ನಾನು ರಾಜಕೀಯಕ್ಕೆ ಬರುವ ಮೊದಲು ಆಸ್ತಿ ವಿವರ ಸಲ್ಲಿಸಿದ್ದೇನೆ. ರಾಜಕೀಯಕ್ಕೆ ಬಂದ ಮೇಲೂ ಪ್ರತೀ ವರ್ಷ ಆಸ್ತಿ ಘೋಷಿಸಿಕೊಂಡು ಬಂದಿದ್ದೇನೆ. ನನ್ನ ಮೇಲೆ ಅಕ್ರಮ ಆಸ್ತಿ ಆರೋಪ ಮಾಡಿರುವವರು ಸಾಬೀತುಪಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸುವರ್ಣಸೌಧ (ಡಿ.27): ನಾನು ರಾಜಕೀಯಕ್ಕೆ ಬರುವ ಮೊದಲು ಆಸ್ತಿ ವಿವರ ಸಲ್ಲಿಸಿದ್ದೇನೆ. ರಾಜಕೀಯಕ್ಕೆ ಬಂದ ಮೇಲೂ ಪ್ರತೀ ವರ್ಷ ಆಸ್ತಿ ಘೋಷಿಸಿಕೊಂಡು ಬಂದಿದ್ದೇನೆ. ನನ್ನ ಮೇಲೆ ಅಕ್ರಮ ಆಸ್ತಿ ಆರೋಪ ಮಾಡಿರುವವರು ಸಾಬೀತುಪಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸುವರ್ಣಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿಕ್ಕಮಗಳೂರಿನ ಕೆಲ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಬೇನಾಮಿ ಆಸ್ತಿ ಗಳಿಕೆ ಸಂಬಂಧ ದೂರು ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ನನ್ನಪ್ಪ ಏನೂ ಮುಖ್ಯಮಂತ್ರಿ ಆಗಿರಲಿಲ್ಲ ಬೇನಾಮಿ ಆಸ್ತಿ ಮಾಡೋಕೆ. ನನ್ನ ಆಸ್ತಿಯೇನು ಕಾಂಗ್ರೆಸ್‌ನ ಕೆಲ ನಾಯಕರಂತೆ 800 ಪಟ್ಟು ಹೆಚ್ಚಳವಾಗಿಲ್ಲ. ನಮ್ಮ ಕುಟುಂಬದಲ್ಲಿ ನ್ಯಾಯವಾಗಿ ದುಡಿಯುವ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಲೋಕಾಯುಕ್ತ ಬಂದ್ ಮಾಡಿದವರು, ಒಂದು ಕಡೆ ಆಲೂಗಡ್ಡೆ ಹಾಕಿ ಚಿನ್ನ ತೆಗೆಯೋರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಾನು ಮಧ್ಯಮ ವರ್ಗದ ರೈತನ ಮಗ. ಪ್ರತೀ ವರ್ಷ ನನ್ನ ಆಸ್ತಿ ಘೋಷಿಸಿಕೊಂಡು ಬಂದಿದ್ದೇನೆ. ಅನುಮಾನ ಇರುವವರು ಲೋಕಾಯುಕ್ತಕ್ಕೆ ಹೋಗಿ ಪರಿಶೀಲಿಸಿಕೊಳ್ಳಲಿ’ ಎಂದರು.
ಡಿಕೆಶಿ ಕುಕ್ಕರ್ ಬಾಂಬ್ ಹೇಳಿಕೆ ಬಗ್ಗೆ ರವಿ ಪ್ರಸ್ತಾಪದಿಂದ ಗದ್ದಲ
ಗಾಂಜಾ ಆರೋಪಕ್ಕೂ ಕಿಡಿ: ಇದೇ ವೇಳೆ ತಾವು ಹೆಂಡ ಕುಡಿದು ಮಾತನಾಡುವುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾಡಿರುವ ಆರೋಪಕ್ಕೆ, ‘ನನ್ನ ರಕ್ತದಲ್ಲಿ ಗಾಂಜಾ, ಮದ್ಯಪಾನ ಮಾಡಿರುವ ಸಾಕ್ಷಿ ಸಿಕ್ಕಿದ್ರೆ ಮಾತನಾಡಲಿ. ಇಂತಹ ಆರೋಪ ಮಾಡಿರುವವರು ನನ್ನೊಂದಿಗೆ ಬರಲಿ. ಬೆಳಗಾವಿವರೆಗೂ ಓಡಿ ತೋರಿಸುತ್ತೇನೆ. ಅವರೂ ನನ್ನೊಂದಿಗೆ ಓಡಲಿ. ಆಗ ಕುಡಿದು ಓಡೋದಕ್ಕೆ ಆಗದವರು ಯಾರು ಅಂತ ಗೊತ್ತಾಗುತ್ತೆ’ ಎಂದರು.
ರವಿ, ಪ್ರಿಯಾಂಕ್ ಮಾತಿನ ಸಮರ: ಸಂವಿಧಾನ ವಿರೋಧಿಸಿ ರಾಮಲೀಲಾ ಮೈದಾನದಲ್ಲಿ ಆರ್‌ಎಸ್‌ಎಸ್ ಪ್ರತಿಭಟನೆ ನಡೆಸಿತು ಎಂಬ ಮಾತು ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿಯ ಸಿ.ಟಿ.ರವಿ ನಡುವೆ ಸವಾಲು-ಪ್ರತಿಸವಾಲು ಹಾಕಿದ ಪ್ರಸಂಗ ನಡೆಯಿತು. ಸೋಮವಾರ ಸದನದಲ್ಲಿ ಎಸ್‌ಸಿ/ಎಸ್‌ಟಿ ವರ್ಗಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ಚರ್ಚೆಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ಸಂವಿಧಾನ ವಿರೋಧಿಸಿ ರಾಮಲೀಲಾ ಮೈದಾನದಲ್ಲಿ 150 ಬಾರಿ ಆರ್‌ಎಸ್‌ಎಸ್, ಜನಸಂಘ ಸೇರಿದಂತೆ ಹಿಂದುತ್ವ ಸಿದ್ಧಾಂತದ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು ಎಂದು ಹೇಳಿಕೆ ನೀಡಿದರು.
ತಕ್ಷಣ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ಆರ್‌ಎಸ್‌ಎಸ್ ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಬೆನ್ನಿಗೆ ನಿಂತಿತ್ತು. ಆರ್‌ಎಸ್‌ಎಸ್ ಸಂವಿಧಾನ ಪ್ರತಿ ಸುಟ್ಟಿದ್ದರೆ ದಾಖಲೆ ಒದಗಿಸಬೇಕು. ಇಲ್ಲದಿದ್ದರೆ ಬೇಷರತ್ ಕ್ಷಮೆಯಾಚಿಸಬೇಕು. ಒಂದು ವೇಳೆ ದಾಖಲೆ ಒದಗಿಸಿದರೆ ತಾವು ಕ್ಷಮೆಯಾಚಿಸುತ್ತೇನೆ ಎಂದು ಸವಾಲು ಹಾಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ‘ಸಂವಿಧಾನವನ್ನು ಸುಟ್ಟಿರುವುದು ಸುಳ್ಳಾ?’ ಎಂದು ತರಾಟೆಗೆ ತೆಗೆದುಕೊಂಡರು. ಆಗ ಮತ್ತೊಮ್ಮೆ ಸಿ.ಟಿ.ರವಿ, ‘ದಾಖಲೆಗಳನ್ನು ನೀಡಬೇಕು. ಇಲ್ಲದಿದ್ದರೆ ಕಡತದಿಂದ ಆರ್‌ಎಸ್‌ಎಸ್ ಪದವನ್ನು ತೆಗೆದುಹಾಕಬೇಕು’ ಎಂದು ಹೇಳಿದರು.
ಕಾಂಗ್ರೆಸ್ಸಿಗರಿಗೆ ದೇಶದ ಸೈನಿಕರ ಮೇಲೆ ನಂಬಿಕೆ ಇಲ್ಲ: ಸಿ.ಟಿ.ರವಿ
ಆಗ ಪ್ರಿಯಾಂಕ್ ಖರ್ಗೆ, ‘ಅಂಬೇಡ್ಕರ್ ಅವರನ್ನು ಸೋಲಿಸಲು ಕಾಂಗ್ರೆಸ್ ಸಭೆಯಲ್ಲಿ ನಡೆದ ನಡಾವಳಿ ಬಗ್ಗೆ ದಾಖಲೆ ನೀಡುತ್ತಾರೆಯೇ? ಆರ್‌ಎಸ್‌ಎಸ್ ಸಂವಿಧಾನ ವಿರೋಧಿ ಎಂಬುದಕ್ಕೆ ಹಲವು ದಾಖಲೆಗಳನ್ನು ಒದಗಿಸುತ್ತೇನೆ’ ಎಂದು ಸವಾಲು ಹಾಕಿದರು. ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಇಬ್ಬರಿಗೂ ದಾಖಲೆಗಳನ್ನು ಒದಗಿಸುವಂತೆ ಹೇಳಿ ಚರ್ಚೆಗೆ ಮುಕ್ತಾಯ ಹೇಳಿದರು.