ಕರ್ನಾಟಕದ ಬಳಿಕ ತಮಿಳ್ನಾಡಲ್ಲಿ ಅಮುಲ್‌ ಕ್ಯಾತೆ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

By Kannadaprabha News  |  First Published May 26, 2023, 6:02 AM IST

ಕರ್ನಾಟಕದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯ ವೇಳೆ ಭಾರೀ ಗದ್ದಲಕ್ಕೆ ಕಾರಣವಾಗಿದ್ದ ಅಮುಲ್‌ ಹಾಲು ವಿವಾದ ಇದೀಗ ನೆರೆಯ ತಮಿಳ್ನಾಡಿಗೂ ಕಾಲಿಟ್ಟಿದೆ. 


ಚೆನ್ನೈ (ಮೇ.26): ಕರ್ನಾಟಕದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯ ವೇಳೆ ಭಾರೀ ಗದ್ದಲಕ್ಕೆ ಕಾರಣವಾಗಿದ್ದ ಅಮುಲ್‌ ಹಾಲು ವಿವಾದ ಇದೀಗ ನೆರೆಯ ತಮಿಳ್ನಾಡಿಗೂ ಕಾಲಿಟ್ಟಿದೆ. ಗುಜರಾತ್‌ ಮೂಲದ ಹೈನೋತ್ಪನ್ನ ಸಂಸ್ಥೆಯಾದ ಅಮುಲ್‌, ಸಹಕಾರ ತತ್ವಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಹಾಲು ಸಂಗ್ರಹಣೆ, ಸಂಸ್ಕರಣೆ ಮತ್ತು ಶೀತಲೀಕರಣ ಘಟಕ ಆರಂಭಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ದೂರಿದ್ದಾರೆ. ಅಲ್ಲದೆ ಕೂಡಲೇ ಹಾಲು ಸಂಗ್ರಹ ಸ್ಥಗಿತಗೊಳಿಸುವಂತೆ ಅಮುಲ್‌ಗೆ ಸೂಚಿಸಲು ಕೋರಿ ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್‌ ಶಾಗೆ ಪತ್ರ ಬರೆದಿದ್ದಾರೆ.

‘ಇದುವರೆಗೂ ರಾಜ್ಯದಲ್ಲಿ ತನ್ನ ಮಳಿಗೆಗಳ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾತ್ರ ಮಾಡುತ್ತಿದ್ದ ಅಮುಲ್‌ ಸಂಸ್ಥೆಯು, ತನ್ನ ಬಹುರಾಜ್ಯ ಸಹಕಾರ ಲೈಸೆನ್ಸ್‌ ಉಪಯೋಗಿಸಿಕೊಂಡು ಕೃಷ್ಣಗಿರಿ ಜಿಲ್ಲೆಯಲ್ಲಿ ಶೀತಲೀಕರಣ ಮತ್ತು ಸಂಸ್ಕರಣಾ ಘಟಕವನ್ನು ಆರಂಭಿಸಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಅಲ್ಲದೆ ರೈತ ಉತ್ಪಾದಕ ಸಂಘಟನೆಗಳು ಮತ್ತು ಸ್ವಸಹಾಯ ಸಂಘಗಳ ಮೂಲಕ ಕೃಷ್ಣಗಿರಿ, ಧರ್ಮಪುರಿ, ವೆಲ್ಲೋರ್‌, ರಾಣಿಪೇಟ್‌, ತಿರುಪತ್ತೂರು, ಕಾಂಚೀಪುರಂ ಮತ್ತು ತಿರುವಳ್ಳೂರಿನಲ್ಲಿ ಹಾಲು ಸಂಗ್ರಹಕ್ಕೂ ನಿರ್ಧರಿಸಿದೆ’ ಎಂದಿದ್ದಾರೆ.

Tap to resize

Latest Videos

ಸ್ತ್ರೀಯರಿಗೆ ಫ್ರೀ ಟಿಕೆಟ್‌ ಕೊಟ್ಟು ನಮ್ಮ ಕಾಪಾಡಿ: ಸಾರಿಗೆ ನೌಕರರ ಅಳಲು!

‘ಒಂದು ಸಹಕಾರ ಸಂಘಟನೆ ಮತ್ತೊಂದು ಸಹಕಾರ ಸಂಘಟನೆಯ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡದೇ ಇರುವುದು ದೇಶದ ಸಹಕಾರ ವಲಯದಲ್ಲಿ ಬೆಳೆದುಬಂದ ಪದ್ಧತಿ. ಹೀಗಾಗಿ ಅಮುಲ್‌ ಇದೀಗ ತಮಿಳುನಾಡಿನಲ್ಲಿ ಹಾಲು ಸಂಗ್ರಹ, ಶೀತಲೀಕರಣ ಮತ್ತು ಸಂಸ್ಕರಣಾ ಘಟಕ ಆರಂಭಿಸಲು ಮುಂದಾಗಿರುವುದು ಶ್ವೇತಕ್ರಾಂತಿ ಸ್ಫೂರ್ತಿಗೆ ವಿರುದ್ಧವಾಗಿದೆ. ಜೊತೆಗೆ, ದೇಶದಲ್ಲಿನ ಪ್ರಸಕ್ತ ಹಾಲಿನ ಕೊರತೆಯನ್ನು ಗಮನಿಸಿದಾಗ ಗ್ರಾಹಕರಿಗೆ ತೊಂದರೆ ಸೃಷ್ಟಿಸಬಹುದಾದ ಬೆಳವಣಿಗೆಯಾಗಿದೆ’ ಎಂದಿದ್ದಾರೆ.

ಮಂತ್ರಿಮಂಡಲ ಪೂರ್ಣ ಭರ್ತಿಗೆ ನಿರ್ಧಾರ, 24 ಮಂದಿಗೆ ಸಚಿವ ಸ್ಥಾನ: ಪ್ರಭಾವಿ ಖಾತೆಗೆ ಸಿದ್ದು-ಡಿಕೆಶಿ ಪೈಪೋಟಿ

‘ಅಮುಲ್‌ನ ಕೆಲಸವು, ತಮಿಳುನಾಡಿನ ಹಾಲು ಉತ್ಪಾದಕ ಸಂಸ್ಥೆಯಾದ ಆವಿನ್‌ ಕಳೆದೊಂದು ದಶಕದಿಂದ ಪಾಲಿಸಿಕೊಂಡು ಬಂದ ಸಹಕಾರ ತತ್ವದ ಸ್ಪೂರ್ತಿಗೆ ವಿರುದ್ಧವಾಗಿದೆ. ಇಂಥ ಬೆಳವಣಿಗೆ ಹಾಲು ಖರೀದಿ, ಸಂಸ್ಕರಣೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ನಡುವೆ ಅನಾರೋಗ್ಯಕರ ಪೈಪೋಟಿಗೆ ಕಾರಣವಾಗುತ್ತದೆ. ಪ್ರಾಂತೀಯ ಸಹಕಾರ ಸಂಸ್ಥೆಗಳು ರಾಜ್ಯಗಳಲ್ಲಿ ಹೈನೋದ್ಯಮ ವಲಯದಲ್ಲಿನ ಬೆನ್ನೆಲುಬಾಗಿದೆ. ಇಂಥ ಸಂಸ್ಥೆಗಳು ಉತ್ಪಾದಕರ ಆರೈಕೆಯಲ್ಲಿ ಮತ್ತು ಗ್ರಾಹಕರಿಗೆ ಏಕಾಏಕಿ ಬೆಲೆ ಏರಿಕೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ ತಾವು ತಕ್ಷಣವೇ ಮಧ್ಯಪ್ರವೇಶಿಸಿ, ರಾಜ್ಯದಲ್ಲಿ ಹಾಲು ಉತ್ಪಾದನೆಯ ಪ್ರಮುಖ ಕೇಂದ್ರ ಸ್ಥಾನಗಳಲ್ಲಿ ಹಾಲು ಖರೀದಿ ಮಾಡದಂತೆ ಅಮುಲ್‌ಗೆ ಸೂಚಿಸಬೇಕು’ ಎಂದು ಸ್ಟಾಲಿನ್‌ ಕೋರಿದ್ದಾರೆ.

click me!