ವ್ಯಕ್ತಿಗಿರುವ ಆತ್ಮದಂತೆ ದೇಶಕ್ಕೂ ಅಸ್ಮಿತೆ ಹಾಗೂ ಆತ್ಮವಿದೆ. ಭಾರತೀಯತೆಯೇ ಈ ದೇಶದ ಆತ್ಮ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಶಿವಮೊಗ್ಗ (ಸೆ.12): ವ್ಯಕ್ತಿಗಿರುವ ಆತ್ಮದಂತೆ ದೇಶಕ್ಕೂ ಅಸ್ಮಿತೆ ಹಾಗೂ ಆತ್ಮವಿದೆ. ಭಾರತೀಯತೆಯೇ ಈ ದೇಶದ ಆತ್ಮ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಿಂದ ವಿಶ್ವವೇ ಭಾರತದತ್ತ ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಬಿಜೆಪಿಗೆ ಮಾತ್ರ ನಾಯಕರಲ್ಲ. ಅವರು ದೇಶದ ಪ್ರಧಾನಮಂತ್ರಿ, ಯಾರು ಭಾರತದ ಉನ್ನತಿ ಬಯಸುತ್ತಾರೆಯೋ ಅವರಿಗೆ ಪ್ರಧಾನಿ ಬಗ್ಗೆ ಗೌರವವಿದೆ. ಆದರೆ, ಯಾರಿಗೆ ಭಾರತೀಯತೆ ಕುರಿತು ಅನುಮಾನವಿದೆಯೋ, ಅಂಥವರಿಗೆ ಸಂಕಟವಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ 2024ರ ಏಪ್ರಿಲ್ ತಿಂಗಳಲ್ಲಿ ನಡೆಯಬಹುದು. ಮೈ ಮರೆವಿನ ಕ್ಷಣ ಘೋರ, ಭೀಕರ. ಇದು ರಾಷ್ಟ್ರವಿನಾಶಕ್ಕೆ ದಾರಿ. ನಾವು ರಾಜ್ಯದಲ್ಲಿ ಮೈ ಮರೆತಿದ್ದರಿಂದ ಅಧಿಕಾರ ಕಳೆದುಕೊಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಮೈ ಮರೆತರೆ ಕಳೆದುಕೊಳ್ಳುವುದು ಅಧಿಕಾರ ಮಾತ್ರವಲ್ಲ, ಕಳೆದುಕೊಳ್ಳುವುದು ದೇಶ ಹಾಗೂ ದೇಶದ ಅಭಿವೃದ್ಧಿ ಎಂದರು. ದೇಶದ ಅನೇಕರಿಗೆ ಮೆಕಾಲೆ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿದೆ. ಅಂತವರಿಗೆ ಭಾರತ ದೇಶದ ಹೆಸರಿನ ಬಗ್ಗೆ ಅನುಮಾನ ಹಾಗೂ ಅಪನಂಬಿಕೆ ಬೇರೂರಿದೆ. ಅವರನ್ನು ಗುಲಾಬಿ ಮಾನಸಿಕತೆಯಿಂದ ಹೊರತರಬೇಕು. ಇಲ್ಲದೆ ಇದ್ದರೆ ಈ ನಿಲುವು ದೇಶಕ್ಕೆ ಮಾರಕ. ಅದೇ ಉದ್ದೇಶಕ್ಕೆ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದರು.
ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್ ಒಡೆಯರ್
ಸೆ.30ರಿಂದ ಚುನಾವಣೆಗೆ ನೋಂದಣಿ: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಚೇತ್ರಕ್ಕೆ 2024ರ ಜೂನ್, ಜುಲೈ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸೆ.30ರಿಂದ ನೋಂದಣಿ ಕಾರ್ಯ ಆರಂಭವಾಗಲಿದೆ. ಶಿಕ್ಷಕರ ಕ್ಷೇತ್ರದಲ್ಲಿ ಪ್ರೌಢಶಾಲೆ ಹಾಗೂ ಅದಕ್ಕಿಂತ ಮೇಲ್ಪಟ್ಟ ಎಲ್ಲ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕಳೆದ 6 ವರ್ಷಗಳಲ್ಲಿ 3 ವರ್ಷ ನಿರಂತರ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಮತದಾರರಾಗಲು ಅರ್ಹರು. ಪದವೀಧರರ ಕ್ಷೇತ್ರಕ್ಕೆ ಪದವಿ ಪಡೆದು ಮೂರು ವರ್ಷ ಪೂರ್ಣಗೊಂಡಿದ್ದರೆ ಮಾತ್ರ ಮತದಾರರಾಗಲು ಅರ್ಹತೆ ಹೊಂದುತ್ತಾರೆ. ಅದೇ ಕಾರಣಕ್ಕೆ ಪ್ರತಿಯೊಂದು ವಿದ್ಯಾಸಂಸ್ಥೆಗೂ ಸಿಬ್ಬಂದಿ ನೇಮಕ ಮಾಡಿ, ದಾಖಲಾತಿ ಮಾಡಿಸಬೇಕು ಎಂದು ತಿಳಿಸಿದರು.
ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನೈಋತ್ಯ ಪದವಿಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಆರು ಜಿಲ್ಲೆಗಳು ಒಳಗೊಂಡಿವೆ. ವಿದ್ಯಾವಂತ ಹಾಗೂ ಪ್ರಜ್ಞಾವಂತ ಮತದಾರರನ್ನು ಮಾತಿನಲ್ಲಿ ಮನವೊಲಿಸಲು ಸಾಧ್ಯವಿಲ್ಲ. ಅವರು ಮನಸಾರೆ ಒಪ್ಪಿಕೊಳ್ಳಬೇಕು. ಆದ್ದರಿಂದ ಚುನಾವಣೆಗೆ ಪೂರ್ವ ಸಿದ್ಧತೆ ನಡೆಸಿಕೊಂಡು ಮುನ್ನಡೆಯುವ ಕಾರ್ಯ ಒಟ್ಟಾಗಿ ಮಾಡಬೇಕು ಎಂದರು. ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಬಿ.ವೈ.ವಿಜೇಯೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ, ವಿಧಾನ ಪರಿಷತ್ತು ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ವಿಭಾಗ ಪ್ರಭಾರ ಗಿರೀಶ್ ಪಟೇಲ್, ಎ.ಎನ್. ನಟರಾಜ್, ಬಿ.ಕೆ.ಶ್ರೀನಾಥ್, ಶಿವರಾಜ್, ನವೀನ್ ಹೆದ್ದೂರು ಪಾಲ್ಗೊಂಡಿದ್ದರು.