಣ್ಣಗೆ ನಡೆಯುತ್ತಿದ್ದ ಕೋಲ ಎಂಬ ಜನಪದೀಯರ ಆಚರಣೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ನಮ್ಮ ಅಂತಾರಾಷ್ಟ್ರೀಯ ಧರ್ಮ ರಕ್ಷಕರು, ಒಂದು ಸಿನಿಮಾದಲ್ಲಿ ಆಕರ್ಷಕವಾಗಿ ತೋರಿಸಿದರು ಎಂಬ ಕಾರಣಕ್ಕೆ ಅದನ್ನು ಹಿಂದೂ ಧರ್ಮದ ಭಾಗ ಎಂದು ಬಿಂಬಿಸುತ್ತಾ ವಿಪರೀತ ಪ್ರಚಾರ ಪಡೆದುಕೊಳ್ಳುತ್ತಿರುವ ಧರ್ಮ ರಕ್ಷಕರು ಇದೇ ಚಿತ್ರದ ಪ್ರಮುಖ ಪಾತ್ರಧಾರಿಯಾದ ಕಿಶೋರ್ ಅವರು ಹೇಳುವಂತೆ ಕೋಲ ಮಾಡುವ ಅಸ್ಪೃಶ್ಯರನ್ನು ಜಾತಿಯ ಕಾರಣಕ್ಕೆ ಮನೆಯ ಒಳಗೆ ಬಿಟ್ಟುಕೊಳ್ಳದೇ ಇರುವ ಬಗ್ಗೆ ಏನನ್ನೂ ಮಾತಾಡುವುದಿಲ್ಲ ಎಂಬುದು ಬಹಿರಂಗ ಸತ್ಯ ಎಂದು ಅವರು ತಿಳಿಸಿದ್ದಾರೆ.
ಜನಸಂಕಲ್ಪ ಯಾತ್ರೆ ಆರಂಭಿಸಿ ಜನರ ಬಳಿ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ: ಎಚ್.ಸಿ.ಮಹದೇವಪ್ಪ
ಇನ್ನು ಈ ದೇಶದ ಜಾತೀಯತೆ ಮತ್ತು ಫ್ಯೂಡಲ್ ವರ್ಗಗಳ ಆಮಿಷ ಮತ್ತು ಕುತಂತ್ರದ ರಾಜಕಾರಣವನ್ನು ಚೆನ್ನಾಗಿಯೇ ವಿವರಿಸುತ್ತಾ ಒಂದು ಮಟ್ಟಿಗೆ ಬುಡಕಟ್ಟು ವರ್ಗಗಳ ಸಾಮಾಜಿಕ ಸ್ಥಿತಿಗತಿಯನ್ನು ಚೆನ್ನಾಗಿಯೇ ವಿವರಿಸಿರುವ ಕಾಂತಾರ ಎಂಬ ಚಿತ್ರದ ಮೂಲ ಆಶಯ ಮತ್ತು ಅದು ಸೃಷ್ಟಿಸಿ ಬಿಡಬಹುದಾದ ಜನಪ್ರಿಯ ಸಾಮಾಜಿಕ ತಿಳುವಳಿಕೆಗೆ ಹೆದರಿ ಬಹಳಷ್ಟುಕುತಂತ್ರದಿಂದ ಅದನ್ನು ಹಿಂದೂ ಧರ್ಮದ ಆಚರಣೆಯ ಸಿನಿಮಾ ಎಂದು ಬಿಂಬಿಸುತ್ತಿದ್ದಾರೆ. ನನ್ನ ಪ್ರಕಾರ ಇವರು ಈ ಸಿನಿಮಾಗೆ ಪ್ರಚಾರ ಕೊಡುತ್ತಿರುವುದು ಒಳ್ಳೆಯದೇ. ಏಕೆಂದರೆ ಈ ಚಿತ್ರದ ಮೂಲ ತಿಳುವಳಿಕೆಯ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡಿ, ಅದರ ವಾಸ್ತವ ಉದ್ದೇಶವನ್ನು ಮುನ್ನಲೆಗೆ ತಂದರೆ ಆಗ ಅದು ಈ ಹಿಂದುತ್ವ ವಾದಿಗಳು ಹೊಸೆದ ಕುತಂತ್ರದ ಹಗ್ಗಕ್ಕೆ ಅವರೇ ಕೊರಳು ಒಡ್ಡಿದಂತೆ ಆಗುತ್ತದೆ.
PFIನಂತಹ ಧಾರ್ಮಿಕ ಅತಿರೇಕದ ಸಂಘಟನೆಗಳನ್ನು ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ: ಎಚ್.ಸಿ.ಮಹದೇವಪ್ಪ
ಇನ್ನು ಈ ಜನಪ್ರಿಯ ಸಮಾಜಮುಖಿ ಚಿತ್ರದ ತಿಳಿವಳಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಧರ್ಮಾಂದರ ಕುತಂತ್ರದ ಬಗ್ಗೆ ಈ ಚಿತ್ರದ ಮುಖ್ಯ ಪಾತ್ರಧಾರಿಯೇ ನೇರವಾಗಿ ಮಾತನಾಡಿರುವುದು ಆರೋಗ್ಯಕರ ಬೆಳವಣಿಗೆಗಳಲ್ಲಿ ಒಂದಾಗಿದೆ. ಬರಿಯ ಸೈದ್ಧಾಂತಿಕ ಸಂಘರ್ಷದಲ್ಲೇ ಶಕ್ತಿ ಕಳೆದುಕೊಳ್ಳುತ್ತಾ ಬಂದಿರುವ ನಮ್ಮ ಬಂಧುಗಳು ಇಂತಹ ವಿಷಯಗಳನ್ನು ಹೆಚ್ಚು ಹೆಚ್ಚು ಒಗ್ಗಟ್ಟಿನಿಂದ ಮಾತನಾಡುವ ಜವಾಬ್ದಾರಿ ತೋರಬೇಕು ಎಂದು ಅವರು ತಿಳಿಸಿದ್ದಾರೆ. ಕಾಂತಾರ ಎಂದರೆ ಕಾಡು ಅದು ಧರ್ಮಾಂದರ ಚುನಾವಣಾ ಬೀಡಲ್ಲ ಎಂದು ಅವರು ಹೇಳಿದ್ದಾರೆ.