ನಾವು ಓದಿಯೂ ಅನಕ್ಷರಸ್ಥರಂತೆ ನಡೆದುಕೊಳ್ಳುವುದಾದರೆ ಶಿಕ್ಷಣ ಏಕೆ ಬೇಕು?. ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಚಿಂತನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು (ಅ.17): ನಾವು ಓದಿಯೂ ಅನಕ್ಷರಸ್ಥರಂತೆ ನಡೆದುಕೊಳ್ಳುವುದಾದರೆ ಶಿಕ್ಷಣ ಏಕೆ ಬೇಕು?. ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಚಿಂತನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಯುವರಾಜ ಕಾಲೇಜಿನಲ್ಲಿ ಸೋಮವಾರ ಹಿರಿಯ ವಿದ್ಯಾರ್ಥಿಗಳ ಸಂಘದ 20ನೇ ವಾರ್ಷಿಕ ಸರ್ವಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಪಡೆದು ಕುವೆಂಪು ಅವರು ಹೇಳಿದಂತೆ ವಿಶ್ವಮಾನವರಾಗಿ ಬಾಳಬೇಕು. ಸ್ನಾತಕೋತ್ತರ, ಪಿಎಚ್. ಡಿ ಪದವಿ ಪಡೆದು ಜಾತಿ ಮಾಡುವುದಾದರೇ ಅನಕ್ಷರಸ್ಥರಿಗೂ, ಓದಿದವರಿಗೂ ಏನು ವ್ಯತ್ಯಾಸವೇನು ಎಂದು ಅವರು ಪ್ರಶ್ನಿಸಿದರು.
ವಿಜ್ಞಾನ ಓದಿದವರು ವೈಜ್ಞಾನಿಕವಾಗಿ ಚಿಂತಿಸದೆ ಇರುವುದು ದೇಶದ ದೊಡ್ಡ ದುರಂತ. ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ಏರಬೇಕೆ ಹೊರತು ಹಣೆ ಬರಹ ಎಂದು ಕುಳಿತರೆ ಯಾವ ಸಾಧನೆಯನ್ನೂ ಮಾಡಲು ಆಗದು. ನಮ್ಮ ತಂದೆ ಮಾತು ಕೇಳಿ ನಾನು ಕಾನೂನು ಪದವಿಗೆ ಸೇರದಿದ್ದರೆ ನಾನು ಕುರಿ ಕಾಯುತ್ತ ಇರಬೇಕಿತ್ತು. ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು. ಸಿಗುವ ಅವಕಾಶ ಬಳಸಿಕೊಂಡಾಗ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವೇ ಹೊರತು, ಹಣೆಬರಹವೆಂದು ಕುಳಿತರೆ ಯಾವ ಸಾಧನೆಯೂ ಆಗದು. ನಾವು ಹುಟ್ಟುವಾಗ ಬ್ರಹ್ಮನೇನೂ ಹಣೆ ಮೇಲೆ ಬರೆದು ನಮ್ಮನ್ನು ಕಳುಹಿಸುವಾಗ ಇಂತದ್ದೆ ಕೆಲಸ ಮಾಡು ಎಂದು ಹೇಳಿ ಕಳುಹಿಸಿರುವುದಿಲ್ಲ.
ಹೆದರಿಸಿ ರಾಜಕಾರಣ ಮಾಡುವುದೇ ಡಿಕೆಶಿ ಸ್ಟೈಲ್: ಸಿ.ಟಿ.ರವಿ
ಯಾವುದನ್ನೇ ಆದರೂ ಮೂಢರಂತೆ ಅನುಸರಿಸಬಾರದು. ವೈಜ್ಞಾನಿಕವಾಗಿ ವಿಚಾರ ಮಾಡಬೇಕು ಎಂದು ಅವರು ಹೇಳಿದರು. ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಸಮಾಜದ ಹಿನ್ನೆಡೆ ತಪ್ಪಿಸಲು ಕಂದಾಚಾರ, ಮೌಢ್ಯಗಳಿಂದ ದೂರವಾಗಬೇಕು. ಬುದ್ಧ– ಬಸವ– ಅಂಬೇಡ್ಕರ್ ಅವರ ತತ್ವಾದರ್ಶ ಪಾಲಿಸಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಕೆಲವರ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ನಿರ್ಮಾಣವಾಗಿದೆ. ಅವಕಾಶ ವಂಚಿತರ ಪರವಾಗಿರುವುದೇ ಸಾಮಾಜಿಕ ನ್ಯಾಯ. ಸಂಪತ್ತು– ಅಧಿಕಾರ ಪ್ರತಿಯೊಬ್ಬರಿಗೂ ಹಂಚಿಕೆಯಾಗಬೇಕಿದೆ ಎಂದು ಅವರು ತಿಳಿಸಿದರು.
ಎಲ್ಲರ ಆರ್ಥಿಕ, ಸಾಮಾಜಿಕ ಸಬಲೀಕರಣವಾಗದಿದ್ದರೆ ದೇಶದ ಸಾಮಾಜಿಕ ವ್ಯವಸ್ಥೆ ಚಲನೆ ಇಲ್ಲದೇ ನಿಂತ ನೀರಾಗುತ್ತದೆ. ಸಾಮಾಜಿಕ, ಆರ್ಥಿಕ, ರಾಜಕೀಯ ವ್ಯವಸ್ಥೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು. ಆಗ ಮಾತ್ರ ಕೆಲಸ ಮಾಡಲು ಸಾಧ್ಯ. ಇತಿಹಾಸ ಗೊತ್ತಿಲ್ಲದೇ ಇದ್ದರೇ ಭವಿಷ್ಯ ನಿರ್ಮಾಣ ಅಸಾಧ್ಯ ಎಂದು ಅವರು ಹೇಳಿದರು. ರಾಜ್ಯ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಎಲ್ಲಾ ಜನರ ಅಭಿವೃದ್ಧಿಗೆ ಶ್ರಮಿಸಿದರು. ಅವರಿಲ್ಲದಿದ್ದರೆ ಕಾವೇರಿ ನಮಗೆ ಸಿಗುತ್ತಿರಲಿಲ್ಲ. ಭತ್ತ– ಕಬ್ಬು ಬೆಳೆಯಲು ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.
1949ರ ನ. 25 ರಂದು ಸಂಸದೀಯ ಭಾಷಣದಲ್ಲಿ ಅಂಬೇಡ್ಕರ್, ಅಸಮಾನತೆ ಇರುವ ವೈರುಧ್ಯದ ಸಮಾಜವನ್ನು ಪ್ರವೇಶಿಸುತ್ತಿದ್ದು, ಸಾಮಾಜಿಕ ಅಸಮಾನತೆಯಿಂದ ನರಳುತ್ತಿರುವವರಿಗೆ ನ್ಯಾಯ ನೀಡದೇ ಹೋದರೆ, ಅವರೇ ರಾಜಕೀಯ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುವುದಾಗಿ ಎಚ್ಚರಿಸಿದ್ದರು. ನಾನು ಎಂದಿಗೂ ಸಾಮಾಜಿಕ ನ್ಯಾಯದ ಪರವೇ ಹೊರತು ಯಾವ ಜಾತಿ ವಿರೋಧಿಯೂ ಅಲ್ಲ. ಅವಕಾಶ ವಂಚಿರಾದವರ ಪರ ಎಂದು ಅವರು ಪ್ರತಿಪಾದಿಸಿದರು.
ಸಂವಿಧಾನದ ವಿರುದ್ಧ ಮಾತನಾಡಿದವರಿಗೂ ಚಪ್ಪಾಳೆ ತಟ್ಟುವ ಸ್ಥಿತಿ ಬಂದೊದಗಿದೆ. ಸಾಮಾಜಿಕ ವ್ಯವಸ್ಥೆಯ ಪ್ರಭಾವದಿಂದ ವಿಶ್ವಮಾನವರಾದ ಮಕ್ಕಳು ಅಲ್ಪಮಾನವರಾಗಿ ಬಿಡುತ್ತಾರೆ. ಅದನ್ನು ತಪ್ಪಿಸಬೇಕು. ಯಾವುದೇ ಕ್ಷೇತ್ರದ ಉದ್ಯೋಗಿ ಆಗಿದ್ದರೂ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು. ‘ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್, ಸರ್ ಎಂ.ವಿಶ್ವೇಶ್ವರಯ್ಯ ಅವರೊಡಗೂಡಿ ನಾಲ್ವಡಿ ಅವರು ಶಿಕ್ಷಣ ಸಂಸ್ಥೆ, ಕೈಗಾರಿಕೆ ಆರಂಭಿಸಿದ್ದರಿಂದ ಮೈಸೂರು ಸಂಸ್ಥಾನ ಅಭಿವೃದ್ಧಿ ಹೊಂದಿತು ಎಂದು ಅವರು ವಿವರಿಸಿದರು. ‘20 ವರ್ಷದ ಹಿಂದೆ ಸಂಘದ ಉದ್ಘಾಟನೆ ವೇಳೆ ಬರಲಾಗಲಿಲ್ಲ. ಈಗ ಬಂದಿದ್ದೇನೆ. ಐದು ವರ್ಷದಲ್ಲಿ ಯುವರಾಜ ಕಾಲೇಜು ಶತಮಾನೋತ್ಸವ ನಡೆಯಲಿದ್ದು, ಆ ವೇಳೆಯೂ ಬರುತ್ತೇನೆ ಎಂದರು.
ಜನರು ನನ್ನನ್ನು ಮನೆಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ಡಾ.ಡಿ. ತಿಮ್ಮಯ್ಯ, ಮರಿತಿಬ್ಬೇಗೌಡ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜಾ, ಪ್ರಾಂಶುಪಾಲ ಪ್ರೊ.ಎಚ್.ಸಿ. ದೇವರಾಜೇಗೌಡ, ಖಜಾಂಚಿ ಪ್ರೊ.ಆರ್. ಶೇಖರ್ ನಾಯಕ್, ಕಾರ್ಯದರ್ಶಿ ಪ್ರೊ.ಸಿ. ಸುಮಂಗಲಾ ಮೊದಲಾದವರು ಇದ್ದರು.