ಬಿಜೆಪಿ ಬ್ಯಾನರ್‌ನಲ್ಲಿ ಸಿಎಂ ಸಿದ್ದು ಪೋಟೋ: ಸಾಮಾಜಿಕ ಜಾಲತಾಣದಲ್ಲಿ ವೈರಲ್‌

By Kannadaprabha NewsFirst Published May 29, 2023, 8:12 AM IST
Highlights

ಶಿವಮೊಗ್ಗ ನಗರದ ನೂತನ ಶಾಸಕರ ಕಚೇರಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವೇದಿಕೆ ಮೇಲೆ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಬಿಜೆಪಿ ನಾಯಕರ ಸಾಲಿನಲ್ಲಿ ಸಿದ್ದರಾಮಯ್ಯನವರ ಫೋಟೋ ಹಾಕಲಾಗಿದ್ದು, ಇದು ಜನರಲ್ಲಿ ಆಶ್ಚರ್ಯ ಮೂಡಿ​ಸಿದೆ. 

ಶಿವಮೊಗ್ಗ (ಮೇ.29): ಶಿವಮೊಗ್ಗ ನಗರದ ನೂತನ ಶಾಸಕರ ಕಚೇರಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವೇದಿಕೆ ಮೇಲೆ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಬಿಜೆಪಿ ನಾಯಕರ ಸಾಲಿನಲ್ಲಿ ಸಿದ್ದರಾಮಯ್ಯನವರ ಫೋಟೋ ಹಾಕಲಾಗಿದ್ದು, ಇದು ಜನರಲ್ಲಿ ಆಶ್ಚರ್ಯ ಮೂಡಿ​ಸಿದೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಗ​ರದ ಶಿವಪ್ಪ ನಾಯಕ ಸಿಟಿ ಸೆಂಟರ್‌ ಮಾಲ್‌ ಪಕ್ಕದಲ್ಲಿರುವ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರ ನೂತನ ಕಚೇರಿಯನ್ನು ಭಾನುವಾರ ಉದ್ಘಾಟಿಸಲಾಯಿತು. 

ಬಿಜೆಪಿ ನಾಯಕರೇ ಇದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಫೋಟೋ ರಾರಾಜಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ವಿಚಾರವಾಗಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಶಾಸಕ ಚನ್ನಬಸಪ್ಪ, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ಹೀಗಾಗಿ ಅವರ ಫೋಟೋವನ್ನು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದರು. ರಾಜಕಾರಣವೇ ಬೇರೆ, ಗೌರವವೇ ಬೇರೆ. ನಾವು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ನೀಡುತ್ತೇವೆ. ಹೀಗಾಗಿ ಅವರ ಫೋಟೋವನ್ನು ಹಾಕಲಾಗಿದೆ. ಬೇರೆ ಯಾವ ಉದ್ದೇಶನೂ ಇಲ್ಲ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಮಳೆ ಅನಾಹುತಕ್ಕೆ ಸ್ಪಂದಿಸಲು ಗುದ್ದಲಿ, ಮಚ್ಚು ಹಿಡಿದ ಟ್ರಾಫಿಕ್‌ ಪೊಲೀಸರು!

ಕಣ್ಣೀರು ಹಾಕಿ​ಸುವ ಕೆಲಸ ಮಾಡ​ಲ್ಲ: ​ನಾನು ಶಾಸಕ ಆಗಿರುವುದರ ಹಿಂದೆ ಸಾವಿರಾರು ಕಾರ್ಯಕರ್ತರ ಶ್ರಮವಿದೆ. ಸಂಘಟನೆಯ ಶಕ್ತಿ ಮುಂದೆ ಬೇರೆ ಯಾವುದೇ ಶಕ್ತಿ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಹಾಗೂ ಪರಿವಾರದ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ ಎಂದು ನೂತನ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಹೇಳಿದರು. ನಗ​ರದ ಶಿವಪ್ಪ ನಾಯಕ ಸಿಟಿ ಸೆಂಟರ್‌ ಮಾಲ್‌ ಪಕ್ಕದಲ್ಲಿರುವ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರ ನೂತನ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ತಾಯಿಯ ಋುಣವನ್ನು ಹೇಗೆ ತೀರಿಸಲು ಸಾಧ್ಯವಿಲ್ಲವೊ ಅದೇ ರೀತಿ ಸಂಘಟನೆ ಋುಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. 

ಕಚೇರಿಗೆ ಯಾರೇ ಬಂದರೂ ಅವರ ಸಮಸ್ಯೆಯ ಪರಿಹಾರಕ್ಕೆ ಶ್ರಮಪಡುತ್ತೇನೆ. ಕಾರ್ಯಕರ್ತರ ಕಣ್ಣಲ್ಲಿ ಕಣ್ಣೀರು ಹಾಕಿಸುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ. ಸಂಘಟನೆ ಉದ್ದೇಶಗಳ ಈಡೇರಿಕೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸರ್ಕಾರ ಬಂದಿದೆ ಎಂಬ ಅಮಲಿನಲ್ಲಿದ್ದಾರೆ. ಈ ಅಮಲಿನಲ್ಲಿ ಅವರು ಅನೇಕ ಮಾತುಗಳ​ನ್ನಾ​ಡು​ತ್ತಿ​ದ್ದಾರೆ. ಆರ್‌ಎಸ್‌ಎಸ್‌ ಬ್ಯಾನ್‌ ಮಾಡುತ್ತೇವೆ ಎನ್ನುತ್ತಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವ ಚಿಂತನೆ ಇಲ್ಲ ಎಂದಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಈಗಲೇ ಅಧಿಕಾರದ ಮದ: ಶಾಸಕ ಎಸ್‌.ಆರ್‌.ವಿಶ್ವನಾಥ್‌ ವಾಗ್ದಾಳಿ

ನಾವು ಸೋತಿರಬಹುದು. ಆದರೆ, ಓಟ್‌ ಶೇರಿಂಗ್‌ನಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದಿದ್ದೇವೆ. ಎಲ್ಲ ಜಾತಿ, ಧರ್ಮದವರು ರಾಷ್ಟ್ರೀಯ ವಿಚಾರಧಾರೆ ಹೊಂದಿರುವ ಬಿಜೆಪಿಗೆ ಮತ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅವರ ಅಮಲನ್ನು ಇಳಿಸಬೇಕು. ಜನ ನಮ್ಮ ಸಿದ್ಧಾಂತ ಒಪ್ಪಿದ್ದಾರೆ. ಯಾವುದೇ ಸಮಯದಲ್ಲಿ ವಿಧಾನಸಭೆ ಚುನಾವಣೆ ಬಂದರೆ ಬಿಜೆಪಿಯೆ ಗೆಲ್ಲುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಈ ದಿಕ್ಕಿನಲ್ಲಿ ನಾವೆಲ್ಲಾ ಕೆಲಸ ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಸದಸ್ಯ ಡಿ.ಎಸ್‌.ಅರುಣ್‌, ಮುಖಂಡರಾದ ಭಾನುಪ್ರಕಾಶ್‌, ಗಿರೀಶ್‌ ಪಟೇಲ, ಮೇಯರ್‌ ಶಿವಕುಮಾರ್‌, ಲಕ್ಷ್ಮಿ ಶಂಕರ್‌ ನಾಯಕ್‌, ಜ್ಞಾನೇಶ್ವರ್‌ ಮತ್ತಿತರರಿದ್ದರು.

click me!